×
Ad

ಗೃಹಲಕ್ಷ್ಮಿ ಹಣ ಬಿಡುಗಡೆ ವಿಳಂಬ ದೊಡ್ಡ ಸಮಸ್ಯೆಯಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2025-06-01 12:00 IST

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ‘ವಾರ್ತಾಭಾರತಿ’ ಜೊತೆ ಮಾತನಾಡಿದ್ದಾರೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಬಗ್ಗೆ, ಸರಕಾರದಿಂದ ಹಣ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ.

ವಾರ್ತಾಭಾರತಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರೈಸಿದೆ. ಸರಕಾರದ ಸಾಧನೆ ಮತ್ತು ಕಾರ್ಯವೈಖರಿ ಬಗ್ಗೆ ನಿಮ್ಮ ಅನಿಸಿಕೆ ಏನು? ತೃಪ್ತಿ ಇದೆಯಾ?

ಲಕ್ಷ್ಮೀ ಹೆಬ್ಬಾಳ್ಕರ್: ನಮ್ಮ ಸರಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸರಕಾರದ ಸಾಧನೆಯ ಬಗ್ಗೆ ನನಗೆ ಸಮಾಧಾನ ಇದೆ.

ವಾರ್ತಾಭಾರತಿ: ನಿಮ್ಮ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಲ್ಲಿ ಆಗಿರುವ ದೊಡ್ಡ ಬದಲಾವಣೆ ಏನು?

ಲಕ್ಷ್ಮೀ ಹೆಬ್ಬಾಳ್ಕರ್: 2023ರ ವಿಧಾನಸಭೆ ಚುನಾವಣೆಗೂ ಮೊದಲು ರಾಜ್ಯದ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದರು. ಅದಕ್ಕೂ ಮೊದಲು ಬಂದಿದ್ದ ಕೊರೋನದಿಂದ ಸಾಕಷ್ಟು ಸಮಸ್ಯೆಗೆ ಒಳಗಾಗಿದ್ದರು. ಜನರನ್ನು ಸಂಕಷ್ಟದಿಂದ ಪಾರು ಮಾಡಲು ನಾವು ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೆವು. ಅದರ ಪ್ರಕಾರ, ನಮ್ಮ ಸರಕಾರ ಬಂದ ನಂತರ ಎಲ್ಲಾ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅವುಗಳ ಪೈಕಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವ ಹೊಣೆ ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯದ್ದು. ಹೊಸ ಮಾದರಿಯ ಯೋಜನೆಗೆ ಇದ್ದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ವಿಶೇಷವಾಗಿ ಮಹಿಳೆಯರ ಸ್ವಾವಲಂಬನೆ ನಮ್ಮ ಕನಸು ಮತ್ತು ಉದ್ದೇಶ. ಅದು ಈಡೇರಿರುವುದರಿಂದ ಖುಷಿಯಾಗುತ್ತಿದೆ. ಬಹಳಷ್ಟು ಮಹಿಳೆಯರು ಗೃಹಲಕ್ಷ್ಮಿ ಹಣವನ್ನು ತಮ್ಮ ಆರ್ಥಿಕ ಬೆಳವಣಿಗೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕೆಲವು ಮಹಿಳೆಯರು ತಮ್ಮ ಸೊಸೆಯಂದಿರಿಗೆ ಅಂಗಡಿ ಹಾಕಿಕೊಟ್ಟಿದ್ದಾರೆ. ಕೆಲವರು ಮಕ್ಕಳ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಕೆಲವರು ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ.

ವಾರ್ತಾಭಾರತಿ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಯಾಗುತ್ತಿಲ್ಲ ಎನ್ನುವ ಆರೋಪವಿದೆಯಲ್ಲಾ?

ಲಕ್ಷ್ಮೀ ಹೆಬ್ಬಾಳ್ಕರ್: ಮೊದಲೇ ಹೇಳಿದಂತೆ ಇದೊಂದು ಹೊಸ ಮಾದರಿಯ ದೊಡ್ಡ ಯೋಜನೆ. ಜಾರಿಗೊಳಿಸುವಾಗ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಸಾಧ್ಯವಾದಷ್ಟು ಅವುಗಳನ್ನು ಪರಿಹರಿಸುವ ವ್ಯವಸ್ಥೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ವಿವಿಧ ಹಂತಗಳನ್ನು ದಾಟಿ ಯೋಜನೆ ಜಾರಿಯಾಗಬೇಕಾಗಿರುವುದರಿಂದ ಕೆಲವು ತಿಂಗಳು ಸ್ವಲ್ಪ ವಿಳಂಬವಾಗಿದೆ. ದೊಡ್ಡ ಸಮಸ್ಯೆಯಾಗಿಲ್ಲ.

ವಾರ್ತಾಭಾರತಿ: ಸರಕಾರದ ಬಳಿ ಗೃಹಲಕ್ಷ್ಮಿ ಯೋಜನೆಗೆ ಕೊಡಲು ಹಣ ಇಲ್ಲ. ಖಜಾನೆ ಖಾಲಿಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ನಿಜಾನಾ?

ಲಕ್ಷ್ಮೀ ಹೆಬ್ಬಾಳ್ಕರ್: ವಿರೋಧ ಪಕ್ಷಗಳು ಚುನಾವಣೆಗೂ ಮುನ್ನ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಇವುಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಅಪಪ್ರಚಾರ ಮಾಡಿದ್ದವು. ನಾವು ಜಾರಿಗೊಳಿಸಿದಾಗ ಮೂರು ತಿಂಗಳೂ ನಡೆಯುವುದಿಲ್ಲ ಎಂದವು. ಅವುಗಳ ನಿರಂತರ ಅಪಪ್ರಚಾರದ ಮಧ್ಯೆಯೂ ನಮ್ಮ ಸರಕಾರ ಗೃಹಲಕ್ಷ್ಮಿ ಸೇರಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನೂ ನಡೆಸುತ್ತಿದೆ.

ವಾರ್ತಾಭಾರತಿ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ‘ಗೃಹಲಕ್ಷ್ಮಿ ಸಂಘ’ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದೀರಿ? ಏನು ಅದರ ಉದ್ದೇಶ? ಯಾವಾಗ ಶುರುವಾಗುತ್ತೆ?

ಲಕ್ಷ್ಮೀ ಹೆಬ್ಬಾಳ್ಕರ್: ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇ ಮಹಿಳೆಯರ ಆರ್ಥಿಕ ಸ್ವಾವಲಂಬನೆ. ಆದರೆ, ಕೇವಲ 2,000 ರೂಪಾಯಿ ಕೊಟ್ಟರೆ ಮಹಿಳೆಯರು ಪೂರ್ತಿಯಾಗಿ ಸ್ವಾವಲಂಬಿಯಾಗಲು ಸಾಧ್ಯವಿಲ್ಲ. ಅವರ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಸ್ತ್ರೀ ಶಕ್ತಿ ಸಂಘಗಳ ಮಾದರಿಯಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಆರಂಭಿಸುವ ಹೆಜ್ಜೆ ಇಟ್ಟಿದ್ದೇನೆ. ಪ್ರತಿ ಸಂಘದಲ್ಲಿ 7ರಿಂದ 15 ಸದಸ್ಯರಿರುತ್ತಾರೆ. ಈ ಬಗ್ಗೆ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಅಕ್ಟೋಬರ್ ತಿಂಗಳಲ್ಲಿ ಅಂಗನವಾಡಿಗಳ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಉದ್ಘಾಟಿಸಲಾಗುವುದು.

ವಾರ್ತಾಭಾರತಿ: ಸರಕಾರ ಮಹಿಳೆಯರಿಗೆ ದುಡ್ಡು ಕೊಡುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿಕೊಟ್ಟಿದೆ. ಇದರಿಂದ ಮಹಿಳೆಯರು ಪುರುಷರ ಮಾತು ಕೇಳುತ್ತಿಲ್ಲ., ಸರಿಯಾಗಿ ಮನೆ ಕೆಲಸ ಮಾಡುತ್ತಿಲ್ಲ ಎನ್ನುವ ಕ್ಷುಲ್ಲಕ ಮಾತುಗಳು ಕೇಳಿಬರುತ್ತಿವೆ. ಸರಕಾರ ಎಲ್ಲವನ್ನು ಮಹಿಳೆಯರಿಗೆ ಮಾಡುತ್ತಿದೆ. ಪುರುಷರಿಗೆ ಏನೂ ಕೊಡುತ್ತಿಲ್ಲ ಎನ್ನುವ ಆರೋಪ ಇದೆ. ಏನು ಹೇಳುತ್ತೀರಿ?

ಲಕ್ಷ್ಮೀ ಹೆಬ್ಬಾಳ್ಕರ್: ಇದು ಸ್ತ್ರೀ ವಿರೋಧಿಗಳು ಆಡುವ ಮಾತುಗಳು. ಪಂಚ ಗ್ಯಾರಂಟಿ ಯೋಜನೆಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮವಾದ ಒಂದೇ ಒಂದು ಉದಾಹರಣೆ ಇಲ್ಲ. ವಿರೋಧ ಪಕ್ಷದವರು ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ, ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ-ಸೊಸೆ ಜಗಳ ಆಗುತ್ತೆ ಎಂದು ಹೇಳಿದ್ದರು. ಹಲವೆಡೆ ಅತ್ತೆಯರೇ ಮುಂದೆ ನಿಂತು ಸೊಸೆಗೆ ಅಂಗಡಿಗಳನ್ನು ಹಾಕಿಕೊಟ್ಟ ಉದಾಹರಣೆಗಳಿವೆ. ಅತ್ತೆ-ಸೊಸೆ ಜೊತೆಯಾಗಿ ಬಸ್‌ಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆ ಭದ್ರವಾಗುತ್ತಿದೆ. ಹಾಗೆಯೇ ಅವರ ಸಂಬಂಧವೂ ಗಟ್ಟಿಯಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಭದ್ರತೆ ಕೊಟ್ಟರೆ ಅದು ಸಹಜವಾಗಿಯೇ ಪುರುಷರ ಆರ್ಥಿಕತೆಯನ್ನೂ ಬಲಪಡಿಸುತ್ತದೆ. ಮಹಿಳೆಯರಿಗೆ ಹಣ ಕೊಟ್ಟರೆ ಅದು ಕುಟುಂಬಕ್ಕೆ ಕೊಟ್ಟಂತೆ.

ವಾರ್ತಾಭಾರತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾಗಿ, ರಾಜಕೀಯ ನಾಯಕಿಯಾಗಿ ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ?

ಲಕ್ಷ್ಮೀ ಹೆಬ್ಬಾಳ್ಕರ್: ಮಹಿಳೆಯರು ರಾಜಕೀಯ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಎನ್ನುವುದು ಮೊದಲಿನಿಂದಲೂ ನನ್ನ ಪ್ರತಿಪಾದನೆ. ಮುಂದೆ ಇನ್ನಷ್ಟು ಮಹಿಳೆಯರು ರಾಜಕೀಯಕ್ಕೆ ಬರುತ್ತಾರೆ, ಅಧಿಕಾರಕ್ಕೂ ಏರುತ್ತಾರೆ ಎನ್ನುವ ವಿಶ್ವಾಸವಿದೆ. ನಾನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದಾಗಿನಿಂದಲೂ ಮಹಿಳೆಯರು ಸಂಘಟಿತರಾಗುವುದನ್ನು ಮತ್ತು ರಾಜಕೀಯಕ್ಕೆ ಬರುವುದನ್ನು ಪ್ರೋತ್ಸಾಹಿಸುತ್ತಾ ಬಂದಿದ್ದೇನೆ. ರಾಜಕೀಯಕ್ಕೆ ಬರಲು ಆಸಕ್ತಿ ಇರುವ ಮಹಿಳೆಯರಿಗೆ ಎಲ್ಲಾ ರೀತಿಯ ಮಾರ್ಗದರ್ಶನ, ಸಹಕಾರ ನೀಡುತ್ತಾ ಬಂದಿದ್ದೇನೆ.

ವಾರ್ತಾಭಾರತಿ: ನಿಮ್ಮ ಇಲಾಖೆಯಲ್ಲಿ ನಿಮ್ಮ ಸಹೋದರ, ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಹಸ್ತಕ್ಷೇಪ ಜಾಸ್ತಿ ಎನ್ನುವ ಆರೋಪಗಳಿವೆ?

ಲಕ್ಷ್ಮೀ ಹೆಬ್ಬಾಳ್ಕರ್: ನಮ್ಮ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ಚನ್ನರಾಜ್ ಒಬ್ಬ ಜನಪ್ರತಿನಿಧಿ, ಜೊತೆಗೆ ನನ್ನ ಸಹೋದರ. ಸಹಜವಾಗಿ ನನ್ನೊಂದಿಗೆ ಓಡಾಡುವುದು, ಕೆಲವೊಂದು ಸಲಹೆಗಳನ್ನು ಕೊಡುವುದು ಇದ್ದೇ ಇರುತ್ತದೆ. ಅಂದ ಮಾತ್ರಕ್ಕೆ ಹಸ್ತಕ್ಷೇಪ ಎನ್ನುವುದು ಸರಿಯಲ್ಲ. ಯಾರಿಂದಲೇ ಒಳ್ಳೆಯ ಸಲಹೆಗಳು ಬಂದರೂ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಜಾಯಮಾನ ನನ್ನದು. ಆದರೆ ಯಾರಿಗೂ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ.

ವಾರ್ತಾಭಾರತಿ: ಪಂಚಮಸಾಲಿ ಮೀಸಲಾತಿ ಹೋರಾಟ ಎಲ್ಲಿಗೆ ಬಂತು? ಹೋರಾಟದ ಮುಂಚೂಣಿಯಲ್ಲಿದ್ದ ಸ್ವಾಮೀಜಿಗಳು ಒಂದು ರಾಜಕೀಯ ಪಕ್ಷದ ವಕ್ತಾರರಂತೆ, ಒಬ್ಬ ನಾಯಕನ ಹಿಂಬಾಲಕರಂತೆ ಮಾತನಾಡ್ತಾರೆ. ಇದರಿಂದ ನಿಮ್ಮ ಹೋರಾಟಕ್ಕೆ ಹಿನ್ನಡೆಯಾಯಿತಾ?

ಲಕ್ಷ್ಮೀ ಹೆಬ್ಬಾಳ್ಕರ್: ಸಮಾಜದ ಪರವಾಗಿ ಸ್ವಾಮೀಜಿಗಳ ಹೋರಾಟವನ್ನು ನಾನು ಹಿಂದಿನಿಂದಲೂ ಬೆಂಬಲಿಸುತ್ತಾ ಬಂದಿದ್ದೇನೆ, ಮುಂದೆಯೂ ಅವರ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ. ಹೋರಾಟ ತಾತ್ಕಾಲಿಕವಾಗಿ ನಿಂತಿರಬಹುದು. ಮುಂದೆ ಖಂಡಿತಾ ಮುಂದುವರಿಯುತ್ತದೆ, ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸವಿದೆ.

ವಾರ್ತಾಭಾರತಿ: ಜಾತಿ ಜನಗಣತಿ ಜಾರಿ ಬಗ್ಗೆ ನಿಮ್ಮ ನಿಲುವೇನು?

ಲಕ್ಷ್ಮೀ ಹೆಬ್ಬಾಳ್ಕರ್: ಜಾತಿ ಜನಗಣತಿ ವಿಷಯವಾಗಿ ಈಗಾಗಲೇ ಸಾಕಷ್ಟು ಚರ್ಚೆ ಯಾಗಿದೆ. ಮುಖ್ಯಮಂತ್ರಿಗಳ ನಿಲುವೇ ನಮ್ಮೆಲ್ಲರ ನಿಲುವು. ಮುಖ್ಯಮಂತ್ರಿಗಳ ಸೂಚನೆಯಂತೆ ಈ ಕುರಿತು ನಮ್ಮ ಸಮಾಜದ ಎಲ್ಲಾ ಸಚಿವರು ಸೇರಿ ಲಿಖಿತವಾಗಿ ಅಭಿಪ್ರಾಯ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಕುರಿತು ಯಾವುದೇ ಗೊಂದಲವಿಲ್ಲದೇ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News