ಮುರುಡೇಶ್ವರ | ದ್ವಿಚಕ್ರ ವಾಹನ ಸವಾರನಿಗೆ ಹಲ್ಲೆಗೈದು ಚಿನ್ನದ ಸರ ಎಗರಿಸಿದ ಮಂಗಳಮುಖಿಯರು
Update: 2025-11-03 15:40 IST
ಭಟ್ಕಳ: ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸ್ಕೂಟರ್ ಸವಾರನನ್ನು ಅಡ್ಡಗಟ್ಟಿದ ನಾಲ್ವರು ಮಂಗಳಮುಖಿಯರು ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಘಟನೆ ಮುರುಡೇಶ್ವರ ರೈಲ್ವೆ ಸ್ಟೇಷನ್ ಬಳಿ ನಡೆದಿರುವುದು ವರದಿಯಾಗಿದೆ.
ಮಾವಳ್ಳಿ ಗುಮ್ಮನಕಲ್ ನಿವಾಸಿ ಹಾಗೂ ಆರ್.ಎನ್.ಎಸ್. ಡಿಪ್ಲೊಮಾ ಕಾಲೇಜಿನ ಲ್ಯಾಬ್ ಇಂಚಾರ್ಜ್ ಅರುಣ್ ಕುಮಾರ್ ಹಲ್ಲೆಗೊಳಗಾದವರು.
ಅರುಣ್ ಕುಮಾರ್ ರವಿವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಇಬ್ಬರು ಮಂಗಳಮುಖಿಯರು ಅಡ್ಡಗಟ್ಟಿ ಮಾತುಕತೆ ಆರಂಭಿಸಿದ್ದು, ಬಳಿಕ ಇನ್ನಿಬ್ಬರು ಸ್ಥಳಕ್ಕೆ ಬಂದು ಸೇರಿದ್ದಾರೆ. ಈ ವೇಳೆ ಅಸಭ್ಯ ವರ್ತನೆ ತೋರಿಸಿದ ಆರೋಪಿಗಳು ತನ್ನ ಕುತ್ತಿಗೆಯಲ್ಲಿದ್ದ ಸುಮಾರು 1 ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.