ಸುಪ್ರೀಂ ಅಂಪೈರಿಂಗ್ ಪ್ರಶ್ನಾರ್ಹ: ಆದರೆ ಬಿಸಿಸಿಐ
ಮೋಸದಾಟಕ್ಕೆ ತಕ್ಕ ಶಾಸ್ತಿ ಅಲೋಕ್ ಪ್ರಸನ್ನ ಕುಮಾರ್

ನ್ಯಾಯಮೂರ್ತಿ ಆರ್.ಎಂ.ಲೋಧಾ ಸಮಿತಿ 2016ರ ಜುಲೈ 18ರಂದು ಮಾಡಿರುವ ಶಿಫಾರಸುಗಳನ್ನು ಜಾರಿ ಮಾಡುವಂತೆ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ವಿವಿಧ ರಾಜ್ಯ ಕ್ರಿಕೆಟ್ ಸಂಘಗಳಿಗೆ ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್ ಕ್ರಮ ಖಂಡಿತವಾಗಿಯೂ ಅಸಾಮಾನ್ಯ, ನ್ಯಾಯಾಂಗ ಎಲ್ಲೆಮೀರಿದ ಕ್ರಮ. ಇಲ್ಲಿ ಮೊಟ್ಟಮೊದಲ ಬಾರಿಗೆ, ಖಾಸಗಿಯಾಗಿ ರಚನೆಯಾದ ಸಂಸ್ಥೆಯನ್ನು ಕಿತ್ತುಹಾಕಿ, ಆಟದ ಹಿತಾಸಕ್ತಿಯಿಂದ ಒಗ್ಗೂಡಿಸಲಾಗಿದೆ. ಸುಪ್ರೀಂಕೋರ್ಟ್ ಹಾಗೆ ಮಾಡಬಹುದಿತ್ತೇ ಎನ್ನುವುದು ಚರ್ಚಾರ್ಹ ವಿಷಯ. ಆದರೆ ಬಿಸಿಸಿಐಗೆ ತಕ್ಕ ಶಾಸ್ತಿಯಾಗಬೇಕಿತ್ತು ಎನ್ನುವುದು ನಿರ್ವಿವಾದ ಅಂಶ.
ಈ ಪ್ರಕರಣದ ಪ್ರತಿ ಹಂತದಲ್ಲೂ ಬಿಸಿಸಿಐ, ಒಂದಲ್ಲ ಒಂದು ರೀತಿಯಲ್ಲಿ, ತನ್ನ ಹಳ್ಳವನ್ನು ತಾನೇ ತೋಡಿಕೊಂಡಿತು. ಬಿಸಿಸಿಐ ದೇಶದ ಕಾನೂನು ಅಥವಾ ನ್ಯಾಯದ ಪರಿಧಿಯಿಂದಾಚೆಗಿದೆ ಎಂಬ ರೀತಿಯಲ್ಲಿ ವರ್ತಿಸಿತು. ಬಿಸಿಸಿಐನಲ್ಲಿ ಸುಧಾರಣೆ ತರುವಂಥ ಯಾವುದೇ ಸಲಹೆಗಳನ್ನು ಅಳವಡಿಸಿಕೊಳ್ಳಲು ಖಡಾಖಂಡಿತವಾಗಿ ನಿರಾಕರಿಸಿತು. ಗುರುನಾಥ್ ಮೇಯಪ್ಪನ್, ಎನ್.ಶ್ರೀನಿವಾಸನ್, ಇಂಡಿಯನ್ ಪ್ರೀಮಿಯರ್ ಲೀಗ್‌ನಂಥ ಹೊಲಸು ಪ್ರಕರಣಗಳಿಂದ ಆರಂಭವಾದ ಈ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಅತಿವಿಶ್ವಾಸದಿಂದ ಪಕ್ಕಕ್ಕಿಟ್ಟು, ಸರಕಾರವೇ ತಮ್ಮ ಕಿಸೆಯಲ್ಲಿದೆ ಎಂಬ ರೀತಿಯಲ್ಲಿ ವರ್ತಿಸಿತು.
ಆಕ್ಷೇಪಾರ್ಹ ವರ್ತನೆ
ಮೊಟ್ಟಮೊದಲನೆಯದಾಗಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ವಿಫಲವಾದ ಬಿಸಿಸಿಐ, ಅಪನಂಬಿಕೆಯ ದಾವೆದಾರನಂತೆ ವರ್ತಿಸಿತು. ಪ್ರತಿ ಹಂತದಲ್ಲೂ ವಿಳಂಬಕ್ಕೆ ಪಿಳ್ಳೆನೆಪ ಹುಡುಕುತ್ತಾ ಬಂತು. ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪನ್ನು ಅನುಷ್ಠಾನಗೊಳಿಸಲು ನಿರಾಕರಿಸಿ, ಇಡೀ ವ್ಯವಸ್ಥೆಯನ್ನೇ ತಬ್ಬಿಬ್ಬುಗೊಳಿಸುವ ಪ್ರಯತ್ನ ಮಾಡಿತು. ಲೋಧಾ ಸಮಿತಿ ಜತೆ ಮಧ್ಯಸ್ಥಿಕೆ ವಹಿಸಲು ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ನೇತೃತ್ವದಲ್ಲಿ ಸಮಿತಿಯನ್ನು ಬಿಸಿಸಿಐ ನೇಮಕ ಮಾಡುವ ಮೂಲಕ ಈ ಪ್ರಹಸನ ಆರಂಭವಾಯಿತು. ಆದರೆ ಸಾರ್ವಜನಿಕವಾಗಿ ಗದರಿಸುವ ಮತ್ತು ನ್ಯಾಯಾಲಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ರೀತಿಯ ಆಕ್ರೋಶದ ಹೇಳಿಕೆಗಳನ್ನು ನೀಡುತ್ತಾ, ಆಪಾದನೆಗಳನ್ನು ಮಾಡುತ್ತಾ ಸಾಗಿತು.
ಇದಕ್ಕೆ ಸಂಬಂಧಿಸಿದ ಯಾರನ್ನೂ ಸಮರ್ಪಕವಾಗಿ ಪರಿಗಣಿಸಲಿಲ್ಲ.
ನಂತರ, ಲೋಧಾ ಸಮಿತಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಮ್ಮನ್ನು ಕಿತ್ತುಹಾಕುವ ಸಾಧ್ಯತೆ ಇದೆ ಎಂಬ ಹೊಸ ರಾಗ ತೆಗೆಯಿತು. ಈ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್, ಜುಲೈ ಆದೇಶದಲ್ಲಿ ಇದನ್ನು ತಳ್ಳಿಹಾಕಿತು. ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ನೀಡಿದ ಸುಳ್ಳುಪ್ರಮಾಣಕ್ಕೆ ಈ ಬಾರಿ ಮತ್ತೆ ತಕ್ಕ ಶಾಸ್ತಿಯಾಗಿದೆ.
ಈ ಮಧ್ಯೆ ಲೋಧಾ ಸಮಿತಿಯ ಕೆಲ ಸುಧಾರಣಾ ಶಿಫಾರಸುಗಳನ್ನು ಬಿಸಿಸಿಐ ಜಾರಿಗೊಳಿಸಿ, ಉಳಿದ ಶಿಫಾರಸುಗಳ ಅನುಷ್ಠಾನಕ್ಕೆ ನಿರಾಕರಿಸಿತು. ಕೆಲ ಶಿಫಾರಸು ಅನುಷ್ಠಾನಗೊಳಿಸುವ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬಹುದು ಎಂಬ ಲೆಕ್ಕಾಚಾರ ಹಾಕಿತು. ಆದರೆ ಇದು ಕೂಡಾ ನಿಷ್ಪ್ರಯೋಜಕವಾಯಿತು. ಇದು ಬಿಸಿಸಿಐಯನ್ನು ಫಿಕ್ಸ್ ಮಾಡುವ ಪ್ರಕರಣ ಮಾತ್ರವಾಗಿರದೆ, ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಮರುಸ್ಥಾಪನೆ ಮಾಡುವ ಗಂಭೀರ ಪ್ರಕರಣವೂ ಆಗಿತ್ತು. ಅಲ್ಲಿಂದೀಚೆಗೆ ಪ್ರಕರಣ ಏಕಮುಖವಾಗಿ ಮುಕ್ತಾಯವಾಗಿತು.
ಸುಪ್ರೀಂಕೋರ್ಟ್ ವಿಶ್ವಾಸಾರ್ಹತೆ ಪ್ರಶ್ನಿಸಿದ ಬಿಸಿಸಿಐ
ಒಬ್ಬ ದಾವೆದಾರ ಸುಪ್ರೀಂಕೋರ್ಟ್‌ನ ವಿಶ್ವಾಸಾರ್ಹತೆಯನ್ನೇ ಕಡೆಗಣಿಸಿ, ಪ್ರಶ್ನಿಸಿದರೆ ಏನಾಗುತ್ತದೆ ಎನ್ನುವುದನ್ನು ಪರೀಕ್ಷಿಸಬೇಕಾದರೆ ಬಿಸಿಸಿಐ, ತನ್ನ ಮಾಜಿ ಪ್ರಾಯೋಜಕ ಹಾಗೂ ಫಲಾನುಭವಿ ಸಹಾರಾ ಸಮೂಹಸಂಸ್ಥೆಯ ಸುಬ್ರತಾ ರಾಯ್ ಅವರ ಜತೆ ಚರ್ಚಿಸಿದ್ದರೆ ಸಾಕಾಗಿತ್ತು. ಕೋರ್ಟ್ ಆದೇಶಕ್ಕೆ ಬದ್ಧವಾಗಿರಲು ನಿರಾಕರಿಸಿ, ತಿಹಾರ್ ಜೈಲಿನಲ್ಲಿ ಎರಡು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯನ್ನು ಕಳೆದ ನಿದರ್ಶನ ಅದರ ಮುಂದಿತ್ತು. ಇದೀಗ ಸೆಕ್ಯುರಿಟೀಸ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ಹಾಗೂ ಸುಪ್ರೀಂಕೋರ್ಟ್ ಅವರ ಇಡೀ ವ್ಯಾಪಾರ ಸಾಮ್ರಾಜ್ಯವನ್ನೇ ಮಟ್ಟಹಾಕಿದೆ. ನ್ಯಾಯಾಲಯ ಹಾಗೂ ದಾವೆದಾರನ ನಡುವಿನ ವ್ಯಾಜ್ಯ, ಅರ್ಜಿದಾರನ ಪರವಾಗಿ ಇತ್ಯರ್ಥವಾಗುವುದು ವಿರಳ ಎನ್ನುವ ಸಲಹೆಯನ್ನು ಅವರು ಮಾಡಬಹುದಿತ್ತು. 2016ರ ಜುಲೈ ತೀರ್ಪಿನ ಬಳಿಕ ಬಿಸಿಸಿಐನ ದಾವೆ ತಂತ್ರ, ಸಹಾರಾ ನಡೆಸಿದ ಪ್ರಯತ್ನದಂತಾಗಬಾರದು ಎನ್ನುವ ಅರಿವನ್ನು ಬಿಸಿಸಿಐ ಹೊಂದಿರಬೇಕಿತ್ತು. ಇದಕ್ಕೆ ಬದಲಾಗಿ ಸಹಾರಾ ಮಾಡಿದ ತಪ್ಪನ್ನೇ ಬಿಸಿಸಿಐ ಮತ್ತೆ ಮಾಡಿತು.
ಸುಪ್ರೀಂಕೋರ್ಟ್ ಜುಲೈನಲ್ಲಿ ತೀರ್ಪು ನೀಡಿದ ಬಳಿಕ ಬಿಸಿಸಿಐ ಪದಾಧಿಕಾರಿಗಳ ಮುಂದೆ ಇದ್ದ ಆಯ್ಕೆಗಳು ಎರಡು. ಸಂಪೂರ್ಣವಾಗಿ ಅದಕ್ಕೆ ಬದ್ಧವಾಗಿರುವುದು ಅಥವಾ ಸಾಮೂಹಿಕ ರಾಜೀನಾಮೆ ನೀಡಿ ಹೊಸ ಚುನಾವಣೆಗೆ ಮುಂದಾಗುವುದು. ಈ ಮೂಲಕ ಕೋರ್ಟ್ ತೀರ್ಪಿಗೆ ಬದ್ಧರಾಗುವ ಹೊರೆಯನ್ನು ಮುಂದಿನ ಪದಾಧಿಕಾರಿಗಳಿಗೆ ವರ್ಗಾಯಿಸುವುದು. ಪರಾಮರ್ಶೆ ಅರ್ಜಿ ಹಾಗೂ ಕ್ಯುರೇಟಿವ್ ಅರ್ಜಿ ಹೀಗೆ ಎಲ್ಲ ಕಾನೂನು ಮಾರ್ಗಗಳೂ ಮುಗಿದ ಬಳಿಕ, ಹೇಗೆ ಮತ್ತು ಯಾವ ಮಟ್ಟಕ್ಕೆ ಈ ಪ್ರಕರಣವನ್ನು ಒಯ್ಯಬಹುದು ಎಂಬ ಮುಕ್ತ ಮಾರ್ಗಗಳು ಬಿಸಿಸಿಐ ಪದಾಧಿಕಾರಿಗಳಿಗೆ ಉಳಿಯಲಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಕೋರ್ಟ್ ತೀರ್ಪಿಗೆ ಎಷ್ಟರ ಮಟ್ಟಿಗೆ ಬದ್ಧವಾಗಿ ಉಳಿಯಬಹುದು ಎಂಬ ಆಯ್ಕೆ ಅವರ ಎದುರು ಇರಲಿಲ್ಲ. ಇಲ್ಲೂ ಅಲ್ಲ; ಅಲ್ಲೂ ಅಲ್ಲ ಎಂಬ ದೃಷ್ಟಿಕೋನದಿಂದಾಗಿ ಬಿಸಿಸಿಐ ಪದಾಧಿಕಾರಿಗಳು, ತಮ್ಮ ತಪ್ಪಿಗೆ ತಾವೇ ಶಪಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಿಸಿಕೊಂಡರು.
ಒಳ್ಳೆಯ ಆಟ; ಕಳಪೆ ಆಡಳಿತ
ಈ ಪ್ರಕರಣ ನ್ಯಾಯಾಲಯದಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲ ನಡೆದುಕೊಂಡು ಬಂದಿರುವ ನಡುವೆಯೇ ಭಾರತೀಯ ಕ್ರಿಕೆಟ್ ತಂಡ, ವಿದೇಶಗಳ ಸರಣಿ ಸೋಲಿನ ಹೊರತಾಗಿಯೂ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತಕ್ಕೇರಿದೆ ಹಾಗೂ 2016ರಲ್ಲಿ ಆತಿಥ್ಯ ವಹಿಸಿದ್ದ ಟಿ-20 ವಿಶ್ವಕಪ್‌ನಲ್ಲಿ ಕೂಡ ಈ ಸಾಧನೆ ಮಾಡಿದೆ. ಮೊಟ್ಟಮೊದಲ ಬಾರಿಗೆ ದೇಶದಿಂದ ಹೊರಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು ಟೆಸ್ಟ್‌ನಲ್ಲಿ ಮಣಿಸಿದೆ. 19ರ ವಯೋಮಿತಿಯ ತಂಡ ವಿಶ್ವಕಪ್ ಫೈನಲ್ ತಲುಪಿದೆ. ಸುಪ್ರೀಂಕೋರ್ಟ್ ಹಸ್ತಕ್ಷೇಪದಿಂದಾಗಿ ಭಾರತೀಯ ಕ್ರಿಕೆಟ್‌ಗೆ ಮೈದಾನದಲ್ಲಿ ಒಳ್ಳೆಯ ದಿನಗಳು ಬಂದಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಆದರೂ ಭಾರತೀಯ ಕ್ರಿಕೆಟ್‌ನಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ. ಮೈದಾನದಲ್ಲಿ ಒಳ್ಳೆಯ ಪ್ರದರ್ಶನ ನೀಡಿದರೂ, ಕಳಪೆ ಆಡಳಿತದಿಂದ ಅದು ಭಿನ್ನವಾಗಿರುವಂತಿಲ್ಲ. ಹಣದ ದುರ್ಬಳಕೆ ಹಾಗೂ ಹಿತಾಸಕ್ತಿಗಳ ಸಂಘರ್ಷದ ಪ್ರಕರಣಗಳು ಕ್ರೀಡೆಯ ಆಡಳಿತ ಮಟ್ಟ ಕುಸಿಯಲು ಕಾರಣವಾಗಿವೆ. ಆಟಗಾರರ ಸಾಧನೆ, ಕ್ರೀಡೆಯ ಆಡಳಿತದ ಗುಣಮಟ್ಟವನ್ನು ಅವಲಂಬಿಸಿಲ್ಲ. ಸರಕಾರದಲ್ಲಿರುವವರು ಕೂಡಾ ಇದರ ಸುಧಾರಣೆಯ ದೃಷ್ಟಿಯಿಂದ ಆಕರ್ಷಿತರಾಗುವ ಬದಲು, ಅದೇ ಹುಲ್ಲುಗಾವಲಿನಿಂದ ಮೇವು ಪಡೆಯುವ ದೃಷ್ಟಿಯಿಂದಲೇ ಆಕರ್ಷಿತರಾದರು.
ಸುಪ್ರೀಂಕೋರ್ಟ್‌ನ ಸುಧಾರಣೆ ದೇಶದ ಕ್ರಿಕೆಟ್‌ನ ಗತಿಯನ್ನು ಬದಲಿಸುವಲ್ಲಿ ಯಶಸ್ವಿಯಾದೀತೇ? ಎನ್ನುವುದನ್ನು ಕಾದುನೋಡಬೇಕಾಗಿದೆ. ರಾಜಕೀಯ ಪ್ರಭಾವವನ್ನು ಕಿತ್ತುಹಾಕುವಲ್ಲಿ ಮತ್ತು ಆಡಳಿತದ ಹೊಣೆ ಹೊಂದಿರುವವರು ಕ್ರೀಡೆಯ ವ್ಯಾಪಾರ ಅವಕಾಶಗಳಿಗಿಂತ ಹೆಚ್ಚಾಗಿ ಕ್ರೀಡೆಗೆ ಹೆಚ್ಚಿನ ಕಾಳಜಿ ನೀಡುವಂತೆ ಮಾಡುವಲ್ಲಿ ಇದು ಯಶಸ್ವಿಯಾದೀತೇ? ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಡಲಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಂಗ ಅಮೂಲ್ಯ ಸಮಯವನ್ನು ವ್ಯಯಿಸಿರುವುದು ಫಲ ನೀಡೀತೇ? ಎನ್ನುವುದನ್ನು ತಿಳಿದುಕೊಳ್ಳಲು ಕನಿಷ್ಠ ಹತ್ತು ವರ್ಷಗಳಾದರೂ ಬೇಕು.
ಬಿಸಿಸಿಐನ ಪ್ರಕರಣ ಹಾಗೂ ಅದರ ಪತನ ಒಂದು ಸಹಜ ಹಾಗೂ ಹಿತವಲ್ಲದ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅದೆಂದರೆ ಒಂದು ಖಾಸಗಿ ಸಂಸ್ಥೆ ತಾನು ಕಾನೂನಿಗಿಂತ ಮೇಲೆ ಎಂಬ ರೀತಿಯಲ್ಲಿ ಕಾರ್ಯನಿರ್ವಹಿಸಬಹುದೇ ಅಥವಾ ಸುಪ್ರೀಂಕೋರ್ಟ್ ಇಂಥ ಖಾಸಗಿ ಸಂಸ್ಥೆಯನ್ನು ಸರಿದಾರಿಗೆ ತರಲು ತನ್ನ ಅಧಿಕಾರ ಮೀರಿ ಹೆಜ್ಜೆ ಇಡಬಹುದೇ ಎನ್ನುವುದು.
ಕೃಪೆ: ಠ್ಚ್ಟಟ್ಝ್ಝ.ಜ್ಞಿ