×
Ad

ಭಟ್ಕಳ| ಸಮುದ್ರದಲ್ಲಿ ದೋಣಿ ದುರಂತ: ಓರ್ವ ಮೀನುಗಾರನ ಮೃತದೇಹ ಪತ್ತೆ

Update: 2025-07-31 21:40 IST

ರಾಮಕೃಷ್ಣ ಮೊಗೇರ

ಭಟ್ಕಳ: ತೆಂಗಿನಗುಂಡಿ ಕರಾವಳಿಯಲ್ಲಿ ಜು.30ರಂದು ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿದ ಘಟನೆಯಲ್ಲಿ ನಾಪತ್ತೆಯಾಗಿದ್ದ ಮೀನುಗಾರರ ಪೈಕಿ ಓರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ. ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಶೋಧಕಾರ್ಯ ತೀವ್ರಗೊಂಡಿದೆ.

ಮೃತ ಮೀನುಗಾರನನ್ನು ಜಾಲಿ ಕೊಡಿಯ ನಿವಾಸಿ ರಾಮಕೃಷ್ಣ ಮೊಗೇರ (40) ಎಂದು ಗುರುತಿಸಲಾಗಿದೆ.

ಗುರುವಾರ ಮಧ್ಯಾಹ್ನ ತೆಂಗಿನಗುಂಡಿಯ ಹೊನ್ನೆಗದ್ದೆ ಕರಾವಳಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಎರಡು ವರ್ಷಗಳ ಹಿಂದೆ ರಾಮಕೃಷ್ಣ ಅವರ ಪುತ್ರ ದೋಣಿ ದುರಂತದಲ್ಲಿ ಮೃತಪಟ್ಟಿದ್ದರು. ಈಗ ರಾಮಕೃಷ್ಣ ಅವರ ಮರಣದಿಂದ ಅವರ ಪತ್ನಿ ಮತ್ತು ಮಗಳು ನಿರ್ಗತಿಕರಾಗಿದ್ದಾರೆ.

ಶಿರಾಲಿ ಅಲ್ವೆಕೊಡಿ ಕರಾವಳಿಯಿಂದ ಮೀನುಗಾರರು ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ‘ಮಹಾಸತಿ ಗಿಲ್‌ನೆಟ್’ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸುಮಾರು ಅರ್ಧ ಗಂಟೆಯೊಳಗೆ ದೊಡ್ಡ ಅಲೆಗೆ ತಾಗಿ ದೋಣಿ ಪಲ್ಟಿಯಾಗಿ ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದರು. ಈ ಪೈಕಿ ಮನೋಹರ ಈರಯ್ಯ ಮೊಗೇರ (31) ಮತ್ತು ರಾಮ ಮಸ್ತಿ ಖಾರ್ವಿ (43) ದೋಣಿಯನ್ನೇ ಹಿಡಿದುಕೊಂಡು ದಡಕ್ಕೆ ಈಜಿ ತೀರಕ್ಕೆ ಬಂದಿದ್ದು, ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.

ನಾಪತ್ತೆಯಾಗಿರುವ ಇತರ ಮೂವರು ಮೀನುಗಾರರನ್ನು ಸತೀಶ ತಿಮ್ಮಪ್ಪ ಮೊಗೇರ (26), ಗಣೇಶ ಮಂಜುನಾಥ ಮೊಗೇರ (27) ಹಾಗೂ ಮುರ್ಡೇಶ್ವರದ ನಿಶ್ಚಿತ್ ಮೊಗೇರ (30) ಎಂದು ಗುರುತಿಸಲಾಗಿದೆ. ಇವರ ಶೋಧಕಾರ್ಯಕ್ಕಾಗಿ ಕರಾವಳಿ ಭದ್ರತಾ ಪೊಲೀಸ್, ಸ್ಥಳೀಯ ಮೀನುಗಾರರು, ಭಾರತೀಯ ಕರಾವಳಿ ರಕ್ಷಣಾ ಪಡೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತವಾಗಿ ಕಾರ್ಯಾಚರಣೆ ನಡೆಸುತ್ತಿವೆ.

ಗುರುವಾರ ಬೆಳಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತೆಂಗಿನಗುಂಡಿ ಕರಾವಳಿಗೆ ಭೇಟಿ ನೀಡಿ ಶೋಧ ಕಾರ್ಯವನ್ನು ಪರಿಶೀಲಿಸಿದರು. ನಾಪತ್ತೆಯಾಗಿರುವ ಮೂವರು ಮೀನುಗಾರರನ್ನು ಶೀಘ್ರವಾಗಿ ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಶೋಧ ಕಾರ್ಯದಲ್ಲಿ ತೊಡಗಿರುವ ತಂಡಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಜೊತೆಗೆ, ಮೃತ ರಾಮಕೃಷ್ಣ ಮೊಗೇರ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಾನ್ಸೂನ್‌ನ ತೀವ್ರ ಗಾಳಿ ಮತ್ತು ಎತ್ತರದ ಅಲೆಗಳಿಂದಾಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಜಿಲ್ಲಾಡಳಿತ ಕರಾವಳಿಯ ಎಲ್ಲ ಮೀನುಗಾರರಿಗೆ ಎಚ್ಚರಿಕೆಯಿಂದಿರಲು ಮತ್ತು ಸಮುದ್ರಕ್ಕಿಳಿಯುವಾಗ ಹವಾಮಾನ ವರದಿಗಳನ್ನು ಪರಿಗಣಿಸಲು ಸೂಚಿಸಿದೆ.

ನಾಪತ್ತೆಯಾಗಿರುವ ಮೀನುಗಾರರ ಪತ್ತೆಗಾಗಿ ಶೋಧಕಾರ್ಯ ತೀವ್ರಗೊಂಡಿದ್ದು, ಸ್ಥಳೀಯ ಮೀನುಗಾರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News