ಜಲ್ಲಿಕಟ್ಟು ಹೋರಾಟ ಮತ್ತು ತಮಿಳು ಐಡೆಂಟಿಟಿ

ಬಹುತೇಕ ಪ್ರತಿಭಟನಾಕಾರರು ಚೆನ್ನೈ ನಗರದ ಕಾಲೇಜು ವಿದ್ಯಾರ್ಥಿಗಳು. ಬಹುತೇಕ ಸ್ವಂತವಾಗಿ ಹಸು ಸಾಕುವವರ ಮನೆಯಿಂದ ಬಂದವರಲ್ಲ. ಬಹುಶಃ ಎಂದೂ ತಮ್ಮ ಜೀವನದಲ್ಲಿ ಎತ್ತು ಸ್ಪರ್ಶಿಸಿದವರೂ ಅಲ್ಲ. ಇಷ್ಟಾಗಿಯೂ ಜಲ್ಲಿಕಟ್ಟು ಪರ ನಡೆದ ಮರಿನಾ ಬೀಚ್ ಪ್ರತಿಭಟೆಯಲ್ಲಿ ಭಾಗವಹಿಸಿದರು. ಈ ಮೂಲಕ ಇದನ್ನು ಇತ್ತೀಚಿನ ದಶಕಗಳ ಅತಿದೊಡ್ಡ ಹೋರಾಟವಾಗಿ ಮಾರ್ಪಡಿಸಿದರು. ಇದನ್ನು ಸಾಮಾಜಿಕ ಸಾಧ್ಯತೆಗಳ ಆಯಾಮದಿಂದ ನೋಡಬೇಕಾಗುತ್ತದೆ. ನಿರ್ದಿಷ್ಟ ಉದ್ದೇಶಕ್ಕಾಗಿ ಜನರನ್ನು ಒಗ್ಗೂಡಿಸುವಲ್ಲಿ ಸಾಮಾಜಿಕ ಜಾಲತಾಣಗಳು ಎಂಥ ಪಾತ್ರ ವಹಿಸಬಲ್ಲವು ಎನ್ನುವುದಕ್ಕೆ ಇದು ನಿದರ್ಶನ. ಜಲ್ಲಿಕಟ್ಟು ನಿಷೇಧಕ್ಕಿಂತ ಹೆಚ್ಚಾಗಿ ನೋಟು ರದ್ದತಿಯಿಂದ ಪರಿಣಾಮ ಎದುರಾಗಿದ್ದರೂ, ಅದರ ವಿರುದ್ಧ ಇಂಥ ಪ್ರತಿಭಟನೆ ನಡೆಯಲಿಲ್ಲ ಎನ್ನುವುದು ಉಲ್ಲೇಖಾರ್ಹ.
ಚೈನ್ನೈ ಮರೀನಾ ಬೀಚ್‌ಗೆ ತಮಿಳು ರಾಜಕಾರಣದಲ್ಲಿ ವಿಶಿಷ್ಟ ಸ್ಥಾನವಿದೆ. ಸುಬ್ರಹ್ಮಣ್ಯ ಭಾರತಿ ಹಾಗೂ ಗಾಂಧೀಜಿಯಂಥ ದಿಗ್ಗಜರು ಇಲ್ಲಿ ರಾಜಕೀಯ ಭಾಷಣ ಮಾಡಿದ್ದರು. ಜಲ್ಲಿಕಟ್ಟು ವಿರುದ್ಧದ ಹೋರಾಟದಲ್ಲಿ ಖ್ಯಾತನಾಮರು ಯಾರೂ ಪಾಲ್ಗೊಂಡಿಲ್ಲವಾದರೂ, ಇದನ್ನು ಹಲವು ಐತಿಹಾಸಿಕ ರಾಜಕೀಯ ಘಟನಾವಳಿಗಳಿಗೆ ಹೋಲಿಸಬಹುದಾಗಿದೆ.
ಇದರಲ್ಲಿ ಭಾಗವಹಿಸಿದ ಬಹುತೇಕ ಮಂದಿ 30ಕ್ಕಿಂತ ಕಡಿಮೆ ವಯಸ್ಸಿನವರು. ದೊಡ್ಡ ಸಂಖ್ಯೆಯ ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು. ಇದು ಶಾಂತಿಯುತವಾಗಿಯೂ ಇತ್ತು. ಇದಕ್ಕೆ ಪ್ರತಿಭಟನೆ ಎನ್ನುವ ಬದಲಾಗಿ ಹಬ್ಬದ ಕಳೆ ಬಂದಿತ್ತು. ಜಾಥಾ, ಘೋಷಣೆ, ನೃತ್ಯ, ಸಂಗೀತ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ನಿಕಟ ಬಾಂಧವ್ಯ ಇತ್ತು. ನಗರದ ಹೊರಗಿನಿಂದ ಬಂದ ಮಹಿಳೆಯರು ಕೂಡಾ ಇದು ಎಷ್ಟು ಸುರಕ್ಷಿತ ಎನ್ನುವುದನ್ನು ವಿವರಿಸಿದರು.
ನೆಲಮಟ್ಟದಿಂದ ಸುಮಾರು 10 ಅಡಿ ಎತ್ತರದಲ್ಲಿ ತಿರುವಳ್ಳುವರ್ ಪ್ರತಿಮೆ ಕೆಳಗೆ ಕಪ್ಪುಸೀರೆ ಧರಿಸಿದ ಮಹಿಳೆ ಕುಳಿತಿದ್ದರು. ಸೀರೆ ಉಟ್ಟುಕೊಂಡು ಆಕೆ ಅಲ್ಲಿಗೆ ಹೇಗೆ ಹತ್ತಿದರು ಎಂದೇ ನನಗೆ ತಿಳಿಯಲಿಲ್ಲ. ಪ್ರಶಾಂತ ಹಾಗೂ ಬದ್ಧತೆಯ ಭಾವನೆ ಆಕೆಯ ಮುಖದಲ್ಲಿ ಇಣುಕುತ್ತಿತ್ತು. ಪ್ರತಿಯೊಬ್ಬರೂ ಆಕೆಯನ್ನು ಗಮನಿಸುವಂಥ ರಾಜಕೀಯ ಚಹರೆ ಆಕೆಯಲ್ಲಿತ್ತು.
ಉವೈಸ್ ಎಂಬ ವಿದ್ಯಾರ್ಥಿ ಪ್ರತಿಭಟನಾಕಾರರು ಎಸೆದಿದ್ದ ಕಸ ಹೆಕ್ಕಿ ಸ್ವಚ್ಛಗೊಳಿಸುತ್ತಿದ್ದರು. ಆ ಕೊಳಕು ಹೆಕ್ಕಲು ಸಹಾಯ ಮಾಡಲೇ ಎಂದು ಕೇಳಿದೆ. ಕಸ ಹೆಕ್ಕುತ್ತಾ ಹೋದಾಗ, ಅದು ಎಂಥ ಕಷ್ಟದ ಕೆಲಸ ಎನ್ನುವುದು ಅರಿವಿಗೆ ಬಂತು. ಆದರೆ ಆ ವಿದ್ಯಾರ್ಥಿಯಲ್ಲಿ ಬದ್ಧತೆ ಇತ್ತು. ಆತನಿಗೆ ಕೈಗವಸು ಕೂಡಾ ಇದ್ದಿರಲಿಲ್ಲ. ಬರಿಗೈಯಲ್ಲಿ ಗೋಣಿ ಹಿಡಿದು ಆತ ಹೊರಟಿದ್ದ. ಆತನ ನಾಗರಿಕ ಪ್ರಜ್ಞೆ, ನಮ್ಮ ಬಗ್ಗೆ ನಾವೇ ನಾಚಿಕೆಪಟ್ಟುಕೊಳ್ಳುವಂತೆ ಮಾಡಿತು.
ಜಲ್ಲಿಕಟ್ಟು ಹಿಂದೂ ಆಚರಣೆ ಎಂದು ಹಿಂದುತ್ವ ಬ್ರಿಗೇಡ್ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿದ್ದರೂ ದೊಡ್ಡ ಸಂಖ್ಯೆಯ ಮುಸ್ಲಿಮರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಮುಸ್ಲಿಂ ಯುವಕರು, ಇದು ತಮಿಳು ಸಮಸ್ಯೆ ಎನ್ನುವುದನ್ನು ನೆನಪಿಸಿದರು.
ಪ್ರತಿಭಟಕಾರರು ಕಿಕ್ಕಿರಿದು ಸೇರಿದ್ದರಿಂದ ಬೀಚ್ ರಸ್ತೆ ತುಂಬಿತುಳುಕುತ್ತಿತ್ತು. ಕೆಲವೆಡೆ ಸಂಚರಿಸುವುದೂ ಕಷ್ಟವಾಗಿತ್ತು. 20ರ ಆಸುಪಾಸಿನ ಉತ್ಸಾಹಿ ಯುವಕರು ಮಾನವ ಸರಪಣಿ ನಿರ್ಮಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಒಂದು ಆಂಬುಲೆನ್ಸ್ ಬಂದಾಗ ಪೊಲೀಸರ ಜತೆ ಸೇರಿ ಈ ಸ್ವಯಂಸೇವಕರು, ಜನಜಂಗುಳಿಯ ನಡುವೆಯೂ ಅದಕ್ಕೆ ದಾರಿ ಮಾಡಿಕೊಟ್ಟರು. ಪೊಲೀಸರು ಪ್ರತಿಭಟನಾಕಾರರಿಗೂ, ಸಾರ್ವಜನಿಕರಿಗೂ ನೆರವಾಗುತ್ತಿದ್ದರು. ಪ್ರತಿಭಟನೆಯಲ್ಲಿ ಪೊಲೀಸರ ಪಾತ್ರವೂ ಮಹತ್ವದ್ದು ಮತ್ತು ಶ್ಲಾಘನೀಯ. ವಿಶ್ವಾದ್ಯಂತ ಯಶಸ್ವಿ ಪ್ರತಿಭಟನೆಗಳ ಹಿಂದೆ ಪೊಲೀಸರ ಕೊಡುಗೆ ಇದೆ. ಪೊಲೀಸರು ಪ್ರತಿಭಟನಾಕಾರರ ಪರ ಇದ್ದಾಗ ಅಥವಾ ತಮ್ಮ ನಾಗರಿಕರ ವಿರುದ್ಧವೇ ಹಿಂಸೆ ನಡೆಸದಿದ್ದಾಗಲೆಲ್ಲ ಪ್ರತಿಭಟನೆ ಯಶಸ್ವಿಯಾಗಿದೆ. ಫ್ರಾನ್ಸ್ ಕ್ರಾಂತಿ ಎಂದು ಬಣ್ಣಿಸಲಾದ ತಹ್ರಿರ್ ಸ್ಕ್ವೇರ್ ಘಟನೆ ಇದಕ್ಕೆ ಉತ್ತಮ ನಿದರ್ಶನ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಹೊರಟರೆ ಏನಾಗುತ್ತದೆ ಎನ್ನುವುದಕ್ಕೆ ಸಿರಿಯಾ ಉದಾಹರಣೆ. ತಮಿಳುನಾಡು ಈ ಎರಡೂ ವೈಪರೀತ್ಯಗಳಿಗೆ ಉದಾಹರಣೆಯಾಗಿಲ್ಲ. ಆದರೆ ಪೊಲೀಸರು ಹೋರಾಟಗಾರರ ಜತೆಗೆ ಸೆಲ್ಫಿ ತೆಗೆಸಿಕೊಂಡು, ಹಬ್ಬದ ವಾತಾವರಣವನ್ನು ಆಸ್ವಾದಿಸುತ್ತಿದ್ದುದು ಕಂಡುಬಂತು. ಬಹುತೇಕ ಪೊಲೀಸರು ಕರ್ತವ್ಯದಲ್ಲಿದ್ದರೂ, ಅವರು ಕೂಡಾ ಈ ಹಕ್ಕೊತ್ತಾಯಕ್ಕೆ ಕೈಜೋಡಿಸಿದಂತಿತ್ತು.
ಚುನಾವಣೆ ರ್ಯಾಲಿಗಳಂಥ ದೈತ್ಯ ಬಲಪ್ರದರ್ಶನವೇನೂ ಇದಾಗಿರಲಿಲ್ಲ. ಹಲವು ಸಣ್ಣ ಸಣ್ಣ ಗುಂಪುಗಳು ಒಗ್ಗೂಡಿದ್ದವು. ಮೈಕ್ರೋಫೋನ್ ಸಹಾಯದಿಂದ ಹಲವು ವಿದ್ಯಾರ್ಥಿಗಳು ಪುಟ್ಟ ಭಾಷಣಗಳನ್ನು ಮಾಡಿದರು. ಕೆಲವರು ಚಾಣಾಕ್ಷ, ಹಾಸ್ಯಮಯ ಘೋಷಣೆಗಳನ್ನು ಮೋದಿ ಹಾಗೂ ಪನ್ನೀರಸೆಲ್ವಂ ಬಗ್ಗೆಯೂ ಸಿಡಿಸುತ್ತಿದ್ದರು. ವಿವಾದಕ್ಕೆ ಕಾರಣವಾದ ಸುಬ್ರಹ್ಮಣ್ಯಮ್ ಸ್ವಾಮಿಯ ಟ್ವೀಟ್ ಕೂಡಾ ಪ್ರಸ್ತಾಪವಾಗುತ್ತಿತ್ತು. ಕೆಲವರು ಪೆಟಾ ನಿಷೇಧಕ್ಕೆ ಒತ್ತಾಯಿಸಿದರು. ಮತ್ತೆ ಕೆಲವರು ದೇಶಿ ತಳಿಗಳನ್ನು ಕಳೆದುಕೊಳ್ಳುವುದರಿಂದ ಆಗುವ ನಷ್ಟದ ಬಗ್ಗೆ ಚರ್ಚಿಸುತ್ತಿದ್ದರು. ಜಲ್ಲಿಕಟ್ಟು ನಿಷೇಧಿಸುವುದರ ಪರಿಣಾಮ ದೇಶಿ ತಳಿಗಳ ಮೇಲಾಗುತ್ತದೆ ಎಂದು ಪ್ರತಿಪಾದಿಸುತ್ತಿದ್ದರು. ಇದು ಪೆಪ್ಸಿ/ ಕೋಕ್ ನಿಷೇಧಿಸುವಂಥ ಕರೆಯಲ್ಲ; ಆದರೆ ವಿದ್ಯಾರ್ಥಿಗಳೆಲ್ಲರೂ ಒಗ್ಗಟ್ಟಿನಿಂದ ಇರುವಂತೆ ಮನವಿ ಮಾಡಿಕೊಳ್ಳಲಾಗುತ್ತಿತ್ತು. ಎಲ್ಲ ಪ್ರತಿಭಟನೆಗಳ ಸಾರ ತಮಿಳು ಐಡೆಂಟಿಟಿ ಉಳಿಸಿಕೊಳ್ಳಬೇಕು ಎನ್ನುವುದಾಗಿತ್ತು. ತಮಿಳು ಆತಂಕ ಎಲ್ಲರನ್ನೂ ಎದ್ದುಕಾಣುತ್ತಿತ್ತು.
ಬಹುತೇಕ ಪ್ರತಿಭಟನಾಕಾರರು ಚೆನ್ನೈ ನಗರದ ಕಾಲೇಜು ವಿದ್ಯಾರ್ಥಿಗಳು. ಬಹುತೇಕ ಸ್ವಂತವಾಗಿ ಹಸು ಸಾಕುವವರ ಮನೆಯಿಂದ ಬಂದವರಲ್ಲ. ಬಹುಶಃ ಎಂದೂ ತಮ್ಮ ಜೀವನದಲ್ಲಿ ಎತ್ತು ಸ್ಪರ್ಶಿಸಿದವರೂ ಅಲ್ಲ. ಇಷ್ಟಾಗಿಯೂ ಜಲ್ಲಿಕಟ್ಟು ಪರ ನಡೆದ ಮರಿನಾ ಬೀಚ್ ಪ್ರತಿಭಟೆಯಲ್ಲಿ ಭಾಗವಹಿಸಿದರು. ಈ ಮೂಲಕ ಇದನ್ನು ಇತ್ತೀಚಿನ ದಶಕಗಳ ಅತಿದೊಡ್ಡ ಹೋರಾಟವಾಗಿ ಮಾರ್ಪಡಿಸಿದರು. ಇದನ್ನು ಸಾಮಾಜಿಕ ಸಾಧ್ಯತೆಗಳ ಆಯಾಮದಿಂದ ನೋಡಬೇಕಾಗುತ್ತದೆ. ನಿರ್ದಿಷ್ಟ ಉದ್ದೇಶಕ್ಕಾಗಿ ಜನರನ್ನು ಒಗ್ಗೂಡಿಸುವಲ್ಲಿ ಸಾಮಾಜಿಕ ಜಾಲತಾಣಗಳು ಎಂಥ ಪಾತ್ರ ವಹಿಸಬಲ್ಲವು ಎನ್ನುವುದಕ್ಕೆ ಇದು ನಿದರ್ಶನ. ಜಲ್ಲಿಕಟ್ಟು ನಿಷೇಧಕ್ಕಿಂತ ಹೆಚ್ಚಾಗಿ ನೋಟು ರದ್ದತಿಯಿಂದ ಪರಿಣಾಮ ಎದುರಾಗಿದ್ದರೂ, ಅದರ ವಿರುದ್ಧ ಇಂಥ ಪ್ರತಿಭಟನೆ ನಡೆಯಲಿಲ್ಲ ಎನ್ನುವುದು ಉಲ್ಲೇಖಾರ್ಹ.
ಜಲ್ಲಿಕಟ್ಟುವಿನ ಇನ್ನೊಂದು ಮುಖದ ಬಗ್ಗೆ ಕೂಡಾ ತಮಿಳರು ಕುರುಡಾಗಿಲ್ಲ. ಗೂಳಿಗಳನ್ನು ಪಳಗಿಸುವ ಈ ಸಾಂಪ್ರದಾಯಿಕ ಕ್ರೀಡೆಯನ್ನು ಕೆಲ ನಂಬಿಕೆಯೊಂದಿಗೆ ನಡೆಸಲಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಜಲ್ಲಿಕಟ್ಟು ವೇಳೆ ಪ್ರಾಣಿಹಿಂಸೆ ಆಗುತ್ತದೆ ಎಂದು ಪ್ರತಿಭಟಿಸುವ ಪೆಟಾ (ಪೀಪಲ್ಸ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್) ಹೋರಾಟಗಾರರು, ಇಂಥ ಹಿಂಸೆ ನಡೆಯದಂತೆ ಹೆಚ್ಚಿನ ನಿಗಾ ವಹಿಸಬಹುದು. ಈ ಕ್ರೀಡೆಯ ಜತೆ ಯಾವ ಸಂಬಂಧವೂ ಇಲ್ಲದ ನಗರದ ಯುವಜನತೆ ಕೂಡಾ ಬೇರೆಯವರ ಹಕ್ಕಿಗಾಗಿ ಹೋರಾಡುತ್ತಾರೆ ಎಂದಾದರೆ ಈ ಮನೋರಂಜನಾ ಕ್ರೀಡೆಯ ಹಿಂದಿನ ಉದ್ದೇಶ ಅರ್ಥಮಾಡಿಕೊಳ್ಳಬಹುದಾಗಿದೆ. ಏಕೆಂದರೆ ವಿದ್ಯಾರ್ಥಿಗಳು ರೈತರ ಆತ್ಮಹತ್ಯೆ, ಬರಗಾಲದಂಥ ವಿಚಾರಗಳಲ್ಲಿ ಕೂಡಾ ಬೀದಿಗಿಳಿದಿಲ್ಲ ಎನ್ನುವುದು ಗಮನಾರ್ಹ ಅಂಶ. ಇದನ್ನು ದೊಡ್ಡ ಸಮಸ್ಯೆಯ ಒಂದು ಭಾಗವಾಗಿ ಪರಿಗಣಿಸಿದ್ದರಿಂದ ಮಾತ್ರವೇ, ಬೇರೆಯವರಿಗಾಗಿ ಇಂಥ ಹೋರಾಟಕ್ಕೆ ಯುವಶಕ್ತಿ ಧುಮುಕಿತು.
ವಾಸ್ತವವಾಗಿ ತಮಿಳು ಮನೋಭಾವಕ್ಕೆ ಧಕ್ಕೆ ಬಂದದ್ದು ಇಬ್ಬರು ನಾಯಕರ ಅನುಪಸ್ಥಿತಿಯಿಂದ ಎದುರಾದ ಶೂನ್ಯತೆಯಿಂದಾಗಿ. ಜನನಾಯಕಿ ಜಯಲಲಿತಾ ಕಣ್ಮರೆಯಾದರೆ, ಅಸ್ವಸ್ಥರಾಗಿರುವ ಎಂ.ಕರುಣಾನಿಧಿ ಅಕ್ಷರಶಃ ಸಾರ್ವಜನಿಕ ಜೀವನದಿಂದ ನಿವೃತ್ತರಾಗಿದ್ದರೆ. ಜಿಎಸ್‌ಟಿ ವಿಚಾರಕ್ಕೆ ಬಂದರೆ ಜಯಲಲಿತಾ ಅವರ ಎಐಎಡಿಎಂಕೆ ಮಾತ್ರವೇ ರಾಜ್ಯಗಳ ಹಕ್ಕಿಗಾಗಿ ಹೋರಾಡುತ್ತಾ ಬಂದಿತ್ತು. ಈ ರಾಜಕೀಯ ಮೇಲಾಟದಲ್ಲಿ ಅಕ್ಷರಶಃ ತಮಿಳುನಾಡಿಗೆ ಹೆವಿವೈಟ್ ಚಾಂಪಿಯನ್‌ಗಳು ಇಲ್ಲದಂತಾಗಿದೆ. ಈ ಶೂನ್ಯತೆ ಪರಿಣಾಮದ ಅರಿವಾಗಿದ್ದರಿಂದಲೇ ಜನ ತಮ್ಮ ಐಡೆಂಟಿಟಿ ಉಳಿಸಿಕೊಳ್ಳುವ ಸಾಧ್ಯತೆ ಕಂಡುಕೊಂಡರು.
ರಾಷ್ಟ್ರದ ಮುಖ್ಯವಾಹಿನಿಯಲ್ಲಿ ತಮಿಳು ಐಡೆಂಟಿಟಿ ಮರೆಯಾಗುತ್ತಿರುವ ಪ್ರಕ್ರಿಯೆ ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ಬಳಿಕ ತೀವ್ರವಾಯಿತು. ಬಿಜೆಪಿಯ ಸಂಸ್ಕೃತ ಹಾಗೂ ಹಿಂದಿ ಪರ ಒಲವು ಸಹಜವಾಗಿಯೇ ಈ ಗಾಯಕ್ಕೆ ಉಪ್ಪು ಸವರಿತು. ತಮಿಳರಿಗೆ ಭಾರತದ ಎಂದರೆ, ಸ್ಕಾಟ್ಲೆಂಡ್‌ಗೆ ಬ್ರಿಟನ್ ಇದ್ದಂತೆ. ಇದು ಮುಕ್ತ ಪ್ರಯಾಣ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ರಹದಾರಿಯಂತೆ ಮಾತ್ರ. ಅದಕ್ಕಿಂತ ಹೆಚ್ಚಾಗಿ, ಒಬ್ಬ ತಮಿಳು ವ್ಯಕ್ತಿಗೆ ಇದು ಯಾವ ಬದಲಾವಣೆಯನ್ನೂ ತರುವುದಿಲ್ಲ. ಉದಾಹರಣೆಗೆ ಪಾಕಿಸ್ತಾನವನ್ನು ಈ ಯೋಜನೆಯ ಭಾಗವಾಗಿ ಮಾಡಿದರೂ, ತಮಿಳರ ವಿಚಾರಕ್ಕೆ ಬಂದರೆ ಯಾವ ಬದಲಾವಣೆಗೂ ಅದು ಕಾರಣವಾಗುವುದಿಲ್ಲ. ಏಕೆಂದರೆ ಅವರ ತಕ್ಷಣದ ಸಾಂಸ್ಕೃತಿಕ ಘಟಕ ತಮಿಳು ಸಮಾಜ. ಇದು 2500 ವರ್ಷಗಳಿಂದ ಐತಿಹಾಸಿಕವಾಗಿಯೂ ದೃಢಪಟ್ಟಿದೆ. ಭಾರತೀಯ ರಾಜ್ಯವಾಗಿ 70 ವರ್ಷಗಳಲ್ಲಿ ಇದನ್ನು ಬದಲಿಸಲಾಗದು. ಈ ಹಿನ್ನೆಲೆಯಲ್ಲಿ ಮರಿನಾ ಬೀಚ್ ಉತ್ಸವವನ್ನು ಕೇವಲ ನಿರ್ದಿಷ್ಟ ಉದ್ದೇಶದ ಪ್ರತಿಭಟನೆ ಎಂದು ಪರಿಗಣಿಸದೆ, ತಮಿಳು ಐಕಮತ್ಯದ ಅಭಿವ್ಯಕ್ತಿಯಾಗಿ ಕಾಣಬೇಕು. ಈ ಐಕಮತ್ಯ ಹಾಗೂ ಉಪ-ರಾಷ್ಟ್ರೀಯತೆ ಕಳೆದ 70 ವರ್ಷದಲ್ಲಿ ತಮಿಳುನಾಡಿನಲ್ಲಿ ಚಾಲ್ತಿಯಲ್ಲಿದೆ. ಈ ರಾಜ್ಯ ಆರೋಗ್ಯ ಹಾಗೂ ಶಿಕ್ಷಣ ಸೂಚ್ಯಂಕದಲ್ಲಿ ಇತರ ಯಾವುದೇ ರಾಜ್ಯಗಳಿಗಿಂತ ಉತ್ತಮ ಸಾಧನೆ ತೋರಿದೆ. ಇದು ಅಭಿವೃದ್ಧಿ ವಿಚಾರದಲ್ಲೂ ಜನರಲ್ಲಿ ನನ್ನ ರಾಜ್ಯ ಎಂಬ ಹೆಮ್ಮೆಯನ್ನು ಬೆಳೆಸಿದೆ. ಮರಿನಾ ಬೀಚ್ ಪ್ರತಿಭಟನೆಯು, ಕೇಂದ್ರ ಹೇಗೆ ಭವಿಷ್ಯದಲ್ಲಿ ಇತರ ರಾಜ್ಯಗಳ ಜತೆ ವ್ಯವಹರಿಸಬೇಕು ಎನ್ನುವುದನ್ನೂ ತೋರಿಸಿಕೊಟ್ಟಿದೆ.
ಕೃಪೆ: thewire.in