×
Ad

ಭಟ್ಕಳ: ದರೋಡೆಗೆ ಸಂಚು ರೂಪಿಸುತ್ತಿದ್ದ ಗರುಡಾ ಗ್ಯಾಂಗ್‌ನ ಮೂವರು ಆರೋಪಿಗಳ ಬಂಧನ, ಇಬ್ಬರು ಪರಾರಿ

Update: 2025-05-28 23:47 IST

ಬಂಧಿತ ಆರೋಪಿಗಳು

ಭಟ್ಕಳ: ಭಟ್ಕಳದ ಬಿಳಾಲಖಂಡ ಗ್ರಾಮದ ಸಾಗರ ರಸ್ತೆಯ ಗುಳ್ಳೆ ರಸ್ತೆ ಕ್ರಾಸ್‌ನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಗರುಡಾ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಇಬ್ಬರು ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.

ಚೊಕ್ಕಬೆಟ್ಟು ನಿವಾಸಿ ಜಲೀಲ್ ಹುಸೈನ್ (39), ಗಾಂಧಿನಗರ ನಿವಾಸಿ ನಾಸಿರ್ ಹಕೀಮ್ (26), ಮತ್ತೋರ್ವ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳು.

ಗರುಡಾ ಗ್ಯಾಂಗ್‌ನ ಸದಸ್ಯನಾಗಿಗಿರುವ ಜಲೀಲ್ ಹುಸೈನ್ ವಿರುದ್ಧ ಈಗಾಗಲೇ 11 ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ನಾಸಿರ್ ಹಕೀಮ್ ವಿರುದ್ಧ ಎರಡು ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. 

ಪರಾರಿಯಾದ ಆರೋಪಿಗಳನ್ನು ಜಿಶಾನ್ (ಮುಗ್ದಮ್ ಕಾಲೋನಿ, ಭಟ್ಕಳ) ಮತ್ತು ನಬೀಲ್ (ಬಟ್ಟಾಗಾಂವ್) ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆಯ ವಿವರ:

ಆರೋಪಿಗಳು ಬಿಳಾಲಖಂಡ ಸಾಗರ ರಸ್ತೆಯ ಗುಳ್ಳೆ ರಸ್ತೆ ಕ್ರಾಸ್‌ನಲ್ಲಿ ಕಾರಿನಲ್ಲಿ ಕುಳಿತು, ದರೋಡೆಗೆ ಸಂಚು ರೂಪಿಸಿದ್ದರು. ದರೋಡೆಗೆ ಬೇಕಾದ ಚಾಕು, ಕಾರಾಪುಡಿ, ಮಂಕಿಕ್ಯಾಪ್, ಬೆಲ್ಟ್, ತಾಡಪತ್ರೆ ಮುಂತಾದ ವಸ್ತುಗಳನ್ನು ಇಟ್ಟುಕೊಂಡು, ರಾತ್ರಿಯ ಕತ್ತಲೆಯಲ್ಲಿ ರಸ್ತೆಯಲ್ಲಿ ಹಾದುಹೋಗುವ ಜನರನ್ನು ದರೋಡೆ ಮಾಡುವ ಉದ್ದೇಶ ಹೊಂದಿದ್ದರು. ಪೊಲೀಸರು ಈ ಕಾರನ್ನು ಗಮನಿಸಿ ವಿಚಾರಣೆಗೆ ಮುಂದಾದಾಗ, ಆರೋಪಿಗಳು ತಪ್ಪಿಸಿಕೊಳ್ಳಲು ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಗಟಾರಕ್ಕೆ ಬಿದ್ದಿದ್ದು, ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆದರೆ, ಇಬ್ಬರು ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪರಾರಿಯಾದ ಆರೋಪಿಗಳನ್ನು ಹಿಡಿಯಲು ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. “ಗರುಡಾ ಗ್ಯಾಂಗ್‌ನ ಈ ಆರೋಪಿಗಳು ಕಾನೂನಿನ ಕಣ್ಣಿಗೆ ಸಿಗದಂತೆ ದರೋಡೆಗೆ ಸಂಚು ರೂಪಿಸಿದ್ದರು. ಆದರೆ, ನಮ್ಮ ತಂಡದ ಚುರುಕಾದ ಕಾರ್ಯಾಚರಣೆಯಿಂದ ಮೂವರನ್ನು ಬಂಧಿಸಲಾಗಿದೆ,” ಎಂದು ಭಟ್ಕಳ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ, ಈ ಘಟನೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News