ನೋಟು ರದ್ದತಿ ಸ್ವೇಚ್ಛಾಚಾರದ ನಡೆ

ನೋಟುರದ್ದತಿ ಬಗೆಗಿನ ಸತ್ಯ ಸದಾಕಾಲ ಉಳಿದುಕೊಳ್ಳುತ್ತದೆ; ಆದರೆ ಸರಕಾರ ದೀರ್ಘಕಾಲದ ವರೆಗೆ ದೊಡ್ಡ ಸಂಖ್ಯೆಯ ಜನರ ನಂಬಿಕೆ ಉಳಿಸಿಕೊಳ್ಳಲು ಶಕ್ತವಾಗುತ್ತದೆ-ಇದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರ ಸ್ಪಷ್ಟನುಡಿ.
ನೋಟು ರದ್ದತಿಯಿಂದ ಪೂರ್ವಸಿದ್ಧತೆ ಇಲ್ಲದ ನಿರ್ಧಾರ ಕೈಗೊಂಡು ಎರಡು ತಿಂಗಳು ಕಳೆದರೂ, ಸಮರ್ಪಕವಾದ ಆರ್ಥಿಕ ತಾರ್ಕಿಕತೆಯನ್ನು ಮುಂದಿಡುವುದು ಸಾಧ್ಯವಾಗಿಲ್ಲ ಎಂದು ಸೇನ್ ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ, ಈ ನೋಟುರದ್ದತಿ ನಿರ್ಧಾರ ಆರ್ಥಿಕತೆಗೆ ಬಲವಾದ ಹೊಡೆತ ನೀಡುವುದು ಖಚಿತ. ತಮ್ಮ ಚಳಿಗಾಲದ ವಸತಿ ಶಾಂತಿನಿಕೇತನದಲ್ಲಿ ಸುವೋಜಿತ್ ಬಾಗ್ಚಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ನೋಟು ರದ್ದತಿಯ ಉದ್ದೇಶ ಹಾಗೂ ಪರಿಣಾಮದ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.
►ಪ್ರಶ್ನೆ: ನೋಟು ರದ್ದತಿಯ ಪ್ರಾಥಮಿಕ ಪರಿಣಾಮವನ್ನು ನಾವು ನೋಡಿದ್ದೇವೆ. ಬ್ಯಾಂಕ್‌ಗಳ ಮುಂದೆ ಉದ್ದುದ್ದ ಸಾಲುಗಳು ಹಾಗೂ ನಗದು ಕೊರತೆ. ಇದೀಗ ನಾವು ಎರಡನೆ ಹಂತದ ಪರಿಣಾಮ ಕಾಣುತ್ತಿದ್ದೇವೆ. ಅದು ಅನೌಪಚಾರಿಕ ವಲಯದ ಮೇಲೆ ಆಗಿರುವುದು. ಪಶ್ಚಿಮ ಬಂಗಾಳದಲ್ಲಿ ಆಲೂ ಬಿತ್ತನೆಗೆ ತೊಂದರೆಯಾಗಿದೆ. ಇತರ ವಹಿವಾಟುಗಳು ನೆಲಕಚ್ಚುತ್ತಿವೆ. ಇವೆಲ್ಲದರ ಪರಿಣಾಮ ಏನು?
♦ಉತ್ತರ: ಎರಡನೆ ಹಂತದ ಪರಿಣಾಮವೆಂದು ನಾವು ಕರೆಯುವ ಪರಿಣಾಮಗಳು ಅಚ್ಚರಿಯಲ್ಲ. ವ್ಯಾಪಾರ ಮತ್ತು ವಹಿವಾಟು ಸುಲಲಿತವಾಗಿ ನಡೆಯುವಲ್ಲಿ ಹಣದ ಲಭ್ಯತೆ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ಮುಖ್ಯವಾಗಿ ಸಣ್ಣ ವ್ಯಾಪಾರ, ಕೃಷಿ ಕ್ಷೇತ್ರಗಳಲ್ಲಿ ಮುಖ್ಯವಾಗಿ ನಗದು ಬಳಕೆಯಾಗುತ್ತದೆ. ದೀರ್ಘಾವಧಿಯಲ್ಲಿ ನಗದುರಹಿತ ವಹಿವಾಟನ್ನು ಜಾರಿಗೆ ತರಬಹುದು. ಆದರೆ ಇದಕ್ಕೆ ಸಂಘಟನೆ ಮತ್ತು ತರಬೇತಿ ಅಗತ್ಯವಾಗುತ್ತದೆ. ಅದಕ್ಕೆ ಸಮಯ ಹಿಡಿಯುತ್ತದೆ. ಕಪೋಲ ಕಲ್ಪಿತ ನಿರ್ಧಾರದೊಂದಿಗೆ ಕಪ್ಪುಹಣದ ಜತೆ ಯಾವ ಸಂಬಂಧವೂ ಇಲ್ಲದ ಮಂದಿಗೆ ಇಂಥ ಸಂಕಷ್ಟ ತಂದೊಡ್ಡುವುದು ಅಪಾಯಕಾರಿ.
ನಗದನ್ನು ನಾವು ಪ್ರಾಮಿಸರಿ ನೋಟ್‌ಎನ್ನುತ್ತೇವೆ. ಆದರೆ ಇತ್ತೀಚಿನ ಬೆಳವಣಿಗೆಗಳಿಂದಾಗಿ ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯನ್ನು ಅವಲಂಬಿಸುವುದೇ ಸೂಕ್ತ ಎಂಬ ಮನೋಭಾವ ದೃಢಪಡುವಂತಾಗಿದೆ. ಕೈಗಾರಿಕಾ ಯೂರೋಪಿನ ಹಣಕಾಸು ಬೆನ್ನೆಲುಬು ನಿರ್ಮಿಸುವಲ್ಲಿ ಪ್ರಾಮಿಸರಿ ನೋಟುಗಳು ಮಹತ್ವದ ಪಾತ್ರ ವಹಿಸಿವೆ. 18 ಅಥವಾ 19ನೆ ಶತಮಾನದಲ್ಲಿ ಬ್ರಿಟನ್ ಹೀಗೆ ದಿಢೀರನೆ ನೋಟು ರದ್ದತಿ ನಿರ್ಧಾರ ಕೈಗೊಂಡಿದ್ದರೆ, ಅದು ಇಡೀ ಬ್ರಿಟಿಷ್ ಕೈಗಾರಿಕಾ ಪ್ರಗತಿಗೇ ಮಾರಕವಾಗುತ್ತಿತ್ತು.
ಇಲೆಕ್ಟ್ರಾನಿಕ್ ಖಾತೆ ಹಾಗೂ ವಹಿವಾಟುಗಳು ಇನ್ನೂ ಸಾಕಷ್ಟು ಅಭಿವೃದ್ಧಿ ಹೊಂದದಿರುವುದರಿಂದ, ಆರ್ಥಿಕತೆಯ ದೊಡ್ಡ ಭಾಗ ತೊಂದರೆಗೀಡಾಗಿದೆ. ಬಹುತೇಕ ಮಂದಿಗೆ, ಅದರಲ್ಲೂ ಪ್ರಮುಖವಾಗಿ ಬಡವರಿಗೆ, ಇಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯನ್ನು ಹಾಗೂ ಸ್ವೀಕರಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಅನುಭವ ಇಲ್ಲದಿರುವುದರಿಂದ ಹಣ ಕಳೆದುಕೊಳ್ಳುವ ಅಪಾಯ ತಪ್ಪಿಸುವುದು ಕಷ್ಟ. ಮೂಲಸೌಕರ್ಯದ ಕೊರತೆ ಹಾಗೂ ನಗದುರಹಿತ ವ್ಯವಹಾರ ಕಲಿಕೆಯ ನಿಧಾನ ಪ್ರವೃತ್ತಿಯಿಂದಾಗಿ ತಕ್ಷಣಕ್ಕೆ ಇದನ್ನು ಜಾರಿಗೆ ತರುವುದು ಕಾರ್ಯಸಾಧುವಾಗದು. ಇಲ್ಲಿ ಮೂಲಭೂತ ಪ್ರಶ್ನೆ ಎಂದರೆ, ಜನರು ಇಷ್ಟೊಂದು ಸಂಕಷ್ಟಗಳನ್ನು ಎದುರಿಸುತ್ತಿರುವುದು ಕಣ್ಣ ಮುಂದಿದ್ದರೂ, ಏಕೆ ನೋಟು ರದ್ದತಿ ಪ್ರತಿಪಾದಕರು ಈ ಬಗ್ಗೆ ಕುರುಡಾಗಿದ್ದಾರೆ ಎನ್ನುವುದು.
►ಶೇ.85ರಷ್ಟು ನಗದನ್ನು ದಿಢೀರನೆ ಚಲಾವಣೆಯಿಂದ ಹಿಂದಕ್ಕೆ ಪಡೆದದ್ದು ಏಕೆ?
♦ಬಹುಶಃ ಸರಕಾರಕ್ಕೆ ಅದರ ಉದ್ದೇಶಗಳ ಬಗ್ಗೆಯೇ ಗೊಂದಲ ಇತ್ತು. ನೋಟು ರದ್ದತಿಯನ್ನು ಕಾಳಧನ ಹಿಡಿಯುವ, ನಿರ್ಮೂಲನೆ ಮಾಡುವ ಹಾಗೂ ನಗದು ರಹಿತ ಆರ್ಥಿಕತೆ ಸೃಷ್ಟಿಸುವ ಮಾರ್ಗವಾಗಿ ಪರಿಗಣಿಸಲಾಯಿತು. ಆದರೆ ಮೊದಲಿನ ಉದ್ದೇಶ ಈಗ ನಿಧಾನವಾಗಿ ಬದಲಾದಂತೆ ಕಾಣುತ್ತಿದೆ. ನೋಟು ರದ್ದತಿ ಕಾಳಧನ ಸಮಸ್ಯೆಗೆ ಪರಿಹಾರವಾಗಲಾರದು ಎನ್ನುವ ಸತ್ಯ ನಿಧಾನವಾಗಿ ಸರಕಾರಕ್ಕೆ ಮನವರಿಕೆಯಾಗುತ್ತಿದೆ. ಏಕೆಂದರೆ ಕಪ್ಪುಹಣ ನಗದಿನ ರೂಪದಲ್ಲಿ ಇರುವುದು ಅತ್ಯಲ್ಪಶೇ.6ರಷ್ಟು ಕಪ್ಪುಹಣ ಮಾತ್ರ ನಗದು ರೂಪದಲ್ಲಿದೆ ಎಂದು ಅಂದಾಜು ಮಾಡಲಾಗಿದೆ. ಖಂಡಿತವಾಗಿಯೂಶೇ.10ಕ್ಕಿಂತ ಕಡಿಮೆ. ಬಹುತೇಕ ಕಪ್ಪುಹಣ ಅಮೂಲ್ಯ ಲೋಹದ ರೂಪದಲ್ಲಿ ಅಥವಾ ವಿದೇಶಿ ಖಾತೆಗಳ ಆಸ್ತಿ ರೂಪದಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಕಪ್ಪುಹಣದ ಮೇಲೆ ಆದ ಪರಿಣಾಮಕ್ಕಿಂತ, ದಿನಗೂಲಿಗಳು, ಬಡವರು, ಸಣ್ಣ ಮೊತ್ತದ ಹಣ ಇಟ್ಟುಕೊಂಡಿದ್ದ ಗೃಹಿಣಿಯರು, ವ್ಯಾಪಾರಿಗಳ ಮೇಲೆ ಆದ ವ್ಯತಿರಿಕ್ತ ಪರಿಣಾಮವೇ ಹೆಚ್ಚು. ಇದರಿಂದಾಗಿ ಉದ್ಯೋಗ ಕಳೆದುಕೊಂಡವರ ಸಂಖ್ಯೆಯೂ ದೊಡ್ಡದು. ಅಖಿಲ ಭಾರತ ಉತ್ಪಾದಕರ ಸಂಘದ ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಗಂಭೀರ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುತ್ತಿದೆ. ಲಂಡನ್‌ನ ಫೈನಾನ್ಶಿಯಲ್ ಟೈಮ್ಸ್‌ನ ಇತ್ತೀಚಿನ ವರದಿಯಂತೆ, ಮೋದಿ ಶೇ.86ರಷ್ಟು ನೋಟುಗಳನ್ನು ನಿಷೇಧಿಸಿದ ಬಳಿಕದ 34 ದಿನಗಳಲ್ಲಿ ವಹಿವಾಟು ಗಣನೀಯವಾಗಿ ಕುಸಿದಿದೆ
ನೋಟು ರದ್ದತಿಯಿಂದ ಕಪ್ಪು ಹಣ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ಬಹುತೇಕ ಕಪ್ಪುಹಣವನ್ನು ಈ ಮೂಲಕ ಆರ್ಥಿಕತೆಯಿಂದ ತೆಗೆಯಬಹುದು ಎಂಬ ನಿರೀಕ್ಷೆ ಅವಾಸ್ತವ ಎನ್ನುವುದು ಇದೀಗ ಸರಕಾರಕ್ಕೂ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನೋಟು ರದ್ದತಿ ಪ್ರತಿಪಾದಕರ ಗುರಿ, ದಿಢೀರನೆ ಬದಲಾಗಿದ್ದು, ನಗದು ರಹಿತ ವ್ಯವಸ್ಥೆಗೆ ಹೊರಳುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಇಂಥ ರಾಚನಿಕ ಬದಲಾವಣೆಗೆ ಇನ್ನೂ ಬಹಳಷ್ಟು ಕಾಲ ಬೇಕು. ಜತೆಗೆ ಇದಕ್ಕೆ ದೊಡ್ಡ ಪ್ರಮಾಣದ ದಂಡ ವಿಧಿಸುವುದು ಪರಿಹಾರವಾಗಲಾರದು. ಇದೆಲ್ಲದರ ಫಲಿತಾಂಶ ಎಂದರೆ ಅರಾಜಕತೆ ಮತ್ತು ಸಂಕಷ್ಟಗಳ ಸರಮಾಲೆ.
► ನೋಟು ರದ್ದತಿ ನಡೆಯ ಹಿಂದೆ ರಾಜಕೀಯ ಕಾರಣ ಇದೆ ಎನಿಸುತ್ತದೆಯೇ? ಸದ್ಯದಲ್ಲೇ ಚುನಾವಣೆಗಳು ಇರುವುದೂ ಇದಕ್ಕೆ ಕಾರಣವಿರಬಹುದೇ?
♦ವಾಸ್ತವವಾಗಿ ನನಗೆ ತಿಳಿಯದು. ಏಕೆಂದರೆ ಆರ್ಥಿಕ ತಾರ್ಕಿಕತೆ ಇಂಥ ಅರೆಬರೆ ನಿರ್ಧಾರಕ್ಕೆ ಅವಕಾಶ ನೀಡದು. ಆದ್ದರಿಂದ ಸಹಜವಾಗಿಯೇ ಆಡಳಿತ ಪಕ್ಷಕ್ಕೆ ರಾಜಕೀಯ ಲಾಭವಾಗುತ್ತದೆ ಎಂಬ ಸಂದೇಹ ಜನರಲ್ಲಿ ಉದ್ಭವಿಸುತ್ತದೆ. ಖಂಡಿತವಾಗಿ ಇದು ಅಲ್ಪಾವಧಿಯ ಲಾಭವನ್ನಾದರೂ ತಂದುಕೊಟ್ಟಿದೆ. ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಈ ನಡೆಯಿಂದ ಯಾವ ಪ್ರಯೋಜನ ಆಗದಿದ್ದರೂ, ಭ್ರಷ್ಟಾಚಾರ ವಿರುದ್ಧ ಪ್ರಧಾನಿ ಕೈಗೊಂಡ ದೊಡ್ಡ ಸಮರ ಎಂಬ ಇಮೇಜ್ ಸೃಷ್ಟಿಯಾಗಿದೆ.
► ಈ 50 ದಿನಗಳ ಕಷ್ಟಕೋಟಲೆ, ಆರ್ಥಿಕತೆಯಿಂದ ಕಾಳಧನ ಹೊರಹಾಕಿಲ್ಲವೇ?
♦ ಅದು ಹೇಗೆ ಸಾಧ್ಯ? ಕಪ್ಪುಹಣ ನಗದು ರೂಪದಲ್ಲಿರುವುದು ಅತ್ಯಲ್ಪ ಪ್ರಮಾಣದಲ್ಲಿ ಅಂದರೆ ಶೇ.6ರಷ್ಟು ಮಾತ್ರ; ಖಂಡಿತವಾಗಿಯೂ ಶೇ.10 ಮೀರುವುದಿಲ್ಲ. ಶೇ.10ನ್ನು ಸ್ವಚ್ಛಗೊಳಿಸಿದರೆ ಇಡೀ ವ್ಯವಸ್ಥೆ ಸ್ವಚ್ಛವಾದಂತಾಗುತ್ತದೆಯೇ? ಶೇ.10ರಷ್ಟು ಸ್ವಚ್ಛವಾಗಿದೆ ಎನ್ನುವುದು ಕೂಡಾ ಉತ್ಪ್ರೇಕ್ಷೆ. ಏಕೆಂದರೆ ಸರಕಾರಿ ತಡೆಗಳನ್ನು ಹೇಗೆ ಮೀರಿಸಬಹುದು ಎಂಬ ಕೌಶಲ ಕಾಳಧನಿಕರಲ್ಲಿದೆ. ಈ ಹೆಸರಿನಲ್ಲಿ ತೊಂದರೆ ಅನುಭವಿಸಿದ್ದು ಅಥವಾ ಹಣ ಕಳೆದುಕೊಂಡದ್ದು ಪ್ರಾಮಾಣಿಕರು ಮತ್ತು ಜನಸಾಮಾನ್ಯರು. ಏಕೆಂದರೆ ಬದಲಿ ದಂಧೆಯ ಅರಿವು ಅವರಿಗಿಲ್ಲ.
► ಇದು ಕೆಟ್ಟ ನೀತಿಯಾಗಿದ್ದರೆ, ದೇಶದಲ್ಲಿ ಇನ್ನೂ ಏಕೆ ಈ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿಲ್ಲ?
♦ ಈ ನಡೆಯ ಸುತ್ತ ಸರಕಾರ ಪ್ರಬಲ ಪ್ರಚಾರ ಆಂದೋಲನ ನಡೆಸಿದೆ. ನೀವು ನೋಟು ರದ್ದತಿಗೆ ವಿರುದ್ಧವಾಗಿದ್ದೀರಿ ಎಂದಾದರೆ, ನೀವು ಕಾಳಧನಿಕರ ಪರ ಎಂದು ಜನರಿಗೆ ಪದೇ ಪದೇ ಹೇಳಲಾಗುತ್ತಿದೆ. ಇದು ತೀರಾ ಅಸಂಬದ್ಧ ವಿಶ್ಲೇಷಣೆ. ಆದರೆ ಸುಲಭವಾಗಿ ಶೋಷಿಸಬಹುದಾದ ರಾಜಕೀಯ ಘೋಷಣೆ. ಇದರಿಂದ ಉಂಟಾದ ಸಂಘರ್ಷದ ಬಗ್ಗೆ ನಿಧಾನವಾಗಿ ಅಂಕಿ ಅಂಶಗಳ ಮೂಲಕವೇ ಪುರಾವೆಗಳು ಸಿಗುತ್ತಿವೆ.
ಸುಳ್ಳು ಅಂಕಿ ಅಂಶಗಳು ಮತ್ತು ಪ್ರಚಾರದ ಮೂಲಕ ಇದು ಪವಿತ್ರ ಹಾಗೂ ಯಶಸ್ವಿ ನಡೆ ಎಂಬ ಭಾವನೆಯನ್ನು ಹುಟ್ಟುಹಾಕುವ ಪ್ರಯತ್ನ ನಡೆದಿದೆ. ಆದರೆ ಸತ್ಯ ಸದಾ ಉಳಿದುಕೊಳ್ಳುತ್ತದೆ. ಆದರೆ ಸರಕಾರ ಜನಬೆಂಬಲದ ನಿಯತ್ತನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಬಹುದು; ಖಂಡಿತವಾಗಿಯೂ ಉತ್ತರ ಪ್ರದೇಶ ಚುನಾವಣೆ ವರೆಗೆ.
ಇಲ್ಲಿ ನೆನಪಿಸಿಕೊಳ್ಳಬಹುದಾದ ಇನ್ನೊಂದು ಪ್ರಮುಖ ಘಟನೆ ಎಂದರೆ, 1840ರ ದಶಕದ ಐರಿಷ್ ಬರ, ಲಂಡನ್‌ನಿಂದ ಆಡಳಿತ ನಡೆಸುವ ಸರಕಾರದ ವಿರುದ್ಧ ತಕ್ಷಣಕ್ಕೆ ಪ್ರತಿಭಟನೆ ಹುಟ್ಟುಹಾಕಲಿಲ್ಲ. ಬಹಳ ತಡವಾಗಿ ಆಕ್ರೋಶ ಕಟ್ಟೆಯೊಡೆಯಿತು. ವಾಸ್ತವವಾಗಿ ಅದರ ದೀರ್ಫಾವಧಿ ಪರಿಣಾಮವನ್ನು ಕಂಡುಕೊಂಡ ಬಳಿಕ ಐರಿಷ್ ಜನರು ಲಂಡನ್ ಸರಕಾರದ ಪ್ರತಿ ನಡೆಯನ್ನೂ ಸಂಶಯದ ದೃಷ್ಟಿಯಿಂದಲೇ ನೋಡತೊಡಗಿದರು.
ಕೃಪೆ: ದಿ ಹಿಂದೂ







