ಅನುಮೋದಿತ ಸ್ಥಳದಲ್ಲಿ ಇಳಿಯದೆ ಬೇರೆ ಸ್ಥಳದಲ್ಲಿ ಲ್ಯಾಂಡಿಂಗ್ ಆಗಿದ್ದ ಸಿದ್ದರಾಮಯ್ಯ ಹೆಲಿಕಾಪ್ಟರ್
ವಿವರ ಕೇಳಿ ಹೈಕ್ರಾಫ್ಟ್ ಏವಿಯೇಶನ್ ಸರ್ವೀಸಸ್‌ಗೆ ರಾಯಚೂರು ಜಿಲ್ಲಾಧಿಕಾರಿ ಬರೆದಿದ್ದ ಪತ್ರ ಬಹಿರಂಗ
(ಸಂಗ್ರಹ ಚಿತ್ರ)
ಬೆಂಗಳೂರು : ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್, ಅನುಮೋದಿತ ಸ್ಥಳದಲ್ಲಿ ಇಳಿಯದೇ ಬೇರೆ ಸ್ಥಳದಲ್ಲಿ ಇಳಿದಿರುವ ಕುರಿತು ರಾಯಚೂರು ಜಿಲ್ಲಾಧಿಕಾರಿ ಅವರು ವರದಿ ಕೇಳಿ ಹೈಕ್ರಾಫ್ಟ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ ಬರೆದಿದ್ದ ಪತ್ರವು ಇದೀಗ ಬಹಿರಂಗವಾಗಿದೆ.
ರಾಯಚೂರಿನಲ್ಲಿ ಅನುಮೋದಿತ ಹೆಲಿಪ್ಯಾಡ್ ಹಂಚಿಕೆ ಹಾಗೂ ವಿಮಾನ ಕಾರ್ಯಾಚರಣಾ ನಿಯಮಾವಳಿಗಳ ಪಾಲನೆಯಲ್ಲಿ ಉಲ್ಲಂಘನೆಯಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಅವರು 2026ರ ಫೆ.10ರಂದು ಪತ್ರ ಬರೆದಿದ್ದರು. ಆದರೆ ಈ ಬಗ್ಗೆ ಸಂಬಂಧಿತ ಕಂಪೆನಿಯು ವರದಿ ನೀಡಿದೆಯೇ ಇಲ್ಲವೇ ಎಂಬ ಕುರಿತು ಯಾವುದೇ ಮಾಹಿತಿಯು ಬಹಿರಂಗವಾಗಿಲ್ಲ.
ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಅವರು ಬರೆದಿದ್ದ ಪತ್ರವು ‘the-file.in’ಗೆ ಲಭ್ಯವಾಗಿದೆ. ಹೈಕ್ರಾಫ್ಟ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ವತಿಯಿಂದ ಕಾರ್ಯಾಚರಿಸಲ್ಪಟ್ಟ ಹೆಲಿಕಾಪ್ಟರ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದರು. 2026ರ ಫೆ.8ರಂದು ಅನುಮೋದಿತ ಹೆಲಿಪ್ಯಾಡ್ ಹಂಚಿಕೆ ಹಾಗೂ ಸಂಚಾರ ಯೋಜನೆಯ ಪ್ರಕಾರ ನಿಗದಿಪಡಿಸಲಾದ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಇಳಿದಿರಲಿಲ್ಲ. ಬೇರೆ ಸ್ಥಳದಲ್ಲಿ ಇಳಿಸಲಾಗಿದೆ ಎಂಬುದು ಈ ಕಚೇರಿಯ ಗಮನಕ್ಕೆ ಬಂದಿದೆ.
ಆ ಹೆಲಿಕಾಪ್ಟರ್ ಅನ್ನು ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗಾಗಿ ವಿಶೇಷವಾಗಿ ಮೀಸಲಿರಿಸಲಾದ ಮತ್ತೊಂದು ಹೆಲಿಪ್ಯಾಡ್‌ನಲ್ಲಿ ಇಳಿಸಲಾಗಿದೆ. ಅನುಮೋದಿತ ಯೋಜನೆಯಿಂದ ಈ ರೀತಿಯ ವ್ಯತ್ಯಾಸವು ಗೊಂದಲವನ್ನು ಉಂಟುಮಾಡಿದೆ. ಭದ್ರತಾ ವ್ಯವಸ್ಥೆಗಳು, ವಿಮಾನ ಸಂಯೋಜನೆ ಹಾಗೂ ಮುಖ್ಯಮಂತ್ರಿ ಅವರ ಸಂಬಂಧಿತ ಪ್ರೋಟೊಕಾಲ್ ಪಾಲನೆಗೆ ಸಂಭವನೀಯ ಅಪಾಯವನ್ನು ಉಂಟುಮಾಡಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.
ಹೆಲಿಪ್ಯಾಡ್ ಹಂಚಿಕೆಯನ್ನು ಭದ್ರತೆ, ಸುರಕ್ಷತೆ ಹಾಗೂ ಆಡಳಿತಾತ್ಮಕ ನಿಯಮಾವಳಿಗಳನ್ನು ಪರಿಗಣಿಸಿ ಮಾಡಲಾಗುತ್ತದೆ. ಸಂಬಂಧಿತ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ರೀತಿಯ ವ್ಯತ್ಯಾಸವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ನಿಗದಿಪಡಿಸಲಾದ ಹೆಲಿಪ್ಯಾಡ್‌ನಿಂದ ವ್ಯತ್ಯಾಸವಾಗಲು ಕಾರಣವಾದ ಬಗ್ಗೆ ಲಿಖಿತ ವಿವರಣೆಯನ್ನು ಸಲ್ಲಿಸಬೇಕು. ಈ ರೀತಿ ಬೇರೆಡೆ ಇಳಿಯುವಿಕೆಗೆ ಕಾರಣವಾದ ಸಂದರ್ಭಗಳು ಹಾಗೂ ನಿರ್ಧಾರ ಕೈಗೊಂಡ ಪ್ರಕ್ರಿಯೆಯನ್ನು ಸ್ಪಷ್ಟಪಡಿಸಬೇಕು. ಇಂತಹ ಲೋಪಗಳು ಭವಿಷ್ಯದಲ್ಲಿ ಮರುಕಳಿಸದಂತೆ ಕೈಗೊಳ್ಳಲಿರುವ ತಿದ್ದುಪಡಿ ಹಾಗೂ ತಡೆಗಟ್ಟುವ ಕ್ರಮಗಳ ವಿವರವನ್ನು ನೀಡಬೇಕು ಎಂದು ರಾಯಚೂರು ಜಿಲ್ಲಾಧಿಕಾರಿ ಸೂಚಿಸಿರುವುದು ತಿಳಿದು ಬಂದಿದೆ.
‘ಈ ಪತ್ರ ಸ್ವೀಕರಿಸಿದ ದಿನಾಂಕದಿಂದ 3 (ಮೂರು) ದಿನಗಳೊಳಗೆ ನಿಮ್ಮ ಉತ್ತರವು ಈ ಕಚೇರಿಗೆ ತಲುಪಬೇಕು. ಹಾಗಾಗದಿದ್ದಲ್ಲಿ, ಅನ್ವಯಿಸುವ ನಿಯಮಗಳು ಹಾಗೂ ಮಾರ್ಗಸೂಚಿಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು,’ ಎಂದು ಎಚ್ಚರಿಸಿರುವುದು ಗೊತ್ತಾಗಿದೆ.
ಈ ಪತ್ರವನ್ನಾಧರಿಸಿ ಹೈಕ್ರಾಫ್ಟ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಏನು ವರದಿ ನೀಡಿದೆ, ವರದಿಯ ಮುಖ್ಯಾಂಶಗಳೇನು, ವರದಿ ಆಧರಿಸಿ ಕ್ರಮ ಕೈಗೊಂಡಿದೆಯೇ ಇಲ್ಲವೇ ಎಂಬ ಕುರಿತು ‘the-file.in’, ಪ್ರಶ್ನಾವಳಿಗಳನ್ನು ರಾಯಚೂರು ಜಿಲ್ಲಾಧಿಕಾರಿಗೆ 2026ರ ಜೂನ್ 14ರಂದು ಇ-ಮೇಲ್ ಮೂಲಕ ಕಳಿಸಿದೆ. ಜಿಲ್ಲಾಧಿಕಾರಿ ಕಚೇರಿಯು ಇದುವರೆಗೂ ಯಾವುದೇ ಪ್ರತಿಕ್ರಿಯೆ ಒದಗಿಸಿಲ್ಲ. ಪ್ರತಿಕ್ರಿಯೆ ಒದಗಿಸಿದ ನಂತರ ಇದೇ ವರದಿಯನ್ನು ನವೀಕರಿಸಲಾಗುವುದು.