×
Ad

ಸಭಾಪತಿ ಸ್ಥಾನದಿಂದ ಇಳಿಸುವ ಪ್ರಯತ್ನ ನಡೆಸಿದರೆ ರಾಜೀನಾಮೆ ನೀಡುವೆ : ಬಸವರಾಜ ಹೊರಟ್ಟಿ

Update: 2025-08-30 15:27 IST

ಬಸವರಾಜ ಹೊರಟ್ಟಿ

ಶಿರಸಿ : ಪಕ್ಷದ ಬಲಾಬಲ ಬದಲಾದರೂ ಸಭಾಪತಿಯನ್ನು ಬದಲಾವಣೆ ಮಾಡಿದ್ದು‌ ಕಡಿಮೆ. ಕಾಂಗ್ರೆಸ್ ಅಂತಹ ಇತಿಹಾಸ ನಿರ್ಮಾಣ ಮಾಡುವುದಾದರೆ ಮಾಡಲಿ. ಈ ಖುರ್ಚಿ ಯಾರಿಗೂ ಶಾಶ್ವತವಲ್ಲ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಶುಕ್ರವಾರ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಪರಿಷತ್ ನಲ್ಲಿ ಕಾಂಗ್ರೆಸ್ ಗೆ ಬಹುಮತ ಬಂದರೂ ನಾನು ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಒಂದು ವರ್ಷ ಅಥವಾ ಹತ್ತು ವರ್ಷ ಸಭಾಪತಿಯಾದರೂ ಅಧಿಕಾರದ ಬಳಿಕ, ಮಾಜಿ ಎನ್ನುತ್ತಾರೆ. ಹೀಗಾಗಿ ಸಭಾಪತಿ ಸ್ಥಾನದಿಂದ ಇಳಿಸುವ ಪ್ರಯತ್ನ ನಡೆಸಿದರೆ ರಾಜೀನಾಮೆ ನೀಡುತ್ತೇನೆ. ಅದರ ಬಗ್ಗೇನು ಬೇಸರ ಇಲ್ಲ ಎಂದರು.

ಹಿಂದೆ ಉಗ್ರಪ್ಪ ಹಾಗೂ ಶಂಕರಮೂರ್ತಿ ಅವರನ್ನು ಮಾತ್ರ ಪಕ್ಷ ಬದಲಾದಾಗ ಅಧಿಕಾರದಿಂದ ಇಳಿಸಲಾಗಿತ್ತು. ಈಗ ಕಾಂಗ್ರೆಸ್ ಅಂತಹ ಕೆಲಸ ಮಾಡಿದಲ್ಲಿ ಇತಿಹಾಸ ನಿರ್ಮಿಸಿದಂತಾಗಲಿದೆ ಎಂದು ಹೇಳಿದರು.

ಇಂದು ಪರಿಷತ್ ನಲ್ಲಿ ಮಾತ್ರವಲ್ಲದೇ ಎಲ್ಲಿಯೂ ಮೌಲ್ಯ ಉಳಿದಿಲ್ಲ. ಅವೆಲ್ಲವೂ ರಾಮಕೃಷ್ಣ ಹೆಗಡೆಯವರೇ ಕಾಲದಲ್ಲೇ ಮುಗಿದಿದೆ. ದುಡ್ಡು ತೆಗೆದುಕೊಂಡು ಮತ ಹಾಕುವುದು. ದುಡ್ಡು ಕೊಟ್ಟು ಮತ ಪಡೆಯುವುದು ಮಾತ್ರ ನಡೆಯುತ್ತಿದೆ. ಮೌಲ್ಯ ಯಾರಾದರೂ ಉಳಿಸಿದಲ್ಲಿ ಅದು ಮಾಧ್ಯಮದಿಂದ ಮಾತ್ರ ಸಾಧ್ಯವಿದೆ ಎಂದ ಅವರು, ನಾವೂ ಸಹ ವಿವಿಧ ತರಬೇತಿ ಶಿಕ್ಷಣದ ಮೂಲಕ ಮೌಲ್ಯ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು‌.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News