ನೋಟು ರದ್ದತಿ ಕುರಿತ ಪ್ರಶ್ನೆಗೆ ಆರ್‌ಬಿಐ ಗವರ್ನರ್ ಏಕೆ ತುಟಿ ಬಿಚ್ಚುತ್ತಿಲ್ಲ ?

ಇಲ್ಲಿದೆ ಕಾರಣ
ಬುಧವಾರ ಹಣಕಾಸು ಕುರಿತ ಸಂಸದೀಯ ಸಮಿತಿಯ ಎದುರು ಹಾಜರಾಗಿದ್ದ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರು ಬ್ಯಾಂಕುಗಳಲ್ಲಿ ಜಮೆಯಾಗಿರುವ ಹಳೆಯ 500 ಮತ್ತು 1,000 ರೂ. ನೋಟುಗಳ ಒಟ್ಟು ವೌಲ್ಯವೆಷ್ಟು ಎನ್ನುವುದನ್ನು ಬಹಿರಂಗಗೊಳಿಸಲು ನಿರಾಕರಿಸುವ ಮೂಲಕ ಸಮಿತಿ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಗವರ್ನರ್ ವೌನಕ್ಕೆ ಬಲವಾದ ಕಾರಣವಿದ್ದಿರಬಹುದು.
ಹಳೆಯ ನೋಟುಗಳ ರೂಪದಲ್ಲಿ ಜಮೆಯಾಗಿರುವ ಭಾರೀ ಹಣದ ಎಣಿಕೆಯ ತಲೆನೋವು ಮತ್ತು ಎರಡೆರಡು ಬಾರಿ ಎಣಿಕೆಯಾಗಿರುವ ಸಾಧ್ಯತೆ ಇವು ತನ್ನ ಲೆಕ್ಕಾಚಾರದ ಬಗ್ಗೆ ಎಚ್ಚರಿಕೆ ವಹಿಸುವುದನ್ನು ಆರ್‌ಬಿಐಗೆ ಅನಿವಾರ್ಯವಾಗಿಸಿರಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು. ಅಲ್ಲದೆ ಬ್ಯಾಂಕುಗಳಿಗೆ ಜಮೆಯಾಗಿರುವ ಚಾಲ್ತಿಯಲ್ಲಿರುವ ನೋಟುಗಳಿಂದ ರದ್ದುಗೊಂಡಿರುವ ನೋಟುಗಳನ್ನು ಪ್ರತ್ಯೇಕಿಸುವ ಸಮಸ್ಯೆಯೂ ಇದೆ.
ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ಜಮಾ ಮಾಡಲು ಡಿ.30 ಅಂತಿಮ ದಿನವಾಗಿದ್ದರೂ ಸಾರ್ವಜನಿಕ ಸೇವೆ, ಆಸ್ಪತ್ರೆಗಳು, ಅಂಚೆಕಚೇರಿಗಳಂತಹ ಸರಕಾರಿ ಸಂಸ್ಥೆಗಳು...ಅಷ್ಟೇ ಏಕೆ, ಜಿಲ್ಲಾ ಸಹಕಾರಿ ಬ್ಯಾಂಕುಗಳೂ ಆ ಪ್ರಕ್ರಿಯೆಯನ್ನು ಗಡುವಿನೊಳಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲದಿರಬಹುದು ಎನ್ನುತ್ತಾರೆ ಬ್ಯಾಂಕರ್‌ಗಳು.
ಅಲ್ಲದೆ ಅನಿವಾಸಿ ಭಾರತೀಯರು ತಮ್ಮ ಬಳಿಯಿರುವ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮೆ ಮಾಡಲು ಮಾ.31ರವರೆಗೂ ಕಾಲಾವಕಾಶವಿದೆ. ಇಂತಹ ನೋಟುಗಳ ಪ್ರಮಾಣ ಕಡಿಮೆಯಿರಬಹುದಾದರೂ, ಅಂತಿಮ ಅಂಕಿ ಅಂಶಗಳನ್ನು ಪ್ರಕಟಿಸಲು ಆರ್‌ಬಿಐ ಅಲ್ಲಿಯವರೆಗೆ ಕಾಯಬಹುದು.
ಆರ್‌ಬಿಐಗೆ ಎರಡು ರೀತಿಯ ಸಮಸ್ಯೆಗಳು ಕಾಡುತ್ತಿವೆ ಎನ್ನುತ್ತಾರೆ ತಜ್ಞರು. ಒಂದು ಇಮ್ಮಡಿ ಎಣಿಕೆ. ‘‘ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಂದ ಮಾತ್ರವಲ್ಲ, ಅಂಚೆ ಕಚೇರಿಗಳು, ಜಿಲ್ಲಾ ಸಹಕಾರಿ ಬ್ಯಾಂಕುಗಳು, ಪೆಟ್ರೋಲ್ ಪಂಪ್‌ಗಳಿಂದಲೂ ವಾಪಸ್ ಬಂದಿರುವ ಹಳೆಯ ನೋಟುಗಳ ಸಂಖ್ಯೆಯನ್ನು ಸಂಗ್ರಹಿಸಿದೆ. ಇಲ್ಲಿ ಎರಡೆರಡು ಬಾರಿ ಹಣ ಎಣಿಕೆಯಾಗಿರುವ ಸಾಧ್ಯತೆಯಿದೆ’’ ಎಂದು ಎಸ್‌ಬಿಐನ ಗ್ರೂಪ್ ಚೀಫ್ ಎಕನಾಮಿಕ್ ಅಡೈಸರ್ ಆಗಿರುವ ಸೌಮ್ಯಕಾಂತಿ ಘೋಷ್ ಹೇಳಿದ್ದಾರೆ.
ಉದಾಹರಣೆಗೆ ಅಂಚೆ ಕಚೇರಿಗಳು ಎಸ್‌ಬಿಐನಲ್ಲಿ ಖಾತೆಗಳನ್ನು ಹೊಂದಿವೆ, ಆದರೆ ಇವು ಹಳೆಯ ನೋಟುಗಳ ಅಂಕಿಅಂಶ ಗಳನ್ನು ಆರ್‌ಬಿಐಗೂ ನೇರವಾಗಿ ವರದಿ ಮಾಡಿವೆ. ಎಸ್‌ಬಿಐ ಆರ್‌ಬಿಐಗೆ ಸಲ್ಲಿಸಿರುವ ಅಂಕಿ ಅಂಶಗಳಲ್ಲಿ ಅಂಚೆಕಚೇರಿಗಳಿಂದ ಜಮೆಯಾಗಿರುವ ಹಣವೂ ಸೇರಿರುವುದರಿಂದ ಆರ್‌ಬಿಐ ನಿಖರವಾದ ಸಂಖ್ಯೆಯನ್ನು ಕಂಡುಕೊಳ್ಳಲು ಅವುಗಳನ್ನು ಪ್ರತ್ಯೇಕಿಸಬೇಕಾಗುತ್ತದೆ.
ಹಳೆಯ ನೋಟುಗಳನ್ನು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದ್ದ ಸಾರ್ವಜನಿಕ ಸೇವೆಗಳು ಮತ್ತು ಪೆಟ್ರೋಲ್ ಪಂಪ್‌ಗಳ ವಿಷಯದಲ್ಲಿಯೂ ಇದೇ ಸಮಸ್ಯೆಯಾಗಿದೆ. ಅವು ಬ್ಯಾಂಕುಗಳಿಗೆ ದೈನಂದಿನ ಅಂಕಿಅಂಶಗಳನ್ನು ಸಲ್ಲಿಸಿವೆಯಾದರೂ, ವಾಸ್ತವದಲ್ಲಿ ನೋಟುಗಳನ್ನು ಜಮೆ ಮಾಡುವ ಪ್ರಕ್ರಿಯೆ ಸಮಯವನ್ನು ತೆಗೆದುಕೊಂಡಿರಬಹುದು. ಬ್ಯಾಂಕುಗಳು ಈ ಹಣವನ್ನು ಎರಡೆರಡು ಬಾರಿ ಲೆಕ್ಕಕ್ಕೆ ತೆಗೆದುಕೊಂಡಿವೆಯೇ ಎನ್ನುವುದನ್ನು ಆರ್‌ಬಿಐ ಪತ್ತೆ ಹಚ್ಚಬೇಕಾಗಿದೆ.
‘‘ಪೆಟ್ರೋಲ್ ಪಂಪ್‌ವೊಂದು ಎಸ್‌ಬಿಐನಲ್ಲಿ ಖಾತೆಯನ್ನು ಹೊಂದಿರಬಹುದು. ಈ ಖಾತೆಯಲ್ಲಿ ನೋಟುಗಳನ್ನು ಜಮಾ ಮಾಡಿದಾಗ ಅದು ಎರಡೆರಡು ಬಾರಿ ಲೆಕ್ಕದಲ್ಲಿ ಸೇರಿರಬಹುದು’’ ಎಂದು ಘೋಷ್ ಹೇಳಿದ್ದಾರೆ.
ವಾಪಸಾಗಿರುವ ಹಳೆಯ ನೋಟುಗಳ ಬಗ್ಗೆ ಆರ್‌ಬಿಐ ಸಂಪೂರ್ಣ ವಾಗಿ ಗೌಪ್ಯ ಕಾಯ್ದು ಕೊಂಡಿದೆ ಎಂದಲ್ಲ. 12.44 ಲ.ಕೋ.ವೌಲ್ಯದ ಹಳೆಯ ನೊಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಅದು ಡಿ.13ರಂದು ತಿಳಿಸಿತ್ತು. ಎಸ್‌ಬಿಐ ಕೂಡ ಪ್ರತಿ ದಿನ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸುತಿತ್ತು. ಆದರೆ ಇಮ್ಮಡಿ ಎಣಿಕೆಯ ಭೀತಿಯಿಂದ ಸ್ವಲ್ಪಸಮಯದ ಬಳಿಕ ಅದನ್ನು ನಿಲ್ಲಿಸಿತ್ತು.
ಅಲ್ಲದೆ ನೋಟುಗಳನ್ನು ಎಣಿಸುವ ಅಗಾಧ ಕಾರ್ಯವೂ ವಿಳಂಬಕ್ಕೆ ಕಾರಣವಾಗಿರಬಹುದು. ಅಂತಿಮ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದಾಗ ಯಾವುದೇ ವಿವಾದವುಂಟಾಗದಂತೆ ಅದು ಎಚ್ಚರಿಕೆ ವಹಿಸಿರಬಹುದು. ಸುಮಾರು ಶೇ.95ರಷ್ಟು ಹಳೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಾಸಾಗಿವೆ ಎನ್ನುತ್ತಾರೆ ಬ್ಯಾಂಕರ್‌ಗಳು.
ಆದರೆ ನೋಟು ರದ್ದತಿಯ ಬಳಿಕ ನಗದು ಕೊರತೆಯಲ್ಲಿ ಸುಧಾರಣೆ ಕಾಣಿಸಿಕೊಂಡಾಗ ಬಹಳಷ್ಟು ಹೊಸನೋಟುಗಳು ಮತ್ತು ಕಾನೂನುಬದ್ಧವಾಗಿ ಚಾಲ್ತಿಯಲ್ಲಿರುವ ಸಣ್ಣ ಮುಖಬೆಲೆಗಳ ನೋಟುಗಳೂ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿವೆ. ‘‘ ಹೀಗಿರುವಾಗ ಒಟ್ಟು ಜಮೆಯಾದ ಹಣದಲ್ಲಿ ಹಳೆಯ ನೋಟುಗಳೆಷ್ಟು ಮತ್ತು ಚಾಲ್ತಿಯಲ್ಲಿರುವ ಮೊದಲಿನ ನೋಟುಗಳು ಮತ್ತು ಹೊಸನೋಟು ಗಳೆಷ್ಟು ಎಂಬ ಲೆಕ್ಕವನ್ನು ಬ್ಯಾಂಕುಗಳು ನೀಡುವುದಾದರೂ ಹೇಗೆ? ಇದು ತುಂಬಾ ಕಷ್ಟದ ಕೆಲಸ’’ ಎಂದು ಘೋಷ್ ಹೇಳುತ್ತಾರೆ.







