×
Ad

ವಿದ್ಯಾರ್ಥಿ ನಿಲಯಗಳ ವಿಲೀನಕ್ಕೆ ಸರಕಾರದಿಂದ ಪರೋಕ್ಷ ಸೂಚನೆ

Update: 2026-06-17 07:30 IST

ಸಾಂದರ್ಭಿಕ ಚಿತ್ರ Photo: chatgpt.com/

ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಹೊಸದಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದರೂ ಸಹ ರಾಜ್ಯ ರಕಾರವು ಹೊಸದಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಮಂಜೂರು ಮಾಡಲು ಆಸಕ್ತಿ ವಹಿಸುತ್ತಿಲ್ಲ. ಬದಲಿಗೆ ಸಂಖ್ಯಾಬಲ ಕಡಿಮೆ ಇರುವ ಯಾವುದಾದರೂ ವಿದ್ಯಾರ್ಥಿ ನಿಲಯಗಳನ್ನು ಸ್ಥಳಾಂತರ ಮಾಡಲು ಆಸಕ್ತಿ ವಹಿಸಿರುವುದು ಇದೀಗ ಬಹಿರಂಗವಾಗಿದೆ.

2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ 1 ಲಕ್ಷ 41 ಸಾವಿರ 773 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶವೇ ದೊರೆತಿರಲಿಲ್ಲ. ಇದರ ಬೆನ್ನಲ್ಲೇ ಸಂಖ್ಯಾಬಲ ಕಡಿಮೆ ಇರುವ ಯಾವುದಾದರೂ ವಿದ್ಯಾರ್ಥಿ ನಿಲಯಗಳನ್ನು ಸ್ಥಳಾಂತರ ಮಾಡಲು ಇಲಾಖೆಗೆ ಸೂಚಿಸಿರುವುದು ಮುನ್ನೆಲೆಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ತರೀಕೆರೆ ತಾಲೂಕುಗಳಿಗೆ ಹೊಸದಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವವನ್ನು ಸಲ್ಲಿಸಿತ್ತು. ಈ ಪ್ರಸ್ತಾವವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಸಂಖ್ಯಾಬಲ ಕಡಿಮೆ ಇರುವ ಯಾವುದಾದರೂ ವಿದ್ಯಾರ್ಥಿ ನಿಲಯಗಳನ್ನು ಸ್ಥಳಾಂತರ ಮಾಡಲು ಇಲಾಖೆಗೆ ಸೂಚಿಸಿದೆ.

ಈ ಸಂಬಂಧ 2026ರ ಜೂನ್ 6ರಂದು ಆರ್ಥಿಕ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಿಂಬರಹ ನೀಡಿದೆ.

ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿರುವ ಜಿಲ್ಲೆಗಳಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಅನುದಾನ ಕೊರತೆ ಎದುರಿಸುತ್ತಿರುವ ನಡುವೆಯೇ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1.41 ಲಕ್ಷದಷ್ಟು ಸಂಖ್ಯೆಯ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಸತಿನಿಲಯಗಳಲ್ಲಿ ಪ್ರವೇಶವೇ ದೊರೆತಿಲ್ಲ ಎಂದು ಸರಕಾರವೇ ಖುದ್ದು ಒಪ್ಪಿಕೊಂಡಿತ್ತು.

ಬೆಂಗಳೂರಿನಲ್ಲಿ ನಡೆದಿದ್ದ ವಿಶೇಷ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರು ನಿಯಮ 330ರ ಅಡಿಯಲ್ಲಿ ಈ ಕುರಿತು ಪ್ರಶ್ನೆ ಕೇಳಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಶಿವರಾಜ ತಂಗಡಗಿ ಅವರು 1.41 ಲಕ್ಷ ಸಂಖ್ಯೆಯಷ್ಟು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಅವಕಾಶವಾಗಿಲ್ಲ ಎಂದು ತಿಳಿಸಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಸರಕಾರಿ ವಸತಿ ವಿದ್ಯಾರ್ಥಿ ನಿಲಯಗಳಿವೆ. ಈ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿ ಬಯಸಿ ಲಕ್ಷಾಂತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶವೇ ದೊರೆತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೇ ನಿಲ್ಲಿಸುತ್ತಿದ್ದಾರೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 1,245 ಮೆಟ್ರಿಕ್ ಪೂರ್ವ ಹಾಗೂ 1,414 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಸೇರಿ ಒಟು 2,659 ಸರಕಾರಿ ವಿದ್ಯಾರ್ಥಿ ನಿಲಯಗಳಿವೆ. ಈ ವಿದ್ಯಾರ್ಥಿ ನಿಲಯಗಳಲ್ಲಿ 2,50,641 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ.

1,245 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 51,792 ಬಾಲಕರು, ಮತ್ತು 15,511 ಬಾಲಕಿಯರು ಸೇರಿ ಒಟ್ಟು 67,303 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಂಜೂರಾತಿ ದೊರೆತಿತ್ತು. ಆದರೆ ಈ ವಿದ್ಯಾರ್ಥಿ ನಿಲಯಗಳಲ್ಲಿ 965 ಬಾಲಕರು, 280 ಬಾಲಕಿಯರಿಗಷ್ಟೇ ಪ್ರವೇಶ ದೊರೆತಿತ್ತು ಅದೇ ರೀತಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 85,764 ಬಾಲಕರು ಮತ್ತು 97,574 ಬಾಲಕಿಯರು ಸೇರಿ 1,83,338 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಂಜೂರಾತಿ ದೊರೆತಿತ್ತು. ಆದರೆ ಈ ಪೈಕಿ ಕೇವಲ 665 ಬಾಲಕರು, 749 ಬಾಲಕಿಯರು ಸೇರಿ ಒಟ್ಟು 1,414 ವಿದ್ಯಾರ್ಥಿಗಳಿಗಷ್ಟೇ ವಸತಿ ನಿಲಯಗಳಿಗೆ ಪ್ರವೇಶ ದೊರೆತಿತ್ತು.

1.41 ಲಕ್ಷ ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಿಗದ ಪ್ರವೇಶ: 2025-26ನೇ ಶೈಕ್ಷಣಿಕ ಸಾಲಿನಲ್ಲಿ ಹಿಂದುಳಿದ ವರ್ಗದ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳಲ್ಲಿ 1,34,817 ಸಂಖ್ಯೆಯಷ್ಟು ನವೀಕರಣ ವಿದ್ಯಾರ್ಥಿಗಳಿದ್ದಾರೆ. 1,15,824 ಖಾಲಿ ಸ್ಥಾನಗಳಿಗೆ ಅನಗುಣವಾಗಿ 2,41,682 ಅರ್ಜಿಗಳು ಸ್ವೀಕೃತವಾಗಿದ್ದವು. 99,909 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಆದರೆ ಇನ್ನೂ 1,41,773 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಶಿವರಾಜ ತಂಗಡಗಿ ಅವರು ಉತ್ತರಿಸಿದ್ದರು.

ಹಿಂಬರಹದಲ್ಲೇನಿದೆ?

ಪ್ರಸ್ತಾವವನ್ನು ಪರಿಶೀಲಿಸಲಾಯಿತು. ಇಲಾಖೆಯು ಹೊಸದಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಮಂಜೂರು ಮಾಡುವ ಬದಲಾಗಿ ಸಂಖ್ಯಾಬಲ ಕಡಿಮೆ ಇರುವ ಯಾವುದಾದರೂ ವಿದ್ಯಾರ್ಥಿ ನಿಲಯಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಇಲಾಖೆ ಹಂತದಲ್ಲಿ ಪರಿಶೀಲಿಸುವುದು. ಮುಂದುವರಿದು ಕುಂಟಿನಮಡು ಗ್ರಾಮದಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ 16 ಇರುವುದರಿಂದ 100 ಸಂಖ್ಯಾಬಲದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವನ್ನು ಮಂಜೂರಾತಿ ನೀಡುವ ಪ್ರಸ್ತಾವವನ್ನು ಒಪ್ಪಲು ಬರುವುದಿಲ್ಲ ಎಂದು ತಿಳಿಸಿರುವುದು ಹಿಂಬರಹದಿಂದ ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News