ಕಾರವಾರ| ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತರಕರ ಲೋಕಾಯುಕ್ತ ಬಲೆಗೆ
ಕಾರವಾರ: ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತರಕರ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಗುರುವಾರ ಮಧ್ಯಾಹ್ನ ಸಿಕ್ಕಿ ಬಿದ್ದಿದ್ದಾರೆ.
ರೋಗಿಗಳ ಹಾಸಿಗೆ ಟೆಂಡರ್‌ನಲ್ಲಿ ಕಮಿಷನ್ ಪಡೆಯುವಾಗ, ಗುತ್ತಿಗೆದಾರರೊಬ್ಬರಿಂದ 30,000 ರೂ. ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಅಂಕೋಲ ಮೂಲದ ಗುತ್ತಿಗೆದಾರ ಮೌಸೀನ್ ಅಹ್ಮದ್ ಶೇಕ್ ಎಂಬವರು ಡಾ. ಶಿವಾನಂದ ವಿರುದ್ಧ ದೂರು ನೀಡಿದ ನಂತರ ಲೋಕಾಯುಕ್ತ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಟೆಂಡರ್ ಸಂಬಂಧ 50,000 ರೂ. ಕಮಿಷನ್‌ಗೆ ಡಾ. ಶಿವಾನಂದ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ 20,000 ರೂ. ಪಡೆದಿದ್ದ ವೈದ್ಯಾಧಿಕಾರಿ, ಇಂದು ಮತ್ತೆ 30,000 ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿದೆ.
ಇಂದು ಬೆಳಗ್ಗೆ ಡಾ. ಶಿವಾನಂದ ಕುಡ್ತರಕರ ಅವರು ತಮ್ಮ ಕಚೇರಿಯಲ್ಲಿ 30,000 ರೂ. ಸ್ವೀಕರಿಸುವಾಗ ಕಾರವಾರ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದ ತಂಡ ದಾಳಿ ನಡೆಸಿ ಅವರನ್ನು ಬಂಧಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.