×
Ad

ಭಟ್ಕಳ: 76ನೇ ಗಣರಾಜ್ಯೋತ್ಸವ ಸಂಭ್ರಮ; ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಆಕರ್ಷಕ ಕವಾಯತು

Update: 2025-01-26 15:12 IST

ಭಟ್ಕಳ: 76ನೇ ಗಣರಾಜ್ಯೋತ್ಸವವನ್ನು ತಾಲ್ಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಭಟ್ಕಳ ಹಾಗೂ ಪಟ್ಟಣ ಪಂಚಾಯತ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ ಭಟ್ಕಳದ ತಾಲೂಕಾ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ನೆರವೇರಿಸಿದರು.

ಧ್ವಜಾರೋಹಣದ ಬಳಿಕ ಮಾತನಾಡಿದ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರು, “ಜನವರಿ 26 ನಮ್ಮ ದೇಶದ ಸಂವಿಧಾನ ಜಾರಿಗೆ ಬಂದ ದಿನ. ಈ ದಿನವು ಭಾರತವನ್ನು ಪ್ರಜಾಪ್ರಭುತ್ವ, ಸಾಮ್ರಾಜ್ಯ ಮತ್ತು ಗಣರಾಜ್ಯವೆಂದು ಘೋಷಿಸಿದ ದಿನ. ಸಂವಿಧಾನವು ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ರೂಪಿತಗೊಂಡಿದ್ದು, ಇದು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ,” ಎಂದು ವಿವರಿಸಿದರು.  

ತಹಶೀಲ್ದಾರ್ ಅವರು ಭಾರತದ ಸಂವಿಧಾನದ ಉನ್ನತತೆಯನ್ನು ವಿವರಿಸಿ, “ಭಾರತ ಸಂವಿಧಾನವು ಕೇವಲ ಒಂದು ದಾಖಲೆ ಮಾತ್ರವಲ್ಲ; ಇದು ಪ್ರಜಾಪ್ರಭುತ್ವದ ಆಧಾರಸ್ಥಂಭ. ಇದು ನಮ್ಮ ದೇಶದ ಆಡಳಿತ ವ್ಯವಸ್ಥೆಯನ್ನು ರೂಪಿಸುತ್ತದೆ ಮತ್ತು ಪ್ರಜೆಗಳಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ನೀಡುತ್ತದೆ,” ಎಂದು ಹೇಳಿದರು. ಸಂವಿಧಾನ ರೂಪಿಸುವಲ್ಲಿ ಡಾ. ಅಂಬೇಡ್ಕರ್ ಅವರ ಮಹತ್ವದ ಪಾತ್ರವನ್ನು ಅವರು ಸ್ಮರಿಸಿದರು.

ದೇಶವು ಶೈಕ್ಷಣಿಕ, ಔದ್ಯೋಗಿಕ, ಬಾಹ್ಯಾಕಾಶ, ರಕ್ಷಣಾ, ಮತ್ತು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರುವುದರ ಬಗ್ಗೆ ತಹಶೀಲ್ದಾರ್ ಮಾತನಾಡಿದರು. “ನಮ್ಮ ರಾಜ್ಯ ಕರ್ನಾಟಕವೂ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಸರ್ಕಾರವು ಜನರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ,” ಎಂದು ಅವರು ಉಲ್ಲೇಖಿಸಿದರು.

“ನಾವೆಲ್ಲರೂ ದೇಶಸೇವೆಗಾಗಿ ಶ್ರಮಿಸಬೇಕು ಮತ್ತು ಸಂವಿಧಾನದ ನಿಯಮಗಳನ್ನು ಪಾಲಿಸಬೇಕು. ನಾವು ನಮ್ಮ ದೇಶದ ಏಕತೆ, ಶಾಂತಿ, ಮತ್ತು ಪ್ರಗತಿಗಾಗಿ ಶ್ರಮಿಸೋಣ,” ಎಂದು ತಹಶೀಲ್ದಾರ್ ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಪೊಲೀಸ್ ಇಲಾಖೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥಸಂಚಲನ ಆಯೋಜನೆಗೊಂಡಿತ್ತು. ಈ ಪಥಸಂಚಲನದಲ್ಲಿ ಭಾಗವಹಿಸಿದವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಸ್ವಾಗತಿಸಿದರು. ಶ್ರೀಧರ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಭಟ್ಕಳ ಪುರಸಭೆ ಅಧ್ಯಕ್ಷ ಅಲ್ತಾಫ್ ಮುಹಿದ್ದಿನ್ ಖರೂರಿ, ಜಾಲಿ ಪ.ಪಂ ಅಧ್ಯಕ್ಷ ಅಫ್ಶಾ ಕಾಝೀಯಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್.ನಾಯ್ಕ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಮಲ್ಲಪ್ಪಾ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನವುಡಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News