ಭಟ್ಕಳ | ಹೊಸ ಹೈಟೆಕ್ ಮೀನು ಮಾರುಕಟ್ಟೆಯನ್ನು ತಕ್ಷಣ ಮುಚ್ಚುವಂತೆ ಬಿಜೆಪಿ ಆಗ್ರಹ
ಭಟ್ಕಳ: ಭಟ್ಕಳದಲ್ಲಿ ಇತ್ತೀಚೆಗೆ ಪ್ರಾರಂಭಗೊಂಡಿರುವ ಹೊಸ ಹೈಟೆಕ್ ಮೀನು ಮಾರುಕಟ್ಟೆ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಏಳು ವರ್ಷಗಳ ಹಿಂದೆ ಉದ್ಘಾಟನೆಯಾದರೂ, ಇತ್ತೀಚೆಗೆ ಮಾತ್ರ ಕಾರ್ಯಾರಂಭಗೊಂಡ ಈ ಮಾರುಕಟ್ಟೆಯನ್ನು ತಕ್ಷಣ ಮುಚ್ಚುವಂತೆ ಬಿಜೆಪಿ ಒತ್ತಾಯಿಸಿದೆ.
ಭಟ್ಕಳ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಶಾಸಕ ಸುನಿಲ್ ನಾಯ್ಕ , ಹಳೆಯ ಮೀನು ಮಾರುಕಟ್ಟೆಯನ್ನು ಹೊಸ ಹೈಟೆಕ್ ಮಾರುಕಟ್ಟೆಗೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಮಾಡಿದರು. ಇದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ನೀಡಿದ್ದ ಭರವಸೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಸಚಿವರು ಮೀನು ಮಾರಾಟಗಾರರಿಗೆ ಹಳೆಯ ಮಾರುಕಟ್ಟೆ ಮುಚ್ಚುವುದಿಲ್ಲವೆಂದು ಭರವಸೆ ನೀಡಿದ್ದರು ಎಂದು ಸುನಿಲ್ ನಾಯ್ಕ ಸ್ಮರಿಸಿದರು.
ಯಾವುದೇ ಸಮುದಾಯದ ಹೆಸರನ್ನು ಉಲ್ಲೇಖಿಸದೆ, ಹೊಸ ಮೀನು ಮಾರುಕಟ್ಟೆ ಯೋಜನೆ “ಒಂದು ನಿರ್ದಿಷ್ಟ ಸಮುದಾಯದ ಹಿತಕ್ಕಾಗಿ ರೂಪಿತವಾದ ಸಂಚು” ಎಂದು ಆರೋಪಿಸಿದರು.
ಹಳೆಯ ಮೀನು ಮಾರುಕಟ್ಟೆ ಸಣ್ಣ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ದಿನಗೂಲಿ ಕಾರ್ಮಿಕರ ಜೀವನಾಧಾರವಾಗಿತ್ತು ಎಂದು ಹೇಳಿದ ಅವರು, ಹೊಸ ಯೋಜನೆ ರಾಜಕೀಯ ಉದ್ದೇಶದಿಂದ ರೂಪಿತವಾಗಿದ್ದು, ಹಳೆಯ ಮಾರುಕಟ್ಟೆ ಪ್ರದೇಶವನ್ನು “ಗಲ್ಫ್ ಮಾರುಕಟ್ಟೆ”ಯಾಗಿ ರೂಪಿಸುವ ಉದ್ದೇಶವಿದೆ ಎಂದು ಅವರು ಆರೋಪಿಸಿದರು.
ಹೊಸ ಹೈಟೆಕ್ ಮಾರುಕಟ್ಟೆಯ ವಿನ್ಯಾಸವನ್ನು ಅವರು “ಅವೈಜ್ಞಾನಿಕ” ಎಂದು ಕರೆಯುತ್ತಾ, ಅಲ್ಲಿ ಕೇವಲ 50 ವ್ಯಾಪಾರಿಗಳಿಗೆ ಮಾತ್ರ ಸ್ಥಳವಿದೆ ಎಂದು ಹೇಳಿದರು. “ಈ ಯೋಜನೆ ಸಂಪೂರ್ಣ ವಿಫಲವಾಗಿದೆ. ಸರಕಾರ ತಕ್ಷಣವೇ ಈ ಮಾರುಕಟ್ಟೆಯನ್ನು ಮುಚ್ಚಬೇಕು ಎಂದು ಅವರು ತಿಳಿಸಿದರು.
ಸಚಿವರ “ಎಲ್ಲವನ್ನೂ ಮಾಡಬಲ್ಲೆ” ಎಂಬ ಹೇಳಿಕೆಯನ್ನು ನಾಯ್ಕ ಅವರು ವ್ಯಂಗ್ಯವಾಗಿ ಉಲ್ಲೇಖಿಸಿ, ಗ್ರಾಮೀಣ ರಸ್ತೆಗಳಲ್ಲಿ ಉಂಟಾಗಿರುವ ದುಸ್ಥಿತಿ ಮತ್ತು 150 ಯುನಿಟ್ ವಿದ್ಯುತ್ ಬಳಕೆಗಿಂತ ಕಡಿಮೆ ಉಪಯೋಗಿಸುವ ಬಿಪಿಎಲ್ ಕುಟುಂಬಗಳ ಕಾರ್ಡ್ ರದ್ದತಿಯನ್ನು ಪ್ರಸ್ತಾಪಿಸಿ, ಈ ಕಾರಣದಿಂದ ಅನೇಕ ಕುಟುಂಬಗಳು ‘ಆಯುಷ್ಮಾನ್ ಭಾರತ್’ ಯೋಜನೆಯ ಸೌಲಭ್ಯಗಳಿಂದ ವಂಚಿತವಾಗಿವೆ ಎಂದರು.
ಸಚಿವರು ಜನರ ನಿಜವಾದ ಸಮಸ್ಯೆಗಳಿಂದ ದೂರವಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸಗಳಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದ ಅವರು, ಜನಸ್ಪಂದನ’ ಕಾರ್ಯಕ್ರಮಗಳು ಪಕ್ಷದ ಕಾರ್ಯಕರ್ತರ ಪ್ರದರ್ಶನ ವೇದಿಕೆಗಳಾಗಿವೆ, ಜನರಿಗೆ ಪ್ರಯೋಜನವಾಗುವುದಿಲ್ಲ, ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಬಿಜೆಪಿ ನಾಯಕ ಗೋವಿಂದ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಾಯ ದೇವಡಿಗ ಹಾಗೂ ಶ್ರೀಕಾಂತ ನಾಯ್ಕ ಉಪಸ್ಥಿತರಿದ್ದರು.