ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿ ಪುರಸಭಾ ಉದ್ಯಾನವನಕ್ಕೆ ನುಗ್ಗಿದ ಕಾರು
Update: 2024-10-05 11:23 IST
ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಸ್ವಿಫ್ಟ್ ಕಾರು ಪುರಸಭಾ ಉದ್ಯಾನವನಕ್ಕೆ ನುಗ್ಗಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕಾರು ಚಾಲಕ ಮುಹಮ್ಮದ್ ಶಾಹಿದ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮಾಹಿತಿ ಪ್ರಕಾರ, ಕಾರು ಹನೀಫಾಬಾದ್ ನಿಂದ ಗುಲ್ಮಿಯತ್ತ ಸಾಗುತ್ತಿದ್ದು, ಕ್ವಾಲಿಟಿ ಹೋಟೆಲ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಇಳಿಜಾರಿನಲ್ಲಿ ಇದ್ದ ನಗರಸಭಾ ಉದ್ಯಾನವನದ ಒಳಕ್ಕೆ ನುಗ್ಗಿದೆ. ಅದೃಷ್ಟವಶಾತ್, ಚಾಲಕನ ಹೊರತಾಗಿ ಕಾರಿನಲ್ಲಿ ಯಾರೂ ಇದ್ದಿಲ್ಲ ಎಂದು ತಿಳಿದುಬಂದಿದೆ.
ಘಟನೆ ನಡೆದ ತಕ್ಷಣ ಸ್ಥಳದಲ್ಲಿ ಜನ ಸೇರಿದ್ದು, ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಪರಿಶೀಲಿಸಿದರು.