ಮುರ್ಡೇಶ್ವರ: ಗಾಂಜಾ ಸೇವನೆ ಪ್ರಕರಣ; ಆರೋಪಿ ಪೊಲೀಸ್ ವಶಕ್ಕೆ
ಭಟ್ಕಳ: ಮುರ್ಡೇಶ್ವರ ರೈಲ್ವೆ ಸ್ಟೇಷನ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಶಿರಾಲಿಯ ಅಳ್ವೆಕೊಡಿಯ ಪುಟ್ಟನ ಮನೆಯ ನಿವಾಸಿ, ಮೀನುಗಾರಿಕೆ ವೃತ್ತಿಯ ದರ್ಶನ ಜನ್ನಾ ಮೊಗೇರ (21) ಎಂದು ಗುರುತಿಸಲಾಗಿದೆ.
ಜೂ.26ರಂದು ಸಂಜೆ 6:00 ಗಂಟೆಯ ಸುಮಾರಿಗೆ, ಮುರ್ಡೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ ಬಿರಾದರ ಅವರು, ಮುರ್ಡೇಶ್ವರದ ರೈಲ್ವೆ ಸ್ಟೇಷನ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ಆರೋಪಿ ದರ್ಶನ್ ಹಾಗೂ ಆತನ ಮೋಟಾರ್ ಬೈಕ್ (ನಂ. KA47/EA-2142) ವಶಕ್ಕೆ ಪಡೆದಿದ್ದಾರೆ.
ವಿಚಾರಣೆಯ ಬಳಿಕ, ಆರೋಪಿಯನ್ನು ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯಕೀಯ ವರದಿಯಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿರುವುದು (ಪಾಸಿಟಿವ್) ದೃಢಪಟ್ಟಿದೆ.
ಈ ಬಗ್ಗೆ ಪಿಎಸ್‌ಐ ಹಣಮಂತ ಬಿರಾದರ ಅವರು ದೂರು ದಾಖಲಿಸಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.