ಕಾರವಾರ | ದೇವಬಾಗದಲ್ಲಿ ಅಲೆಗಳ ರಭಸಕ್ಕೆ ಕಡಲ ತೀರಕ್ಕೆ ಬಂದಿದ್ದ ಡಾಲ್ಫಿನ್ ರಕ್ಷಣೆ
Update: 2025-08-18 13:40 IST
ಕಾರವಾರ: ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪರಿಣಾಮ ಉಂಟಾದ ಅಲೆಗಳ ಅಬ್ಬರದಿಂದ ಕಡಲತೀರಕ್ಕೆ ಬಂದು ಅಪಾಯಕ್ಕೆ ಸಿಲುಕಿದ್ದ ಡಾಲ್ಫಿನ್ ಮರಿಯೊಂದನ್ನು ರಕ್ಷಿಸಿದ ಘಟನೆ ಕಾರವಾರ ತಾಲೂಕಿನ ದೇವಬಾಗ ಕಡಲತೀರದಲ್ಲಿ ಇಂದು ನಡೆದಿದೆ.
ಸೋಮವಾರ 12:3೦ರ ಸುಮಾರಿಗೆ ಇಂಡೋ-ಪೆಸಿಫಿಕ್ ಹಂಪ್ಬ್ಯಾಕ್ ತಳಿಯ ಡಾಲ್ಫಿನ್ ಮರಿಯೊಂದು ಸಮುದ್ರತೀರದಲ್ಲಿ ಅಲೆಗಳ ಅಬ್ಬರದ ಕಾರಣ ದೇವಬಾಗ ಕಡಲತೀರ ತಲುಪಿತ್ತು. ಅದು ಪುನಃ ಸಮುದ್ರಕ್ಕೆ ಹಿಂದಿರುಗಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅಲ್ಲಿದ್ದ ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಅದರಂತೆ ತಕ್ಷಣ ಧಾವಿಸಿದ ರೆಸಾರ್ಟ್ ಸಿಬ್ಬಂದಿಯಾದ ನೀಲೇಶ್, ಸುನೀಲ್ ಮತ್ತು ಸಂತೋಷ್ ಡಾಲ್ಫಿನ್ ಪ್ರಾಣ ರಕ್ಷಿಸುವ ಕಾರ್ಯ ಕೈಗೊಂಡರು. ತುಂಬಾ ಶ್ರಮಪಟ್ಟು ಡಾಲ್ಫಿನ್ ಅನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸಿದರು.