×
Ad

'ಜನ ಗಣ ಮನ' ಬ್ರಿಟಿಷರ ಸ್ವಾಗತಕ್ಕಾಗಿ ರಚಿಸಿದ್ದ ಗೀತೆ : ಸಂಸದ ಕಾಗೇರಿ ವಿವಾದಾತ್ಮಕ ಹೇಳಿಕೆ

Update: 2025-11-05 23:45 IST

ಹೊನ್ನಾವರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದೇಶದ ರಾಷ್ಟ್ರಗೀತೆ 'ಜನ ಗಣ ಮನ' ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯು ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಹೊನ್ನಾವರದಲ್ಲಿ ಇತ್ತೀಚಿಗೆ ಆಯೋಜಿಸಿದ್ದ 'ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆ' ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗೇರಿ ಅವರು, ರಾಷ್ಟ್ರಗೀತೆಯಾದ 'ಜನ ಗಣ ಮನ' ಮೂಲತಃ ಬ್ರಿಟಿಷರ ಸ್ವಾಗತಕ್ಕಾಗಿ ರಚಿಸಲಾದ ಗೀತೆ ಎಂದು ಪ್ರತಿಪಾದಿಸಿದ್ದಾರೆ. ವಂದೇ ಮಾತರಂ ದೇಶದ ರಾಷ್ಟ್ರಗೀತೆಯಾಗಬೇಕಾಗಿತ್ತು. ಇದು 'ಜನ ಗಣ ಮನ'ಕ್ಕೆ ಸರಿಸಮಾನವಾದ ಗೀತೆಯಾಗಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ಅದರ ಕೊಡುಗೆ ನಮಗೆ ಸದಾ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ 'ವಂದೇ ಮಾತರಂ' ಅನ್ನು ರಾಷ್ಟ್ರಗೀತೆಯಾಗಿಸಲು ಸಾಕಷ್ಟು ಒತ್ತಡವಿದ್ದರೂ, ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕೆ ರಚನೆಯಾಗಿದ್ದ 'ಜನ ಗಣ ಮನ'ದ ಜೊತೆಗೆ 'ವಂದೇ ಮಾತರಂ' ಗೀತೆಯೂ ಇರಲಿ ಎಂದು ತೀರ್ಮಾನಿಸಿದರು ಎಂದು ಸಂಸದ ಕಾಗೇರಿ ಅಭಿಪ್ರಾಯಪಟ್ಟರು.

"ನಾವು ಇಂದು ಅದನ್ನು (ಜನ ಗಣ ಮನ) ಒಪ್ಪಿಕೊಂಡು ಪಾಲಿಸುತ್ತಿದ್ದೇವೆ. ಆದರೆ, ವಂದೇ ಮಾತರಂ ಗೀತೆಯ 150ನೇ ವರ್ಷದಲ್ಲಿ, ಅದು ಮತ್ತೆ ಜನರ ಕಂಠ ಕಂಠಗಳಲ್ಲಿ ಪ್ರತಿಧ್ವನಿಸಬೇಕು. 'ಭಾರತ್ ಮಾತಾಕಿ ಜೈ' ಎಂಬ ಘೋಷಣೆಯು ನಮ್ಮ ಉಸಿರಿನ ಭಾಗವಾಗುವಂತೆ ಆಗಬೇಕು. ನಾಡಿನ ಜನರ ಮಧ್ಯೆ ಆ 'ವಂದೇ ಮಾತರಂ' ಹಾಡು ಕಂಠಸ್ವರವಾಗಿ ಮೊದಲು ಮೊಳಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆ ನೀಡಿದರು.

ಅವರ ಈ ಹೇಳಿಕೆಗಳು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News