ಡಯಾಬಿಟಿಸ್ ಮತ್ತು ಬೊಜ್ಜುತನದಿಂದ ಮುಕ್ತಿ ಪಡೆಯಲು ಸರಳ ಉಪಾಯ

ನಾನು ಯಾವುದೇ ವೈದ್ಯಕೀಯ ಅಥವಾ ಆಹಾರ ಪಧ್ಧತಿಯ ತರಬೇತಿ ಪಡೆದವನಲ್ಲ. ಈ ಲೇಖನದಲ್ಲಿ ಬರೆದ ಯಾವುದೇ ವಿಷಯಗಳು ಸಂಪೂರ್ಣವೂ ಅಲ್ಲ ಹಾಗೂ ಪರಿಪೂರ್ಣವೂ ಅಲ್ಲ. ಯಾರಿಗೂ ವೈದ್ಯಕೀಯ ಅಥವಾ ಆಹಾರ ಪದ್ಧತಿಯ ಸಲಹೆ ನೀಡುವುದು ಈ ಲೇಖನದ ಉದ್ಧೇಶ ಆಗಿರುವುದಿಲ್ಲ. ಆಹಾರ ಪದ್ಧತಿ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳುವ ಮೊದಲು, ತರಬೇತಿ ಪಡೆದ ತಜ್ಙ ವೈದ್ಯರ ಸಲಹೆ ಪಡೆಯುವುದು ಅವಶ್ಯವಾಗಿರುತ್ತದೆ. ಡಯಾಬಿಟಿಸ್ ಮತ್ತು ಬೊಜ್ಜುತನದಿಂದ, ನಾನು ಹೇಗೆ ಮುಕ್ತಿ ಪಡೆದೆ ಎಂಬುದರ ಬಗ್ಗೆ, ನನ್ನ ವೈಯಕ್ತಿಕ ಅನುಭವವನ್ನು ಮಾತ್ರ ಇಲ್ಲಿ ನೀಡಲಾಗಿದೆ - ಲೇಖಕ
ಭಾಗ-1
FBGHbA1cವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ, ನಮ್ಮ ದೇಶದಲ್ಲಿ ಸರಿಸುಮಾರು 100 ಮಿಲಿಯ ಹಾಗೂ ವಿಶ್ವದಾದ್ಯಂತ 422 ಮಿಲಿಯ ಜನರು ಡಯಾಬಿಟಿಸ್ ರೋಗದಿಂದ ಬಳಲುತ್ತಿದ್ದಾರೆ. ಫಾಸ್ಟಿಂಗ್ ಬ್ಲಡ್ ಗ್ಲುಕೋಸ್ : 100 ಅಥವಾ ಅದಕ್ಕಿಂತ ಹೆಚ್ಚು ಹಾಗೂ ಮೂರು ತಿಂಗಳ ಸರಾಸರಿ ಬ್ಲಡ್ ಗ್ಲುಕೋಸ್ : 5.7 ರಿಂದ 6.4% (HPLC-D10) ವರೆಗೆ ಇದ್ದರೆ ಡಯಾಬಿಟೀಸ್ ಬಾರ್ಡರ್‌ನಲ್ಲಿ ಇದೆ ಆಥವಾ ಪ್ರಿ-ಡಯಾಬಿಟಿಸ್ (Pre-diabetesFBGHbA1c: ) ಎನ್ನುತ್ತಾರೆ. ಅಂದರೆ, ಮುಂದಿನ ಕೆಲವೇ ವರ್ಷಗಳಲ್ಲಿ ಬ್ಲಡ್ ಗ್ಲುಕೋಸ್ ಮೆಲ್ಲಮೆಲ್ಲನೆ ಉತ್ತರ ದಿಕ್ಕಿಗೆ ಸಾಗುತ್ತಾ, ಫಾಸ್ಟಿಂಗ್ ಬ್ಲಡ್ ಗ್ಲುಕೋಸ್ : 110 ಅಥವಾ ಮೂರು ತಿಂಗಳ ಸರಾಸರಿ ಬ್ಲಡ್ ಗ್ಲುಕೋಸ್ 6.5% (HPLC-D 10) ತಲುಪಿದಾಗ ಡಯಾಬಿಟಿಸ್ ರೋಗಿ ಎನ್ನುತ್ತಾರೆ. ಡಯಾಬಿಟಿಸ್ ರೋಗಿಗಳು ಅವರ ಬ್ಲಡ್ ಗ್ಲುಕೋಸ್ ನಿಯಂತ್ರಣದಲ್ಲಿ ಇಡಲು ವಿಫಲರಾದರೆ, ಇತರ ಹಲವಾರು ರೋಗಗಳು ಉಲ್ಬಣಿಸಿ ಅವರ ಜೀವನ ಯಾತನಾಮಯವಾಗುತ್ತದೆ. ಔಷಧಿ ಮಾಡಿದರೂ ದಿನ ಕಳೆದಂತೆ ಡಯಾಬಿಟಿಸ್ ವೃದ್ಧಿ ಹೊಂದುತ್ತದೆ ಮಾತ್ರವಲ್ಲದೆ ಔಷಧಿಯ ಪ್ರಮಾಣ ಹಾಗೂ ಆರ್ಥಿಕ ವೆಚ್ಚವೂ ಏರುತ್ತಾ ಸಾಗುತ್ತದೆ.
ಡಯಾಬಿಟಿಸ್: ಏನದು?
ವಿವಿಧ ಮೂಲಗಳಿಂದ ನಾನು ತಿಳಿದು ಕೊಂಡಿರುವ ಪ್ರಕಾರ, ಎರಡು ನಮೂನೆಯ ಡಯಾಬಿಟಿಸ್ ಇದೆ. ನಮೂನೆ 1 ಹಾಗೂ ನಮೂನೆ 2. ನಮೂನೆ 2 ಡಯಾಬಿಟಿಸ್‌ಅನ್ನು ಆಹಾರ ಪದ್ಧತಿ ಮುಖಾಂತರ ಸೋಲಿಸಲು (reverse) ಅಥವಾ ಔಷಧ ರಹಿತವಾಗಿ ನಿಯಂತ್ರಿಸಲು ಸಾಧ್ಯವಿದೆ. ಆದರೆ, ನಮೂನೆ 1 ಡಯಾಬಿಟಿಸ್‌ಅನ್ನು ಕನಿಷ್ಠ ಔಷಧಿಗಳಿಂದ ನಿಯಂತ್ರಿಸ ಬಹುದಾಗಿದೆ. ಇದು ಹೇಗೆ ಸಾಧ್ಯ ಎಂದು ತಿಳಿಯಬೇಕಾದರೆ, ಡಯಾಬಿಟಿಸ್ ಉದ್ಭವಿಸಲು ಮೂಲ ಕಾರಣಗಳೇನು ಎಂದು ಪ್ರಥಮವಾಗಿ ತಿಳಿದು ಕೊಳ್ಳಬೇಕು. ಎಲ್ಲೋ ಕಳೆದುಕೊಂಡ ಸೂಜಿಯನ್ನು ಎಲ್ಲೋ ಬೆಳಕಿದ್ದ ಕಡೆ ಹುಡುಕಿದರೆ ಸಿಗದು, ಸೂಜಿ ಕಳಕೊಂಡ ಸ್ಥಳದಲ್ಲೇ ಬೆಳಕು ಹಾಕಿ ಹುಡುಕಬೇಕು. ಯಾರ ಮೇದೋಜಿರಕ (pancreas) ಅತೀ ಕಡಿಮೆ ಅಥವಾ ಶೂನ್ಯ ಇನ್ಸುಲಿನ್ ಉತ್ಪತ್ತಿ ಮಾಡುವುದೋ, ಅವರ ಡಯಾಬಿಟಿಸ್ ನಮೂನೆ 1 ಎನ್ನುತ್ತಾರೆ. ಯಾರ ಮೇದೋಜೀರಕ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಉತ್ಪತ್ತಿ ಮಾಡುವುದೋ, ಅವರ ಡಯಾಬಿಟಿಸ್ ನಮೂನೆ 2. ಅಗತ್ಯಕ್ಕಿಂತ ಅಧಿಕ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗುವ ಮನುಷ್ಯನ ದೇಹದಲ್ಲಿ, ಕೊಬ್ಬು ಸಂಗ್ರಹವಾಗಿ ಬೊಜ್ಜು ಕಾಣಿಸಿ ಕೊಳ್ಳುತ್ತದೆ. ಯಾಕೆಂದರೆ, ಇನ್ಸುಲಿನ್ ರಕ್ತದಲ್ಲಿರುವ ಗ್ಲುಕೋಸ್‌ಅನ್ನು ಗ್ಲುಕೋಸ್ ಸ್ವೀಕರಿಸುವ ಜೀವಕಣಗಳ (receptor cells) ತನಕ ತಲುಪಿಸುವುದು ಮಾತ್ರವಲ್ಲದೆ, ಅದನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗಲು ಇನ್ಸುಲಿನ್ ಪ್ರತಿರೋಧ (insulin resistance) ಕಾರಣವಾಗಿದೆ. ಇನ್ಸುಲಿನ್ ಪ್ರತಿರೋಧದ ತೀವ್ರತೆಗೆ ಅನುಗುಣವಾಗಿ, ಕೆಲವು ಗ್ಲುಕೋಸ್ ಶಕ್ತಿ (energy) ಆಗಿ ಪರಿವರ್ತನೆ ಆಗುತ್ತದೆ, ಅಂದರೆ ವ್ಯಯವಾಗುತ್ತದೆ ಮತ್ತು ಕೆಲವು ಗ್ಲುಕೋಸ್ ಕೊಬ್ಬು ಆಗಿ ಸಂಗ್ರಹವಾಗುತ್ತದೆ. ಸಂಗ್ರಹವಾದ ಈ ಕೊಬ್ಬು, ಬ್ಯಾಂಕ್‌ನಲ್ಲಿ ಇಟ್ಟ ಫಿಕ್ಸೆಡ್ ಡಿಪಾಸಿಟ್ ತರಹ ಭದ್ರವಾಗಿರುತ್ತದೆ ವಿನಹ, ದೇಹಕ್ಕೆ ಶಕ್ತಿಯಾಗಿ ಸುಲಭದಲ್ಲಿ ಲಭಿಸುವುದಿಲ್ಲ. ಆದುದರಿಂದ, ಡಯಾಬಿಟಿಸ್ ರೋಗಿಯ ಹಸಿವೆ ಹೆಚ್ಚುತ್ತಿರುತ್ತದೆ ಮಾತ್ರವಲ್ಲದೆ, ಅದೇ ಪ್ರಮಾಣದಲ್ಲಿ ಸಮಸ್ಯೆಗಳೂ ಬೆಳೆಯುತ್ತಿರುತ್ತವೆ.
ಡಯಾಬಿಟಿಸ್‌ನ ಮೂಲ ಕಾರಣ:
ದೇಹದಲ್ಲಿ ಅಧಿಕ ಇನ್ಸುಲಿನ್ ಉತ್ಪತ್ತಿಯಾಗಲು ಮೂಲ ಕಾರಣ ಪಿಷ್ಟ (carbohydrates) ಆಗಿದೆ. ಯಾವಾಗ ನಾವು ಅತೀ ಕಡಿಮೆ ಅಥವಾ ಶೂನ್ಯ ಪಿಷ್ಟ ಸೇವಿಸುತ್ತೇವೆ ಆವಾಗ ರಕ್ತದಲ್ಲಿರುವ ಗ್ಲುಕೋಸ್ ಕಡಿಮೆಯಾಗುವುದು ಮಾತ್ರವಲ್ಲದೆ, ಇನ್ಸುಲಿನ್ ಪ್ರಮಾಣವೂ ಕಡಿಮೆ ಆಗುತ್ತದೆ ಮತ್ತು ದೇಹದಲ್ಲಿ ಕೊಬ್ಬು ಸಂಗ್ರಹವಾಗುವ ಬದಲು, ಸಂಗ್ರಹವಿದ್ದ ಕೊಬ್ಬು ಶಕ್ತಿಯಾಗಿ ಪರಿವರ್ತನೆ ಆಗುತ್ತದೆ, ಅಂದರೆ ಕರಗಿ ಹೋಗುತ್ತದೆ. ಪರಿಣಾಮವಾಗಿ ಶ್ರಮವಿಲ್ಲದೆ ತೂಕ ಇಳಿಯುತ್ತದೆ. ಗ್ಲುಕೋಸ್ ಆಗಿ ಪರಿವರ್ತನೆಯಾಗುವ ಪಿಷ್ಟ ನಮ್ಮ ದೇಹಕ್ಕೆ ಅವಶ್ಯ ಆಹಾರ (essential nutrient) ಅಲ್ಲ. ನಮ್ಮ ದೇಹಕ್ಕೆ, ತನ್ನ ನಿರ್ವಹಣೆಗಾಗಿ (function) ಅತೀ ಕಡಿಮೆ ಪ್ರಮಾಣದ ಗ್ಲುಕೋಸ್ ಅಗತ್ಯವಿದೆ. ನಾವು ಏನೂ ಪಿಷ್ಟ ಸೇವಿಸದಿದ್ದರೆ, ನಮ್ಮ ದೇಹಕ್ಕೆ ಅತ್ಯವಶ್ಯವಿರುವ ಗ್ಲುಕೋಸ್‌ಅನ್ನು, ಗ್ಲುಕೊನಿಯೊಜೆನೆಸಿಸ್ (gluconeogenesis) ಎಂಬ ಕ್ರಿಯೆ ಮೂಲಕ ದೇಹವು ಸ್ವತಃ ಉತ್ಪಾದಿಸುತ್ತದೆ. ವೈಜ್ಞಾನಿಕ ಸತ್ಯ ಹೀಗೆ ಇರುವುದರಿಂದ, ಡಯಾಬಿಟಿಸ್ ಮತ್ತು ಬೊಜ್ಜುತನದ ಮೂಲ ಕಾರಣ ಪಿಷ್ಟ ಎನ್ನುವುದು ಸ್ಪಷ್ಟ. ಎಷ್ಟು ಹೆಚ್ಚು ಪಿಷ್ಟ ನಾವು ಸೇವಿಸುತ್ತೇವೋ ಅಷ್ಟು ಹೆಚ್ಚು ಇನ್ಸುಲಿನ್ ಪ್ರತಿರೋಧ. ಇದರ ಅರ್ಥ, ಡಯಾಬಿಟಿಸ್ ರೋಗಿಯ ದೇಹವು ಪಿಷ್ಟ ಅಸಹಿಷ್ಣು (intolerant) ಎಂದಾಯಿತು. ದೇಹಕ್ಕೆ ಸಹಿಸದ್ದನ್ನು ತಿನ್ನುವುದರಿಂದ ಏನು ಪ್ರಯೋಜನ? ಅಷ್ಟೇ ಅಲ್ಲದೆ, ದೇಹದಲ್ಲಿ ಅಧಿಕ ಪ್ರಮಾಣದಲ್ಲಿರುವ ಇನ್ಸುಲಿನ್ ಇತರ ಹಲವಾರು ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಗ್ಲುಕೋಸ್ ಆಗಿ ಪರಿವರ್ತನೆಗೊಳ್ಳುವ ಪಿಷ್ಟ, ಕೋಕಾ-ಕೋಲಾ, ಮಿರಿಂಡಾ, ಸ್ಪ್ರೈಟ್ ಇತ್ಯಾದಿ ಪಾನೀಯಗಳಲ್ಲಿ, ಅಕ್ಕಿ, ಗೋಧಿ, ರಾಗಿ ಮತ್ತು ಜೋಳ ಇಂತಹ ಧಾನ್ಯಗಳಲ್ಲಿ, ತೊಗರಿ, ಉದ್ದು, ಹೆಸರು, ಆಲು, ಕಬ್ಬು, ಬೆಲ್ಲ, ಸಕ್ಕರೆ, ಜೇನು ಮತ್ತು ಹಣ್ಣುಗಳು ಇತ್ಯಾದಿ ಆಹಾರ ಪದಾರ್ಥಗಳಲ್ಲಿ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಹಾಗಾದರೆ ನಾವು ತಿನ್ನುವುದೇನು? ಹಸಿವಿನಿಂದ ನರಳುವುದೇ? ಪಿಷ್ಟ ಸೇವಿಸದೆ ಇರುವುದರಿಂದ ಯಾರೂ ಹಸಿವಿನಿಂದ ನರಳ ಬೇಕಿಲ್ಲ. ಪಿಷ್ಟದ ಬದಲಿಗೆ ಏನು ಸೇವಿಸುವುದು ಎಂಬುದನ್ನು ತಿಳಿಯೋಣ.
ಸಿದ್ಧಾಂತ ಹೀಗೆ ಇದೆ:
(fuel) ನಮ್ಮ ಕಾರುಗಳು ಪೆಟ್ರೋಲ್‌ನಿಂದ ಚಲಿಸಿದಂತೆ ಗ್ಯಾಸ್‌ನಿಂದಲೂ ಚಲಿಸ ಬಲ್ಲವು. ಆದರೆ, ಗ್ಯಾಸ್‌ನಲ್ಲಿ ಚಲಿಸುವಂತೆ ಮಾಡಲು ಕಾರಿನಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಪೆಟ್ರೋಲ್ ಉರಿಸಿ ಕಾರು ಓಡಿಸುವುದಕ್ಕಿಂತ ಗ್ಯಾಸ್ ಉರಿಸಿ ಕಾರು ಓಡಿಸುವುದು ಪ್ರದೂಷಣೆಯ ನಿಯಂತ್ರಣಕ್ಕೆ ಒಳ್ಳೆಯದು ಅಲ್ಲವೇ? ಕಾರಿನ ತರಹ ಮನುಷ್ಯನ ದೇಹವೂ ಸಹ ಎರಡು ಬಗೆಯ ಇಂಧನ ಬಳಸ ಬಲ್ಲುದು. (ಕಾರಿನಲ್ಲಿ ತಾಂತ್ರಿಕ ಬದಲಾವಣೆಯ ಆವಶ್ಯಕತೆ ಇರುವಂತೆ ನಮ್ಮ ದೇಹದಲ್ಲಿ ಯಾವುದೇ ಬದಲಾವಣೆ ಮಾಡಬೇಕಾದ ಆವಶ್ಯಕತೆ ಇರುವುದಿಲ್ಲ. ಮನುಷ್ಯನನ್ನು ಸೃಷ್ಟಿಸುವಾಗಲೇ ದೇವರು ಹಾಗೆ ಸೃಷ್ಟಿಸಿದ್ದಾನೆ) ಒಂದು ಇಂಧನ ಗ್ಲುಕೋಸ್ ಇನ್ನೊಂದು ಕಿಟೋನ್ (ketone). ನಾವು ಸೇವಿಸಿದ ಪಿಷ್ಟ ಹೇಗೆ ಗ್ಲುಕೋಸ್ ಆಗಿ ಪರಿವರ್ತಿಸಲ್ಪಟ್ಟು ದೇಹಕ್ಕೆ ಶಕ್ತಿ ನೀಡುವುದೋ ಹಾಗೆಯೇ ಕೊಬ್ಬು ಕಿಟೋನ್ ಆಗಿ ಪರಿವರ್ತಿಸಲ್ಪಟ್ಟು ದೇಹಕ್ಕೆ ಶಕ್ತಿ ನೀಡುತ್ತದೆ. ಕಿಟೋನ್ ಗ್ಲುಕೋಸ್‌ಗಿಂತಲೂ ಉತ್ತಮ ಇಂಧನ ಎನ್ನಬಹುದು. ನಿಜ ಹೇಳುವುದಾದರೆ, ಗ್ಲುಕೋಸ್‌ಅನ್ನು ಪೆಟ್ರೋಲ್‌ನೊಂದಿಗೆ ಹೋಲಿಸುವುದಕ್ಕಿಂತ, ಗತಕಾಲದಲ್ಲಿ ರೈಲುಗಾಡಿ ಓಡಿಸಲು ಬಳಸಲ್ಪಟ್ಟ ಕಲ್ಲಿದ್ದಲಿಗೆ ಹೋಲಿಸ ಬಹುದೇನೋ! ಹೀಗೆ ಹೇಳಲು ಒಂದು ಕಾರಣವಿದೆ. ನಾನು ಕಿಟೋಸಿಸ್‌ನಲ್ಲಿ (on ketosis) ಇರುವಾಗ, (ಅಂದರೆ ನನ್ನ ದೇಹವು ಶಕ್ತಿಯ ಉತ್ಪಾದನೆಗಾಗಿ ಗ್ಲುಕೋಸ್‌ನ ಬದಲು ಕಿಟೋನ್ ಬಳಸುತ್ತಿದ್ದಾಗ) ನಾನು ಅನುಭವಿಸಿದ ಆ ಉಲ್ಲಾಸಮಯ ಆರೋಗ್ಯ, ಚುರುಕುತನ, ಮಾನಸಿಕ ಸ್ಪಷ್ಟತೆ ಹಾಗೂ ಅನಂತ ಶಕ್ತಿ (alertness, mental clarity and endless energy) ಇತ್ಯಾದಿಯನ್ನು ಇಲ್ಲಿ ವರ್ಣಿಸುವುದು ಅಸಾಧ್ಯ!