ಎಸೆಸೆಲ್ಸಿ ಫಲಿತಾಂಶ : ಶಿರಶಿಯ ಶಗುಫ್ತಾ ಅಂಜುಮ್‌ಗೆ ಶೇ.100 ಅಂಕ
ಉತ್ತರಕನ್ನಡ : 2024-25ನೇ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರಶಿ ತಾಲೂಕಿನ ಸರಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಮಂಝರುಲ್ ಇಸ್ಲಾಂ ಮತ್ತು ಸಾಹಿರಾ ಬಾನು ದಂಪತಿಯ ಪುತ್ರಿಯಾಗಿರುವ ಶಗುಫ್ತಾ ಅಂಜುಮ್ ಪ್ರತಿಭಾವಂತ ವಿದ್ಯಾರ್ಥಿನಿ. ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಈ ಕುರಿತು ವಾರ್ತಾಭಾರತಿ ಜೊತೆ ಮಾತನಾಡಿದ ಶಿರಸಿ ಸರಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಶಿಕ್ಷಕಿ ಶಗುಫ್ತಾ ನಸೀಂ, ʼಬಿಹಾರ ಮೂಲದ ಶಗುಫ್ತಾ ಅಂಜುಮ್ ಕುಟುಂಬ ಕಳೆದ 20 ವರ್ಷಗಳಿಂದ ಶಿರಸಿಯಲ್ಲಿ ನೆಲೆಸಿದೆ. ಶಗುಫ್ತಾ ಅಂಜುಮ್ ಪ್ರಾಥಮಿಕ ಶಿಕ್ಷಣವನ್ನು ಶಿರಶಿಯಲ್ಲಿ ಪಡೆದು ಬಳಿಕ 6 ರಿಂದ 8ನೇ ತರಗತಿವರೆಗೆ ಹಿಂದಿ ಮಾಧ್ಯಮದಲ್ಲಿ ಬಿಹಾರದಲ್ಲಿ ಶಿಕ್ಷಣ ಪಡೆದಿದ್ದಾರೆ. ಬಳಿಕ 9ನೇ ತರಗತಿಗೆ ಮತ್ತೆ ನಮ್ಮ ಶಾಲೆಗೆ ಬಂದು ಸೇರಿದ್ದಾರೆ. ಶಗುಫ್ತಾ ಅಂಜುಮ್ ಪ್ರತಿಭಾವಂತ ವಿದ್ಯಾರ್ಥಿನಿ. ಆಕೆ ತುಂಬಾ ಬಡ ಕುಟುಂದಿಂದ ಬಂದಿದ್ದಾಳೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಗುಫ್ತಾ ಅಂಜುಮ್ ಉತ್ತರ ಕನ್ನಡ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾಳೆ. ಇದು ನಮಗೆ ಸಂತೋಷವನ್ನುಂಟುಮಾಡಿದೆ ಎಂದು ಹೇಳಿದರು.