ರದ್ದಾದ ನೋಟು: ಬಡವರ ಮೂಲಕ್ಕೇ ಕೊಡಲಿಯೇಟು

ಅಸಂಘಟಿತ ವಲಯಗಳಲ್ಲಿರುವ ಶೇ. 94ರಷ್ಟು ಮಂದಿ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವರದಿಗಳು ಸರಣಿಯೋಪಾದಿಯಲ್ಲಿ ಬರುತ್ತಿವೆ. ಆದರೆ ಬಹುತೇಕ ಮಹಿಳೆಯರೇ ಇರುವ ಮನೆಗೆಲಸದವರ ಪಾಡೇನು? ಪುರುಷರ ಬೆಂಬಲ ಇಲ್ಲದ ಇಂಥ ಬಡಮಹಿಳೆಯರ ಸ್ಥಿತಿ ಇನ್ನೂ ದಯನೀಯ. ತಮ್ಮ ಉಳಿತಾಯದ ಹಣ ಪಡೆಯುವ ಸಲುವಾಗಿ ಬ್ಯಾಂಕ್‌ಗಳ ಮುಂದೆ ಸರದಿ ನಿಲ್ಲುವ ಮೂಲಕ ದಿನದ ಕೆಲಸ ಕಳೆದುಕೊಳ್ಳುವ ಇವರ ಸಂಕಷ್ಟದ ಅರಿವು ಯಾರಿಗಿದೆ?
ಕೆಲಸದಾಕೆ ಜಯಾ, ಆಕೆಯ ಮಗಳು ಮಾಂಜಿ ಹಾಗೂ ಸೊಸೆ ಸರೋಜ ತಮ್ಮ ದೈನಂದಿನ ಸ್ವಚ್ಛತಾಕಾರ್ಯ ಮುಗಿಸಿ ಬಂದ ತಕ್ಷಣ ಅವರನ್ನು ಕರೆದು, ‘‘ನೀವು ನಗದು ರಹಿತ ವಹಿವಾಟು ಬಗ್ಗೆ ತಿಳಿದುಕೊಳ್ಳಬೇಕು; ಇದು ಪ್ರಧಾನಿ ಮೋದಿಯ ಯೋಜನೆ’’ ಎಂದು ಹೇಳಿದೆ. ಜಯಾ ನನ್ನ ಸಹಾಯಕಿ. ಉಳಿದಿಬ್ಬರು ನೆಲಮಹಡಿಯಲ್ಲಿರುವ ಶೋರೂಂನಲ್ಲಿ ಕೆಲಸ ಮಾಡುತ್ತಾರೆ. ಜಯಾ ಹಾಗೂ ಮಾಂಜಿ ಅನಕ್ಷರಸ್ಥರು. ಸರೋಜ ಮೂರನೇ ತರಗತಿವರೆಗೆ ಓದಿದ್ದರೂ, ವಾಸ್ತವವಾಗಿ ಇನ್ನೂ ಅಕ್ಷರದ ಅರಿವಿಲ್ಲ.
ಅವರ ಮುಖದಲ್ಲಿ ಮಿಂಚು ಮೂಡಿದ್ದನ್ನು ಕಂಡೆ. ‘‘ಒಳ್ಳೆಯದು. ಹಣದಲ್ಲೇ ನಮಗೆ ದೊಡ್ಡ ತೊಂದರೆಯಾಗಿತ್ತು. ನಗದುರಹಿತ ವ್ಯವಸ್ಥೆ ನಮಗೆ ಅನಿವಾರ್ಯವಾಗಿ ಬೇಕಿತ್ತು’’ ನನ್ನ ಸುತ್ತ ಸೇರಿದಾಗ ಅವರಿಗೆ ಅಕ್ಷರಶಃ ರೋಮಾಂಚನವಾಗಿತ್ತು. ‘ನಗದು ರಹಿತ’ ಎಂಬ ಬಗ್ಗೆ ಅವರ ಕಲ್ಪನೆಯೇ ಬೇರೆ ಇತ್ತು. ನಾನು ವಾಸ್ತವ ವಿವರಿಸಲು ಆರಂಭಿಸಿದೆ. ಬಡವರಿಗೆ ನಗದು ಅಗತ್ಯವೇ ಇಲ್ಲ; ಎಲ್ಲವೂ ಉಚಿತ ಎನ್ನುವುದು ನಮ್ಮ ನಂಬಿಕೆಯಾಗಿತ್ತು ಎಂದು ಹತಾಶೆಯಿಂದ ಹೇಳುವಾಗ ಅವರ ಬಗ್ಗೆ ಅಯ್ಯೋ ಎನಿಸಿತು.
ಐವತ್ತೆರಡನೇ ವರ್ಷಕ್ಕೇ ಜಯಾ ಮುತ್ತಜ್ಜಿ. ಮಾಂಜಿಯ ಮಗಳು 18 ವರ್ಷದ ಆಶಾ ಆಗಷ್ಟೇ ತಾಯಿಯಾಗಿದ್ದಳು. 16ನೆ ವರ್ಷಕ್ಕೇ ಮದುವೆಯಾಗಿದ್ದ ಮಾಂಜಿ, ಆಟೊ ಚಾಲಕನಾಗಿರುವ ಗಂಡ ನೀಡುವ ಕಿರುಕುಳ ತಾಳಲಾರದೆ, ಒಂದೇ ವರ್ಷದಲ್ಲಿ ಆತನಿಂದ ಬೇರ್ಪಟ್ಟಿದ್ದಳು. ಜಯಾಳ ಕುಡುಕ ಗಂಡ 25 ವರ್ಷ ಹಿಂದೆಯೇ ಅಸು ನೀಗಿದ್ದ. ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸರೋಜಳ ಗಂಡ 28ನೆ ವರ್ಷದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಅಂಗಡಿ ಮಾಲಕನ ಮೊಬೈಲ್ ಕದ್ದ ಆರೋಪಕ್ಕೆ ಗುರಿಯಾಗಿ ಪೊಲೀಸರಿಂದ ಚಿತ್ರಹಿಂಸೆಗೆ ಗುರಿಯಾದ ಅವಮಾನ ತಾಳಲಾರದೆ ಆತ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದ.ಮೂವರು ಮಹಿಳೆಯರು ಕೊಳಗೇರಿಯ ಪುಟ್ಟ ಕೊಠಡಿಯಲ್ಲಿ ವಾಸವಿದ್ದಾರೆ. ಇಡೀ ಕುಟುಂಬದಲ್ಲಿ ಗಂಡುಸಂತಾನ ಇಲ್ಲ. ಸುರಕ್ಷತೆ ದೃಷ್ಟಿಯಿಂದ ಹದಿಹರೆಯದ ಮೊಮ್ಮಗಳಿಗೆ ಕಳೆದ ವರ್ಷವೇ ಜಯಾ ಮದುವೆ ಮಾಡಿಬಿಟ್ಟರು. ಇದೀಗ ಆಶಾ ಮಗುವಿನ ತಾಯಿ. ಇದು ಜಯಾ ಕುಟುಂಬದ ಕಥೆ ಮಾತ್ರವಲ್ಲ; ಇಂಥ ಹಲವು ಬಡಕುಟುಂಬಗಳ ಜತೆ ನಾನು ಮಾತನಾಡಿದಾಗ, ಇಂಥದ್ದೇ ಕರುಣಕಥೆಗಳು ಬೆಳಕಿಗೆ ಬಂದಿವೆ. ವಿವರವಷ್ಟೇ ಬೇರೆ.
ಇವರಿಗೆ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಇದೆ. ಆದರೆ ಹಣ ಹಾಕಬೇಕಾದರೆ ಚಲನ್ ತುಂಬಲು ಬೇರೆಯವರ ನೆರವು ಪಡೆಯಬೇಕು; ಎಷ್ಟು ಹಣ ಜಮೆ ಆಗಿದೆ ಎಂಬ ವಿವರವನ್ನೂ ಬೇರೆಯವರು ಹೇಳಬೇಕು. ಗುಡಿಸುತ್ತಾ, ಸ್ವಚ್ಛಗೊಳಿಸುತ್ತಲೇ ತಮ್ಮ ಜೀವನ ಕಳೆಯುವ ಅಸಂಖ್ಯಾತ ಅನಕ್ಷರಸ್ಥ ಮನೆಗೆಲಸದವರಲ್ಲಿ ಜಯಾ ಕುಟುಂಬವೂ ಒಂದು. 2004-05ರ ಸ್ಯಾಂಪಲ್ ಸರ್ವೇ ಆಫ್ ಇಂಡಿಯಾದ ಸಮೀಕ್ಷೆ ಪ್ರಕಾರ, ದೇಶದಲ್ಲಿ 42 ಲಕ್ಷ ಮಂದಿ ಇಂಥ ಹತಭಾಗ್ಯರಿದ್ದಾರೆ. ಆದರೆ ವಾಸ್ತವವಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು. ಏಕೆಂದರೆ ಇಲ್ಲಿ ಯಾರೂ ಮನೆಗೆಲಸದವರ ದಾಖಲೆ ಇಡುವುದಿಲ್ಲ ಅಥವಾ ಅವರು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡುವುದಿಲ್ಲ. ಜತೆಗೆ ಒಂದು ಕಡೆಯಿಂದ ಇನ್ನೊಂದು ಕಡೆ ವಲಸೆ ಹೋಗುತ್ತಿರುವುದರಿಂದ ಈ ಬಗ್ಗೆ ನಿಖರ ವಿವರ ಕಷ್ಟ.
ಅಕ್ಷರಜ್ಞಾನವೇ ಇಲ್ಲದವರಿಗೆ ಇ-ಪಾವತಿ?
ಕೂಡಿಸಲು, ಕಳೆಯಲು ಕೂಡಾ ಬಾರದ, ಪಾಸ್‌ವರ್ಡ್ ಪಿನ್ ಎಂಬ ಶಬ್ದಗಳನ್ನೇ ಕಂಡು ಕೇಳರಿಯದ, ಗೌಪ್ಯತೆ ಮತ್ತು ವಿಚಕ್ಷಣೆಯ ಕಲ್ಪನೆಯೂ ಇಲ್ಲದ ಅನಕ್ಷರಸ್ಥರ ಪಾಲಿಗೆ ಇದೊಂದು ಕ್ರೂರ ಪ್ರಹಸನ. ವಿಶ್ವದಲ್ಲೇ ಅತಿಹೆಚ್ಚು ಅನಕ್ಷರಸ್ಥರಿರುವ ದೇಶ ನಮ್ಮದು. ಅದರಲ್ಲೂ ಸಾಮಾಜಿಕ- ಸಾಂಸ್ಕೃತಿಕ ಅಂಶಗಳಿಂದಾಗಿ ಪುರುಷರ ಮರ್ಜಿಗೆ ಅನುಗುಣವಾಗಿ ನಾಲ್ಕು ಗೋಡೆಗಳ ಮಧ್ಯೆಯೇ ಬದುಕುವುದು ಇಂಥ ಮಹಿಳೆಯರ ದೌರ್ಭಾಗ್ಯ. ಅದರಲ್ಲೂ ಹಣದ ವಿಷಯ ಬಂದಾಗ, ಅಕ್ಷರ ಪರಿಚಯವಾಗಲೀ, ಈ ಬಗ್ಗೆ ಜಾಗೃತಿಯಾಗಲೀ ಇಲ್ಲದ ಇಂಥ ಮಂದಿ ಇ- ಪಾವತಿಗೆ ಒಗ್ಗಿಕೊಳ್ಳಲು ಹೇಗೆ ಸಾಧ್ಯ? ವಿದ್ಯಾವಂತ ನಾಗರಿಕರಲ್ಲಿ ಬಹಳಷ್ಟು ಮಂದಿಗೆ ಕೂಡಾ ಬ್ಯಾಂಕಿಂಗ್ ವಂಚನೆ, ಖಾತೆಗಳ ಹ್ಯಾಕಿಂಗ್‌ನ ಕಲ್ಪನೆ ಇಲ್ಲ. ಇಂಥ ತಂತ್ರಜ್ಞಾನ ಆಧರಿತ ವಂಚನೆಯಿಂದ ರಕ್ಷಿಸುವಂಥ ಸೂಕ್ತ ಕಾನೂನುಗಳು ಕೂಡಾ ನಮ್ಮಲ್ಲಿ ಇದುವರೆಗೂ ಇಲ್ಲ.
ಸ್ವಾತಂತ್ರ್ಯ ಬಂದು ಏಳು ದಶಕದಲ್ಲಿ ಕನಿಷ್ಠ ಎಲ್ಲರಿಗೂ ಅಕ್ಷರಜ್ಞಾನವನ್ನೂ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಗದು ರಹಿತ ವ್ಯವಸ್ಥೆಯ ಪ್ರಯೋಜನವನ್ನು ಜಯಾಳಿಗೆ ನಾನು ಹೇಗೆ ಮನವರಿಕೆ ಮಾಡಿಕೊಡಲು ಸಾಧ್ಯ?
ಖಾತೆ ನಿರ್ವಹಣೆಯ ಸಹಾಯಕ್ಕಾಗಿ ಆಕೆ ನಂಬಿದ ವ್ಯಕ್ತಿ ಆಕೆಯನ್ನು ವಂಚಿಸುವುದಿಲ್ಲ ಎಂಬ ಖಾತ್ರಿ ಏನು? ಇಡೀ ಕುಟುಂಬ ಕೊಳಗೇರಿಯ ಒಂದು ಕೊಠಡಿಯಲ್ಲಿ ವಾಸವಾಗಿದೆ ಎಂದರೆ, ಪಿನ್ ಸಂಖ್ಯೆಯ ರಹಸ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರಿಗೆ ಹೇಗೆ ವಿವರಿಸಲು ಸಾಧ್ಯ? ಜಯಾ ಬಳಿ ಮೊಬೈಲ್ ಇದೆ. ಆದರೆ ಸ್ಮಾರ್ಟ್‌ಫೋನ್ ಅಲ್ಲ. ದೇಶದಲ್ಲಿ ನೂರು ಕೋಟಿಗೂ ಹೆಚ್ಚು ಫೋನ್‌ಗಳಿವೆ. ಆದರೆ ಬಹುತೇಕ ಕರೆ ಮಾಡುವ ಉದ್ದೇಶಕ್ಕಷ್ಟೇ ಬಳಕೆಯಾಗುವ ಬೇಸಿಕ್ ಫೋನ್‌ಗಳು. ಇನ್ನೂ ಮುಖ್ಯ ವಿಚಾರವೆಂದರೆ ಎಲ್ಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇ-ಪಾವತಿ ಹಾಗೂ ತಮ್ಮ ಖಾತೆಗಳನ್ನು ಸಂರಕ್ಷಿಸಿಕೊಳ್ಳಲು ಅಗತ್ಯ ಜ್ಞಾನ ಇಲ್ಲ. ಬಡತನ ಹಾಗೂ ಸೌಲಭ್ಯವಂಚಿತವಾದ ಇಂಥ ಮಾನವೀಯ ಮುಖಗಳು ಎಂದಾದರೂ ರಾಜಕಾರಣಿಗಳ, ಆಡಳಿತಗಾರರ ಮತ್ತು ಅರ್ಥಶಾಸ್ತ್ರಜ್ಞರ ಅರಿವಿಗೆ ಬಂದಿವೆಯೇ? ಹಾಗೆ ಬಂದಿದ್ದರೆ, ಈ ಅಲ್ಪಾವಧಿ ತೊಂದರೆಯಿಂದ ದೀರ್ಘಾವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟದಿಂದ ದೊಡ್ಡ ಪ್ರಯೋಜನವಾಗುತ್ತದೆ ಎಂದು ಹೇಳುತ್ತಿದ್ದರೇ?
‘‘ನಾನು ಪಾಸ್‌ವರ್ಡ್ ಹಾಗೂ ಪಿನ್ ಸಂಖ್ಯೆಯನ್ನು ಗಂಡನೊಂದಿಗೂ ಹಂಚಿಕೊಳ್ಳದಿರಲು ಹೇಗೆ ಸಾಧ್ಯ?’’ ಎನ್ನುವುದು ಮತ್ತೊಬ್ಬ ಮನೆಕೆಲಸದಾಕೆ ಸುಶೀಲಾಳ ಪ್ರಶ್ನೆ. ‘‘ಒಳ್ಳೆಯ ಪತ್ನಿ ಗಂಡನಿಂದ ಏನನ್ನೂ ಮುಚ್ಚಿಡಬಾರದು. ಪತಿ ತನ್ನ ಪಾಲಿನ ದೇವರು’’ ಎನ್ನುವುದು ಆಕೆಯ ವಿವರಣೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರ ಪರಿಸ್ಥಿತಿ ಮತ್ತೂ ಕಷ್ಟ. ‘‘ಮಗನಿಗೆ ಮದುವೆಯಾಗುವಾಗ ಸೊಸೆಗೆ ಒಂದಷ್ಟು ಒಡವೆ ಮಾಡಿಸಬೇಕೆಂಬ ಉದ್ದೇಶದಿಂದ ನನ್ನ ಅಲ್ಪಸ್ವಲ್ಪಆದಾಯದಲ್ಲೇ ಒಂದಷ್ಟು ಹಣ ಕೂಡಿಟ್ಟಿದ್ದೆ. ಇದು ಬಡವರ ಮರ್ಯಾದೆಯ ಪ್ರಶ್ನೆ’’ ಎಂದು ಸುಶೀಲಾ ವಿವರಿಸಿದಳು. ಆದರೆ ಗಂಡನಿಗೆ ವಿಚಾರ ಗೊತ್ತಾದರೆ ಆತ ಬೇರೆ ಯಾವ ಉದ್ದೇಶಕ್ಕೆ ಖರ್ಚು ಮಾಡುತ್ತಾನೋ ಎಂಬ ಸಂದೇಹದಿಂದ ಅದನ್ನು ವಿನಿಮಯ ಮಾಡಿಕೊಳ್ಳಲೂ ಸುಶೀಲಾ ಮುಂದಾಗಲಿಲ್ಲ. ಆತನಿಗೆ ಹಕ್ಕಿದೆ ಅಲ್ಲವೇ? ನಾನು ಆತನ ಸ್ವತ್ತು. ನನ್ನ ಬಳಿ ಇರುವ ಎಲ್ಲದರ ಮೇಲೆ ಆತನಿಗೆ ಹಕ್ಕಿದೆ ಎಂದು ಸಮರ್ಥಿಸಿಕೊಂಡಳು.
ಆ ನೋಟುಗಳು ಈಗ ರದ್ದಿ ಎನ್ನುವುದು ತಿಳಿದು ಆಕೆಯ ಆಸೆ ನುಚ್ಚುನೂರಾಯಿತು. ಆಕೆ ಮಾಡಿದ ಅಪರಾಧ? ಸರಕಾರ 70 ವರ್ಷಗಳ ಹಿಂದೆಯೇ ಎಲ್ಲರಿಗೂ ಶಿಕ್ಷಣ ಒದಗಿಸುವುದಾಗಿ ನೀಡಿದ ಸಂವಿಧಾನಾತ್ಮಕ ಭರವಸೆಯನ್ನು ಈಡೇರಿಸಲಾಗದ ಕಾರಣದಿಂದ ಆಕೆ ಇನ್ನೂ ಬಡವಿ, ನಿರಕ್ಷಕಕುಕ್ಷಿ. ಇಂದಿಗೂ ಭಾರತೀಯ ಮಹಿಳೆಯರಲ್ಲಿ ಅನಕ್ಷರತೆ ಅಧಿಕ.
ತನ್ನ ಕೆಲಸದ ಸಮಯ ಹಾಳಾಗಬಾರದು ಎಂದು ಪತ್ನಿಯನ್ನು ಬ್ಯಾಂಕ್ ಮುಂದೆ ನಿಂತಿದ್ದ ಸರದಿ ಸಾಲಿನಲ್ಲಿ ಮೇಸ್ತ್ರಿ ಚಿನ್ನ ನಿಲ್ಲಿಸಿದ. ಸ್ಥಳೀಯ ಸ್ವಸಹಾಯ ಗುಂಪಿನಲ್ಲಿ ಹುರಿಹಗ್ಗ ಸಿದ್ಧಪಡಿಸುವ ಪತ್ನಿಯ ಆದಾಯಕ್ಕಿಂತ ಆತನ ದಿನದ ಆದಾಯ ಹೆಚ್ಚು. ‘‘ನನ್ನ ಇಡೀ ದಿನದ ಆದಾಯ ನಷ್ಟವಾಗಿದೆ. ಆದ್ದರಿಂದ ಸ್ವಲ್ಪಹಣವನ್ನು ನಾನು ಚಹಾ ಕುಡಿಯಲು ಇಟ್ಟುಕೊಳ್ಳಬಹುದೇ’’ ಎಂದು ಕೇಳಿದ್ದಕ್ಕೆ ಕೋಪಗೊಂಡ ಆತ ಆಕೆಯನ್ನು ಹಿಗ್ಗಾಮುಗ್ಗ ಥಳಿಸಿದ. ಪುರುಷಪ್ರಧಾನ ಎಂಬ ಹೆಸರನ್ನೇ ಆಕೆ ಜೀವನದಲ್ಲಿ ಕೇಳಿಲ್ಲ. ಆದರೆ ಆಕೆಯ ಜೀವನವನ್ನು ಆಳುವುದು ಅದೇ ವ್ಯವಸ್ಥೆ. ಇದು ಆಕೆಯ ಸ್ಥಿತಿ ಮಾತ್ರವಲ್ಲ. ಲಕ್ಷಾಂತರ ನಗರ ಹಾಗೂ ಗ್ರಾಮೀಣ ಮಹಿಳೆಯರ ಸ್ಥಿತಿ.
ಕಮ್ಮಾರನಾಗಿದ್ದ ಗಂಡ ತೀರಿಕೊಂಡ ಬಳಿಕ ಅನಕ್ಷರಸ್ಥೆ ರಮ್ಯಾ ತಮ್ಮ ಅಂಚೆಕಚೇರಿ ಖಾತೆ ನಿರ್ವಹಿಸಲು ಭಾವನನ್ನೇ ಅವಲಂಬಿಸಬೇಕು. ಆಕೆ ಆತನ ಜತೆ ವಾದಿಸುವಂತೆಯೂ ಇಲ್ಲ ಅಥವಾ ಮನೆಗೆಲಸದಿಂದ ಬಂದ ಪುಡಿಗಾಸನ್ನು ಇಟ್ಟುಕೊಳ್ಳುವಂತೆಯೂ ಇಲ್ಲ. ‘ನಗದುರಹಿತ ವ್ಯವಸ್ಥೆ’ ಎನ್ನುವುದು ಆಕೆ ಮತ್ತೊಬ್ಬರನ್ನು ಅವಲಂಬಿಸಿ ಇರುವ ವಿಧಾನವೇ ಹೊರತು ಆಕೆಯ ಪಾಲಿಗೆ ಇನ್ನೇನು?
ಲಂಚದ ಬಗ್ಗೆ?
ಎರಡು ಗಂಟೆ ಕಾಲ ನೋಟುರದ್ದತಿಯ ಹಿನ್ನೆಲೆ ವಿವರಿಸಿದ ಬಳಿಕ, ಶುಷ್ಕನಗೆ ನಕ್ಕ ಜಯಾ ಕೇಳಿದ್ದು ಒಂದೇ ಪ್ರಶ್ನೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಆಕೆ ಕೇಳಿದ್ದಿಷ್ಟು: ‘‘ಅಮ್ಮಾ ನಾನು ಹೊಸ ಪಡಿತರ ಚೀಟಿ ಪಡೆಯಲು ಆರು ತಿಂಗಳಿಂದ ಅಲೆಯುತ್ತಿದ್ದೇನೆ. ಹಲವು ಬಾರಿ ನಾನು ಇದಕ್ಕೆ ಕಚೇರಿಗೆ ಅಲೆದಿದ್ದೇನೆ. ಆತನಿಗೆ ಲಂಚ ನೀಡದಿದ್ದರೆ ರೇಷನ್ ಕಾರ್ಡ್ ಸಿಗುವುದಿಲ್ಲ ಎಂದು ಸ್ನೇಹಿತೆ ಹೇಳುತ್ತಿದ್ದಾಳೆ. ಇದು ಲಂಚವಲ್ಲವೇ?’’
ನೆರೆಮನೆಯ ಮತ್ತೊಬ್ಬಳು ಸ್ನೇಹಿತೆ ಹೇಳಿದಂತೆ, ಕಾರ್ಡ್ ಇಂಟರ್‌ನೆಟ್‌ನಲ್ಲಿ ಬರುತ್ತದೆಯಂತೆ. ಹಾಗೆಂದರೇನು? ಎಂದು ಸರೋಜ ಪ್ರಶ್ನಿಸಿದಳು.
ನಾನು ಏನು ಹೇಳಲಿ?
ಬಿಪಿಎಲ್ ಕಾರ್ಡ್‌ನ ನಿಯಮಾವಳಿಯ ಪ್ರಕಾರ, ಅರ್ಜಿದಾರ ಇಂಟರ್‌ನೆಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ನಿಯಮ ಮಾಡಿದ ಅಧಿಕಾರಿಗಳಿಗೆ ಬಡವರ ವಾಸ್ತವದ ಅರಿವು ಇದೆಯೇ? ರೈತರಿಗೆ ತಿನ್ನಲು ಬ್ರೆಡ್ ಕೂಡಾ ಇಲ್ಲ ಎಂದು ಹೇಳಿದಾಗ ಫ್ರಾನ್ಸ್ ರಾಣಿ, ಹಾಗಾದರೆ ಕೇಕ್ ತಿನ್ನಲಿ ಎಂದರಂತೆ ಇದು ಕೂಡಾ ಹಾಗಾಗಲಿಲ್ಲವೇ?
ಬೆಂಗಳೂರಿನಲ್ಲಿ ರಸ್ತೆಬದಿ ಬಾಳೆಹಣ್ಣು ಮಾರಿ ಮಲ್ಲಿಕಾ ಜೀವನ ಸಾಗಿಸುತ್ತಾಳೆ. ಆಕೆ ಕೂಡಾ ಪರಿತ್ಯಕ್ತ ಪತ್ನಿ. ಆಕೆಯ 30 ವರ್ಷದ ವಿಧವೆ ಮಗಳು ಕೂಡಾ ರಸ್ತೆಬದಿ ಹೂ ಮಾರುತ್ತಾಳೆ. ಇತ್ತೀಚೆಗೆ ಮಲ್ಲಿಕಾ ಅವರ ಮಾಮೂಲಿ ಜಾಗದಿಂದ ನಾಪತ್ತೆಯಾದಳು. ಪಿಂಚಣಿಯಲ್ಲಿ ಆಗಿರುವ ಸಮಸ್ಯೆ ಸರಿಪಡಿಸಿಕೊಳ್ಳಲು ಆಕೆ ಕಚೇರಿಗೆ ಹೋಗಿದ್ದಾಳೆ ಎಂಬ ಮಾಹಿತಿ ಮಗಳಿಂದ ಲಭ್ಯವಾಯಿತು. ಮಲ್ಲಿಕಾಗೆ, ಒಂದು ದಿನ ಕೆಲಸ ತಪ್ಪಿಸಿಕೊಳ್ಳುವುದು ಎಂದರೆ, ದಿನದ ಊಟಕ್ಕೆ ಕಲ್ಲುಬಿತ್ತು ಎಂದೇ ಅರ್ಥ. ಹತ್ತು ವರ್ಷಗಳಿಂದ ಪಿಂಚಣಿ ಪಡೆಯುತ್ತಿದ್ದ ಆಕೆ ಇದೀಗ ಯಾಕೆ ಕಚೇರಿಗೆ ಮತ್ತೆ ಅಲೆದಾಡುವಂತಾಯಿತು? ಆಕೆಯ ಸಹಾಯಕ್ಕೆ ಯಾರು ಬರುತ್ತಾರೆ? ನಿಜ ಸಮಸ್ಯೆ ಏನು ಎಂದು ಅಧಿಕಾರಿಗಳು ಆಕೆಗೆ ಯಾಕೆ ಹೇಳುವುದಿಲ್ಲ?
ಈ ವರ್ಗ ಕಾನೂನುಬದ್ಧವಾಗಿ ಸಿಗಬೇಕಾದ ಮೂಲಭೂತ ಸೌಲಭ್ಯವನ್ನೂ ಲಂಚ ನೀಡದೆ ಗಳಿಸಲು ಸಾಧ್ಯವಿಲ್ಲ. ನೋಟುರದ್ದತಿ ಯಾವ ಭ್ರಷ್ಟಾಚಾರವನ್ನು ತೊಲಗಿಸಿದೆ? ಊದಿಕೊಂಡಿರುವ ಕಾಲಿಗೆ ಚಿಕಿತ್ಸೆ ಪಡೆಯಲೂ ಸಾಧ್ಯವಿಲ್ಲದ ಮಲ್ಲಿಕಾ, ತನ್ನ ಗ್ರಾಹಕರು ಖರೀದಿಸಿದ ಬಾಳೆಹಣ್ಣಿಗೆ ನಗದು ರಹಿತ ವ್ಯವಸ್ಥೆಯಲ್ಲಿ ಹಣ ಪಡೆಯಲು, ಅದಕ್ಕೆ ಬೇಕಾಗುವ ಮೆಷಿನ್ ಖರೀದಿಸಲು ಹೇಗೆ ಸಾಧ್ಯ? ಪ್ರತಿ ಮುಂಜಾನೆ ಸಗಟು ಮಾರಾಟಗಾರರ ಮಂಡಿಯಿಂದ ಬಾಳೆಹಣ್ಣು ಖರೀದಿಸುವಾಗ ಹೇಗೆ ಹಣ ನೀಡಲು ಸಾಧ್ಯ? ಇ-ಬ್ಯಾಂಕ್ ಸೌಲಭ್ಯವನ್ನು ಬಳಸಿಕೊಳ್ಳಲಾಗದ ಎಷ್ಟು ಲಕ್ಷ ಮಂದಿ ಬೀದಿಬದಿ ವ್ಯಾಪಾರಿಗಳು ನಮ್ಮಲ್ಲಿಲ್ಲ? ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಬಳಸಲು ಅವರು ಒಪ್ಪಿಕೊಂಡರೂ, ಎಷ್ಟು ಹೆಚ್ಚುವರಿ ಹಣವನ್ನು ಅವರು ಸೇವಾ ಶುಲ್ಕವಾಗಿ ಪಾವತಿಸಬೇಕಾಗುತ್ತದೆ?
ಅಪರೂಪಕ್ಕೊಮ್ಮೆ ವಹಿವಾಟು ನಡೆಸುವ ಪುಟ್ಟ ಉಳಿತಾಯ ಖಾತೆಯನ್ನು ಆಕೆ ಹೊಂದಿದ್ದಾರೆ ನಿಜ; ಆದರೆ ಹಾಗೆಂದ ಮಾತ್ರಕ್ಕೆ ಆಕೆ ವಂಚನೆಗೆ ಒಳಗಾಗುವುದಿಲ್ಲ ಎಂಬ ಖಾತ್ರಿ ಇದೆಯೇ? ಕಂಬಳಿ ನೇಯ್ಗೆ, ಮರಗೆಲಸದ ಮಂದಿ, ರೈತರು ಮತ್ತು ಗಾರ್ಮೆಂಟ್ ನೌಕರರು ಹೀಗೆ ಅಸಂಘಟಿತ ವಲಯಗಳಲ್ಲಿರುವ ಶೇ. 94ರಷ್ಟು ಮಂದಿ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವರದಿಗಳು ಸರಣಿಯೋಪಾದಿಯಲ್ಲಿ ಬರುತ್ತಿವೆ. ಆದರೆ ಬಹುತೇಕ ಮಹಿಳೆಯರೇ ಇರುವ ಮನೆಗೆಲಸದವರ ಪಾಡೇನು? ಪುರುಷರ ಬೆಂಬಲ ಇಲ್ಲದ ಇಂಥ ಬಡಮಹಿಳೆಯರ ಸ್ಥಿತಿ ಇನ್ನೂ ದಯನೀಯ. ತಮ್ಮ ಉಳಿತಾಯದ ಹಣ ಪಡೆಯುವ ಸಲುವಾಗಿ ಬ್ಯಾಂಕ್‌ಗಳ ಮುಂದೆ ಸರದಿ ನಿಲ್ಲುವ ಮೂಲಕ ದಿನದ ಕೆಲಸ ಕಳೆದುಕೊಳ್ಳುವ ಇವರ ಸಂಕಷ್ಟದ ಅರಿವು ಯಾರಿಗಿದೆ?
ಕೃಪೆ: thewire