×
Ad

ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದ್ದರೆ ರೈತರಿಗೆ ಹೆಚ್ಚು ದರ ನೀಡಲು ಸರಕಾರ ಬದ್ಧ : ಶಿವಾನಂದ ಪಾಟೀಲ್

Update: 2025-11-05 00:05 IST

ವಿಜಯಪುರ : ಸಕ್ಕರೆ ಕಾರ್ಖಾನೆಗಳು ನಡೆಸುವ ಸಮಗ್ರ ಲಾಭಾಂಶದ ವಿವರ ಹೊಂದಿದ ಬ್ಯಾಲೆನ್ಸ್ ಶೀಟ್ ಸರಕಾರದ ಕೈ ಸೇರಬೇಕು. ಆ ವೇಳೆ ಕಾರ್ಖಾನೆಗಳು ಉಪ ಉತ್ಪನ್ನಗಳಿಂದ ಲಾಭವನ್ನು ಹೆಚ್ಚಿನ ಪ್ರಮಾಣದಲ್ಲಿ ಗಳಿಸಿದರೆ ಅದರ ಅಂಶವನ್ನು ರೈತರಿಗೆ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುವೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಉತ್ಪನ್ನಗಳಲ್ಲಿ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದ್ದರೆ ರೈತರಿಗೆ ಇನ್ನಷ್ಟು ಹೆಚ್ಚು ದರವನ್ನು ದೊರಕಿಸುವ ನಿಟ್ಟಿನಲ್ಲಿ ಸರಕಾರ ಬದ್ಧವಾಗಿದೆ. ಬೆಲೆ ನಿರ್ಧಾರ ಎನ್ನುವುದು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪ್ರಕ್ರಿಯೆ, ರಸ್ತೆಯಲ್ಲಿ ಇದರ ಬಗ್ಗೆ ಚರ್ಚೆ ಬೇಡ, ಸರಕಾರ ಕಬ್ಬು ಬೆಳೆಗಾರರ ಪರವಾಗಿಯೇ ಇದೆ ಎಂದರು.

ಈ ಹಿಂದೆ 700 ರೂ. ಪ್ರತಿ ಟನ್ ಬೆಲೆ ಇತ್ತು, ಕಾರ್ಖಾನೆಗಳು ಹೆಚ್ಚಾದ ಪರಿಣಾಮ ಕಬ್ಬಿನ ಬೆಲೆಯೂ ಉತ್ತಮವಾಗಿದೆ, ಬೆಂಬಲ ಬೆಲೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ, ಈ ಹಿಂದೆ ಈ ಪ್ರಯತ್ನ ನಡೆದಾಗ ಯಶಸ್ವಿಯಾಗಲಿಲ್ಲ, ಆದರೆ ಕೇಂದ್ರ ಸರಕಾರ ನಿಗದಿಗೊಳಿಸಿದ ದರವನ್ನು ಶೇ.100ಕ್ಕೆ 100ರಷ್ಟು ಕೊಟ್ಟೇ ಕೊಡಿಸುವೆ. ಕಬ್ಬಿನ ದರ ನಿಗದಿ ಮಾಡುವುದು ಕೇಂದ್ರ ಸರಕಾರದ ನಿರ್ಣಯ, ಬೆಲೆ ನೀಡುವಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ರೈತರ ಇಬ್ಬರ ಸಮನ್ವಯ ಅಗತ್ಯ ಎಂದು ಹೇಳಿದರು.

ನಿರಾಣಿ ಪತ್ರ ಉಲ್ಲೇಖಿಸಿದ ಸಚಿವ

ಸಕ್ಕರೆ ಕಾರ್ಖಾನೆಗಳಿಗೂ ಅನೇಕ ತೊಂದರೆಗಳಿವೆ. ಸಾಲ ಮುಂತಾದವುಗಳನ್ನು ಮಾಡಿಯೇ ಅವರು ಕಾರ್ಖಾನೆ ಸ್ಥಾಪಿಸಿದ್ದಾರೆ. ಅವರು ಎದುರಿಸುತ್ತಿರುವ ತೊಂದರೆಗಳು ಹಾಗೂ ಕೇಂದ್ರ ಸರಕಾರದ ನೀತಿ ನಿಯಮಾವಳಿಗಳು ಯಾವ ರೀತಿ ಪರಿಷ್ಕರಣೆಯಾಗಬೇಕು ಎಂಬುದರ ಕುರಿತು ಮಾಜಿ ಸಚಿವ ಮುರುಗೇಶ ನಿರಾಣಿ ಅವರೇ ಕೇಂದ್ರ ಸರಕಾರಕ್ಕೆ ಸುದೀರ್ಘ ಪತ್ರ ಬರೆದಿದ್ದಾರೆ. ಸಕ್ಕರೆ ರಫ್ತು ನಿಂತು ಹೋಗಿದೆ, ಇಥೆನಾಲ್ ಉತ್ಪಾದನೆ ಕಡಿತಗೊಳಿಸಿರುವುದು ಸೇರಿದಂತೆ ಅನೇಕ ಅಂಶಗಳನ್ನು ನಿರಾಣಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸರಕಾರ ಸಕ್ಕರೆ ಕಾರ್ಖಾನೆಗಳ ಲಾಭಾಂಶದ ಬಗ್ಗೆ ಯೋಚಿಸದೇ ರೈತರ ಬಗ್ಗೆಯೇ ಯೋಚಿಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News