ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಾಧಕರಿಗೆ ಸನ್ಮಾನ
ಭಟ್ಕಳ: ಪತ್ರಿಕಾ ದಿನಾಚರಣೆಯ ಅಂಗವಾಗಿ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಮಹಾನೀಯರಾದ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ ಝುಬೇರ್ ಎಸ್.ಎಂ., ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖ ಸಾಮಾಜಿಕ ಹೋರಾಟಗಾರ ರಾಮಾಮೊಗೇರ್ ಹಾಗೂ ಕಳೆದ ಐವತ್ತು ವರ್ಷಗಳಿಂದ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ಪ್ರಾನ್ಸಿಸ್ ಡಿ’ಸೋಜಾ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೌಲಾನ ಝುಬೇರ್, ತಾವು ಮಾಡುತ್ತಿರುವ ಸಮಾಜಸೇವೆಯು ಜನರಿಂದ ಪ್ರತಿಫಲ ಪಡೆದುಕೊಳ್ಳಲಿಕ್ಕೆ ಅಲ್ಲ ಬದಲಾಗಿ ಅಲ್ಲಾಹನನ್ನು ತೃಪ್ತಿಪಡಿಸುವುದಕ್ಕಾಗಿದೆ. ಮನುಷ್ಯರ ಸೇವೆಯನ್ನು ಮಾಡುವುದು ದೇವರ ಸೇವೆಯಾಗಿದೆ. ನಾವು ಮನುಷ್ಯರ ಸೇವೆಯಲ್ಲಿ ದೇವರ ಸೇವೆಯನ್ನು ಕಾಣುತ್ತೇವೆ ಎಂದರು.
ರಾಮಾಮೋಗೇರ್ ಮಾತನಾಡಿ, ಅರಣ್ಯ ಅತಿಕ್ರಮಣದಾರರ ಪರವಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೂಲಕ ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್.ಮಾನ್ವಿ ವಹಿಸಿದ್ದರು. ಭಟ್ಕಳ ಉಪವಿಭಾಗದ ಅರಣ್ಯಸಂರಕ್ಷಣಾಧಿಕಾರಿ ಗಿರೀಶ್ ಪಿ.ಬಿ., ಉದ್ಘಾಟಿಸಿದರು. ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನುಭಾಗ, ಜಿಲ್ಲಾ ಸಂಘದ ನಿಕಟಾಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್, ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಪತ್ರಿಕೋದ್ಯಮದ ಆಗುಹೋಗುಗಳ ಬಗ್ಗೆ ಪತ್ರಕರ್ತರ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ ಶಿರೂರು ಉಪನ್ಯಾಸ ನೀಡಿದರು.