×
Ad

ಭಟ್ಕಳ : 15ಕ್ಕೂ ಹೆಚ್ಚು ಮಂದಿಯ ಮೇಲೆ ಬೀದಿ ನಾಯಿಗಳಿಂದ ದಾಳಿ; ಸಾರ್ವಜನಿಕರಲ್ಲಿ ಆತಂಕ

Update: 2025-07-08 08:41 IST

ಭಟ್ಕಳ: ಕಳೆದ 70 ಗಂಟೆಗಳಲ್ಲಿ ಭಟ್ಕಳದ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 

ಈ ಘಟನೆಗಳಲ್ಲಿ ಬಹುತೇಕ ಬಾಧಿತರು ಮಕ್ಕಳೇ ಆಗಿದ್ದಾರೆ. ಆದರೆ, ಈ ಗಂಭೀರ ಸಮಸ್ಯೆಯ ಬಗ್ಗೆ ಸ್ಥಳೀಯ ಆಡಳಿತ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಇದರಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

ತಾಜಾ ಘಟನೆಯೊಂದರಲ್ಲಿ, ಮದೀನಾ ಕಾಲೋನಿಯ ಇಮ್ತಿಯಾಜ್ ಹುಸೇನ್ ದಾಮುದಿ ಎಂಬವರ ನಾಲ್ಕು ವರ್ಷದ ಮಗ ಇಹಾಬ್ ಅಹ್ಮದ್ ಮೇಲೆ ನಾಯಿಗಳು ದಾಳಿ ನಡೆಸಿವೆ. ಭಾನುವಾರ ಮಧ್ಯಾಹ್ನ ಟ್ಯೂಷನ್‌ನಿಂದ ಮನೆಗೆ ಮರಳುತ್ತಿದ್ದ ವೇಳೆ, ಇಹಾಬ್ ಮನೆಯ ಒಳಗೆ ಪ್ರವೇಶಿಸುವಾಗ ಎರಡು ನಾಯಿಗಳು ಆತನನ್ನು ಬೆನ್ನಟ್ಟಿ ದಾಳಿ ಮಾಡಿವೆ. ಒಂದು ಆತನ ಕಾಲಿಗೆ ಕಚ್ಚಿದ್ದು, ಆತ ಅದನ್ನು ಒದ್ದು ತಪ್ಪಿಸಲು ಯತ್ನಿಸಿದಾಗ ಕುಟುಂಬದವರ ಗಮನಕ್ಕೆ ಬಂದ ಕೂಗಾಟದಿಂದ ಅವರು ಧಾವಿಸಿ ಬಂದು ಮಗುವನ್ನು ರಕ್ಷಿಸಿದ್ದಾರೆ. ನಂತರ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಮತ್ತು ಲಸಿಕೆ ನೀಡಲಾಗಿದೆ.

ಭಟ್ಕಳ ಸರ್ಕಾರಿ ಆಸ್ಪತ್ರೆಯ ಮೂಲಗಳ ಪ್ರಕಾರ, ಕಳೆದ ಮೂರು ದಿನಗಳಲ್ಲಿ ವಿವಿಧ ಪ್ರದೇಶಗಳಿಂದ 15ಕ್ಕೂ ಹೆಚ್ಚು ಜನರು ಶ್ವಾನ ಕಡಿತದಿಂದ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ ಹೆಚ್ಚಿನವರು ಮಕ್ಕಳೇ ಆಗಿದ್ದಾರೆ. ಮದೀನಾ ಕಾಲೋನಿ, ಜಾಲಿ, ತಾಳಂದ, ಬೆಳ್ನಿ, ಸರ್ಪನಕಟ್ಟ, ಬಂದರ್ ರಸ್ತೆ, ಹಡಿನ್, ನೂಜ್, ಕಿತ್ರೆ, ಮತ್ತು ಹೊನ್ನೆಗದ್ದೆಯಂತಹ ಪ್ರದೇಶಗಳಿಂದ ದಾಳಿಯ ವರದಿಗಳು ಬಂದಿವೆ. ಕೆಲವು ಪ್ರಕರಣಗಳಲ್ಲಿ ವಯಸ್ಕರೂ ಸಹ ಬಾಧಿತರಾಗಿದ್ದಾರೆ.

 ಸಾಮಾಜಿಕ ಜಾಲತಾಣದಲ್ಲಿ ಕಳವಳ 

ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಮದೀನಾ ಕಾಲೋನಿ, ಜಾಮಿಯಾ ಆಬಾದ್ ರಸ್ತೆ, ಉಮರ್ ಸ್ಟ್ರೀಟ್, ನವಾಯತ್ ಕಾಲೋನಿ, ಕಾರ್ಗೆದ್ದೆ, ಮತ್ತು ಮಖ್ದೂಮ್ ಕಾಲೋನಿಗಳಂತಹ ಪ್ರದೇಶಗಳಲ್ಲಿ ಶ್ವಾನಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಶ್ವಾನಗಳು ಗುಂಪುಗೂಡಿ, ಕಾಡುಪ್ರಾಣಿಗಳಂತೆ ಪಾದಾಚಾರಿಗಳ ಮೇಲೆ ದಾಳಿ ಮಾಡುತ್ತಿವೆ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಒಂಟಿಯಾಗಿ ಕಳುಹಿಸಲು ಹೆದರುತ್ತಿದ್ದಾರೆ. ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುವವರೆಗೆ ಆತಂಕದಲ್ಲಿರುವುದಾಗಿ ತಿಳಿಸಿದ್ದಾರೆ.

 

 ಕ್ರಮಕ್ಕೆ ಒತ್ತಾಯ 

ನಾಗರಿಕರು ತಾಲೂಕು ಆಡಳಿತ, ಪುರಸಭೆ, ಮತ್ತು ಸ್ಥಳೀಯ ಸಾಮಾಜಿಕ ಸಂಘಟನೆಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಶ್ವಾನಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿನ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಗಾಯಾಳುಗಳು ಅಥವಾ ಪ್ರಾಣಾಪಾಯದ ಘಟನೆಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News