ಗರಿಷ್ಠ ಮಕ್ಕಳ ರಾಜ್ಯದಲ್ಲಿ ಶಿಕ್ಷಕರು ಕನಿಷ್ಠ!

ಉತ್ತರ ಪ್ರದೇಶದ 20 ಕೋಟಿ ಜನರ ಪೈಕಿ ಪ್ರತೀ ನಾಲ್ಕು ಮಂದಿಗೆ ಒಬ್ಬರು ಐದರಿಂದ ಹದಿನಾಲ್ಕರ ವಯೋಮಿತಿಯವರು. ಭಾರತದಲ್ಲೇ ಗರಿಷ್ಠ ಮಕ್ಕಳಿರುವ ರಾಜ್ಯ ಎಂಬ ಹೆಗ್ಗಳಿಕೆ ಈ ರಾಜ್ಯದ್ದು. ಆದರೆ ರಾಜ್ಯದಲ್ಲಿ ವಿದ್ಯಾರ್ಥಿಗೆ ತಲಾ ಶಿಕ್ಷಕರು ಇರುವ ಪ್ರಮಾಣ ದೇಶದಲ್ಲೇ ಕನಿಷ್ಠ ಎಂಬ ಕುಖ್ಯಾತಿಯೂ ಈ ರಾಜ್ಯದ್ದು. ಇದರ ಜತೆಗೆ ಪ್ರಾಥಮಿಕ ಶಿಕ್ಷಣ ಪಡೆದವರು ಹಿರಿಯ ಪ್ರಾಥಮಿಕ ಶಾಲಾ ಹಂತಕ್ಕೆ ವರ್ಗಾವಣೆಯಾಗುವುದು ಹಾಗೂ ದೇಶದಲ್ಲೇ ಕನಿಷ್ಠ ಕಲಿಕಾ ಫಲಿತಾಂಶ ಕೂಡಾ ಉತ್ತರ ಪ್ರದೇಶದ ಚಿತ್ರಣವನ್ನು ಹಿಡಿದಿಟ್ಟಿದೆ.
ದೇಶದಲ್ಲೇ ಅತ್ಯಂತ ಜನನಿಬಿಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯುತ್ತದೆ. ರಾಜ್ಯದ ಶಿಕ್ಷಣದ ಸ್ಥಿತಿಗತಿಯ ಮೇಲೆ ನೋಟ ಹರಿಸಿದರೆ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ವಿಷಯ, ಕಾರ್ಯಸೂಚಿಯಲ್ಲಿ ಆದ್ಯತೆ ಪಡೆಯುವುದು ಅನಿವಾರ್ಯ ಎನ್ನುವುದು ಸ್ಪಷ್ಟವಾಗುತ್ತದೆ.
ಈ ಸರಣಿಯ ಮೊದಲ ಭಾಗದಲ್ಲಿ ಕಂಡುಬಂದಂತೆ, ಸಾಕ್ಷರತೆ ಪ್ರಮಾಣ ಹಾಗೂ ಕಲಿಕಾ ಫಲಿತಾಂಶ ಭಿಮಾರು ರಾಜ್ಯಗಳ (ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ) ಪೈಕಿ ಉತ್ತರಪ್ರದೇಶದಲ್ಲೇ ಕನಿಷ್ಠ. 2020ರ ವೇಳೆಗೆ, ಭಾರತ ವಿಶ್ವದಲ್ಲೇ ಗರಿಷ್ಠ ಕೆಲಸದ ವಯೋಮಿತಿಯ ಜನಸಂಖ್ಯೆಯನ್ನು ಹೊಂದಿದ ದೇಶವಾಗಲಿದೆ. ದೇಶದಲ್ಲಿ ಈ ವರ್ಗದ 869 ದಶಲಕ್ಷ ಮಂದಿ ಇರುತ್ತಾರೆ. ಐದರಿಂದ 14 ವರ್ಷ ವಯೋಮಿತಿಯ ಒಟ್ಟು ಜನಸಂಖ್ಯೆಯಲ್ಲಿ ಶೇ.43.6ರಷ್ಟು ಮಂದಿ ಈ ರಾಜ್ಯಗಳಲ್ಲಿದ್ದು, ಈ ನಾಲ್ಕು ರಾಜ್ಯಗಳ ಸ್ಥಿತಿಗತಿಯನ್ನು ವಿಶ್ಲೇಷಿಸಿದರೆ, ಯುವ ಜನಾಂಗಕ್ಕೆ ಸೂಕ್ತ ಶಿಕ್ಷಣ ಹಾಗೂ ತರಬೇತಿ ನೀಡಲು ಭಾರತ ಇನ್ನೂ ಸಜ್ಜಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಉತ್ತರ ಪ್ರದೇಶದ ಸಾಕ್ಷರತೆ ಪ್ರಮಾಣ ಶೇ.69.72 ಆಗಿದ್ದು, ಇದು ದೇಶದಲ್ಲೇ ಎಂಟನೆ ಕನಿಷ್ಠ ಸಾಕ್ಷರತೆ ಹೊಂದಿರುವ ರಾಜ್ಯ ಎಂದು 2011ರ ಜನಗಣತಿ ಅಂಕಿ ಅಂಶ ಹೇಳುತ್ತದೆ.
2001ರ ಜನಗಣತಿ ಅಂಕಿ ಅಂಶಗಳಿಗೆ ಹೋಲಿಸಿದರೆ ಉತ್ತರ ಪ್ರದೇಶದ ಸಾಕ್ಷರತೆ ಪ್ರಮಾಣ ಶೇ.13.45ರಷ್ಟು ಹೆಚ್ಚಿದೆ. ಆದರೆ ದೊಡ್ಡಪ್ರಮಾಣದಲ್ಲಿ ಪ್ರಾದೇಶಿಕ ಅಸಮಾನತೆ ಇದೆ. ಈಶಾನ್ಯ ಜಿಲ್ಲೆಯಾದ ಶ್ರವಸ್ತಿಯಲ್ಲಿ ಸಾಕ್ಷರತೆ ಪ್ರಮಾಣ ಶೇ.49 ಇದ್ದರೆ, ಉತ್ತಮ ಸಾಧನೆಯ ಗಾಝಿಯಾಬಾದ್ (ವಾಯವ್ಯ ಉತ್ತರಪ್ರದೇಶ) ಜಿಲ್ಲೆಯಲ್ಲಿ ಸಾಕ್ಷರತೆ ಶೇ.85ರಷ್ಟಿದೆ ಎಂದು ವರದಿಯಿಂದ ಸ್ಪಷ್ಟವಾಗುತ್ತದೆ.
ವಿದ್ಯಾರ್ಥಿ ಶಿಕ್ಷಕ ಅನುಪಾತ
ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿ- ಶಿಕ್ಷಕ ಅನುಪಾತ ಮಾತ್ರ ದೇಶದಲ್ಲೇ ಕನಿಷ್ಠ. ಪ್ರಾಥಮಿಕ ಶಾಲಾ ಹಂತದಲ್ಲಿ 39 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ ಎಂಬ ಅಂಶ, ಶಿಕ್ಷಣ ಅಂಕಿ ಅಂಶ 2015-16ರ ಏಕೀಕೃತ- ಜಿಲ್ಲಾ ಮಾಹಿತಿ ವ್ಯವಸ್ಥೆಯಿಂದ ತಿಳಿದುಬರುತ್ತದೆ. ವಿದ್ಯಾರ್ಥಿ-ಶಿಕ್ಷಕ ಅನುಪಾತದ ಅಖಿಲ ಭಾರತ ಸರಾಸರಿ 23:1.
ಉತ್ತರ ಪ್ರದೇಶದಲ್ಲಿ ಖಾಸಗಿ ಹಾಗೂ ಸರಕಾರಿ ಶಾಲೆಗಳು ಸೇರಿದಂತೆ, 25.3 ದಶಲಕ್ಷ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೆ 2015-16ರಲ್ಲಿ ದಾಖಲಾಗಿದ್ದಾರೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವೂ ಇರುವ ಶಾಲೆಗಳನ್ನೂ ಒಳಗೊಂಡಂತೆ ಇವರಿಗೆ ಬೋಧಿಸಲು ರಾಜ್ಯದಲ್ಲಿ 6,65,779 ಮಂದಿ ಶಿಕ್ಷಕರಿದ್ದಾರೆ ಎಂದು ಸರಕಾರದ ಶೈಕ್ಷಣಿಕ ಅಂಕಿ ಅಂಶಗಳು ಹೇಳುತ್ತವೆ.
ಶಿಕ್ಷಣ ಹಕ್ಕು ಕಾಯ್ದೆ ನಿಗದಿಪಡಿಸಿರುವಂತೆ ಪ್ರತೀ 30 ಮಕ್ಕಳಿಗೆ ಒಬ್ಬ ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಇರಬೇಕು. ಇದಕ್ಕೆ ಅನುಗುಣವಾಗಿ ರಾಜ್ಯದಲ್ಲಿ 8.4 ಲಕ್ಷ ಶಿಕ್ಷಕರು ಇರಬೇಕು. ಆದರೆ ಉತ್ತರ ಪ್ರದೇಶದಲ್ಲಿ ಈ ಪ್ರಮಾಣಕ್ಕಿಂತ ಶೇ.21ರಷ್ಟು ಕಡಿಮೆ ಶಿಕ್ಷಕರು ಇದ್ದಾರೆ. ಅಂದರೆ 1.76 ಲಕ್ಷ ಶಿಕ್ಷಕರ ಕೊರತೆ ಇದೆ ಎನ್ನುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ.
ಉತ್ತರ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಸುಮಾರು ಶೇ.23ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಲೋಕಸಭೆಯಲ್ಲಿ ನೀಡಿದ ಉತ್ತರದಿಂದ ತಿಳಿದುಬಂದಿದೆ.
ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಶಾಲೆಗೆ ಶಿಕ್ಷಕರು ಗೈರುಹಾಜರಾಗುತ್ತಾರೆ. ಶೇ.31ರಷ್ಟು ಶಿಕ್ಷಕರು ಇಲ್ಲಿ ಶಾಲೆಗಳಿಗೆ ನಿಯತವಾಗಿ ಹಾಜರಾಗುತ್ತಿಲ್ಲ ಎಂದು 19 ರಾಜ್ಯಗಳಲ್ಲಿ 2010ರಲ್ಲಿ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ.
ವೆಚ್ಚ ಗರಿಷ್ಠ-ಫಲಿತಾಂಶ ಕನಿಷ್ಠ
ಉತ್ತರ ಪ್ರದೇಶ ಸರಕಾರ 2014-15ರಲ್ಲಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಅಂದರೆ ಒಂದರಿಂದ ಎಂಟನೆ ತರಗತಿಯವರೆಗೆ ಕಲಿಯುತ್ತಿರುವ ಪ್ರತೀ ವಿದ್ಯಾರ್ಥಿಗೆ ತಲಾ 13,102 ರೂಪಾಯಿಗಳನ್ನು ವೆಚ್ಚ ಮಾಡಿದೆ ಎಂದು ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ ವರದಿ ಹೇಳಿದೆ. ಇದು ರಾಷ್ಟ್ರೀಯ ಸರಾಸರಿಯಾದ 11,252 ರೂಪಾಯಿಗಿಂತ ಅಧಿಕ.
ಅಂತೆಯೇ 2011ರಿಂದ 2015ರ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸರಕಾರದ ವೆಚ್ಚ ಶೇ.47ರಷ್ಟು ಏರಿಕೆಯಾಗಿದೆ ಎನ್ನುವುದು ರಾಜ್ಯ ಸರಕಾರದ 2014-15ನೆ ಸಾಲಿನ ಆರ್ಥಿಕ ಸಮೀಕ್ಷೆಯಿಂದ ತಿಳಿದುಬರುತ್ತದೆ. ಆದರೆ ಕಲಿಕಾ ಮಟ್ಟ ಮಾತ್ರ ಇಡೀ ದೇಶದಲ್ಲೇ ಉತ್ತರ ಪ್ರದೇಶದಲ್ಲಿ ಕನಿಷ್ಠ.
ಟ್ಟಾರೆಯಾಗಿ, ಒಂದನೆ ತರಗತಿಯ ಪಠ್ಯವನ್ನು ಸರಾಗವಾಗಿ ಓದಬಲ್ಲ ಮೂರನೆ ತರಗತಿ ವಿದ್ಯಾರ್ಥಿಗಳ ಪ್ರಮಾಣ 2006ರಲ್ಲಿ ಶೇ.31 ಇದ್ದುದು 2014ರಲ್ಲಿ ಶೇ.35ಕ್ಕೆ ಹೆಚ್ಚಿದೆ ಎಂದು ಎಎಸ್‌ಇಆರ್ ವರದಿ ಹೇಳುತ್ತದೆ. ಆದರೆ ಈ ಹೆಚ್ಚಳ ಕಂಡುಬಂದಿರುವುದು ಕೇವಲ ಖಾಸಗಿ ಶಾಲೆಗಳಲ್ಲಿ. ಈ ವರದಿಯ ಅನ್ವಯ, 2014ರಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಶೇ.55ರಷ್ಟು ಮೂರನೆ ತರಗತಿ ವಿದ್ಯಾರ್ಥಿಗಳು, ಒಂದನೆ ತರಗತಿ ಪಠ್ಯವನ್ನು ಸರಾಗವಾಗಿ ಓದಬಲ್ಲರು. 2006ರಲ್ಲಿ ಈ ಪ್ರಮಾಣ ಶೇ.50ರಷ್ಟಿತ್ತು. ಸರಕಾರಿ ಶಾಲೆಗಳಲ್ಲಿ 2006ರಲ್ಲಿ ಶೇ.25ರಷ್ಟಿದ್ದ ಈ ಪ್ರಮಾಣ 2010ರಲ್ಲಿ ಶೇ.13ಕ್ಕೆ ಇಳಿದಿದೆ.
ಲೆಕ್ಕ ಕೌಶಲ ಮಟ್ಟ ಖಾಸಗಿ ಹಾಗೂ ಸರಕಾರಿ ಶಾಲೆಗಳೆರಡರಲ್ಲೂ ಕುಸಿದಿದೆ. ಭಾಗಿಸುವ ಲೆಕ್ಕವನ್ನು ಸರಿಯಾಗಿ ಮಾಡಲು ಬರುವ ಐದನೆ ತರಗತಿ ವಿದ್ಯಾರ್ಥಿಗಳ ಪ್ರಮಾಣ 2007ರಲ್ಲಿ ಶೇ.30ರಷ್ಟು ಇದ್ದುದು 2014ರ ವೇಳೆಗೆ ಶೇ.26ಕ್ಕೆ ಕುಸಿದಿದೆ ಎಂದು ಎಎಸ್‌ಇಆರ್ ಅಂಕಿ ಅಂಶ ಹೇಳುತ್ತದೆ.
ಬಾಲಕಾರ್ಮಿಕರು
ಉತ್ತರ ಪ್ರದೇಶದಲ್ಲಿ ಶಾಲೆಗೆ ನಿಯತವಾಗಿ ಹಾಜರಾಗುವ ಮಕ್ಕಳ ಸಂಖ್ಯೆ ತೀರಾ ಕಡಿಮೆ. 2014ರಲ್ಲಿ ಎಎಸ್‌ಇಆರ್ ತಂಡ ಶಾಲೆಗಳಿಗೆ ಭೇಟಿ ನೀಡಿದಾಗ ಶೇ.55ರಷ್ಟು ಮಾತ್ರ ಹಾಜರಾತಿ ಕಂಡುಬಂತು ಎನ್ನುವುದು ಈ ಅಂಕಿ ಅಂಶದಿಂದ ತಿಳಿದುಬರುತ್ತದೆ.
ಬಹಳಷ್ಟು ಮಕ್ಕಳು ಶಾಲೆಗಳಿಗೆ ಬರುವುದಿಲ್ಲ. ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗುವ ವಿದ್ಯಾರ್ಥಿಗಳ ಪ್ರಮಾಣ ಕೂಡಾ ಉತ್ತರಪ್ರದೇಶದಲ್ಲಿ ಕನಿಷ್ಠವಾಗಿದ್ದು, ಶೇ.79.1ರಷ್ಟು ವಿದ್ಯಾರ್ಥಿಗಳು ಮಾತ್ರ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ ಎನ್ನುವ ಅಂಶ ಯು-ಡಿಐಎಸ್‌ಇ ಫ್ಲಾಷ್ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ದುಡಿಯುವ ಮಕ್ಕಳ ಸಂಖ್ಯೆ ಉತ್ತರ ಪ್ರದೇಶದಲ್ಲಿ ಅಧಿಕ ಎನ್ನುವುದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಸಮಿತಿಯ ಅಂಕಿ ಅಂಶ ಹೇಳುತ್ತದೆ. 2011ರ ಜನಗಣತಿ ಅಂಕಿ ಅಂಶದ ಆಧಾರದಲ್ಲಿ ಹೇಳುವುದಾದದರೆ ಸುಮಾರು 6.24 ಮಕ್ಕಳು ದುಡಿಯುತ್ತಿದ್ದಾರೆ. ಅಂದರೆ ರಾಜ್ಯದಲ್ಲಿ ಐದರಿಂದ 14 ವರ್ಷ ವಯೋಮಿತಿಯ ಶೇ.8.4ರಷ್ಟು ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆ ನಿಗದಿಪಡಿಸಿರುವಂತೆ ಪ್ರತೀ 30 ಮಕ್ಕಳಿಗೆ ಒಬ್ಬ ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಇರಬೇಕು. ಇದಕ್ಕೆ ಅನುಗುಣವಾಗಿ ರಾಜ್ಯದಲ್ಲಿ 8.4 ಲಕ್ಷ ಶಿಕ್ಷಕರು ಇರಬೇಕು. ಆದರೆ ಉತ್ತರ ಪ್ರದೇಶದಲ್ಲಿ ಈ ಪ್ರಮಾಣಕ್ಕಿಂತ ಶೇ.21ರಷ್ಟು ಕಡಿಮೆ ಶಿಕ್ಷಕರು ಇದ್ದಾರೆ. ಅಂದರೆ 1.76 ಲಕ್ಷ ಶಿಕ್ಷಕರ ಕೊರತೆ ಇದೆ ಎನ್ನುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ.