ಭಟ್ಕಳ | ಪೀಠೋಪಕರಣ ಮಾರಾಟದ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ : ತಮಿಳುನಾಡು ಮೂಲದ ಮೂವರ ಬಂಧನ
ಭಟ್ಕಳ: ಭಟ್ಕಳದಲ್ಲಿ ಪೀಠೋಪಕರಣ ಮಾರಾಟದ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ಪೊಲೀಸರು ಮಂಗಳೂರು ರೈಲು ನಿಲ್ದಾಣದಲ್ಲಿ ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ಬಾಲಜಿ ಗಣೇಶನ್, ತ್ಯಾಗರಾಜನ್ ಹಾಗೂ ಮೇಘನಾಥನ್ ಎಂದು ಗುರುತಿಸಲಾಗಿದೆ. ಇನ್ನೂ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಟ್ಕಳ ಕಾರ್ ಸ್ಟ್ರೀಟ್‌ನ ಮರಿಕಟ್ಟಾ ಬಳಿಯ “ಗ್ಲೋಬಲ್ ಎಂಟರ್‌ಪ್ರೈಸಸ್” ಎಂಬ ಪೀಠೋಪಕರಣ ಮಳಿಗೆ ನಡೆಸುತ್ತಿದ್ದ ಆರೋಪಿಗಳು ಕೇವಲ 25 ದಿನಗಳ ಅವಧಿಯಲ್ಲಿ ನೂರಾರು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ಪರಾರಿಯಾಗಿದ್ದರು. ಈ ಬಗ್ಗೆ ಬಾಧಿತರು ನ.5ರಂದು ಮಳಿಗೆಗೆ ಮುತ್ತಿಗೆ ಹಾಕಿದ ಹಿನ್ನೆಲೆ ಭಟ್ಕಳ ನಗರ ಠಾಣೆಯಲ್ಲಿ BUDS ಕಾಯ್ದೆಯಡಿ (ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ, 2019 ) ವಂಚನೆ ಪ್ರಕರಣ ದಾಖಲಿಸಿದ್ದರು.
ಆರೋಪಿಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ, “10ರಿಂದ 40 ಪ್ರತಿಶತ ರಿಯಾಯಿತಿ” ಕೊಡುಗೆ ಘೋಷಿಸಿ ಸ್ಥಳೀಯ ಯುವಕರ ಸಹಾಯದಿಂದ ಗ್ರಾಹಕರ ವಿಶ್ವಾಸ ಗಳಿಸಿದ್ದರು. ಆರಂಭದಲ್ಲಿ ಕೆಲವು ಗ್ರಾಹಕರಿಗೆ ಸರಕು ತಲುಪಿದ ನಂತರ, ಹಲವರಿಂದ 400 ರಿಂದ ರೂ.1 ಲಕ್ಷದವರೆಗೆ ಮುಂಗಡ ಹಣ ವಸೂಲಿ ಪಡೆದಿದ್ದರು. ಬಳಿಕ ಅಂಗಡಿಯನ್ನು ಮುಚ್ಚಿ ಪರಾರಿಯಾಗಿದ್ದರು.
ಪೀಡಿತರ ಅಂದಾಜಿನ ಪ್ರಕಾರ ಒಟ್ಟು ವಂಚನೆಯ ಮೊತ್ತ 50 ಲಕ್ಷ ರೂ. ನಿಂದ 1 ಕೋಟಿ ರೂ. ವರೆಗೆ ಇರಬಹುದು. ಈಗಾಗಲೇ ಸುಮಾರು 180 ಮಂದಿ ದೂರು ನೀಡಿದ್ದಾರೆ ಎಂದು ಪೊಲೀಸ್ ವಲಯದಿಂದ ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು, “ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ತನಿಖೆಗೆ ಆದೇಶಿಸಿದ್ದರು.