ಚುನಾವಣಾ ಭಾಷಣ ಸುಪ್ರೀಂ ತೀರ್ಪು ಅರ್ಥೈಸಿಕೊಳ್ಳುವುದು ಕಠಿಣ
ಚುನಾವಣಾ ಪ್ರಚಾರದ ವೇಳೆ ನಿರ್ದಿಷ್ಟ ಧರ್ಮಗಳಿಗೆ ಮನವಿ ಮಾಡಿಕೊಳ್ಳಬಹುದೇ ಎಂಬ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಏಳು ಸದಸ್ಯರ ಸಂವಿಧಾನಪೀಠದಲ್ಲಿ ಜನವರಿ 2ರಂದು ಒಡಕಿನ ಅಭಿಪ್ರಾಯಕ್ಕೆ ಬಂದಿದೆ. ಈ ನ್ಯಾಯಪೀಠದ ಮುಂದಿದ್ದ ಕಾನೂನು ಪ್ರಶ್ನೆ ತೀರಾ ನೇರ ಹಾಗೂ ನಿರ್ದಿಷ್ಟ. ವಾಸ್ತವವಾಗಿ ಒಂದು ಕಾನೂನಿನ, ಒಂದು ಉಪವಿಭಾಗದ ಒಂದು ಶಬ್ದಕ್ಕೆ ಸಂಬಂಧಿಸಿದ್ದು. ದೇಶದ ಚುನಾವಣಾ ಪ್ರಕ್ರಿಯೆಯನ್ನು ನಿರ್ದೇಶಿಸುವ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (3)ರಲ್ಲಿ ಉಲ್ಲೇಖಿಸಿರುವ ‘ಅವನ’ ಎಂಬ ಶಬ್ದಕ್ಕೆ ಸಂಬಂಧಿಸಿದ್ದು.
ಪ್ರಜಾಪ್ರತಿನಿಧಿ ಕಾಯ್ದೆಯ 123ನೆ ಸೆಕ್ಷನ್ ನಿರ್ದಿಷ್ಟವಾಗಿ ‘ಭ್ರಷ್ಟ ಚುನಾವಣಾ ಪರಿಪಾಠ’ ಬಗ್ಗೆ ಉಲ್ಲೇಖಿಸಿದೆ. ಭ್ರಷ್ಟ ಚುನಾವಣಾ ಪದ್ಧತಿಯನ್ನು ಅನುಸರಿಸಿ ಸಿಕ್ಕಿಹಾಕಿಕೊಂಡರೆ ಕಠಿಣ ಶಿಕ್ಷೆ ವಿಧಿಸಲು ಇದು ಅವಕಾಶ ಮಾಡಿಕೊಡುತ್ತದೆ. ಅಂಥ ವ್ಯಕ್ತಿಯ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಲು ಕೂಡಾ ಅವಕಾಶವಿದೆ.
ಕಾಯ್ದೆಯ ಸೆಕ್ಷನ್ 123 (3)ರ ಅನ್ವಯ ಭ್ರಷ್ಟ ಚುನಾವಣಾ ಪರಿಪಾಠ ಎಂದರೆ:
‘‘ಯಾವನೇ ವ್ಯಕ್ತಿ ತನ್ನ ಧರ್ಮ, ಮತ, ಜಾತಿ, ಸಮುದಾಯ ಅಥವಾ ಭಾಷೆಯನ್ನು ಬಳಸಿ ಅಥವಾ ಧಾರ್ಮಿಕ ಸಂಕೇತವನ್ನು ಬಳಸಿ, ರಾಷ್ಟ್ರಧ್ವಜ ಅಥವಾ ರಾಷ್ಟ್ರಲಾಂಛನವನ್ನು ಬಳಸಿಕೊಂಡು ಮತದಾರರಿಗೆ ಮನವಿ ಮಾಡುವ ಮೂಲಕ ಮತ್ತೊಬ್ಬ ಅಭ್ಯರ್ಥಿಯ ಅವಕಾಶಗಳನ್ನು ಹಾಳುಮಾಡಿದರೆ ಅಂಥ ಸಂದರ್ಭದಲ್ಲಿ ಮತ್ತೊಬ್ಬ ಅಭ್ಯರ್ಥಿ ಅಥವಾ ಆತನ ಏಜೆಂಟ್ ಇಲ್ಲವೇ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್‌ನ ಅನುಮತಿ ಪಡೆದ ಇತರ ವ್ಯಕ್ತಿಗಳು ಮನವಿ ಸಲ್ಲಿಸಿ, ವ್ಯಕ್ತಿಗಳ ಪರವಾಗಿ ಮತ ಚಲಾಯಿಸುವಂತೆ ಇಲ್ಲವೇ ಚಲಾಯಿಸದಂತೆ ಕೋರುವುದನ್ನು ಇನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸುವುದಾದರೆ, ‘‘ಧರ್ಮದ ಆಧಾರದಲ್ಲಿ ಮತ ಹಾಕುವಂತೆ ಅಥವಾ ಮತ ಹಾಕದಂತೆ ಅಭ್ಯರ್ಥಿ ಮನವಿ ಮಾಡಿಕೊಳ್ಳುವುದು.. ’’ ಎಂದು ಹೇಳಬಹುದು. ಸೆಕ್ಷನ್‌ನಲ್ಲಿ ಉಲ್ಲೇಖಿಸಿರುವ ‘ಅವನ’ ಎಂಬ ಶಬ್ದದ ಬಗ್ಗೆ ಕೋರ್ಟ್ ಮುಂದಿದ್ದ ಪ್ರಶ್ನೆಯೆಂದರೆ, ಇದು ಅಭ್ಯರ್ಥಿಗೆ ಮಾತ್ರ ಸಂಬಂಧಿಸಿದ್ದೇ ಅಥವಾ ಮತದಾರರಿಗೂ ಸಂಬಂಧಿಸುತ್ತದೆಯೇ ಎನ್ನುವುದು. ಮತ್ತೊಂದು ವಿಧದಲ್ಲಿ ಹೇಳಬೇಕೆಂದರೆ, ಈ ಸೆಕ್ಷನ್ ‘‘ನಾನು ಹಿಂದೂ, ನನಗೆ ಮತಹಾಕಿ’’ ಎಂಬಂಥ ಹೇಳಿಕೆಯನ್ನಷ್ಟೇ ಒಳಗೊಳ್ಳುತ್ತದೆಯೇ ಅಥವಾ ಮತದಾರರು ಜಾತಿ, ಧರ್ಮ ಅಥವಾ ಭಾಷೆಯ ಹಿನ್ನೆಲೆಯಲ್ಲಿ ಮತದಾನ ಮಾಡಬೇಕು ಎಂಬ ವಿಸ್ತೃತ ಮನವಿಯನ್ನೂ ಒಳಗೊಳ್ಳುತ್ತದೆಯೇ ಎನ್ನುವುದು.
ಯಾವುದಕ್ಕೆ ಸಂಬಂಧಿಸಿಲ್ಲ?
ಈ ಹಿನ್ನೆಲೆಯಲ್ಲಿ ಈ ಅಂಶ ಯಾವುದಕ್ಕೆ ಸಂಬಂಧಿಸಿಲ್ಲ ಎನ್ನುವುದನ್ನೂ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ರಾಜಕೀಯದಲ್ಲಿ ಧರ್ಮಗಳಿಗೆ ಮನವಿ ಮಾಡಿಕೊಳ್ಳಬಹುದೇ ಎಂಬ ವಿಷಯಕ್ಕೆ ಇದು ಸಂಬಂಧಿಸಿದ್ದಲ್ಲ ಎನ್ನುವುದು ಸ್ಪಷ್ಟ. ಕನಿಷ್ಠಪಕ್ಷ ಕೆಲ ಸಂದರ್ಭದಲ್ಲಾದರೂ ಧರ್ಮಗಳಿಗೆ ಮನವಿ ಮಾಡುವುದು ಚುನಾವಣೆಯಲ್ಲಿ ಅನಿವಾರ್ಯ ಎನ್ನುವುದನ್ನು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(3) ಸ್ಪಷ್ಟಪಡಿಸುತ್ತದೆ. 1954ರಷ್ಟು ಹಿಂದೆಯೇ ಈ ನಿರ್ಬಂಧ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುವಂಥದ್ದು ಎಂಬ ಆಧಾರದಲ್ಲಿ ಇದನ್ನು ಪ್ರಶ್ನಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ ಇದನ್ನು ತಿರಸ್ಕರಿಸಿತ್ತು. ಪ್ರಜಾಪ್ರತಿನಿಧಿ ಕಾಯ್ದೆಯು, ಒಬ್ಬ ವ್ಯಕ್ತಿಯ ಭಾಷಣವನ್ನು ತಡೆಯುವುದಿಲ್ಲ. ಆದರೆ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅಂಥ ವ್ಯಕ್ತಿಯ ಮಾತುಗಳನ್ನು ನಿರ್ಬಂಧಿಸಲು ಮಾತ್ರ ಸೂಚಿಸುತ್ತದೆ ಎಂದು ಸ್ಪಷ್ಟಪಡಿಸಿತ್ತು. ಈ ವೈರುಧ್ಯದ ಅಭಿಪ್ರಾಯವನ್ನು ಕಳೆದ 60 ವರ್ಷಗಳಿಂದಲೂ ನ್ಯಾಯಾಂಗ ಜಾಣ್ಮೆಯಿಂದ ಮುಂದುವರಿಸಿಕೊಂಡು ಬಂದಿತ್ತು. ಏಳು ಮಂದಿಯ ಸಂವಿಧಾನಪೀಠಕ್ಕೆ ಈ ತೀರ್ಪಿನ ಮೇಲೆ ತೀರ್ಪು ನೀಡುವ ಅಧಿಕಾರ ಇದ್ದರೂ, ಕೇವಲ ಒಂದು ವಾಕ್ಯದ ತೀರ್ಪಿನ ಹೊರತಾಗಿ ಈ ವಿಷಯವನ್ನು ಪರಿಗಣಿಸಲೂ ಇಲ್ಲ.ಸಂವಿಧಾನಪೀಠದ ತೀರ್ಪು 1995ರ ಹಿಂದುತ್ವ ತೀರ್ಪಿನ ಪರಾಮರ್ಶೆಯೂ ಅಲ್ಲ. ಹಿಂದುತ್ವ ಹಾಗೂ ಹಿಂದೂವಾದ ಎನ್ನುವುದು ಜೀವನಮಾರ್ಗವಾಗಿರುವುದರಿಂದ, ಚುನಾವಣಾ ಭಾಷಣದಲ್ಲಿ ಬಳಸುವ ಈ ಪದಗಳು ಭ್ರಷ್ಟ ಚುನಾವಣಾ ಪರಿಪಾಠ ಎನಿಸಿಕೊಳ್ಳುವುದಿಲ್ಲ ಎಂದು ಈ ತೀರ್ಪಿನಲ್ಲಿ ಕೋರ್ಟ್ ಸ್ಪಷ್ಟಪಡಿಸಿತ್ತು. ಮುಖ್ಯ ನ್ಯಾಯಮೂರ್ತಿಯವರು ತಮ್ಮ ತೀರ್ಪಿನಲ್ಲಿ ನಿರ್ದಿಷ್ಟವಾಗಿ, 1995ರ ಹಿಂದುತ್ವ ತೀರ್ಪನ್ನು ಸರಿಯಾಗಿ ನಿರ್ಧರಿಸಲಾಗಿದೆಯೇ ಎನ್ನುವುದನ್ನು ಕೂಡಾ ನಾವು ಪರಿಗಣಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಧರ್ಮಕ್ಕೆ ಮನವಿ ಮಾಡಿಕೊಳ್ಳುವುದು ಎಂಬ ವಿಸ್ತೃತ ಅರ್ಥದಲ್ಲಿ ಹಿಂದುತ್ವದ ಗುಣಲಕ್ಷಣ ಏನು ಎಂಬ ಬಗ್ಗೆ ಕೂಡಾ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖ ಇಲ್ಲ.
ಯಾವುದಕ್ಕೆ ಸಂಬಂಧಿಸಿದ್ದು?
ಹಾಗಾದರೆ ಸುಪ್ರೀಂಕೋರ್ಟ್‌ನ ತೀರ್ಪು ಏನು? ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್, ನ್ಯಾಯಮೂರ್ತಿಗಳಾದ ಲೋಕೂರ, ಬಾಬ್ಡೆ ಹಾಗೂ ನಾಗೇಶ್ವರ ರಾವ್ ಅವರು ‘ಅವನ’ ಎಂಬ ಪದವನ್ನು ವಿಸ್ತೃತ ಅರ್ಥದಲ್ಲಿ ವಿಶ್ಲೇಷಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಮೂರ್ತಿ ಲೋಕೂರ ಅವರ ಅಭಿಪ್ರಾಯದಲ್ಲಿ ಭ್ರಷ್ಟ ಚುನಾವಣಾ ಪರಿಪಾಠ ಈ ಕೆಳಗಿನ ಅಂಶಗಳನ್ನು ಒಳಗೊಳ್ಳುತ್ತದೆ:
‘‘ಯಾವುದೇ ಧರ್ಮ, ಪಂಥ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದಲ್ಲಿ, ಅಭ್ಯರ್ಥಿ, ಆತನ ಏಜೆಂಟ್, ಅಭ್ಯರ್ಥಿ ಅಥವಾ ಮತದಾರನ ಅನುಮತಿ ಪಡೆದ ಇತರ ವ್ಯಕ್ತಿಗಳು, ನಿರ್ದಿಷ್ಟ ಅಭ್ಯರ್ಥಿಗೆ ಮತಹಾಕುವಂತೆ ಅಥವಾ ಮತ ಹಾಕದಂತೆ ಮನವಿ ಮಾಡುವ ಮೂಲಕ ಅಭ್ಯರ್ಥಿಯ ಆಯ್ಕೆಗೆ ಸಹಕರಿಸುವುದು ಅಥವಾ ಆಯ್ಕೆಯ ಅವಕಾಶಕ್ಕೆ ಧಕ್ಕೆ ತರುವುದು’’
ಸೆಕ್ಷನ್ 123 (3)ರ ಈ ವಿಶ್ಲೇಷಣೆಯನ್ನು ಸಮರ್ಥಿಸಲು, ನ್ಯಾಯಪೀಠವು, ಪ್ರಜಾಪ್ರತಿನಿಧಿ ಕಾಯ್ದೆಗೆ ತಂದಿರುವ ಹಲವು ತಿದ್ದುಪಡಿಗಳ ಇತಿಹಾಸವನ್ನು ಪರಿಗಣಿಸಿದೆ. ಭಾರತದ ಚುನಾವಣಾ ವ್ಯವಸ್ಥೆಯ ಸಿದ್ಧಾಂತದ ಹಿನ್ನೆಲೆಯಲ್ಲಿ, ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯವನ್ನು ಕಾಪಾಡುವ ಸಲುವಾಗಿ, ಕೆಲ ನಿರ್ದಿಷ್ಟ ವಾದಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಇದರಲ್ಲಿ ಜಾತಿ, ಧರ್ಮ ಭಾಷೆಗಳಿಗೆ ಮನವಿ ಮಾಡಿಕೊಳ್ಳುವುದು ಸೇರಿದ್ದು, ಇದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾದದ್ದು ಎಂದು ಅಭಿಪ್ರಾಯಪಟ್ಟಿದೆ. ಇದನ್ನು ಸ್ಪಷ್ಟಪಡಿಸುವ ವೇಳೆ ಮುಖ್ಯ ನ್ಯಾಯಮೂರ್ತಿಗಳು, ‘‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷಣವೆಂದರೆ, ಸಾರ್ವಜನಿಕ ಜೀವನದಿಂದ ಧರ್ಮವನ್ನು ಹೊರತಾಗಿಡುವುದು’’ ಎಂದು ಹೇಳಿದ್ದಾರೆ. ಭಾಷೆಯ ವಿಚಾರದಲ್ಲಿ ತಾರ್ಕಿಕವಾಗಿ ಒಪ್ಪಿಗೆ ನೀಡುವ ಮಟ್ಟಿಗೆ ಸೆಕ್ಷನ್ 123 (3)ರ ಹರವು ವಿಸ್ತರಿಸಬಹುದು ಎಂಬ ಬಹುಮತದ ಅಭಿಪ್ರಾಯಕ್ಕೆ ಬರಲಾಗಿದೆ.
ಆದಾಗ್ಯೂ ನ್ಯಾಯಮೂರ್ತಿ ಚಂದ್ರಚೂಡ್, ಗೋಯಲ್ ಹಾಗೂ ಲಲಿತ್ ಹೀಗೆ ಪೀಠದ ಮೂವರು ನ್ಯಾಯಮೂರ್ತಿಗಳು ಇದಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಸನಸಭೆಯ ಇತಿಹಾಸ ಹಾಗೂ ಸಂವಿಧಾನಾತ್ಮಕ ಮೌಲ್ಯದ ಬಗೆಗಿನ ಅವರ ದೃಷ್ಟಿಕೋನವೇ ಭಿನ್ನ. ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಭಿಪ್ರಾಯದಂತೆ, 1950 ಹಾಗೂ 1960ರ ದಶಕದ ಚುನಾವಣಾ ಸುಧಾರಣೆಗಳ ರೂಪುರೇಷೆ ನೀಡಿದವರು. ‘‘ನಾನು ಹಿಂದೂ; ನನಗೆ ಮತನೀಡಿ’’ ಎಂಬ ನಿರ್ದಿಷ್ಟ ಹೇಳಿಕೆಗಳ ಬಗ್ಗೆ ಮಾತ್ರ ಗಮನ ಹರಿಸಿದ್ದಾರೆ. ಏಕೆಂದರೆ ಒಬ್ಬ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಆ ವ್ಯಕ್ತಿ ಇಡೀ ಕ್ಷೇತ್ರವನ್ನು ಪ್ರತಿನಿಧಿಸಬೇಕಾಗುತ್ತದೆ. ಜಾತಿ, ಧರ್ಮ ಅಥವಾ ಭಾಷಾ ಹಿನ್ನೆಲೆಯನ್ನು ಬದಿಗಿಟ್ಟು ಎಲ್ಲರನ್ನೂ ಆ ವ್ಯಕ್ತಿ ಪ್ರತಿನಿಧಿಸಬೇಕಾಗುತ್ತದೆ. ಆದರೆ ಇದನ್ನು ಮತದಾರರಿಗೆ ವಿಸ್ತರಿಸುವುದು ತಾರ್ಕಿಕ ಅಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. ದೀರ್ಘ ಕಾಲದಿಂದಲೂ ಧರ್ಮ, ಜಾತಿ, ಭಾಷೆಯಂಥ ವಿಚಾರದಲ್ಲಿ ಸಾಮಾಜಿಕ ಒಡಕು ಇರುವ ಭಾರತದಲ್ಲಿ, ನಿಮ್ಮ ಹಿತಾಸಕ್ತಿಯು ನಿಮ್ಮ ಗುಂಪಿನಿಂದ ವ್ಯಾಖ್ಯಾನಿಸಲ್ಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ಸಮೂಹದ ಜತೆಗೇ ಮತ ಚಲಾಯಿಸುವುದು ಅನಿವಾರ್ಯವಾಗುತ್ತದೆ.
ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (3)ನ್ನು ತೀರಾ ನೇರವಾಗಿ ವಿಶ್ಲೇಷಿಸಬೇಕು ಎಂಬ ಅಭಿಪ್ರಾಯಪಟ್ಟಿದ್ದಾರೆ. ಅಂದರೆ ‘‘ನಾನು ಹಿಂದೂ, ನನಗೆ ಮತ ಹಾಕಿ’’ ಅಥವಾ ‘‘ನನ್ನ ಎದುರಾಳಿ ಹಿಂದೂ. ಆತನಿಗೆ ಮತ ಹಾಕಬೇಡಿ’’ ಎಂಬಂಥ ಹೇಳಿಕೆಯನ್ನಷ್ಟೇ ಇದು ಒಳಗೊಳ್ಳಬೇಕು. ಬದಲಾಗಿ ವಿಸ್ತೃತ ಅರ್ಥದಲ್ಲಿ ನಮ್ಮ ಧರ್ಮ, ಜಾತಿ ಅಥವಾ ಭಾಷೆಯ ಆಧಾರದಲ್ಲಿ ಮತ ನೀಡಿ ಎಂಬಂಥ ಹೇಳಿಕೆಗಳಿಗೆ ಇದು ಅನ್ವಯವಾಗುವಂತಿಲ್ಲ ಎಂದು ಹೇಳಿದ್ದಾರೆ.
ತಾತ್ವಿಕವಾಗಿ ಸರಿಯೇ?
ಕಾನೂನುಬದ್ಧವಾಗಿ ಇಲ್ಲಿ ಬಹುಮತಕ್ಕೇ ಮನ್ನಣೆಯಾದರೂ, ಯಾವ ಅಭಿಪ್ರಾಯ ಸರಿ? ಬಹುಶಃ ಇದಕ್ಕೆ ನಿರ್ದಿಷ್ಟವಾದ ಉತ್ತರ ಸಿಗಲಾರದು. ಯಾವ ಸಂವಿಧಾನಾತ್ಮಕ ಮೌಲ್ಯ ಪ್ರಮುಖ ಎನ್ನುವ ನಾಗರಿಕರ ಮೌಲ್ಯಮಾಪನವನ್ನು ಇದು ಅವಲಂಬಿಸಿದೆ.
ಇಷ್ಟಾಗಿಯೂ ಇಲ್ಲಿ ಒಂದು ಯೋಚನೆ ಇದೆ: ಬಹುಮತದ ಅಭಿಪ್ರಾಯವನ್ನು ಪರಿಗಣಿಸಿ, ತಾತ್ವಿಕ ನಿರ್ಧಾರಕ್ಕೆ ಬರುವುದಾದರೆ, 1946ರಲ್ಲಿ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟದ ಪರವಾಗಿ ಪ್ರಚಾರ ಕೈಗೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ವಿಚಾರದಲ್ಲಿ ತಪ್ಪಿತಸ್ಥರಾಗುತ್ತಾರೆ. ನಾಲ್ಕು ಮಂದಿ ಪ್ರಾಜ್ಞ ನ್ಯಾಯಮೂರ್ತಿಗಳು ಬಹುಮತದಿಂದ ವ್ಯಕ್ತಪಡಿಸಿರುವ ಈ ಅಭಿಪ್ರಾಯದ ಬಗೆಗಿನ ವಿಶ್ಲೇಷಣೆಯನ್ನು ನಾವು ಬಹುಶಃ ಪ್ರಶ್ನಾರ್ಹ ದೃಷ್ಟಿಯಿಂದ ನೋಡುವ ನಿರ್ಧಾರಕ್ಕೇ ಬರಬೇಕಾಗುತ್ತದೆ.