ಮುಖ್ಯಸ್ಥರ ಬೀದಿಜಗಳ: ಹರಾಜಾಗುತ್ತಿದೆ ಸೇನೆಯ ಮಾನ

ವಿ.ಕೆ ಸಿಂಗ್ ಒಂದು ವರ್ಷ ಹೆಚ್ಚು ಅಧಿಕಾರದಲ್ಲಿದ್ದರೆ, ಅದು ಬಿಕ್ರಂ ಸಿಂಗ್ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೇ, ದಲ್ಬೀರ್ ಅವರೂ ಪರಿಣಾಮ ಎದುರಿಸಬೇಕಾಗುತ್ತಿತ್ತು. ವಿ.ಕೆ.ಸಿಂಗ್ ಅವರ ವಿರೋಧಿಗಳು ಹೇಳುವಂತೆ ಅವರು ಉದ್ದೇಶಪೂರ್ವಕವಾಗಿಯೇ ದಲ್ಬೀರ್ ವಿರುದ್ಧ ಶಿಸ್ತುಕ್ರಮ ಹಾಗೂ ವಿಚಕ್ಷಣಾ ನಿಷೇಧ ಹೇರಿ, ಮುಂದಿನ ಸೇನಾ ಮುಖ್ಯಸ್ಥರಾಗುವ ಅವಕಾಶದಿಂದ ತಡೆಯಲು ಯತ್ನಿಸಿದ್ದರು.
ಸೇನೆಯ ಮುಖ್ಯಸ್ಥರೊಬ್ಬರು ಹಿಂದಿನ ಸೇನಾ ಮುಖ್ಯಸ್ಥರ ವಿರುದ್ಧ ಅಥವಾ ಹಾಲಿ ಸಚಿವರೊಬ್ಬರ ಅನುಚಿತ ವರ್ತನೆ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅಫಿದಾವಿತ್ ಸಲ್ಲಿಸಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ನಿದರ್ಶನ. ಈ ಪ್ರಕರಣದಲ್ಲಿ ಸೇನೆಯ ಹಿಂದಿನ ಮುಖ್ಯಸ್ಥರು ಕೇಂದ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ನಿವೃತ್ತ ಜನರಲ್ ವಿ.ಕೆ.ಸಿಂಗ್ ವಿರುದ್ಧ, ತಮ್ಮ ಭಡ್ತಿ ತಡೆಯಲು ಕುಚೋದ್ಯ ಹಾಗೂ ದುರುದ್ದೇಶದಿಂದ, ವಿನಾಕಾರಣ ಎರ್ರಾಬಿರ್ರಿಯಾಗಿ ಶಿಕ್ಷಿಸಲು ಸಂಚು ರೂಪಿಸಿದ್ದರು ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್, ಸುಪ್ರೀಂಕೋರ್ಟ್ನಲ್ಲಿ ಅಫಿದಾವಿತ್ ಸಲ್ಲಿಸಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ತಮ್ಮ ವೈಯಕ್ತಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿದಾವಿತ್ ಸಲ್ಲಿಸಿರುವ ಸಿಂಗ್, 2012ರಲ್ಲಿ ನನ್ನ ಭಡ್ತಿ ತಡೆಯುವ ಏಕೈಕ ಉದ್ದೇಶದಿಂದ ಮತ್ತು ನಾನು ಸೇನೆಯ ಕಮಾಂಡರ್ ಆಗಿ ನೇಮಕವಾಗದಂತೆ ತಡೆಯಲು ವಿ.ಕೆ.ಸಿಂಗ್ ನನ್ನನ್ನು ಬಲಿಪಶು ಮಾಡಿದರು ಎಂದು ದೂರಿದ್ದಾರೆ.
ಆರು ವರ್ಷದ ಹಿಂದೆ ವಿ.ಕೆ.ಸಿಂಗ್ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗ, ಒಂದು ವರ್ಷ ಹೆಚ್ಚು ಕಾಲ ಅಧಿಕಾರದಲ್ಲಿ ಮುಂದುವರಿಯಲು ತಮ್ಮ ಜನ್ಮ ದಿನಾಂಕ ತಿದ್ದಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು.
ನಾನು ನಿಜವಾಗಿ ಹುಟ್ಟಿದ್ದು, 1951ರಲ್ಲಿ. ಆದರೆ ಸೇನೆಯ ಅಧಿಕೃತ ದಾಖಲೆಗಳಲ್ಲಿ 1950 ಎಂದು ಉಲ್ಲೇಖವಿದೆ. ಇಡೀ ವೃತ್ತಿಬದುಕಿನುದ್ದಕ್ಕೂ 1951 ಎಂದೇ ಜನ್ಮದಿನಾಂಕವನ್ನು ಅನುಸರಿಸಿಕೊಂಡು ಬಂದಿದ್ದೇನೆ. ನ್ಯಾಷನಲ್ ಡಿಫೆನ್ಸ್ ಅಕಾಡಮಿಗೆ ಸೇರ್ಪಡೆಯಾಗುವ ವೇಳೆ ಪ್ರಮಾದವಶಾತ್ ತಪ್ಪಾಗಿ 1950 ಎಂದು ನಮೂದಾಗಿದ್ದರಿಂದ ಒಂದು ವರ್ಷದ ಸೇವಾವಧಿ ಕಡಿತಗೊಳ್ಳುತ್ತದೆ ಎಂದು ವಾದಿಸಿದ್ದರು. ಆದರೆ ಸೇನಾ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಳ್ಳುವ ಸಂದಭರ್ದಲ್ಲೇ ಅವರು ಈ ವಿವಾದವನ್ನು ಬಗೆಹರಿಸಿಕೊಂಡು ಜನ್ಮವರ್ಷ 1950 ಎಂದು ಬದಲಾಯಿಸಿಕೊಳ್ಳಲು ಅವಕಾಶವಿತ್ತು. ಆದರೆ ಪ್ರತಿಭಟನೆಯ ನಡುವೆಯೇ 1950 ಎಂದು ಒಪ್ಪಿಕೊಂಡು ಕೊನೆಗೆ ಸರಕಾರಿ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ಗೆ ಹೋದರು.
ಇದು ಕೇವಲ ಅವರ ಅಧಿಕಾರಾವಧಿಯನ್ನು ವಿಸ್ತರಿಸಿಕೊಳ್ಳುವ ಹುನ್ನಾರ ಮಾತ್ರ ಆಗಿರಲಿಲ್ಲ. ಇಡೀ ಸೇನೆಯ ಆಡಳಿತದ ಅತ್ಯುನ್ನತ ಅಧಿಕಾರವನ್ನು ಒಂದು ವರ್ಷ ವಿಸ್ತರಿಸಿಕೊಳ್ಳುವುದಾಗಿತ್ತು. ಇವರ ಆಗ್ರಹಕ್ಕೆ ಸರಕಾರ ಮಣಿದಿದ್ದರೆ, ವಿ.ಕೆ.ಸಿಂಗ್ ಮೂರು ವರ್ಷ ಕಾಲ ಸೇನೆಯ ಮುಖ್ಯಸ್ಥರಾಗಿ ಅಧಿಕಾರದಲ್ಲಿರುತ್ತಿದ್ದರು. ಅವರ ಉತ್ತರಾಧಿಕಾರಿಯಾದ ಜನರಲ್ ಬಿಕ್ರಂ ಸಿಂಗ್ ಅವರು ಅತ್ಯುನ್ನತ ಹುದ್ದೆಗೇರದೇ ನಿವೃತ್ತರಾಗುತ್ತಿದ್ದರು. ಅಂಥ ಪರಿಸ್ಥಿತಿಯಲ್ಲಿ ಸಿಂಗ್, ಒಂದು ವರ್ಷದ ಬಳಿಕ ನಿವೃತ್ತರಾಗುತ್ತಿದ್ದರು ಹಾಗೂ ರಾಜಕೀಯ ವೃತ್ತಿ ಪ್ರವೇಶಿಸುತ್ತಿರಲಿಲ್ಲ. ಆದರೆ ಅದು ಸಾಧ್ಯವಾಗಲಿಲ್ಲ.
ವಿ.ಕೆ.ಸಿಂಗ್ ಒಂದು ವರ್ಷ ಹೆಚ್ಚು ಅಧಿಕಾರದಲ್ಲಿದ್ದರೆ, ಅದು ಬಿಕ್ರಂ ಸಿಂಗ್ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೇ, ದಲ್ಬೀರ್ ಅವರೂ ಪರಿಣಾಮ ಎದುರಿಸಬೇಕಾಗುತ್ತಿತ್ತು. ವಿ.ಕೆ.ಸಿಂಗ್ ಅವರ ವಿರೋಧಿಗಳು ಹೇಳುವಂತೆ ಅವರು ಉದ್ದೇಶಪೂರ್ವಕವಾಗಿಯೇ ದಲ್ಬೀರ್ ವಿರುದ್ಧ ಶಿಸ್ತುಕ್ರಮ ಹಾಗೂ ವಿಚಕ್ಷಣಾ ನಿಷೇಧ ಹೇರಿ, ಮುಂದಿನ ಸೇನಾ ಮುಖ್ಯಸ್ಥರಾಗುವ ಅವಕಾಶದಿಂದ ತಡೆಯಲು ಯತ್ನಿಸಿದ್ದರು.
2012ರ ಜನವರಿಯಲ್ಲಿ ಸೇನೆಯ ವಿಚಕ್ಷಣಾ ಅಧಿಕಾರಿ ಮೇಜರ್ ಟಿ.ರವಿಕುಮಾರ್ ಅವರು ದಿಂಪುರ ಮೂಲದ 3ನೆ ತುಕಡಿಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸುಹಾಗ್ ಅವರಿಗೆ ಪತ್ರ ಬರೆದು, ಸುಹಾಗ್ ಅವರ ವಿಚಕ್ಷಣೆ ಹಾಗೂ ಮೇಲ್ವಿಚಾರಣೆ ಘಟಕದ ಸಹೋದ್ಯೋಗಿಗಳು ಎಸಗಿದ್ದಾರೆ ಎನ್ನಲಾದ ನಕಲಿ ಎನ್ಕೌಂಟರ್ ಹಾಗೂ ಡಕಾಯಿತಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೋರಿದರು. ಈ ಪತ್ರದ ಪ್ರತಿಯನ್ನು ಅಂದಿನ ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವಿಕ್ರಂ ಸಿಂಗ್ ಅವರಿಗೆ ಹಾಗೂ ಅಂದಿನ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರಿಗೂ ಕಳುಹಿಸಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವಂತೆ ಸೂಚಿಸಿ, ಜನರಲ್ ವಿ.ಕೆ.ಸಿಂಗ್ ಈ ಪತ್ರವನ್ನು ವಿಕ್ರಂಸಿಂಗ್ ಹಾಗೂ ಸುಹಾಗ್ ಅವರಿಗೆ ಕಳುಹಿಸಿದ್ದರು. ಈ ಪತ್ರ ಭಾರತೀಯ ಸೇನೆಯ ಮುಜುಗರದ ಕ್ಷಣಗಳಿಗೆ ಕಾರಣವಾಯಿತು. ಮಾಧ್ಯಮಕ್ಕೆ ಪ್ರಮುಖ ಅಂಶಗಳನ್ನು ಸೋರಿಕೆ ಮಾಡುವ ಮೂಲಕ ಹಾಗೂ ನ್ಯಾಯಾಲಯ ಪ್ರಕರಣಗಳ ಮೂಲಕ ಸೇನೆಯ ಅತ್ಯುನ್ನತ ಅಧಿಕಾರಿಗಳೇ ಪರಸ್ಪರ ಸಂಘರ್ಷಕ್ಕೆ ಇಳಿಯಲು ಇದು ಕಾರಣವಾಯಿತು.
ವಿಕ್ರಂಸಿಂಗ್ ಅವರು ಪೂರ್ವ ಸೇನಾ ಕಮಾಂಡರ್ ಆಗಿದ್ದ ಅವಧಿಯಲ್ಲೇ ಅವರು, ಬ್ರಿಗೇಡಿಯರ್ ಎ.ಭೂಯನ್ ನೇತೃತ್ವದ ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಿದರು. ಭೂಯನ್ ಅವರು ಸುಹಾಗ್ ಅವರ ಘಟಕದ ಅಧಿಕಾರಿಗಳನ್ನು ಹಾಗೂ ಸೈನಿಕರನ್ನು ನಕಲಿ ಎನ್ಕೌಂಟರ್ ಬಗ್ಗೆ ಹಾಗೂ ಡಕಾಯಿತಿ ಬಗ್ಗೆ ವಿಚಾರಣೆ ನಡೆಸುತ್ತಿರುವಾಗ, ಸುಹಾಗ್ ಅವರ ಪಾತ್ರದ ಬಗ್ಗೆ ಯಾವ ವಿಚಾರಣೆಯೂ ನಡೆಯಲಿಲ್ಲ. ಬ್ರಿಗೇಡಿಯರ್ ಭೂಯನ್ಗಿಂತ ಸುಹಾಗ್ ಎರಡು ಶ್ರೇಣಿಯಷ್ಟು ಹಿರಿಯ ಅಧಿಕಾರಿಯಾಗಿದ್ದರಿಂದ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕಿತ್ತು ಎಂದು ವಿ.ಕೆ.ಸಿಂಗ್ ಭಾವಿಸಿದರು. ಸುಹಾಗ್ ಅವರು ತಮ್ಮ ಕಮಾಂಡ್ನ ಅಧಿಕಾರಿ ಹಾಗೂ ಯೋಧರನ್ನು ವಿಚಾರಣೆಯಿಂದ ರಕ್ಷಿಸಿದರು ಎಂಬ ಸಂದೇಹ ಮೂಡಿತ್ತು.
ಆ ಪ್ರಕರಣವನ್ನು ಅಲ್ಲಿಗೇ ಮುಗಿಸಬಹುದಿತ್ತು. ಆದರೆ ವಿ.ಕೆ.ಸಿಂಗ್ ಅವರು ಸುಹಾಗ್ಗೆ ನೋಟಿಸ್ ನೀಡಿದರು. ಸೇನಾ ನಡಾವಳಿಯ ಪ್ರಕಾರ, ಕರ್ತವ್ಯದಲ್ಲಿರುವ ಒಬ್ಬ ಅಧಿಕಾರಿಗೆ ನೋಟಿಸ್ ನೀಡಿದಲ್ಲಿ, ಆ ಆರೋಪಗಳಿಂದ ಮುಕ್ತವಾಗುವವರೆಗೂ ನೋಟಿಸ್ ಪಡೆದ ವ್ಯಕ್ತಿಯ ಭಡ್ತಿಗೆ ನಿಷೇಧ ವಿಧಿಸಲಾಗುತ್ತದೆ.
ಕೆಲ ಮಹತ್ವದ ವಿವರಗಳನ್ನು ಹೊರತುಪಡಿಸಿದರೆ ಇದು ಒಂದು ಮಾಮೂಲಿ ಪ್ರಕರಣ. ತಮ್ಮ ಸೇವಾವಧಿಯನ್ನು ವಿಸ್ತರಿಸಿಕೊಳ್ಳುವ ಸಂಬಂಧ ವಿ.ಕೆ.ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಆಗಲೇ ತಿರಸ್ಕರಿಸಿತ್ತು. ಅವರು ಸೇವೆಯಿಂದ ನಿವೃತ್ತರಾಗಲು ಕೆಲವೇ ದಿನ ಬಾಕಿ ಇತ್ತು. ವಿಕ್ರಂ ಸಿಂಗ್ ಅವರು ನಿಯೋಜಿತ ಸೇನಾ ಮುಖ್ಯಸ್ಥರಾಗಿದ್ದರು ಹಾಗೂ ಸುಹಾಗ್ ಪೂರ್ವ ಕಮಾಂಡ್ನ ಅತ್ಯುನ್ನತ ಹುದ್ದೆ ಅಲಂಕರಿಸಲು ಸಜ್ಜಾಗಿದ್ದರು. ಸುಹಾಗ್ ವಿರುದ್ಧ ಸುದೀರ್ಘ ನಿಷೇಧ ಹೇರಿದರೆ ಅವರು ಎಂದೂ ಸೇನಾ ಮುಖ್ಯಸ್ಥರಾಗುವ ಅವಕಾಶವೇ ಇರಲಿಲ್ಲ.
ಸುಹಾಗ್ ಅವರ ನಿಷೇಧದ ಅವಧಿಯಲ್ಲಿ ಭಡ್ತಿ ಹುದ್ದೆಗೆ ಪರಿಗಣಿಸಬಹುದಾಗಿದ್ದ ಅಧಿಕಾರಿ ಲೆಫ್ಟಿನೆಂಟ್ ಜನರಲ್ ರವಿ ದಸ್ತಾನೆ. ಪೂರ್ವ ಸೇನಾ ಕಮಾಂಡರ್ ಹುದ್ದೆಗೆ ಅವರ ಹೆಸರನ್ನು ಪರಿಗಣಿಸಲಾಗಿತ್ತು. ವಿಕ್ರಂ ಸಿಂಗ್ ಬಳಿಕ ಸೇನೆಯ ಮುಖ್ಯಸ್ಥರಾಗುವ ಅವಕಾಶ ಅವರಿಗಿತ್ತು. ಆದರೆ ವಿಕ್ರಂ ಸಿಂಗ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವವರೆಗೂ ಪೂರ್ವ ಸೇನಾ ಕಮಾಂಡರ್ ಹುದ್ದೆಯನ್ನು ಖಾಲಿ ಉಳಿಸಲಾಯಿತು. ಸುಹಾಗ್ ಅವರನ್ನು ನಿಷೇಧದಿಂದ ಮುಕ್ತಗೊಳಿಸಿ, ಪೂರ್ವ ಕಮಾಂಡ್ ಹುದ್ದೆಗೆ ಅವರನ್ನು ನಿಯೋಜಿಸುವುದು ಹಾಗೂ ಅತ್ಯುನ್ನತ ಹುದ್ದೆಗೆ ಅರ್ಹವಾಗುವಂತೆ ಮಾಡುವ ಉದ್ದೇಶವನ್ನು ಇದರಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಈ ಉತ್ತರಾಧಿಕಾರದ ಯುದ್ಧ ಭಾರತೀಯ ಸೇನೆಯ ಮುಖ್ಯಸ್ಥರಲ್ಲಿ ಮುಸುಕಿನ ಗುದ್ದಾಟದ ನಿದರ್ಶನವಾಗಿ ದಾಖಲಾಯಿತು. ವಿಕ್ರಂ ಸಿಂಗ್ ಅಧಿಕಾರ ವಹಿಸಿಕೊಂಡ ತಕ್ಷಣ ಸುಹಾಗ್ ಮೇಲಿನ ನಿಷೇಧ ರದ್ದು ಮಾಡಿದರು.
ನ್ಯಾಯಾಲಯ ಸಮರ
ವಿ.ಕೆ.ಸಿಂಗ್ ಅಧಿಕಾರಾವಧಿ ವಿಸ್ತರಿಸಿಕೊಳ್ಳುವ ಹೋರಾಟದಲ್ಲಿ ಸೋತರೂ, ದಸ್ತಾನೆ, ಸೇನಾ ಮುಖ್ಯಸ್ಥ ಹುದ್ದೆಗೆ ಭಡ್ತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು. ಅವರ ವಾದ ಸರಳ. ಸುಹಾಗ್ ವಿರುದ್ಧ ನಿಷೇಧ ಇದ್ದ ಅವಧಿಯಲ್ಲಿ ತಾವೇ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದವರು ಮತ್ತು ತಮ್ಮನ್ನೇ ಸಹಜವಾಗಿ ಭಡ್ತಿಗೆ ಪರಿಗಣಿಸಬೇಕಿತ್ತು. ಇದು ಸಾಧ್ಯವಾಗದ ಕಾರಣ, ತಮಗೆ ಸೇನಾ ಮುಖ್ಯಸ್ಥ ಹುದ್ದೆಗೆ ಆಕಾಂಕ್ಷಿಯಾಗುವ ಅವಕಾಶ ತಪ್ಪಿತು.
ಸುಹಾಗ್ ಅವರ ನಿಷೇಧವನ್ನು ತೆರವುಗೊಳಿಸಿದ್ದಲ್ಲಿ, ಸಂಘರ್ಷದ ಹಿತಾಸಕ್ತಿ ಅಡಗಿದೆ ಎಂದು ದಸ್ತಾನೆ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು. ವಿಕ್ರಂಸಿಂಗ್ ಅವರು ಪೂರ್ವ ಸೇನಾ ಕಮಾಂಡರ್ ಆಗಿದ್ದ ಅವಧಿಯಲ್ಲಿ ಸುಹಾಗ್ ಅವರ ತಪ್ಪುಗಳಿಗೆ ವಿಕ್ರಂಸಿಂಗ್ ಕೂಡ ಹೊಣೆಗಾರರಾಗುತ್ತಾರೆ. ಇದರಿಂದ ಹಿತಾಸಕ್ತಿಯ ಸಂಘರ್ಷ ಅಡಗಿದೆ ಎನ್ನುವುದು ದಸ್ತಾನೆ ವಾದವಾಗಿತ್ತು.
ಪ್ರಕರಣ 2014 ಜುಲೈನಲ್ಲಿ ಕೋರ್ಟ್ ಕಟ್ಟೆಯೇರಿತು. ಆದರೆ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ, ಮುಂದಿನ ಸೇನಾ ಮುಖ್ಯಸ್ಥರಾಗಿ ಸುಹಾಗ್ ಅವರ ನೇಮಕಾತಿಗೆ ತಡೆ ನೀಡಲು ನಿರಾಕರಿಸಿತು. ಇದೇ ವೇಳೆ ದಸ್ತಾನೆ ಸೇವೆಯಿಂದ ನಿವೃತ್ತರಾದರೂ,ನ್ಯಾಯಾಲಯದಲ್ಲಿನ ಸಮರ ಮುಂದುವರಿಸಿದರು. ಸರಕಾರ ಬದಲಾಗಿ, ವಿ.ಕೆ.ಸಿಂಗ್ ಅವರು ರಾಜ್ಯ ಸಚಿವರಾಗಿ ನಿಯುಕ್ತರಾದರೂ, ರಕ್ಷಣಾ ಸಚಿವಾಲಯ ಮಾತ್ರ ಪ್ರಕರಣದಲ್ಲಿ ಸಲ್ಲಿಸಿದ ಅಫಿದಾವಿತ್ನಲ್ಲಿ, ಇಡೀ ಗೊಂದಲಕ್ಕೆ ವಿ.ಕೆ.ಸಿಂಗ್ ಅವರೇ ಹೊಣೆ ಎಂದು ಪ್ರತಿಪಾದಿಸಿತು.
ಹಾಲಿ ಕೇಂದ್ರ ಸಚಿವರಿಗೆ ಮುಜುಗರ ತರುವಂಥ ಅಫಿದಾವಿತ್ ಹೇಗೆ ನ್ಯಾಯಾಲಯಕ್ಕೆ ಸಲ್ಲಿಕೆಯಾಯಿತು ಎನ್ನುವುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಸೇನೆಯ ಹಾಲಿ ಮುಖ್ಯಸ್ಥ ಸುಹಾಗ್ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದ ಹಿನ್ನೆಲೆಯಲ್ಲಿ ಸಲ್ಲಿಸಿದ ಹೊಸ ಅಫಿದಾವಿತ್, ವಿ.ಕೆ.ಸಿಂಗ್ ಅವರಿಗೆ ಮತ್ತಷ್ಟು ಮುಜುಗರ ತರುವಂಥದ್ದು. ಇದು ಸೇನಾ ಮುಖ್ಯಸ್ಥರ ವೈಯಕ್ತಿಯ ಸಾಮರ್ಥ್ಯದಲ್ಲಿ ಸಲ್ಲಿಸಿದ ಅಫಿದಾವಿತ್ ಆಗಿದ್ದರೂ, ರಕ್ಷಣಾ ಸಚಿವಾಲಯ ಇದಕ್ಕೆ ಅನೌಪಚಾರಿಕವಾಗಿ ಒಪ್ಪಿಗೆ ನೀಡಿದೆ ಎಂದು ಸೇನಾ ಕೇಂದ್ರ ಕಚೇರಿಯ ಅಧಿಕಾರಿಗಳು ಹೇಳುತ್ತಾರೆ. ಹಾಲಿ ಸಚಿವರ ಪಾತ್ರವನ್ನು ಪ್ರಶ್ನಿಸಿದ ಹಾಲಿ ಸೇನಾ ಮುಖ್ಯಸ್ಥರನ್ನು ರಕ್ಷಣಾ ಸಚಿವಾಲಯ ಬೆಂಬಲಿಸುತ್ತಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ.
ವಿ.ಕೆ.ಸಿಂಗ್ ಅವರಿಗೆ ಆಪ್ತವಾಗಿರುವ ಮೂಲಗಳ ಪ್ರಕಾರ, ಶಸ್ತ್ರಾಸ್ತ್ರ ಡೀಲರ್ಗಳು ಹಾಗೂ ಭ್ರಷ್ಟ ಅಧಿಕಾರಿಗಳು ಇಂದಿಗೂ ರಕ್ಷಣಾ ಸಚಿವಾಲಯದ ಕಾರ್ಯಕಲಾಪಗಳಲ್ಲಿ ಮೂಗು ತೂರಿಸುತ್ತಿದ್ದು, ಇದು ಅವರ ಕೃಪಾಕಟಾಕ್ಷದಲ್ಲೇ ಉದ್ದೇಶಪೂರ್ವಕವಾಗಿ ಮಾಡಿದ ಆರೋಪ. ವಿ.ಕೆ.ಸಿಂಗ್ ಅವರಿಗೆ ಒಂದು ವರ್ಷದ ಅಧಿಕಾರ ವಿಸ್ತರಣೆ ನೀಡದಂತೆ ತಡೆದದ್ದು ಕೂಡಾ ಈ ಕಾಣದ ಕೈಗಳು ಎನ್ನುವುದು ಇವರ ಆರೋಪ. ಇದರಲ್ಲಿ ಹಿಂದಿನ ಸೇನಾ ಮುಖ್ಯಸ್ಥರಾಗಿದ್ದ ಜೆ.ಜೆ.ಸಿಂಗ್ ಅವರ ಪ್ರಾಂತೀಯ ಸಂಕುಚಿತ ಮನೋಭಾವ ಕೂಡಾ ನುಸುಳಿದೆ. ವಿಕ್ರಂ ಸಿಂಗ್ ಹಾಗೂ ಸುಹಾಗ್ ಅತ್ಯುನ್ನತ ಹುದ್ದೆಗೇರಬೇಕು ಎನ್ನುವುದು ಅವರ ಆಶಯವಾಗಿತ್ತು. ಇಲ್ಲದಿದ್ದರೆ ಅದು ಸಾಧ್ಯವಿರಲಿಲ್ಲ ಎನ್ನುವುದು ವಿ.ಕೆ.ಸಿಂಗ್ ಆಪ್ತರ ವಾದ.
ಆದರೆ ರಾಜಕೀಯ ರಹಿತವಾಗಿಯೇ ಉಳಿಯುವುದಾಗಿ ಪ್ರತಿಜ್ಞೆ ಸ್ವೀಕರಿಸಿ ಸೇನೆಯ ಆಗುಹೋಗುಗಳನ್ನು ತೀರಾ ರಾಜಕೀಯಗೊಳಿಸಿರುವ ಅಂಶ ಮಾತ್ರ ನಿರ್ವಿವಾದ. ಸೇನಾಸಂಸ್ಥೆಗೆ ಆಗಿರುವ ಹಾನಿ ಸರಿಪಡಿಸಲಾಗದ್ದು.
ಕೃಪೆ: ಸ್ಕ್ರಾಲ್ ಡಾಟ್ ಇನ್







