×
Ad

ಭಟ್ಕಳ ಸರಕಾರಿ ಇಲಾಖೆಗಳಲ್ಲಿನ ಬಹುತೇಕ ಹುದ್ದೆಗಳು ಖಾಲಿ: ಸಚಿವರ ಸ್ವಕ್ಷೇತ್ರದಲ್ಲಿ ಇನ್-ಚಾರ್ಜ್‌ಗಳದ್ದೇ ಕಾರುಬಾರು

Update: 2025-07-29 23:57 IST

ಭಟ್ಕಳ: ಭಟ್ಕಳ ತಾಲೂಕಿನ ಸರಕಾರಿ ಇಲಾಖೆಗಳಲ್ಲಿ ಶಾಶ್ವತ ಅಧಿಕಾರಿಗಳ ನೇಮಕಾತಿಯಾಗದ ಕಾರಣ 20ಕ್ಕೂ ಹೆಚ್ಚು ಇಲಾಖೆಗಳಲ್ಲಿ ಕಾರ್ಯನಿರ್ವಾಹಕ (ಇನ್‌ಚಾರ್ಜ್) ಅಧಿಕಾರಿಗಳೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಜನರ ಸಮಸ್ಯೆಗಳ ಪರಿಹಾರದಲ್ಲಿ ತೊಂದರೆ ಮತ್ತು ಅಡೆತಡೆಗಳು ಎದುರಾಗುತ್ತಿವೆ ಎಂದು ತಿಳಿದುಬಂದಿದೆ.

ಖಾಲಿ ಇರುವ ಪ್ರಮುಖ ಹುದ್ದೆಗಳು: ಭಟ್ಕಳ ಉಪವಿಭಾಗದಲ್ಲಿ ಸಹಾಯಕ ಆಯುಕ್ತರ ಹುದ್ದೆ ಖಾಲಿಯಿದ್ದು, ಸಿರ್ಸಿಯ ಸಹಾಯಕ ಆಯುಕ್ತೆ ಕಾವ್ಯ ರಾಣಿ ಅವರು ಇನ್‌ಚಾರ್ಜ್ ಆಗಿ ವಾರಕ್ಕೆ ಎರಡು ದಿನ ಭಟ್ಕಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ್ ಇನ್‌ಚಾರ್ಜ್ ಆಗಿ ನಿರ್ವಹಿಸುತ್ತಿದ್ದಾರೆ.

ಭಟ್ಕಳ ಟೌನ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಎಂಜಿನಿಯರ್ ಆಗಿರುವ ವೆಂಕಟೇಶ ನಾವಡ ಅವರು ಇನ್‌ಚಾರ್ಜ್ ಮುಖ್ಯಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಆಹಾರ ತನಿಖಾಧಿಕಾರಿಯ ಜವಾಬ್ದಾರಿಯನ್ನು ದ್ವಿತೀಯ ದರ್ಜೆ ಸಹಾಯಕ ಉದಯ ತಲವಾರ್ ಇನ್‌ಚಾರ್ಜ್ ಆಗಿ ನಿಭಾಯಿಸುತ್ತಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಸುಜಯ್ ಅವರಿಗೆ ಇನ್‌ಚಾರ್ಜ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಯನ್ನು ನೀಡಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಗಣೇಶ್ ಅವರಿಗೆ ಇನ್‌ಚಾರ್ಜ್ ಹುದ್ದೆಯ ಜವಾಬ್ದಾರಿ ವಹಿಸಲಾಗಿದೆ. ಭಟ್ಕಳದ ಸಹಾಯಕ ಕೃಷಿ ನಿರ್ದೇಶಕರ ಜವಾಬ್ದಾರಿ ಯನ್ನು ಅಂಕೋಲಾದ ಸಹಾಯಕ ಕೃಷಿ ನಿರ್ದೇಶಕ ಶ್ರೀಧರ್ ಇನ್‌ಚಾರ್ಜ್ ಆಗಿ ನಿರ್ವಹಿಸುತ್ತಿದ್ದಾರೆ. ಭಟ್ಕಳದ ಪಶು ಆಸ್ಪತ್ರೆಯ ಇನ್‌ಚಾರ್ಜ್ ಜವಾಬ್ದಾರಿಯನ್ನು ಹೊನ್ನಾವರದ ಪಶುವೈದ್ಯಾಧಿಕಾರಿ ಬಸಪ್ಪ ಅವರಿಗೆ ನೀಡಲಾಗಿದೆ. ಕೃಷಿ ಅಧಿಕಾರಿ ಶರಣಕುಮಾರ್ ಅವರಿಗೆ ತೋಟಗಾರಿಕೆ ಇಲಾಖೆಯ ಇನ್‌ಚಾರ್ಜ್ ಸಹಾಯಕ ನಿರ್ದೇಶಕರ ಜವಾಬ್ದಾರಿ ವಹಿಸಲಾಗಿದೆ.

ಮಾವಿನಕುರ್ವೆ ಬಂದರಿನ ಸಹಾಯಕ ನಿರ್ದೇಶಕರ ಜವಾಬ್ದಾರಿಯನ್ನು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ದಶಕಗಳಿಂದ ಇನ್‌ಚಾರ್ಜ್ ಆಗಿ ನಿರ್ವಹಿಸುತ್ತಿದ್ದಾರೆ. ಬಾಲ ವಿಕಾಸ ಯೋಜನಾಧಿಕಾರಿಯ ಹುದ್ದೆಯನ್ನು ಸುಶೀಲಾ ಮೊಗೇರ್ ಇನ್‌ಚಾರ್ಜ್ ಆಗಿ, ಸಾಮಾಜಿಕ ಕಲ್ಯಾಣ ಇಲಾಖೆಯಲ್ಲಿ ಗೀತಾ ಹೆಗಡೆ ಅವರಿಗೆ ಇನ್‌ಚಾರ್ಜ್ ಸಹಾಯಕ ನಿರ್ದೇಶಕರ ಹುದ್ದೆಯ ಜವಾಬ್ದಾರಿ ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿ.ವಿ. ಭಟ್ ಇನ್‌ಚಾರ್ಜ್ ವಿಸ್ತರಣಾಧಿಕಾರಿ ಯಾಗಿದ್ದಾರೆ. ಕೈಗಾರಿಕಾ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ವಿಸ್ತರಣಾಧಿಕಾರಿಯ ಹುದ್ದೆ ಖಾಲಿಯಿದೆ. ಕಾರ್ಮಿಕ ಇಲಾಖೆಯಲ್ಲಿ ಗುರು ನಾಯಕ್ ಇನ್‌ಚಾರ್ಜ್ ಇನ್‌ಸ್ಪೆಕ್ಟರ್ ಆಗಿದ್ದರೆ, ಉಪನೋಂದಣಾಧಿಕಾರಿಯ ಜವಾಬ್ದಾರಿಯನ್ನು ಪ್ರಥಮ ದರ್ಜೆ ಸಹಾಯಕ ಫಕ್ರುದ್ದೀನ್ ಇನ್‌ಚಾರ್ಜ್ ಆಗಿ ನಿರ್ವಹಿಸುತ್ತಿದ್ದಾರೆ.

ಗೋಡಂಗಿ ಅಭಿವೃದ್ಧಿ ನಿಗಮದ ಜವಾಬ್ದಾರಿಯನ್ನು ಫಾರೆಸ್ಟರ್ ಪ್ರಮೋದ್ ಹೆಗಲೆ ಇನ್‌ಚಾರ್ಜ್ ಆಗಿ, ತಾಲೂಕು ಪಂಚಾಯಿತಿಯ ಗ್ರಾಮೀಣ ಉದ್ಯೋಗ ಮತ್ತು ಪಂಚಾಯತ್ ರಾಜ್‌ನ ಇನ್‌ಚಾರ್ಜ್ ಸಹಾಯಕ ನಿರ್ದೇಶಕರಾಗಿ ಉದಯ ಬೊರ್ಕರ್, ತಾಲೂಕು ಯೋಜನಾಧಿಕಾರಿಯಾಗಿ ಸಹಾಯಕ ಲೆಕ್ಕಾಧಿಕಾರಿ ರಾಜೇಶ್ ಮಹಾಲೆ ಇನ್‌ಚಾರ್ಜ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರ ವರ್ಗಾವಣೆಯಾಗಿದ್ದು, ಆದೇಶದ ಮೇಲೆ ತಡೆ ಇರುವ ಕಾರಣ ಇದು ಜಾರಿಯಾಗಿಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಶಿಕ್ಷಕ ನಾಗರಾಜ್ ಪಟಗಾರ್ ಅವರ ಹುದ್ದೆ ಖಾಲಿಯಾಗಿದ್ದು, ಇದಕ್ಕೆ ಯಾರನ್ನೂ ನೇಮಕ ಮಾಡಿಲ್ಲ. ಇತರ ಇಲಾಖೆ ಗಳಲ್ಲಿಯೂ ಖಾಲಿಯಿರುವ ಅಥವಾ ಇನ್‌ಚಾರ್ಜ್‌ನ ಸಹಾಯದಿಂದ ನಡೆಯುತ್ತಿರುವ ಹಲವು ಹುದ್ದೆಗಳಿವೆ.

ರಾಜಕಾರಣಿಗಳ ಹಸ್ತಕ್ಷೇಪ ಕಾರಣ?: ಹುದ್ದೆಗಳ ಭರ್ತಿಗೆ ವರ್ಷಗಟ್ಟಲೆ ರಾಜಕಾರಣಿಗಳ ಹಸ್ತಕ್ಷೇಪವೇ ಈ ಸಮಸ್ಯೆಯ ಮೂಲ ಕಾರಣ ಎಂದು ಹೇಳಲಾಗುತ್ತಿದೆ.

ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ, ತಮ್ಮ ಕ್ಷೇತ್ರದಲ್ಲಿ ಇಷ್ಟೊಂದು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಇನ್‌ಚಾರ್ಜ್ ಅಧಿಕಾರಿಗಳಿಂದ ನಡೆಸುವುದು ಸಮರ್ಥ ಮತ್ತು ಜನಪರ ಆಡಳಿತದ ಜನಾಪೇಕ್ಷೆಗೆ ವಿರುದ್ಧವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವರಿಂದಲೂ ಗಂಭೀರ ಪ್ರಯತ್ನ ನಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾ ಕಂದಾಯ ಇಲಾಖೆಯಲ್ಲಿ 300 ಖಾಲಿ ಹುದ್ದೆಗಳು: ಉತ್ತರ ಕನ್ನಡ ಜಿಲ್ಲೆಯ ಕಂದಾಯ ಇಲಾಖೆ ಯಲ್ಲಿ ಸುಮಾರು 300 ಹುದ್ದೆಗಳು ಖಾಲಿಯಿವೆ. ಜಿಲ್ಲೆಯ ನಾಲ್ಕು ಕಂದಾಯ ವಿಭಾಗಗಳಿಗೆ ಕೇವಲ ಇಬ್ಬರು ಮಹಿಳಾ ಸಹಾಯಕ ಆಯುಕ್ತರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಭಟ್ಕಳ ಮತ್ತು ಕಾರವಾರದಲ್ಲಿ ಸಹಾಯಕ ಆಯುಕ್ತರ ನೇಮಕವಾಗಿಲ್ಲ. ಕಾರವಾರಕ್ಕೆ ಕುಮಟಾದ ಸಹಾಯಕ ಆಯುಕ್ತರು, ಭಟ್ಕಳಕ್ಕೆ ಸಿರ್ಸಿಯ ಸಹಾಯಕ ಆಯುಕ್ತರು ಇನ್‌ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷ ಜಿಲ್ಲಾ ಅಧಿಕಾರಿ, ವಿಶೇಷ ಭೂಸ್ವಾಧೀನ ಅಧಿಕಾರಿ ಸೇರಿದಂತೆ ಜಿಲ್ಲೆಯಾದ್ಯಂತ 57 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿಯಿವೆ. ಕೆಳಹಂತದ ಅಧಿಕಾರಿಗಳು ನಿವೃತ್ತಿಯಾದ ಬಳಿಕ ಆ ಹುದ್ದೆಗಳಿಗೆ ಹೊಸ ನೇಮಕಾತಿಯೇ ಆಗದ ಕಾರಣ ಖಾಲಿ ಹುದ್ದೆಗಳ ಸಂಖ್ಯೆ ಏರುತ್ತಿದೆ. ಜಿಲ್ಲೆಯ ಕಂದಾಯ ಇಲಾಖೆಗೆ 904 ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದ್ದು, ಇದರಲ್ಲಿ ಕೇವಲ 637 ಹುದ್ದೆಗಳಿಗೆ ಮಾತ್ರ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕಗೊಂಡಿದ್ದಾರೆ. ಈ ಸ್ಥಿತಿಯಿಂದ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುವುದು ಕಷ್ಟಕರವಾಗಿದ್ದು, ಶಾಶ್ವತ ಅಧಿಕಾರಿಗಳ ನೇಮಕಕ್ಕೆ ಆಗ್ರಹ ಕೇಳಿಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News