ಮುರ್ಡೇಶ್ವರ | ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಸ್ಥಳೀಯ ರಕ್ಷಣಾ ದಳ
ಸಾಂದರ್ಭಿಕ ಚಿತ್ರ
ಭಟ್ಕಳ: ಭಟ್ಕಳ ತಾಲೂಕಿನ ಪ್ರಸಿದ್ಧ ಸಮುದ್ರ ತೀರ ಪ್ರವಾಸಿ ತಾಣ ಮುರ್ಡೇಶ್ವರದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಘಟನೆಯಲ್ಲಿ ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಯುವ ಪ್ರವಾಸಿಗರನ್ನು ಸ್ಥಳೀಯ ಜೀವ ರಕ್ಷಕ ದಳದ ತ್ವರಿತ ಕಾರ್ಯಚರಣೆಯಿಂದ ಸುರಕ್ಷಿತವಾಗಿ ರಕ್ಷಿಸಲಾಯಿತು.
ಮುರ್ಡೇಶ್ವರ ಪೊಲೀಸ್ ಠಾಣೆಯಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಬಂದಿದ್ದ 11 ಮಂದಿ ಯುವಕರ ತಂಡ ಮುರ್ಡೇಶ್ವರ ಸಮುದ್ರ ತೀರದಲ್ಲಿ ವಿಹಾರಕ್ಕೆ ಬಂದಿತ್ತು. ಇವರಲ್ಲಿ ನಾಲ್ವರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ, ಇಬ್ಬರು ಯುವಕರು ಭಾರಿ ಅಲೆಗಳ ಸೆಳೆತಕ್ಕೆ ಸಿಲುಕಿದರು. ಅದೃಷ್ಟವಶಾತ್ ಅಲ್ಲಿ ಕರ್ತವ್ಯದಲ್ಲಿದ್ದ ಜೀವ ರಕ್ಷಕ ದಳದ ಸದಸ್ಯರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನೂ ರಕ್ಷಿಸಿದ್ದಾರೆ.
ರಕ್ಷಿಸಲ್ಪಟ್ಟ ಯುವಕರನ್ನು ಬೆಂಗಳೂರು ಮೂಲದ ವೀಣು ಮತ್ತು ವಿನಯ್ (19) ಎಂದು ಗುರುತಿಸಲಾಗಿದೆ.
ಇವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದರೂ, ಸ್ಥಳದಲ್ಲೇ ಪೊಲೀಸರು ಮತ್ತು ಜೀವ ರಕ್ಷಕ ದಳದ ಸದಸ್ಯರು ಹೃದಯ ಪಂಪಿಂಗ್ (CPR) ನೀಡಿ ಉಸಿರಾಟ ಪುನಃ ಪ್ರಾರಂಭಿಸಲು ಯಶಸ್ವಿಯಾದರು.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಜೀವ ರಕ್ಷಕ ದಳದ ರಾಜೇಶ್, ಮುದಸಿರ್, ಸಂತೋಷ್, ಕರಾವಳಿ ಕಾವಲು ಪಡೆಯ ದರ್ಶನ, ನಾಗರಾಜ್, ಹೋಮ್ ಗಾರ್ಡ್ ಸುದಾಕರ್ ಹಾಗೂ ಸ್ಥಳೀಯ ಯುವಕರು ಸಹಕಾರ ನೀಡಿದರು.
ಘಟನಾ ಸ್ಥಳಕ್ಕೆ ಮುರ್ಡೇಶ್ವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಹನುಮಂತ ಬೀರಾದ ತಲುಪಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಸ್ಥಳೀಯರು ಜಿಲ್ಲಾಡಳಿತವನ್ನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ, ಹಾಗೂ ಸಮುದ್ರ ತೀರದಲ್ಲಿ ಹೆಚ್ಚುವರಿ ಜೀವ ರಕ್ಷಕ ಸಿಬ್ಬಂದಿ ಮತ್ತು ಎಚ್ಚರಿಕಾ ಫಲಕಗಳನ್ನು ಸ್ಥಾಪಿಸಲು ಮನವಿ ಮಾಡಿದ್ದಾರೆ.