ಅಲ್ಪತೃಪ್ತನೊಬ್ಬನ ಆತ್ಮತೃಪ್ತಿಯ ಬದುಕು
ವರ್ಷದೊಳಗೆ ನಿವೃತ್ತಿ; ಈಡೇರಬಹುದೇ ಪತ್ನಿಗೆ ನೀಡಿದ ಭರವಸೆ?

35 ವರ್ಷಗಳಿಂದ ಅಜ್ಮಾನ್ನಲ್ಲಿ ಪತ್ರಿಕೆ ವಿತರಿಸುತ್ತಿರುವ ಭಾಸ್ಕರ್ ಕತೆ ಕೇಳಿ ನಿಮ್ಮ ಕಣ್ಣಂಚಲ್ಲಿ ನೀರು ಬರದೇ ಇರದು!
ಒಂದು ವರ್ಷದ ಒಳಗಾಗಿ ಅಜ್ಮಾನ್ನಿಂದ ಹುಟ್ಟೂರಿಗೆ ವಾಪಸಾಗಲು ಭಾಸ್ಕರ್ ಸಿದ್ಧತೆ ಮಾಡುತ್ತಿರುವಂತೆಯೇ ಒಂದು ವಿಚಾರ ಮಾತ್ರ ಅವರನ್ನು ಕಾಡುತ್ತಲೇ ಇದೆ. ಅದು ಅವರ ಮನಸ್ಸನ್ನು ಹುಳದಂತೆ ಕೊರೆಯುತ್ತಲೇ ಇದೆ. ಅದೇನೂ ಪ್ರತಿಜ್ಞೆಯಲ್ಲ. ಅದು ವಾಗ್ದಾನವೂ ಅಲ್ಲ. ಆದರೆ ಅದು ಪತ್ನಿಯ ಜತೆಗೆ ಹಂಚಿಕೊಂಡಿದ್ದ ಕನಸು. ಅದೆಂದರೆ ನೀವು ನಿವೃತ್ತಿಯಾಗುವ ಮೊದಲು ಒಂದು ಬಾರಿ ಅಜ್ಮಾನ್ಗೆ ಭೇಟಿ ನೀಡಬೇಕು ಎಂಬ ಆಸೆಯನ್ನು ಪತ್ನಿ ಮಧುಚಂದ್ರದ ವೇಳೆ ಹಂಚಿಕೊಂಡಿದ್ದಳು. ಜಯಪ್ರಸನ್ನ ಎಂಬಾಕೆಯನ್ನು ಭಾಸ್ಕರ್ ವಿವಾಹವಾಗಿ 18 ವರ್ಷ ಕಳೆದಿದೆ. ಆದರೆ ಮಕ್ಕಳಿಲ್ಲ. ಮಲೆಯಾಳಿ ನಂಬಿಕೆಯಂತೆ, ವರನಿಗೆ 36 ವರ್ಷ ದಾಟಿದರೆ, ಖಂಡಿತವಾಗಿಯೂ ಅದು ತಡ ವಿವಾಹ. ನನಗೂ ಕನಸು ಇದೆ ಎಂದು ಭಾಸ್ಕರ್ ಹೇಳಿದ್ದ. 18 ವರ್ಷಗಳಲ್ಲಿ ಅವರು ಪತ್ನಿಯನ್ನು ಭೇಟಿ ಮಾಡಿದ್ದು ಕೇವಲ 10 ಬಾರಿ. ಪತ್ನಿಗೆ ಭಾಸ್ಕರ್ ಪಾಸ್ಪೋರ್ಟ್ ಮಾಡಿಸಿದ್ದರು; ನವೀಕರಿಸಿದ್ದರು. ಆದರೆ ಅವರ ಕನಸು ಮಾತ್ರ ನನಸಾಗಲೇ ಇಲ್ಲ. ಅದು ನಾನು ಪೂರ್ಣಗೊಳಿಸದ ಕೆಲಸ. ನಮ್ಮ ಎಲ್ಲ ಕಷ್ಟಗಳ ನಡುವೆಯೂ ಅಜ್ಮಾನ್ ಕನಸಿನೊಂದಿಗೆ ಆಕೆ ಬದುಕು ಸಾಗಿಸಿದ್ದಾಳೆ. ಆಕೆಗೆ ಕ್ಷಮಿಸು ಎಂದು ಕೇಳುವುದು ಕೂಡಾ ಸರಿಯಲ್ಲ; ಅಷ್ಟಾಗಿಯೂ ಕ್ಷಮೆ ಕೋರುತ್ತೇನೆ
ಬೇಸಿಗೆ ಇರಲಿ; ಚಳಿ ಇರಲಿ, ಹೊತ್ತು ಮೂಡುವ ಮುನ್ನವೇ ಈ ‘ಭಾಸ್ಕರ’ನ ಕಾಯಕ ಆರಂಭವಾಗುತ್ತದೆ. ಒಂದು ದಿನವಲ್ಲ; ತಿಂಗಳಲ್ಲ; ವರ್ಷಗಳ ಕಾಲ ನಿರಂತರ. 35 ವರ್ಷಗಳ ಕಾಲ ಒಂದು ದಿನವೂ ಬಿಡದೇ ಇದು ಅವರ ದಿನಚರಿ.
ಪಿ.ಆರ್.ಭಾಸ್ಕರ್ಗೆ ಇದೀಗ ಅರುವತ್ತು ವರ್ಷ. ಇದೀಗ ಭಾಸ್ಕರ್ ಹಿಂದಿನಷ್ಟು ಚುರುಕಾಗಿಲ್ಲ. ಅವರನ್ನು ಮುಂಜಾನೆ ಸವಿನಿದ್ದೆಯಿಂದ ಎಬ್ಬಿಸಲು ಭಾರತದ ಹಳ್ಳಿಯಿಂದ ಮುಂಜಾನೆ 4.30ಕ್ಕೆ ಕರೆ ಬರುತ್ತದೆ. 5 ಗಂಟೆಗೆ ಅವರ ಅಜ್ಮಾನ್ ಯಾತ್ರೆ ಆರಂಭವಾಗುತ್ತದೆ. ಅಲ್ಲಿ ಪತ್ರಿಕೆಗಳ ಬಂಡಲ್ ಪಡೆದು ಮನೆಮನೆಗೆ ವಿತರಿಸುವ ಕಾರ್ಯ ಆರಂಭವಾಗುತ್ತದೆ.
ಮಲೆಯಾಳಂ ರೇಡಿಯೊ ಎಫ್ಎಂ ಚಾನಲ್, ಕ್ಲಬ್ ಎಫ್ಎಂನಲ್ಲಿ ಕಳೆದ ವಾರ ಭಾಸ್ಕರ್ ಅವರ ಸಂದರ್ಶನ ಇತ್ತು. ಇದರಲ್ಲಿ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು; ಅನುಭವ ಹಂಚಿಕೊಂಡರು ಹಾಗೂ ಸಿದ್ಧಾಂತವನ್ನು ವಿವರಿಸಿದರು. ಇಡೀ ಕಾರ್ಯಕ್ರಮದುದ್ದಕ್ಕೂ ಮುಗ್ಧವಾಗಿ ನಕ್ಕರು. ಆದರೆ ಶ್ರೋತೃಗಳು ಮಾತ್ರ ಕಣ್ಣೀರು ಒರಸಿಕೊಳ್ಳುತ್ತಲೇ ಅವರ ಕಥೆ ಕೇಳಿದರು!
ಅಜ್ಮಾನ್ನ ಪವರ್ಹೌಸ್ ಪ್ರದೇಶದ ಮೂಲೆಯಲ್ಲಿ ಧೂಳಿನಿಂದ ಆವೃತ್ತವಾದ, ಮನೆ ಎಂದು ಕರೆಯಲು ಕಷ್ಟ ಎನಿಸುವ ಕೊಳಕು ಜಾಗವನ್ನು ‘ಖಲೀಜ್ ಟೈಮ್ಸ್’ ಪತ್ತೆ ಮಾಡಿತು. ವೃತ್ತಿಯ ಬಗ್ಗೆ ಭಾಸ್ಕರ್ಗೆ ಇನ್ನೂ ಪ್ರೀತಿ ಇದೆ. ಆದರೆ ಆಡಂಬರ ಇಲ್ಲ. ಸಂಪೂರ್ಣ ಪಾರದರ್ಶಕ, ಆದರೆ ಹಣಕಾಸು ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದರು. ‘‘ನನ್ನ ಮಂಕು ಕವಿದ ದಿನಗಳನ್ನು ಬಹಿರಂಗವಾಗಿ ಚರ್ಚಿಸುವುದು ಬೇಕಿಲ್ಲ. ಆದರೆ ನಿಮಗೆ ಅದು ವರದಿಯಾಗುತ್ತದೆ ಎನ್ನುವುದಾದರೆ ಅದಕ್ಕೂ ಸಿದ್ಧ’’ ಎನ್ನುತ್ತಲೇ ಅವರ ಕರುಣಕಥೆ ಬಿಚ್ಚಿಟ್ಟರು.
ಖ್ಯಾತ ಕವಯತ್ರಿ ಕಮಲಾ ಸುರಯ್ಯ ಅವರ ಹುಟ್ಟೂರು ಕೇರಳದ ಪುನ್ನಯರ್ಕುಲಂ ಗ್ರಾಮದಿಂದ ಬಂದ ಇವರು ಹಿಂದೆ ಟ್ಯಾಕ್ಸಿ ಚಾಲಕರಾಗಿದ್ದರು. ಭಾವ ವೀಸಾ ತೆಗೆಸಿಕೊಟ್ಟ ಬಳಿಕ ಬಾಳು ಅರಸಿ ಅಜ್ಮಾನ್ಗೆ ಬಂದಿದ್ದರು. ಬಳಿಕ ತಮಗೆ ಒಗ್ಗದ ಕೆಲ ಕೆಲಸಗಳನ್ನು ಮಾಡಬೇಕಾಯಿತು. ಆ ಬಳಿಕ ಪತ್ರಿಕೆಯ ಬಂಡಲ್ ಕೈಗೆತ್ತಿಕೊಂಡವರು ಹಿಂದಿರುಗಿ ನೋಡಲೇ ಇಲ್ಲ.
ಇಡೀ ವಿಶ್ವದಂತೆ ಅಜ್ಮಾನ್ ಕೂಡಾ ಮುಂದುವರಿದಿದೆ. ಅಲ್ಲಿನ ವ್ಯಾಪಾರ, ಜನ ಬದಲಾಗಿರುವಂತೆ ಪತ್ರಿಕೆ ಹಂಚುವವರೂ ಬದಲಾಗಿದ್ದಾರೆ. ಬೈಕ್ನಲ್ಲಿ ಒಂದು ಸ್ಥಳದಿಂದ ಇನ್ನೊಂದು ಕಡೆಗೆ ಪತ್ರಿಕೆ ಹಂಚುವ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ. ದುಬೈನಲ್ಲಿ ವಿಶ್ವದ ಅತಿಎತ್ತರದ ಕಟ್ಟಡವಿದೆ; ಆದರೆ ಭಾಸ್ಕರ್ಗೆ ಅದನ್ನು ನೋಡುವುದು ಕೂಡಾ ಇನ್ನೂ ಸಾಧ್ಯವಾಗಿಲ್ಲ. ಅವರ ಗ್ರಾಹಕರಿರುವ ಅಜ್ಮಾನ್ ನಗರವೇ ಅವರಿಗೆ ಜಗತ್ತು. ಶಾರ್ಜಾ ಹಾಗೂ ದುಬೈ ವಿಮಾನ ನಿಲ್ದಾಣಗಳಿಗೆ ಜನರನ್ನು ಕರೆದೊಯ್ಯುತ್ತಿದ್ದುದನ್ನು ಬಿಟ್ಟರೆ, ಅವರೆಂದೂ ಬೇರೆ ಪ್ರದೇಶಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.
ಅವರ ಪುಟ್ಟ ನಗರದಲ್ಲಿ ಯಾರೂ ಅವರ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ. ಗುಂಪಿನಲ್ಲಿ ಆತ ಒಬ್ಬಂಟಿ. ಮನೆಗೆ ಬಂದರೂ 11 ಮಂದಿ ಸಹೋದರರ ಪೈಕಿ ಅವರು ಪ್ರತ್ಯೇಕವಾಗಿಯೇ ಇರುತ್ತಾರೆ. ಯಾರೂ ಇವರ ನೆರವಿಗೆ ಬಂದಿಲ್ಲ.
ಅವರಿಗೆ ಮನೆ ಎಂಬ ಸ್ಥಳವೇ ಎಂದೂ ಇದ್ದಿರಲಿಲ್ಲ. ಒಂದು ಕಂಪೆನಿಯ ಮೂಲೆಯ ಖಾಯಂ ಅತಿಥಿ ಅವರು. ಅವರ ಸಹವರ್ತಿಗಳ ಪ್ರೀತಿ ಹಾಗೂ ಕರುಣೆಯೇ ಭಾಸ್ಕರ್ಗೆ ಆಧಾರ. ಅವರಿಗೆ ಭಾಸ್ಕರ್ ಪ್ರೀತಿಯ ಎಳಪ್ಪ(ಚಿಕ್ಕಪ್ಪ). ಈ ಹೆಸರು ಗಳಿಸಲೂ ಭಾಸ್ಕರ್ ಕಷ್ಟಪಟ್ಟಿದ್ದಾರೆ. ಜನರಿಗೆ ಎಂದೂ ಅವರು ತೊಂದರೆ ಮಾಡಿದ್ದಿಲ್ಲ. ಯಾರ ನೆರವನ್ನೂ ಬಯಸಿದವರಲ್ಲ. ಜನ ಅವರನ್ನು ಪ್ರೀತಿಸುತ್ತಾರೆ. ದಿನಸಿ ಅಂಗಡಿ ಹಾಗೂ ರೆಸ್ಟೋರೆಂಟ್ಗಳು ಅಲ್ಪಸ್ವಲ್ಪತಿನಸಿಗೆ ಅವರಿಂದ ಹಣ ಪಡೆಯುವುದಿಲ್ಲ. ಆದರೆ ಸಮಾಜಕ್ಕೆ ತಮಗೆ ಸಾಧ್ಯವಾದ ರೀತಿಯಲ್ಲಿ ಅವರು ಪ್ರತ್ಯುಪಕಾರ ಮಾಡುತ್ತಾರೆ. ಮಧ್ಯರಾತ್ರಿ ಒಂದು ಅರಬ್ ರೆಸ್ಟೋರೆಂಟ್ ಅವರಿಗೆ ಚೀಲ ತುಂಬಾ ಆಹಾರ ನೀಡುತ್ತದೆ. ಏಕೆಂದರೆ ಕಾನೂನು ಪ್ರಕಾರ, ದಿನದ ಕೊನೆಗೆ ರೆಸ್ಟೋರೆಂಟ್ಗಳು ಇವುಗಳನ್ನು ವಿಲೇವಾರಿ ಮಾಡುವುದು ಕಡ್ಡಾಯ. ಭಾಸ್ಕರ್ ಇದನ್ನು ತಮ್ಮ ನೆರೆಹೊರೆಯವರಿಗೆ ಹಂಚುತ್ತಾರೆ. ಹಲವು ಕುಟುಂಬಗಳು, ಅವಿವಾಹಿತರು ಹಾಗೂ ರೂಮ್ಮೇಟ್ಗಳು ಇದರ ಫಲಾನುಭವಿಗಳು.
‘‘ಎಲ್ಲವನ್ನೂ ಎಲ್ಲರಿಗೂ ಅನ್ವಯಿಸುವುದು ನನಗೆ ಸರಿ ಕಾಣುವುದಿಲ್ಲ. ಹಲವು ಕೆಟ್ಟ ಘಟನೆಗಳು ನಡೆಯುವುದನ್ನು ನಾವು ಓದುತ್ತೇವೆ. ಆದರೆ ವಿಶ್ವದಲ್ಲಿ ಇಂದೂ ಒಳ್ಳೆಯ ಜನರೇ ತುಂಬಿದ್ದಾರೆ. ಮಾನವೀಯತೆ ಇನ್ನೂ ಸತ್ತಿಲ್ಲ. ಇನ್ನೊಬ್ಬರಿಗೆ ನೀಡುವುದು ಅತ್ಯಂತ ಪವಿತ್ರ ಕಾರ್ಯ ಎನ್ನುವುದು ನನ್ನ ಅಚಲವಾದ ನಂಬಿಕೆ’’ ಎನ್ನುವುದು ಅವರ ಸಿದ್ಧಾಂತ.
ಪೊಲೀಸ್ ವಾಹನಗಳು ಕೂಡಾ ಭಾಸ್ಕರ್ ಬಳಿ ನಿಲ್ಲುತ್ತವೆ. ಅವರಿಗೊಂದು ಹಾಯ್ ಹೇಳಿ, ಪೊಲೀಸರು ಮುಂದುವರಿಯುತ್ತಾರೆ. ಅವರಿಗೆ ಏನು ಬೇಕೋ ಕೊಡಿ ಎಂದು ಸೂಪರ್ಮಾರ್ಕೆಟ್ನ ವ್ಯಾಪಾರಿಗಳಿಗೆ ಸೂಚಿಸುತ್ತಾರೆ. ಬಹುತೇಕ ಇವರೆಲ್ಲರೂ ಎಂಬತ್ತರ ದಶಕದಲ್ಲಿ ಭಾಸ್ಕರ್ ನೆರೆಹೊರೆಯಲ್ಲೇ ಬೆಳೆದವರು.
ಭಾಸ್ಕರ್ ಬಳಿಕ ತೀರಾ ಬಡಕುಟುಂಬದಿಂದ ವಿವಾಹವಾದರು. ಪೆಟ್ರೊಡಾಲರ್ಗಳ ನಾಡಿನಲ್ಲಿ ನಿರಂತರ 35 ವರ್ಷ ದುಡಿಮೆಯ ಬಳಿಕವೂ ಪತ್ನಿಗೊಂದು ಸೂರು ಕಟ್ಟಿಕೊಡಲು ಇನ್ನೂ ಸಾಧ್ಯವಾಗಿಲ್ಲ. ಕೂಡುಕುಟುಂಬಕ್ಕಾಗಿ ಸಹೋದರ ಕಟ್ಟಿಸಿದ ಮನೆ ಎಷ್ಟು ಶಿಥಿಲವಾಗಿದೆ ಎಂದರೆ, ಮನೆಯ ಒಳಗಿನಿಂದಲೇ ಆಕಾಶ, ನಕ್ಷತ್ರ ಎಲ್ಲವೂ ಕಾಣುತ್ತದೆ.
ತನಗಾಗಿ ಒಂದು ಮನೆಯನ್ನೂ ಕಟ್ಟಿಕೊಳ್ಳದ ಕಾರಣಕ್ಕಾಗಿ ಭಾಸ್ಕರ್ನಿಂದ ಸಹಾಯ ಪಡೆಯುತ್ತಿರುವ ಒಬ್ಬ ಫಲಾನುಭವಿ ಚಪ್ಪಲಿ ತೆಗೆದು ಹೊಡೆಯಲು ಮುಂದಾಗಿದ್ದರು. ಭಾಸ್ಕರ್ ಬಗ್ಗೆ ಅಂಥ ಪ್ರೀತಿ; ಕಕ್ಕುಲತೆ. ಆರಂಭಿಕ ದಿನದಲ್ಲಿ ಅವರು ಇಟ್ಟ ಒಂದೆರಡು ತಪ್ಪು ಹೆಜ್ಜೆ ಹಾಗೂ ದುರಾದೃಷ್ಟವೇ ಇವರ ಈ ಸ್ಥಿತಿಗೆ ಕಾರಣ ಎನ್ನಬೇಕು. 1981ರಲ್ಲಿ ಅಜ್ಮಾನ್ ನಗರಕ್ಕೆ ಬಂದಾಗ ಹೋಟೆಲ್ ಉದ್ಯೋಗಕ್ಕೆ ಭವಿಷ್ಯವಿಲ್ಲ ಎಂಬ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡಿದರು. ಅಜ್ಮಾನ್ ಬಂದರಿನಲ್ಲಿ ಅವರು ಇನ್ನೇನು ಉದ್ಯೋಗ ಪಡೆಯುವುದರಲ್ಲಿದ್ದರು; ಆದರೆ ಅಹಿತಕರ ಘಟನೆಯೊಂದು ಅವರ ನೇಮಕಾತಿಗೆ ತಡೆಯಾಗಿ ಪರಿಣಮಿಸಿತು.
ಪತ್ರಿಕೆ ಅವರ ಸಹಜ ಆಯ್ಕೆಯಾಯಿತು. ಆರಂಭದಲ್ಲಿ ಅವರಿಗೆ ಸೂಪರ್ಮಾರ್ಕೆಟ್ ಬಾಸ್ ತೀರಾ ಕನಿಷ್ಠ ಎಂದರೆ 12 ದಿರ್ಹಂ ಕಮಿಶನ್ ಮಾತ್ರ ನೀಡುತ್ತಿದ್ದರು. ಅದು ಕಾಲಕ್ಕೆ ತಕ್ಕಂತೆ ಹೆಚ್ಚಲೇ ಇಲ್ಲ. ‘‘ತಮ್ಮ ಇಂದಿನ ಅನಿಶ್ಚಿತ ಸ್ಥಿತಿಗೆ ಹಳೆಯ ಉದ್ಯೋಗದಾತರ ದುರಾಸೆಯೇ ಕಾರಣ’’ ಎನ್ನುವುದು ಅವರ ಸ್ಪಷ್ಟನುಡಿ. ಇದರಿಂದಾಗಿ ಬೈಕ್ ಖರೀದಿಸಲು ಅವರು ಹಣ ಉಳಿಸುವುದು ಸಾಧ್ಯವೇ ಆಗಲಿಲ್ಲ. ಇದರಿಂದ ಇಂದಿಗೂ ಸೈಕಲ್ ತುಳಿದುಕೊಂಡು ಮನೆಮನೆಗೆ ಹೋಗಿ ಬೆಳಿಗ್ಗೆ 10:45ರವರೆಗೂ ಪತ್ರಿಕೆ ಹಂಚುತ್ತಾರೆ.
10:45 ತಡವಾಗುವುದಿಲ್ಲವೇ ಎಂದು ಗ್ರಾಹಕರು ಕೆಲವೊಮ್ಮೆ ಆಕ್ಷೇಪಿಸುತ್ತಾರೆ. ಆದರೂ, ಇವರ ಬರುವಿಕೆಗೆ ತಾಳ್ಮೆಯಿಂದ ಕಾಯುತ್ತಾರೆ. ಇದರ ನಡುವೆಯೂ ಕ್ರಿಕೆಟ್, ರಾಜಕೀಯದಂಥ ವಿಚಾರವನ್ನು ಗ್ರಾಹಕರ ಜತೆ ಚರ್ಚಿಸುವ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ.
ಯುಎಇನಲ್ಲಿ ಪತ್ರಿಕೆಗಳ ಬೆಳವಣಿಗೆ ಹಾಗೂ, ತಮ್ಮ ಸಹೋದ್ಯೋಗಿಯೇ ಸೂಪರ್ಮಾರ್ಕೆಟ್ ನಿರ್ವಹಣೆ ಹೊಣೆ ವಹಿಸಿಕೊಂಡ ಬಳಿಕ ಭಾಸ್ಕರ್ಗೆ ಸ್ವಲ್ಪಮಟ್ಟಿಗೆ ನೆಮ್ಮದಿ. ತಿಂಗಳಿಗೆ 2000 ದಿರ್ಹಂವರೆಗೂ ಕಮಿಷನ್ ಪಡೆದದ್ದೂ ಇದೆ. ಆದರೆ ಇಂಟರ್ನೆಟ್ ಹಾಗೂ ಸ್ಮಾರ್ಟ್ಫೋನ್ಗಳು ಇವರಿಗೆ ಮಾರಕವಾಗಿ ಪರಿಣಮಿಸಿದವು. ‘‘ಅವರಿಗೆ 24 ಗಂಟೆ ಫೋನ್ನಲ್ಲಿದ್ದರೂ ಸಾಕಾಗುವುದಿಲ್ಲ. ಪತ್ರಿಕೆ ಓದುವಷ್ಟು ಸಮಯ ಇಲ್ಲ.’’ ಎಂದು ಅವರು ಹೇಳುತ್ತಾರೆ. ಪತ್ರಿಕೆಯ ಪ್ರತಿ ಅಕ್ಷರವನ್ನೂ ಓದುವ ಭಾಸ್ಕರ್, ವಿಶ್ವ ಎದುರಿಸುತ್ತಿರುವ ಬೌದ್ಧಿಕ ಸಂಘರ್ಷದ ಬಗ್ಗೆ ವಿಷಾದಿಸುತ್ತಾರೆ.
‘‘ಓದುವ ಹವ್ಯಾಸ ಕುಸಿಯುತ್ತಿದೆ. ಮದ್ರಣ ಮಾಧ್ಯಮ ಇಳಿಹೊತ್ತು ಕಾಣುತ್ತಿದೆ’’ ಎನ್ನುವುದು ಅವರ ಭವಿಷ್ಯ. ಮುದ್ರಣ ಮಾಧ್ಯಮ ಉಳಿದುಕೊಂಡರೂ, ಭಿನ್ನವಾಗಿರುತ್ತವೆ. ಪತ್ರಿಕೆಗಳು ಸುದ್ದಿಗಿಂತ ಹೆಚ್ಚು ಫ್ಲೈಯರ್ ಹೊಂದಿರುತ್ತವೆ
ಮುದ್ರಣ ಮಾಧ್ಯಮ ಉಳಿಯಲಿ; ಅಳಿಯಲಿ; ಆದರೆ ಭಾಸ್ಕರ್ ಬದುಕು ಮಾತ್ರ ಸಾಗುತ್ತಿದೆ. ಮುಂದಿನ ಡಿಸೆಂಬರ್ನಲ್ಲಿ ಅವರ ವೀಸಾ ಅವಧಿ ಮುಗಿಯುವುದರಿಂದ ಭಾಸ್ಕರ್ ತವರಿಗೆ ಮರಳುತ್ತಾರೆ. ತಂದೆ ಆರಂಭಿಸಿದ ತೆಂಗಿನಕಾಯಿ ವ್ಯಾಪಾರ ಆರಂಭಿಸುವ ಚಿಂತನೆಯಲ್ಲಿದ್ದಾರೆ.
ಅವರ ಪಯಣದ ನೆನಪಿನಲ್ಲಿ ವೈಫಲ್ಯ ಎಂಬ ಪದಕ್ಕೆ ಜಾಗವೇ ಇಲ್ಲ. ಯಾವುದರ ಬಗ್ಗೆಯೂ ನನಗೆ ವಿಷಾದ ಇಲ್ಲ. ‘‘ಮುಂದಿನ ತಿಂಗಳ ಕಮಿಶನ್ ಲೆಕ್ಕಾಚಾರದ ವಿಚಾರ ತಲೆಗೆ ಬಂದಾಗ ಕೂಡಾ, ನಾನು ನಿಶ್ಚಿಂತೆಯಿಂದ ಕಣ್ಣುಮುಚ್ಚಿಕೊಂಡು ನಿದ್ದೆ ಮಾಡುತ್ತೇನೆ’’ ಎನ್ನುತ್ತಾರೆ.
‘‘ಬದುಕು ಹಲವು ಪಾಠ ಕಲಿಸಿದೆ. ಹೃದಯಗಳನ್ನು ಗೆದ್ದದ್ದೂ ಇದೆ. ಕಳೆದುಕೊಂಡದ್ದೂ ಇದೆ. ಆದರೆ ಬೇಸರವಿಲ್ಲ. ಆದರೆ ನನಗೆ ಸರಿ ಎನಿಸಿದಂತೆ ಬದುಕಿದ್ದೇನೆ. ಸುದ್ದಿ ನನ್ನ ಪ್ರೀತಿಯ ವಿಷಯ. ಜ್ಞಾನ ಪ್ರಸಾರವನ್ನು ನಾನು ಇಷ್ಟಪಡುತ್ತೇನೆ. ಭಾರತಕ್ಕೆ ಅಪರೂಪಕ್ಕೊಮ್ಮೆ ಹೋಗುವ ದಿನಗಳನ್ನು ಬಿಟ್ಟರೆ, ನಾನು ರಜೆ ಪಡೆದದ್ದೇ ಇಲ್ಲ’’
‘‘ಒಂದು ವೇಳೆ ನನಗೆ ಒಳ್ಳೆಯ ಕೆಲಸ ಕೊಟ್ಟಿದ್ದರೂ, ನಾನು ಅದಕ್ಕೆ ಸೇರುತ್ತಿರಲಿಲ್ಲ. ನಾನು ಇಷ್ಟಪಟ್ಟಿರುವುದು ಇದನ್ನೇ. ಸಮುದಾಯಕ್ಕೆ ಸೇವೆ ಮಾಡುವುದರಲ್ಲಿ ನೆಮ್ಮದಿ ಇದೆ. ನಾನು ಜೀವನದಲ್ಲಿ ಕಂಡುಕೊಂಡ ಒಂದು ಸತ್ಯವೆಂದರೆ, ಆಶಾವಾದ ನಿಮ್ಮನ್ನು ಎಲ್ಲಿಗೂ ಒಯ್ಯಲು ಸಾಧ್ಯವಿಲ್ಲ. ಎಂಜಿನ್ ಮುಂದುವರಿಯಲು ಅದಕ್ಕೆ ಉತ್ತೇಜನ ನೀಡಬೇಕು.’’
ಸಂದರ್ಶನದ ಕೊನೆಗೆ ಪತ್ರಿಕೆಯ ಮುದ್ರಣಶಾಯಿಯಷ್ಟೇ ಕಪ್ಪಾಗಿ ಕಣ್ಣಂಚಿನಿಂದ ಕಣ್ಣೀರು ಜಾರಿತು.
ಸ್ವಾರ್ಥಿಯಲ್ಲ; ಆದ್ದರಿಂದ ಸುಖವಾಗಿದ್ದೇನೆ
ಮೂವತ್ತಾರು ವರ್ಷಗಳ ಕಷ್ಟಗಳ ಸರಮಾಲೆ ಕೂಡಾ ಭಾಸ್ಕರ್ಗೆ ಜೀವನದ ಮೇಲಿನ ಪ್ರೀತಿಯನ್ನು ಕುಂದಿಸಿಲ್ಲ. ಭವಿಷ್ಯದ ಬಗ್ಗೆ ಅವರು ಎಂದೂ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಎಲ್ಲ ಕಷ್ಟಕೋಟಲೆಗಳ ನಡುವೆಯೂ ನಗುವುದನ್ನು ಭಾಸ್ಕರ್ ಕರಗತ ಮಾಡಿಕೊಂಡಿದ್ದಾರೆ. ನನ್ನ ಮೌಲ್ಯದ ಬಗ್ಗೆ ನನಗೆ ನೆಮ್ಮದಿ ಇದೆ. ನನಗೆ ಹಣದ ಆಸೆ ಇಲ್ಲದ್ದರಿಂದ ನಾನು ನಿಶ್ಚಿಂತೆಯಿಂದ ಇದ್ದೇನೆ ಎನ್ನುವುದು ಭಾಸ್ಕರ್ ಅವರ ಅಚಲವಾದ ನುಡಿ.
ಕಟ್ಟಕಡೆಯದಾಗಿ ಜೀವನದಲ್ಲಿ ಎಂದಿಗೂ ನಂಬಲು ಅಸಾಧ್ಯವಾದ ಘಟನೆಯನ್ನು ಭಾಸ್ಕರ್ ನೆನಪಿಸಿಕೊಂಡರು. ಪಾಕಿಸ್ತಾನಿ ಮೂಲದ ಅಮೆರಿಕನ್ ಉದ್ಯಮಿಯೊಬ್ಬರ ಮನೆಗೆ ಪತ್ರಿಕೆ ಎಸೆಯುತ್ತಿದ್ದಾಗ, ಕೈಸನ್ನೆ ಮಾಡಿದರು. ಉದ್ಯಮಿ ಇವರನ್ನು ಬಿಗಿದಪ್ಪಿಕೊಂಡು, ‘‘ನಿನ್ನಲ್ಲಿ ಚಿರಂತನ ಅಂಶವಿದೆ. ಈ ಗುಲಾಮ ಚಾಕರಿ ಕೆಲಸದಲ್ಲೂ ಸಂತೋಷ ನಿನ್ನಲ್ಲಿ ತುಂಬಿ ತುಳುಕುತ್ತಿದೆ. ನನ್ನಲ್ಲಿ ಸಂಪತ್ತು ಇದೆ. ಆದರೆ ನಾನು ನೆಮ್ಮದಿ ಹಾಗೂ ಸಂತೋಷ ಅರಸುತ್ತಿದ್ದೇನೆ’’ ಎಂದು ಹೇಳಿದಾಗ ಕೊಳಕು ವಾಸನೆ ಬರುತ್ತಿದ್ದ ಭಾಸ್ಕರ್ ದಿಗ್ಙೂಢರಾಗಿದ್ದರು.
‘‘ನಾನು ಸ್ವಾರ್ಥಿಯಲ್ಲ; ಆದ್ದರಿಂದ ಸಂತೋಷವಾಗಿದ್ದೇನೆ.’’
ಕೃಪೆ: ಖಲೀಜ್ ಟೈಮ್ಸ್