ಆಧಾರ್‌ನಿಂದ ಜಲ್ಲಿಕಟ್ಟುವರೆಗೆ...
ಸುಪ್ರೀಂ ತೀರ್ಪು ತಿರಸ್ಕಾರ

ನ್ಯಾಯಾಲಯದ ಆದೇಶವನ್ನು ಸಾರಾಸಗಟಾಗಿ ತಿರಸ್ಕರಿಸಲು ಮುಖ್ಯ ಕಾರಣವೆಂದರೆ, ನ್ಯಾಯ ಪರಿಪಾಲನೆ ವಿಚಾರದಲ್ಲಿ ಭಾರತೀಯ ಸಮಾಜದಲ್ಲಿ ಹೆಚ್ಚುತ್ತಿರುವ ವಿರೋಧ. ಉದಾಹರಣೆಗೆ ಕೇಂದ್ರ ಸರಕಾರ 1992ರಿಂದ ಸುಗ್ರೀವಾಜ್ಞೆಗಳನ್ನು ಪುನಃ ಜಾರಿಗೊಳಿಸುವ ಕ್ರಮ ಆರಂಭಿಸಿತು. ಸುಗ್ರೀವಾಜ್ಞೆ ಎನ್ನುವುದು ಕೇವಲ ತಾತ್ಕಾಲಿಕ ಕಾನೂನು ಆಗಿದ್ದರೂ, ಈ ವಿಧಾನ ಅಕ್ಷರಶಃ ಸಂಸತ್ತಿನ ಶಾಸನ ರೂಪಿಸುವ ಅಧಿಕಾರವನ್ನು ಕಿತ್ತುಕೊಂಡಿತು.
ತಮಿಳುನಾಡು ಸರಕಾರದ ಜಲ್ಲಿಕಟ್ಟು ನಿಯಂತ್ರಣ ಕಾಯ್ದೆಯನ್ನು 2014ರಲ್ಲಿ ಸುಪ್ರೀಂಕೋರ್ಟ್ ತಳ್ಳಿಹಾಕಿತು. ಈ ಮೂಲಕ ಸುಗ್ಗಿ ಹಬ್ಬವಾದ ಪೊಂಗಲ್ ಸಂದರ್ಭದಲ್ಲಿ ಏರ್ಪಡಿಸುವ ಪ್ರಾಚೀನ ತಮಿಳು ಕ್ರೀಡೆಯನ್ನು ನಿಷೇಧಿಸಿತು. 2017ರ ಪೊಂಗಲ್ ದಿನ ಸಮೀಪಿಸುತ್ತಿದ್ದಂತೆ ಇದಕ್ಕೆ ಬಂದ ಪ್ರತಿಕ್ರಿಯೆಗಳು ಗಮನಾರ್ಹ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದಿರಲು ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಅವರೇ ಮುಂಚೂಣಿಯಲ್ಲಿರುವಂತೆ ಕಂಡುಬಂತು. ಪೊಂಗಲ್‌ಗೆ ನಾಲ್ಕು ದಿನ ಮುಂಚಿತವಾಗಿ ಅವರು ನೀಡಿದ ಹೇಳಿಕೆ, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜಲ್ಲಿಕಟ್ಟು ನಡೆಯುವುದು ಖಚಿತ ಸುಪ್ರೀಂಕೋರ್ಟ್ ನಿಷೇಧದ ಹೊರತಾಗಿಯೂ ವ್ಯಾಪಕವಾಗಿ ರಾಜ್ಯಾದ್ಯಂತ ಪೊಂಗಲ್ ಸಂದರ್ಭದಲ್ಲಿ ಈ ಕ್ರೀಡೆ ಆಯೋಜಿಸಿದ ಬಗ್ಗೆ ವರದಿಗಳು ಬಂದಿವೆ. ಸುಪ್ರೀಂಕೋರ್ಟ್ ಆದೇಶವನ್ನು ಸಾರ್ವಜನಿಕವಾಗಿ ಕಡೆಗಣಿಸಿರುವುದು ಗಮನಾರ್ಹ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ವಿಚಾರವೆಂದರೆ ಇದು ಪ್ರವೃತ್ತಿಯಾಗಿ ಬೆಳೆಯುತ್ತಿರುವುದು. ಆಡಳಿತ ಯಂತ್ರವೇ ಹಲವು ಹೈಪ್ರೊಫೈಲ್ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಕಡೆಗಣಿಸಿದ ಸಾಕಷ್ಟು ನಿರ್ದಶನಗಳಿವೆ. ನ್ಯಾಯಾಲಯ ತನ್ನ ಕಾರ್ಯಾಚರಣೆ ವ್ಯಾಪ್ತಿಯನ್ನು ಮೀರಿ ಕೈಗೊಂಡಿರುವ ನಿರ್ಧಾರ, ವಿಸ್ತೃತವಾದ ಸಾಮಾಜಿಕ ಅಂಶಗಳು ಕೂಡಾ ಇದಕ್ಕೆ ಕಾರಣವಾಗಿದ್ದು, ಒಟ್ಟಾರೆಯಾಗಿ ಕಾನೂನು ಸ್ಥಿತಿ ಹದಗೆಡುತ್ತಿರುವುದನ್ನಷ್ಟೇ ದೂರಲು ಸಾಧ್ಯ.
ಆಧಾರ್ ವಿವಾದ
ಕೆಲ ಸಮಯದ ಹಿಂದೆ ಕೇಂದ್ರ ಸರಕಾರ ನೀಡುವ ಆಧಾರ್ ಎಂಬ ಬಯೋಮೆಟ್ರಿಕ್ ಕಾರ್ಡ್‌ಗಳನ್ನು ಕೆಲ ಸೇವೆಗಳಿಗೆ ಕಡ್ಡಾಯಗೊಳಿಸಲಾಯಿತು. ಇಂದು ಐಐಟಿ ಪ್ರವೇಶ ಪರೀಕ್ಷೆ ಬರೆಯಬೇಕಾದರೂ, ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯ. ಉದ್ಯೋಗಿಗಳ ಭವಿಷ್ಯನಿಧಿಯ ಭಾಗವಾದ ಪಿಂಚಣಿ ಪಡೆಯಲು ಕೂಡಾ ಆಧಾರ್ ಬೇಕೇಬೇಕು. ಭಾರತೀಯ ರೈಲ್ವೆಯ ರಿಯಾಯಿತಿ ಪಡೆಯಲು ಹಿರಿಯ ನಾಗರಿಕರು ತಮ್ಮ ಆಧಾರ್ ಸಂಖ್ಯೆಯನ್ನು ನೀಡುವುದು ಕೂಡಾ ಎಪ್ರಿಲ್‌ನಿಂದ ಕಡ್ಡಾಯವಾಗಲಿದೆ.
ಆದರೆ ಸುಪ್ರೀಂಕೋರ್ಟ್, 2015ರ ಆಗಸ್ಟ್‌ನಲ್ಲಿ ನೀಡಿದ ತೀರ್ಪಿನಲ್ಲಿ, ಯಾವುದೇ ಸರಕಾರಿ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂಥ ಉಲ್ಲಂಘನೆಗಳಿಗೆ ಸುಪ್ರೀಂಕೋರ್ಟ್‌ನ ಸ್ಪಂದನೆ ಎಂದರೆ, ಆಧಾರ್ ಕಾರ್ಡ್‌ನ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಪ್ರಕರಣದ ವಿಚಾರಣೆಯನ್ನು ಅನಗತ್ಯವಾಗಿ ವಿಳಂಬ ಮಾಡುವುದು. ಈ ಕಾರಣದಿಂದ ಕೇಂದ್ರ ಸರಕಾರ, ಸರಕಾರಿ ಸೇವೆಗಳಿಗೆ ಆಧಾರ್ ಕಡ್ಡಾಯಗೊಳಿಸುವುದನ್ನು ನಿಷೇಧಿಸುವ ಸುಪ್ರೀಂಕೋರ್ಟ್ ನಿರ್ದೇಶನವನ್ನು ಧಿಕ್ಕರಿಸುತ್ತಿದೆ.
ಕರ್ನಾಟಕ ಸರಕಾರ, 2015ರ ಸೆಪ್ಟಂಬರ್‌ನಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲಂಘಿಸಿತು. ಈ ಅವಜ್ಞೆ ಎಷ್ಟು ಸ್ಪಷ್ಟವೆಂದರೆ, ಕರ್ನಾಟಕ ವಿಧಾನಸಭೆ ಇದಕ್ಕಾಗಿ ವಿಶೇಷ ಅಧಿವೇಶನ ನಡೆಸಿ, ಈ ಸಂಬಂಧ ನಿರ್ಣಯವನ್ನೂ ಅಂಗೀಕರಿಸಿತು. ಎಲ್ಲ ಪಕ್ಷಗಳೂ ಸದನದಲ್ಲಿ ಇದನ್ನು ಬೆಂಬಲಿಸಿದವು. ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸುವ ನಿರ್ಧಾರವನ್ನು ತಿಳಿಸಲಾಯಿತು. ಕರ್ನಾಟಕ ಹೀಗೆ ಕೋರ್ಟ್ ತೀರ್ಪು ಉಲ್ಲಂಘಿಸಿದ ಪರಿಣಾಮ, ಪ್ರತಿಭಟನಾರ್ಥವಾಗಿ, ಪ್ರಕರಣದ ವಿಚಾರಣೆಯಲ್ಲಿ ವಾದ ಮಂಡಿಸಲು ರಾಜ್ಯದ ಪರ ವಕೀಲರಾಗಿದ್ದ ಫಾಲಿ ನಾರಿಮನ್ ನಿರಾಕರಿಸಿದರು. ಅಂತೆಯೇ ಆಧಾರ್ ವಿಚಾರದಲ್ಲಿ ಕೂಡಾ ಸುಪ್ರೀಂಕೋರ್ಟ್, ನ್ಯಾಯಾಲಯ ನಿಂದನೆಗಾಗಿ ಯಾರನ್ನೂ ಶಿಕ್ಷಿಸಿಲ್ಲ.
ನ್ಯಾಯ ಪರಿಪಾಲನೆ?
ಹೀಗೆ ನ್ಯಾಯಾಲಯದ ಆದೇಶವನ್ನು ಸಾರಾಸಗಟಾಗಿ ತಿರಸ್ಕರಿಸಲು ಮುಖ್ಯ ಕಾರಣವೆಂದರೆ, ನ್ಯಾಯ ಪರಿಪಾಲನೆ ವಿಚಾರದಲ್ಲಿ ಭಾರತೀಯ ಸಮಾಜದಲ್ಲಿ ಹೆಚ್ಚುತ್ತಿರುವ ವಿರೋಧ. ಉದಾಹರಣೆಗೆ ಕೇಂದ್ರ ಸರಕಾರ 1992ರಿಂದ ಸುಗ್ರೀವಾಜ್ಞೆಗಳನ್ನು ಪುನಃ ಜಾರಿಗೊಳಿಸುವ ಕ್ರಮ ಆರಂಭಿಸಿತು. ಸುಗ್ರೀವಾಜ್ಞೆ ಎನ್ನುವುದು ಕೇವಲ ತಾತ್ಕಾಲಿಕ ಕಾನೂನು ಆಗಿದ್ದರೂ, ಈ ವಿಧಾನ ಅಕ್ಷರಶಃ ಸಂಸತ್ತಿನ ಶಾಸನ ರೂಪಿಸುವ ಅಧಿಕಾರವನ್ನು ಕಿತ್ತುಕೊಂಡಿತು. 2016ರ ಡಿಸೆಂಬರ್‌ನಲ್ಲಿ ಕೇಂದ್ರ ಸರಕಾರ ವಿರೋಧಿ ಆಸ್ತಿ ಸುಗ್ರೀವಾಜ್ಞೆಯನ್ನು ಐದನೆ ಬಾರಿಗೆ ಮರು ಜಾರಿ ಮಾಡಿತು. ಅಂದರೆ ಈ ವಿಚಾರದಲ್ಲಿ ಸಂಸತ್ತಿನ ಮತ್ತು ಚುನಾಯಿತ ಪ್ರತಿನಿಧಿಗಳ ಮೇಲೆ ಸರಕಾರಕ್ಕೆ ವಿಶ್ವಾಸವಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಈ ಸಂಪ್ರದಾಯಕ್ಕೆ ಬಿಹಾರ ಅಗ್ರಗಣ್ಯ ರಾಜ್ಯ. ಇಲ್ಲಿ ಸುಗ್ರೀವಾಜ್ಞೆ ಹಲವು ಮುಖ್ಯಮಂತ್ರಿಗಳ ಕಾಲದಿಂದಲೂ ಮುಂದುವರಿದಿದೆ. ಬಿಹಾರ ಕಬ್ಬು ಸುಗ್ರೀವಾಜ್ಞೆ 14 ವರ್ಷಗಳ ಕಾಲ ಮುಂದುವರಿದಿದ್ದು, ಒಮ್ಮೆಯೂ ಶಾಸನಸಭೆಯನ್ನು ಇದು ಪ್ರವೇಶಿಸಿಲ್ಲ.
ಖ್ಯಾತ ವಕೀಲ ಅಲೋಕ್ ಪ್ರಸನ್ನ ಕುಮಾರ್ ಅಭಿಪ್ರಾಯಪಡುವಂತೆ ಸರಕಾರ ನ್ಯಾಯಪರಿಪಾಲನೆಯನ್ನು ಕೈಬಿಟ್ಟಿದೆ. ಇತ್ತೀಚೆಗೆ ಅಮೆಝಾನ್ ಯಾವ ನಿರ್ದಿಷ್ಟ ಕಾನೂನನ್ನು ಉಲ್ಲಂಘಿಸದಿದ್ದರೂ, ಕೇಂದ್ರ ಸಚಿವರು ಹಾಗೂ ಅಧಿಕಾರಿಗಳು ಆ ಸಂಸ್ಥೆಗೆ ಧಮಕಿ ಹಾಕಿದರು.
ಹದ್ದುಮೀರಿದ ನ್ಯಾಯಾಂಗ
ನ್ಯಾಯಾಲಯಕ್ಕೆ ನಿರ್ದಿಷ್ಟವಾಗಿ ಸಂಬಂಧಿಸಿದಂತೆ ಹೇಳುವುದಾದರೆ, ಸುಪ್ರೀಂಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಆಡಳಿತ ಯಂತ್ರದ ಕಾರ್ಯಾಂಗದ ಮೇಲೂ ಅಧಿಕಾರ ಚಲಾಯಿಸುವ ಮನೋಪ್ರವೃತ್ತಿಯನ್ನು ಹೊಂದಿರುವುದು ಇದಕ್ಕೆ ಮುಖ್ಯ ಕಾರಣ. ಸಾಮಾನ್ಯವಾಗಿ ಸುಪ್ರೀಂಕೋರ್ಟ್, ಇಂಗ್ಲಿಷ್ ಭಾಷಾ ಪತ್ರಿಕೆಗಳ ವರದಿ ಮತ್ತು ಮಧ್ಯಮವರ್ಗದ ಅಭಿಪ್ರಾಯಗಳಿಗೆ ಸ್ಪಂದಿಸುವ ಜನಪ್ರಿಯ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಬಹುದು.
ಹಿಂದೆ ಸುಪ್ರೀಂಕೋರ್ಟ್ ದಿಲ್ಲಿಯ ಮಾಲಿನ್ಯ ಸಮಸ್ಯೆಯನ್ನು ನಿರ್ವಹಿಸಿದೆ; ಮುಂಬೈನ ದಹಿ ಹಂಡಿ ಮಾನವ ಪಿರಮಿಡ್‌ನ ಎತ್ತರಕ್ಕೆ ಗರಿಷ್ಠ ಮಿತಿ ನಿಗದಿಪಡಿಸಿದೆ ಹಾಗೂ ನದಿಜೋಡಣೆಗೆ ಒತ್ತು ನೀಡಿದೆ. ಈ ಎಲ್ಲ ನಿರ್ಧಾರಗಳನ್ನು ನೋಡಿದರೆ, ಕಾರ್ಯಾಂಗ ಹಾಗೂ ನ್ಯಾಯಾಂಗ ಚಟುವಟಿಕೆಗಳನ್ನು ಬೇರ್ಪಡಿಸುವ ಗೆರೆ ಮಬ್ಬಾಗುತ್ತಿರುವುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ.
‘ಕೋರ್ಟಿಂಗ್ ದ ಪೀಪಲ್: ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಇನ್ ಪೋಸ್ಟ್ ಎಮರ್ಜೆಸಿ ಇಂಡಿಯಾ’ ಕೃತಿಯಲ್ಲಿ ಅನೂಜ್ ಭುವಾನಿಯಾ ಸ್ಪಷ್ಟವಾಗಿ ಹೇಳುವಂತೆ, ಇಂಥ ಅಧಿಕಾರದ ವಿಸ್ತರಣೆಯಿಂದಾಗಿ ಅದರ ಕಾನೂನು ಬದ್ಧತೆ ನಶಿಸುತ್ತಿದೆ.
ನ್ಯಾಯಾಂಗ ಇಂಥ ಪರಿಸ್ಥಿತಿಗಳ ಬಗ್ಗೆ ಜಾಗರೂಕವಾಗಿರಬೇಕು ಎನ್ನುವುದು ಭುವಾನಿಯಾ ಅಭಿಪ್ರಾಯ. ಸಮಾಜ ಸುಧಾರಣೆಯ ಸಾಧನ ಎಂಬ ಉತ್ಸಾಹದಲ್ಲಿ ಅದು ಕಾರ್ಯಾಂಗ ಹಾಗೂ ಶಾಸಕಾಂಗದ ಪರಿಧಿ ಪ್ರವೇಶಿಸುತ್ತಿದೆ. ಅದು ಸಾಂವಿಧಾನಿಕ ನ್ಯಾಯಾಲಯ ಎಂಬ ತನ್ನ ಸೀಮಿತ ಪಾತ್ರವನ್ನು ಮೀರುತ್ತಿದೆ. ವಾಸ್ತವವಾಗಿ ಹಾಗೆ ಮಾಡಲು ಅದು ಇನ್ನೂ ಸಶಕ್ತವಾಗಿಲ್ಲ ನ್ಯಾಯಾಲಯ ತನ್ನ ಅಧಿಕಾರವನ್ನು ಕೋರ್ಟ್‌ರೂಂನಲ್ಲಿ ವಿಸ್ತರಿಸಿಕೊಳ್ಳಬಹುದು. ಆದರೆ ಅಂತಿಮವಾಗಿ, ಅದನ್ನು ತಳಮಟ್ಟದಲ್ಲಿ ಚಲಾಯಿಸಬೇಕಾದರೆ, ಕೋರ್ಟ್ ಸರಕಾರದ ಕಾರ್ಯಾಂಗವನ್ನು ಅವಲಂಬಿಸಲೇಬೇಕಾಗುತ್ತದೆ.
ಉದಾಹರಣೆಗೆ ಜಲ್ಲಿಕಟ್ಟು ಪ್ರಕರಣದಂಥ ವಿಚಾರದಲ್ಲಿ ಸುಪ್ರೀಂಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮಗಳನ್ನು ಅನೂರ್ಜಿತಗೊಳಿಸಿದೆ. ಆದರೆ ಕೊನೆಗೆ ಸುಪ್ರೀಂಕೋರ್ಟ್ ತನ್ನ ಆದೇಶದ ಅನುಷ್ಠಾನಕ್ಕೆ ತಮಿಳುನಾಡು ಸರಕಾರದ ನೆರವು ಪಡೆಯುವುದು ಅನಿವಾರ್ಯವಾಗಿದೆ.
2006ರ ಪ್ರಕಾಶ್ ಸಿಂಗ್ ತೀರ್ಪಿನಲ್ಲಿ, ನ್ಯಾಯಾಲಯ ದೊಡ್ಡ ಪ್ರಮಾಣದ ಪೊಲೀಸ್ ನಿಯಮಾವಳಿ ಸುಧಾರಣೆಯಾಗಬೇಕು ಎಂದು ಆದೇಶ ನೀಡಿದೆ. ಇದು ಸರಕಾರದ ಪಾತ್ರವನ್ನು ನೇರವಾಗಿ ಕೈಗೆತ್ತಿಕೊಂಡಂತೆ. ಇದು ಕಾರ್ಯಾಂಗದ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೂ, ವಾಸ್ತವವಾಗಿ ತನ್ನದೇ ತೀರ್ಪನ್ನು ಅನುಷ್ಠಾನಕ್ಕೆ ಬರುವಂತೆ ಮಾಡುವುದು ಸಾಧ್ಯವಾಗಲಿಲ್ಲ. ವಾಸ್ತವವಾಗಿ ಇದು ಚುನಾಯಿತ ಸರಕಾರ ಪೊಲೀಸರ ಮೇಲೆ ಅಧಿಕಾರ ಚಲಾವಣೆ ಮಾಡುವುದನ್ನು ಕಡಿಮೆ ಮಾಡುವಂಥದ್ದು. ಆದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ದೇಶಾದ್ಯಂತ ನ್ಯಾಯಾಲಯದ ತೀರ್ಪುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಇಂಥ ಅವಜ್ಞೆ ಮಾಡಿದವರನ್ನು ಶಿಕ್ಷಿಸುವ ಇರಾದೆ ನ್ಯಾಯಾಲಯಕ್ಕೂ ಇಲ್ಲ; ಅಥವಾ ನ್ಯಾಯಾಲಯಕ್ಕೆ ಸಾಧ್ಯವಾಗುತ್ತಿಲ್ಲ.
ಕೃಪೆ: scroll.in