ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ಅಗತ್ಯ: ಶಾಸಕ ಯಶವಂತರಾಯಗೌಡ ಪಾಟೀಲ್
"ನಾನು ಬಣ ಬಣ್ಣ ಬದಲಾಯಿಸುವ ರಾಜಕಾರಣಿಯಲ್ಲ"
ವಿಜಯಪುರ : 2023 ರ ಚುನಾವಣೆ ಪೂರ್ವದಲ್ಲಿ ಹೈಕಮಾಂಡ್ ಸಚಿವ ಸ್ಥಾನದ ಭರವಸೆ ನೀಡಿದ್ದು, ನಾನು ನನಗಾಗಿ ಸಚಿವ ಸ್ಥಾನ ಕೇಳುವುದಿಲ್ಲ. ಇಂಡಿ ಕ್ಷೇತ್ರಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಕೊರತೆಯನ್ನು ನೀಗಿಸಲು ಸಚಿವ ಸ್ಥಾನ ಕೇಳುತ್ತಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚುನಾವಣೆಗೆ ಮುಂಚೆ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಮತ್ತು ನನಗೆ ಸಚಿವ ಸ್ಥಾನ ನೀಡುವ ವಿಷಯ ಹೈಕಮಾಂಡ್ ನಿಂದಲೇ ರಣದೀಪ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಹಿರಿಯ ನಾಯಕರ ಸಭೆಯಲ್ಲಿ ಭರವಸೆ ದೊರಕಿತ್ತು. ನವದೆಹಲಿಯ ಸಭೆಯಲ್ಲೂ ಇದೇ ಭರವಸೆ ಮರುಸ್ಥಾಪನೆಯಾಯಿತು. ಹೀಗಾಗಿ ಮಾತು ಈಡೇರಿಸಬೇಕು ಎಂದು ಕೇಳುತ್ತಿದ್ದೇನೆ. ಮಾತಿಗೆ ಮೌಲ್ಯವಿದೆ. ಇದನ್ನೇ ಆಧಾರ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದೇನೆ. ಪಕ್ಷ ನನ್ನ ಹಿಂದೆ ನಿಂತಿದೆ ಎಂದರು.
ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಜೀವನದ ಕೊನೆಯ ದಿನದವರೆಗೂ ಕಾಂಗ್ರೆಸ್‌ನಲ್ಲಿ ಇರುತ್ತೇನೆ. ಅಧಿಕಾರ ಸಿಗಲಿ ಅಥವಾ ಸಿಗದಿರಲಿ ಕಾಂಗ್ರೆಸ್‌ನ ಜಾತ್ಯತೀತ ಸಿದ್ಧಾಂತ ನನ್ನ ವಿಶ್ವಾಸದ ಸಿದ್ಧಾಂತ ಎಂದು ಹೇಳಿದರು.
ಸಚಿವ ಸ್ಥಾನಕ್ಕಾಗಿ ಹಿರಿಯರ ಬಳಿ ಎಲ್ಲ ಶಾಸಕರು ಸೇರಿ ಹೋಗೋಣ ಎಂಬ ಅಪ್ಪಾಜಿ ನಾಡಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಆದರೆ ಜಿಲ್ಲೆಯ ಶಾಸಕರು ಒಂದಾಗಿ ಅಭಿವೃದ್ಧಿಗಾಗಿ ಹೋಗುವ ಉದಾಹರಣೆ ಇಲ್ಲ. ಸಂಕುಚಿತ ಮನೋಭಾವ ಎಲ್ಲಲ್ಲೂ ಇದೆ. ನನ್ನಲ್ಲಿಯೂ ಇದೆ. ಆದರೆ ಜಿಲ್ಲೆಗಾಗಿ ಒಟ್ಟಾಗಿ ಮುಂದುವರಿಯಬೇಕು. ಎಲ್ಲರೂ ಕೂಡಿ ರಾಹುಲ್ ಗಾಂಧೀ ಅವರನ್ನು ಪ್ರಧಾನಿಯಾಗಿಸಬೇಕು ಎಂದರು.
ನಾಡಗೌಡರ ಜೊತೆ ನನ್ನ ಆತ್ಮೀಯ ಸಂಬಂಧ ಇದೆ. 2013ರಲ್ಲಿ ಅವರನ್ನು ಮತ್ತು ಶಿವಾನಂದ ಪಾಟೀಲರನ್ನು ಮಂತ್ರಿ ಮಾಡಿ ಎಂದು ನಾನು ಹೇಳಿದ್ದೆ. ಈಗ ನನಗೆ ನಿಗಮ–ಮಂಡಳಿ ಸ್ಥಾನ ಕೊಡಲು ಸರ್ಕಾರ ಸಿದ್ದವಾಗಿತ್ತು. ಆದರೆ ಇಂಡಿಗೆ ಸಚಿವ ಸ್ಥಾನ ಕೊರತೆ ನೀಗಬೇಕು ಎಂಬ ದೃಷ್ಟಿಯಿಂದ ಅದನ್ನು ನಿರಾಕರಿಸಿದ್ದೇನೆ. ಮಾತು ಈಡೇರಿಸಬೇಕು. ಇದೊಂದೇ ವಿನಂತಿ ಎಂದರು.
ಭೀಮಾಶಂಕರ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಿದ್ದೇನೆ. ಜನತೆ ಚುನಾವಣೆಯ ಮೂಲಕ ನನಗೆ ಅಧ್ಯಕ್ಷ ಸ್ಥಾನ ನೀಡಿದರು. ಹೀಗಾಗಿ ಅಧ್ಯಕ್ಷನಾಗಿದ್ದು ತಪ್ಪೇ ಎಂದು ಪ್ರಶ್ನಿಸಿದರು.
ನಾನು ಬಣ ಬಣ್ಣ ಬದಲಾಯಿಸುವ ರಾಜಕಾರಣಿಯಲ್ಲ. ಒಡಕು ಮೂಡಿಸುವ ರಾಜಕಾರಣ ಮಾಡಿಲ್ಲ. ಎಲ್ಲರನ್ನು ಕೂಡಿಸುವ ರಾಜಕಾರಣ ಮಾಡುತ್ತೇನೆ. ನನ್ನ ಇಮೇಜ್ ಕ್ಲೀನ್ ಎಂಬುದು ಜನತೆಗೆ ಗೊತ್ತಿದೆ. ಕ್ಷೇತ್ರದ ಜನರ ಹಿತಕ್ಕಾಗಿ ಈ ಬೇಡಿಕೆ ಇರಿಸಿದ್ದೇನೆ ಎಂದು ಹೇಳಿದರು.