×
Ad

ಭಾರತೀಯ ಪತ್ರಿಕೋದ್ಯಮದ ಅತ್ಯಂತ ಸವಾಲಿನ ಕ್ಷಣಗಳಿವು : ‘ದಿ ಕಾರವಾನ್’ ಸಂಪಾದಕ ಅನಂತ್

ಎಂ.ವಿ.ಕಾಮತ್ ದತ್ತಿ ಉಪನ್ಯಾಸ

Update: 2025-11-14 19:51 IST

ಮಣಿಪಾಲ, ನ.14: ಭಾರತೀಯ ಪತ್ರಿಕೋದ್ಯಮ ತನ್ನ ಇತಿಹಾಸದ ಅತ್ಯಂತ ಸವಾಲಿನ ಕ್ಷಣಗಳನ್ನು ಇಂದು ಎದುರಿಸುತ್ತಿದೆ ಎಂದು ಪ್ರಸಿದ್ಧ ಆಂಗ್ಲ ಪಾಕ್ಷಿಕ ‘ದಿ ಕಾರವಾನ್’ ಸಂಪಾದಕ ಹಾಗೂ ಭಾರತದ ಎಡಿಟರ್ಸ್‌ ಗಿಲ್ಡ್‌ನ ಅಧ್ಯಕ್ಷ ಅನಂತ ನಾಥ್ ಅಭಿಪ್ರಾಯಪಟ್ಟಿದ್ದಾರೆ.

ಮಾಹೆ ಆಡಳಿತಕ್ಕೊಳಪಟ್ಟ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ವತಿಯಿಂದ ಆಯೋಜಿಸಲಾದ ನಾಡಿನ ಪತ್ರಕರ್ತ ಎಂ.ವಿ.ಕಾಮತ್ ಸ್ಮಾರಕ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ‘ಫ್ಯಾಕ್ಟ್ಸ್, ಫೇರ್‌ನೆಸ್ ಆ್ಯಂಡ್ ಅಕೌಂಟೇಬಿಲಿಟಿ’ ಎಂಬ ವಿಷಯದ ಕುರಿತು ಅವರು ಸಂಸ್ಥೆಯ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ತೀವ್ರವಾದ ಬಿಕ್ಕಟ್ಟಿನಲ್ಲಿರುವ ಪತ್ರಿಕಾವೃತ್ತಿಯಲ್ಲಿ ವಿಮರ್ಶಾತ್ಮಕ, ನಿರ್ಣಾಯಕ ಯೋಚನೆಗಳು ಅತ್ಯಂತ ಮಹತ್ವವನ್ನು ಹೊಂದಿವೆ ಎಂದು ಅನಂತ ನಾಥ್, ಇಂದು ಮಾಧ್ಯಮಗಳು ಎದುರಿಸುತ್ತಿರುವ ನಾಲ್ಕು ಪ್ರಮುಖ ಸವಾಲುಗಳ ಕುರಿತು ಭಾವಿ ಪತ್ರಕರ್ತರಿಂದ ವಿಷದವಾಗಿ ವಿವರಿಸಿದರು.

‘ನೈತಿಕ ಅಧ:ಪತನ, ವ್ಯವಹಾರ ಮಾದರಿಯ ವೈಫಲ್ಯ, ಕಾನೂನಿನ ಸುಳಿಯಲ್ಲಿ ಸಿಲುಕುತ್ತಿರುವ ವಾಕ್ ಸ್ವಾತಂತ್ರ್ಯ ಹಾಗೂ ದೊಡ್ಡ ದೊಡ್ಡ ತಾಂತ್ರಿಕ ಫ್ಲಾಟ್‌ಫಾರಂಗಳ ಅಪಾರವಾದ ಪ್ರಭುತ್ವ’ ಅನಂತ ನಾಥ್ ಅವರು ಹೇಳುವಂತೆ ಇಂದಿನ ಮಾಧ್ಯಮ ರಂಗ ಎದುರಿಸುತ್ತಿರುವ ಪ್ರಮುಖ ಸವಾಲು ಗಳಾಗಿವೆ.

ಅಭೂತಪೂರ್ವ ಹೊಂದಾಣಿಕೆ :

ನೈತಿಕತೆಯ ಪ್ರಶ್ನೆ ಎಂಬುದು ಭಾರತೀಯ ಪತ್ರಿಕೋದ್ಯಮಕ್ಕೆ ಹೊಸದೇನಲ್ಲ. ಆದರೆ ಇಂದು ಕಂಡುಬರುತ್ತಿರುವ ಹೊಂದಾಣಿಕೆಯ ಪ್ರಮಾಣ ಮಾತ್ರ ಅಭೂತಪೂರ್ವವಾದುದು ಎಂದರು.

ಪತ್ರಿಕೆಗಳು ಮೊದಲಿನಿಂದಲೂ ಪತ್ರಿಕೋದ್ಯಮ ಹಾಗೂ ರಾಷ್ಟ್ರೀಯತೆ ನಡುವೆ ಹೊಯ್ದಾಡುತಿದ್ದವು. ಸ್ವಾತಂತ್ರ್ಯ ಹೋರಾಟದ ದಿನಗಳಿಂದಲೂ ಭಾರತೀಯ ಪತ್ರಿಕೆಗಳು ರಾಷ್ಟ್ರೀಯ ಉದ್ದೇಶಗಳನ್ನು ಕಡೆಗಣಿಸಿಲ್ಲ. ಈ ಸಂಬಂಧಗಳು ಈಗಲೂ ಮುಂದುವರಿದಿದ್ದರೂ, ಪ್ರಸ್ತುತ ಕಂಡುಬರುತ್ತಿರುವ ಮೇಲ್ಮಟ್ಟದ ರಾಷ್ಟ್ರೀಯತೆ ಹಾಗೂ ಸುದ್ದಿಮನೆಯಲ್ಲಿ ಇರುವ ವೈವಿಧ್ಯತೆಯ ಕೊರತೆ ಕಳವಳಕ್ಕೆ ಕಾರಣವಾಗಿದೆ. ಸುದ್ದಿಮನೆಯಲ್ಲಿ ಜಾತಿ, ಪ್ರಾದೇಶಿಕ ಹಾಗೂ ಲಿಂಗ ಅಸಮಾನತೆ ಖಂಡಿತವಾಗಿಯೂ ಚಿಂತೆಗೆ ಕಾರಣವಾಗಿದೆ ಎಂದು ಅನಂತ ನಾಥ್ ಹೇಳಿದರು.

ಸುದ್ದಿಮನೆಗಳಲ್ಲಿ ಸಂವಿಧಾನಾತ್ಮಕ ಮೌಲ್ಯಗಳಿಗೆ ಸ್ಪಷ್ಟವಾದ ಬದ್ದತೆ ಹೊಂದಿರುವ, ವೈವಿದ್ಯಮಯ ಪ್ರಾತಿನಿಧಿತ್ವ ಕಂಡುಬರುವುದು ಅತಿಮುಖ್ಯ ಎಂದ ಅವರು, ಭಾರತೀಯ ಪತ್ರಿಕೆಗಳ ಆರ್ಥಿಕ ವಿನ್ಯಾಸ ಎಂಬುದು ‘ಅಸ್ಥಿರ’ವಾಗಿದ್ದು, ಪತ್ರಿಕೆಗಳು ಸರಕಾರದ ವಿವಿಧ ಸಬ್ಸಿಡಿ ಹಾಗೂ ಖಾಸಗಿ ಜಾಹೀರಾತುದಾರರನ್ನೇ ಅವಲಂಬಿಸಿದೆ ಎಂದು ವಿವರಿಸಿದರು.

‘ಭಾರತದಲ್ಲಿ ಐದು ರೂಪಾಯಿಗೆ ಸಿಗುವ ಪತ್ರಿಕೆಗೆ ಕೆನ್ಯಾ ಅಥವಾ ಪಾಕಿಸ್ತಾನಗಳಲ್ಲಿ 50 ರೂಪಾಯಿ ಬೆಲೆ ಇದೆ. ಹೀಗಾಗಿ ಅಲ್ಲಿ ಓದುಗರು ಪತ್ರಿಕೆಗೆ ಹಣಕೊಟ್ಟು ಖರೀದಿಸುವುದರಿಂದ ಪತ್ರಿಕೆಗಳು ಜನರಿಗೆ ಉತ್ತರದಾಯಿಯಾಗಿರುತ್ತವೆ ಎಂದು ಅನಂತ ನಾಥ್ ಹೇಳಿದರು.

ಓದುಗರೇ ಪ್ರಭುಗಳಾಗಲಿ :

ಜಾಹೀರಾತಿನ ಮೇಲಿನ ಅತಿಯಾದ ಅವಲಂಬನೆ ಪತ್ರಿಕೆಗಳ ಸಂಪಾದಕೀಯದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಸರಕಾರ ನೀಡುವ ಜಾಹೀರಾತು ಅವರ ಆದಾಯದ ಪ್ರಧಾನ ಮೂಲವಾಗಿದ್ದರೆ ಇದು ಪತ್ರಿಕೆಯ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದುದರಿಂದ ಪತ್ರಿಕೆಗಳು ಓದುಗರ ಬೆಂಬಲಿತ ಮಾದರಿಯನ್ನು ಅನುಸರಿಸಿದರೆ ಸುದ್ದಿಗಳ ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂದು ಸತ್ಯವನ್ನು ವಸ್ತುನಿಷ್ಠವಾಗಿ ವರದಿ ಮಾಡುವವರನ್ನು ಹೆಚ್ಚುಹೆಚ್ಚು ಗುರಿಮಾಡಲಾಗುತ್ತಿದೆ. ಹೊಸದಾಗಿ ಅಳವಡಿಸಲಾದ ಬಿಎನ್‌ಎಸ್ ಕಾನೂನಿನಲ್ಲಿ ರಾಜದ್ರೋಹದಂತಹ ಸೆಕ್ಷನ್‌ಗಳನ್ನು ಅಳವಡಿಸಿರುವುದರಿಂದ ಪತ್ರಕರ್ತ ರನ್ನು ಸುಲಭದಲ್ಲಿ ಬಂಧಿಸಲು ಸಾಧ್ಯವಿದೆ. ಹೀಗಾಗಿ ಪತ್ರಕರ್ತರು ಒಳ್ಳೆಯ ನ್ಯಾಯವಾದಿಗಳನ್ನು ಸ್ನೇಹಿತರಾಗಿ ಹೊಂದಿರಬೇಕಾಗುತ್ತದೆ ಎಂದರು.

ಇಂದು ಅತಿರಂಜಿತ, ಏಕಪಕ್ಷೀಯ ಹಾಗೂ ಹೆಚ್ಚೆಚ್ಚು ಸುಳ್ಳು ವರದಿಗಳು ವಿಬೃಂಭಿಸುತ್ತಿದ್ದು, ಸಿಕ್ಕಿದ ಸುದ್ದಿಗಳನ್ನು ಮತ್ತೆ ಮತ್ತೆ ಪರಿಶೀಲಿಸುವ ಪತ್ರಿಕೋದ್ಯಮ ಇಂದು ವಿರಳವಾಗುತ್ತಿದೆ. ‘ನ್ಯಾಯಬದ್ಧ ವರದಿಗಾರಿಕೆ ಹಾಗೂ ಐಎ ಆಧಾರಿತ ಸುಳ್ಳು ಮಾಹಿತಿಗಳು’ ಇಂದು ಒಂದೇ ಪ್ಲಾಟ್‌ಫಾರಂ ನಲ್ಲಿ ಸ್ಪರ್ಧಿಸುವ ಸ್ಥಿತಿ ಏರ್ಪಟ್ಟಿದೆ ಎಂದು ಅನಂತ ನಾಥ್ ಹೇಳಿದರು.

ಆದರೂ ಇದರಿಂದ ಆಶಾವಾದ ಕಳೆದುಕೊಳ್ಳಬೇಕಾಗಿಲ್ಲ ಎಂದ ಕೆರವಾನ್ ಸಂಪಾದಕರು, ಕೋವಿಡ್-19ರ ವೇಳೆ ತೀರಾ ಹಿನ್ನಡೆ ಕಂಡ ಸಿನಿಮಾ ಹಾಗೂ ಸಂಗೀತ ಕಚೇರಿಗಳು ಈಗ ಮತ್ತೆ ಎದ್ದುಬಂದಂತೆ, ಪತ್ರಿಕೋದ್ಯಮವೂ ತನ್ನ ಮಟ್ಟವನ್ನು ಕಾಯ್ದುಕೊಳ್ಳುವ ನಿರೀಕ್ಷೆ ಇದೆ ಎಂದರು.

‘ಜನರಿಗೆ ವಸ್ತುನಿಷ್ಠ ಸತ್ಯದ ಅಗತ್ಯವಿದೆ. ಸಮಾಜ ಪ್ರಶ್ನಿಸುವುದನ್ನು ಬಯಸುತ್ತದೆ. ವಾಕ್‌ಸ್ವಾತಂತ್ರ್ಯವನ್ನು ಎಂದೆಂದಿಗೂ ಹದ್ದುಬಸ್ತಿನಲ್ಲಿಡಲು ಸಾಧ್ಯವಿಲ್ಲ. ಹೋರಾಟ ಕಠಿಣವಿದೆ. ಆದರೆ ಗೆಲುವು ಸಿಹಿಯದಾಗಿರುತ್ತದೆ ಎಂದು ಅನಂತ ನಾಥ್ ಆಶಾವಾದ ವ್ಯಕ್ತಪಡಿಸಿದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್ (ವಿಜ್ಞಾನ ಮತ್ತು ತಂತ್ರಜ್ಞಾನ) ಡಾ.ನಾರಾಯಣ ಸಭಾಹಿತ್ ಅಧ್ಯಕ್ಷತೆ ವಹಿಸಿದ್ದರು. ಎಂಐಸಿಯ ನಿರ್ದೇಶಕಿ ಡಾ.ಶುಭಾ ಎಚ್.ಎಸ್. ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಅನಂತ ನಾಥ್ ಅವರು ಎಂಐಸಿಯಲ್ಲಿ ನೂತನವಾಗಿ ನಿರ್ಮಿಸಿದ ಪೋಟೊ ಸ್ಟುಡಿಯೋವನ್ನು ಉದ್ಘಾಟಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News