ಭಟ್ಕಳ: ಈಜುಕೊಳಕ್ಕೆ ಬಿದ್ದು 5 ವರ್ಷದ ಬಾಲಕ ಮೃತ್ಯು
ಭಟ್ಕಳ: ಜಾಲಿ ಬೀಚ್ ಸಮೀಪದ ರೆಸಾರ್ಟ್ ಒಂದರಲ್ಲಿ 5 ವರ್ಷದ ಬಾಲಕ ಈಜುಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತ ಬಾಲಕನನ್ನು ಮೊಹಮ್ಮದ್ ಮುಸ್ತಕೀಂ ಶೇಖ್ ಎಂದು ಗುರುತಿಸಲಾಗಿದ್ದು, ಸ್ಥಳೀಯ ಮದ್ರಸಾ ಶಿಕ್ಷಕರಾದ ಮೌಲವಿ ಶಾಹಿದುಲ್ಲಾ ಅವರ ಪುತ್ರ ಎಂದು ತಿಳಿದು ಬಂದಿದೆ.
ಕುಟುಂಬದ ಮಾಹಿತಿ ಪ್ರಕಾರ, ತಾಯಿ ಮತ್ತು ತಮ್ಮನೊಂದಿಗೆ ರೆಸಾರ್ಟ್‌ನಲ್ಲಿ ಇದ್ದ ಬಾಲಕ, ಕೆಲ ಹೊತ್ತು ತಾಯಿಯು ಸ್ಥಳದಲ್ಲಿಲ್ಲದ ಸಂದರ್ಭದಲ್ಲೇ ಸುಮಾರು ಐದು ಅಡಿ ಆಳದ ಈಜುಕೊಳಕ್ಕೆ ಜಾರಿ ಬಿದ್ದಿದ್ದಾನೆ ಎನ್ನಲಾಗಿದೆ.
ತಕ್ಷಣವೇ ತಾಯಿಯು ನೀರಿನಿಂದ ಬಾಲಕನನ್ನು ಹೊರತೆಗೆದರು. ರೆಸಾರ್ಟ್ ಹೊರಭಾಗದಲ್ಲಿದ್ದ ಕೆಲ ಯುವಕರು ಸಹ ಸಹಾಯಕ್ಕೆ ಧಾವಿಸಿ ಸಿಪಿಆರ್ ನೀಡಿ ಜೀವ ಉಳಿಸಲು ಪ್ರಯತ್ನಿಸಿದರು. ನಂತರ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಬಾಲಕ ಮೃತಪಟ್ಟಿರುವುದನ್ನು ಧೃಡಪಡಿಸಿದರು. ನಂತರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಾತ್ರಿ 8 ಗಂಟೆ ವೇಳೆಗೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಬಾಲಕ ಸ್ಥಳೀಯ ಮದ್ರಸಾದಲ್ಲಿ ಎಲ್‌ಕೆಜಿ ತರಗತಿಯಲ್ಲಿ ಓದುತ್ತಿದ್ದನೆಂದು ಕುಟುಂಬದವರು ತಿಳಿಸಿದ್ದಾರೆ. ಘಟನೆಯ ನಂತರ ಮದ್ರಸಾ ಶಿಕ್ಷಕರು ಮತ್ತು ಹಲವರು ಆಸ್ಪತ್ರೆಗೆ ಬಂದು ಕುಟುಂಬಕ್ಕೆ ಸಾಂತ್ವನ ನೀಡಿದರು.
ಮಧ್ಯರಾತ್ರಿಯೇ ನವಾಯತ್ ಕಾಲೋನಿಯ ತಂಝೀಂ ಮಿಲ್ಲಿಯಾ ಮಸೀದಿಯಲ್ಲಿ ಧಪನ ಕಾರ್ಯ ನೆರವೇರಿಸಲಾಗಿದ್ದು, ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.