ಭಟ್ಕಳ: ಯೋನೊ ಆಪ್ ಮೂಲಕ 8 ಲಕ್ಷ ರೂ. ಸಾಲ ವಂಚನೆ
ಭಟ್ಕಳ: ಡಿಜಿಟಲ್ ಬ್ಯಾಂಕಿಂಗ್ ಬಳಕೆ ದಿನೇದಿನೇ ವಿಸ್ತಾರಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಗ್ರಾಹಕರ ಅನುಮತಿ ಇಲ್ಲದೆ ಮೊಬೈಲ್ ಆಪ್ ಮೂಲಕವೇ ಸಾಲ ಮಂಜೂರು ಮಾಡಿ ಹಣವನ್ನು ಲೂಟಿ ಮಾಡುವ ಹೊಸ ಮಾದರಿಯ ವಂಚನೆ ಪ್ರಕರಣವೊಂದು ಭಟ್ಕಳದಲ್ಲಿ ಬೆಳಕಿಗೆ ಬಂದಿದ್ದು, ಇಡೀ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಭಟ್ಕಳ ತಾಲೂಕಿನ ಸರ್ಕಾರಿ ಇಲಾಖೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರನೊಬ್ಬರ ಮೊಬೈಲ್ ಫೋನ್ ಹ್ಯಾಕ್ ಮಾಡಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೊ (YONO) ಆಪ್ ಮೂಲಕ ಸುಮಾರು 8 ಲಕ್ಷ ರೂಪಾಯಿ ಪ್ರೀ–ಅಪ್ರೂವ್ಡ್ ಪರ್ಸನಲ್ ಲೋನ್ ಪಡೆದು, ಅದನ್ನು ಕ್ಷಣಾರ್ಧದಲ್ಲೇ ಐದು ಬಾರಿ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅನುಮತಿ ಇಲ್ಲದೆ ಸಾಲ – ಹೇಗೆ ಸಾಧ್ಯ?: ಪೀಡಿತ ನೌಕರನ ಹೇಳಿಕೆಯಂತೆ, ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ OTP, ಡಿಜಿಟಲ್ ಅನುಮತಿ ಅಥವಾ ಸಹಿ ನೀಡಿಲ್ಲ. ಬ್ಯಾಂಕಿಗೆ ತೆರಳಿ ವಿಚಾರಣೆ ನಡೆಸಿದ್ದ ವೇಳೆ ಕೂಡ ಯೋನೊ ಆಪ್ ಓಪನ್ ಆಗಿರಲಿಲ್ಲ. ಆದರೆ ಮನೆಗೆ ಮರಳಿದ ಕೆಲವೇ ಸಮಯದಲ್ಲಿ, ಸಾಲ ಮಂಜೂರಾದ ಕುರಿತು ಸಂದೇಶಗಳು ಬಂದಿದ್ದು, ಖಾತೆ ಪರಿಶೀಲಿಸಿದಾಗ ಯೋನೊ ಆಪ್ ಮೂಲಕವೇ 8 ಲಕ್ಷ ರೂ ಸಾಲ ತೆಗೆದು ಕೊಳ್ಳಲಾಗಿದೆ ಎಂಬುದು ತಿಳಿದು ಅವರು ಬೆಚ್ಚಿಬಿದ್ದಿದ್ದಾರೆ.
ಇದು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿಹಿಡಿಯುತ್ತದೆ. ಗ್ರಾಹಕರ ನೇರ ಅನುಮತಿ ಇಲ್ಲದೆ, ಇಂತಹ ದೊಡ್ಡ ಮೊತ್ತದ ಹಣ ವಹಿವಾಟು ಹೇಗೆ ಸಾಧ್ಯವಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮೊಬೈಲ್ ಹ್ಯಾಕ್ – ಮೂಲ ಕಾರಣ? ಎಸ್‌ಬಿಐ ಭಟ್ಕಳ ಶಾಖೆಯ ಮ್ಯಾನೇಜರ್ ಮಾನಸ ಭಟ್ ಅವರ ಪ್ರಕಾರ, “ಯೋನೊ ಆಪ್ ಅತ್ಯಂತ ಸುರಕ್ಷಿತವಾಗಿದೆ. ಇಲ್ಲಿ ಸಮಸ್ಯೆ ಯೋನೊದಲ್ಲಿಲ್ಲ, ಸರ್ಕಾರಿ ನೌಕರರ ಮೊಬೈಲ್ ಫೋನ್ ಹ್ಯಾಕ್ ಆಗಿರುವುದೇ ಮೂಲ ಕಾರಣ. ಯೋನೊ ಆಪ್‌ನಲ್ಲಿ ಅರ್ಹತೆ ಇರುವವರಿಗೆ ಪ್ರೀ–ಅಪ್ರೂವ್ಡ್ ಪರ್ಸನಲ್ ಲೋನ್ ಪಡೆಯುವ ಅವಕಾಶವಿದ್ದು, ಅದನ್ನು ದುರುಪಯೋಗಪಡಿಸಿಕೊಂಡು ಹ್ಯಾಕರ್‌ಗಳು ವಂಚನೆ ನಡೆಸಿದ್ದಾರೆ.”
ಅವರ ಹೇಳಿಕೆಯಂತೆ, ಈ ಖಾತೆಯಲ್ಲಿ ಈ ಹಿಂದೆಯೂ ಯುಪಿಐ ಮೂಲಕ ಕಡಿಮೆ ಮೊತ್ತದ ವಂಚನೆ ನಡೆದಿದ್ದು, ಆ ಹಂತದಲ್ಲೇ ಸೂಕ್ತ ಎಚ್ಚರಿಕೆ ವಹಿಸಬೇಕಾಗಿತ್ತು. ಪ್ರಸ್ತುತ ಖಾತೆಯನ್ನು ಹೋಲ್ಡ್‌ನಲ್ಲಿ ಇಡಲಾಗಿದ್ದು, ಉಳಿದ ಹಣ ಸುರಕ್ಷಿತವಾಗಿದೆ.
ಗ್ರಾಹಕರ ತಪ್ಪೇ, ವ್ಯವಸ್ಥೆಯ ವೈಫಲ್ಯವೇ? : ಈ ಪ್ರಕರಣವು ಕೇವಲ ವ್ಯಕ್ತಿಗತ ನಿರ್ಲಕ್ಷ್ಯಕ್ಕೆ ಸೀಮಿತವೋ, ಅಥವಾ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಗಂಭೀರ ಲೋಪವೋ ಎಂಬ ಚರ್ಚೆಗೆ ಕಾರಣವಾಗಿದೆ. ಮೊಬೈಲ್ ಹ್ಯಾಕ್ ಆಗಿದ್ದರೂ ಸಹ, OTP, ಬಯೋಮೆಟ್ರಿಕ್ ಅಥವಾ ಬಹು ಹಂತದ ದೃಢೀಕರಣ ಇಲ್ಲದೆ ಇಷ್ಟೊಂದು ದೊಡ್ಡ ಮೊತ್ತದ ಸಾಲ ಮಂಜೂರಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ.
ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರ ಜವಾಬ್ದಾರಿಯ ಜೊತೆಗೆ, ಬ್ಯಾಂಕ್‌ಗಳ ಮೇಲಿನ ಜವಾಬ್ದಾರಿಯೂ ಸಮಾನವಾಗಿದೆ. ವಿಶೇಷವಾಗಿ ಪ್ರೀ–ಅಪ್ರೂವ್ಡ್ ಲೋನ್‌ಗಳಂತಹ ಸೌಲಭ್ಯಗಳಿಗೆ ಹೆಚ್ಚುವರಿ ಭದ್ರತಾ ಪದರ ಗಳನ್ನು ಜಾರಿಗೆ ತರಬೇಕಾದ ಅಗತ್ಯವನ್ನು ಈ ಪ್ರಕರಣ ಮತ್ತೊಮ್ಮೆ ನೆನಪಿಸುತ್ತದೆ.
ಎಚ್ಚರಿಕೆಯ ಗಂಟೆ: ಈ ಘಟನೆ ಭಟ್ಕಳಕ್ಕೆ ಮಾತ್ರ ಸೀಮಿತವಾಗದೆ, ಇಡೀ ಜಿಲ್ಲೆಯಲ್ಲಿನ ಹಾಗೂ ರಾಜ್ಯದ ಡಿಜಿಟಲ್ ಬ್ಯಾಂಕಿಂಗ್ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ನೀಡುವಂತಿದೆ. ಮೊಬೈಲ್ ಸುರಕ್ಷತೆ, ಅಪರಿಚಿತ ಲಿಂಕ್‌ಗಳು, ಆಪ್ ಅನುಮತಿಗಳು ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಗ್ರಾಹಕರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ.
ಅದರೊಂದಿಗೆ, ಬ್ಯಾಂಕ್‌ಗಳು “ಆಪ್ ಸುರಕ್ಷಿತವಾಗಿದೆ” ಎಂಬ ಹೇಳಿಕೆಗೆ ಸೀಮಿತವಾಗದೆ, ಇಂತಹ ವಂಚನೆಗಳು ಮರುಕಳಿಸದಂತೆ ಕಠಿಣ ನಿಯಂತ್ರಣ ಮತ್ತು ತಾಂತ್ರಿಕ ಸುಧಾರಣೆಗಳನ್ನು ಜಾರಿಗೆ ತರಬೇಕಾಗಿದೆ. ಇಲ್ಲವಾದರೆ ಡಿಜಿಟಲ್ ಬ್ಯಾಂಕಿಂಗ್ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.