ಪ್ರಜಾಪ್ರಭುತ್ವದ ದೈತ್ಯ ಶಕ್ತಿಗಳ ಕಥೆ-ವ್ಯಥೆ

ಭಾರತ ಹಾಗೂ ಅಮೆರಿಕದಲ್ಲಿ ವಿಜೇತರಿಗೆ ಪೂರ್ಣ ಬಹುಮತವನ್ನು ಮತದಾರರು ನೀಡಿದ್ದಾರೆ. ವಿಚಿತ್ರವೆಂದರೆ ವಿಭಜನಶೀಲ ಚುನಾವಣಾ ತಂತ್ರಗಾರಿಕೆಯಿಂದಾಗಿ ದೇಶ ಒಗ್ಗೂಡುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕರ್ಷಕ ವ್ಯಕ್ತಿತ್ವದ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಟಿವಿ ತಾರೆಯಾಗಿ ಮಿಂಚಿದವರು. ನಮ್ಮ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದು, ಅಚ್ಚರಿಯ ರೀತಿಯಲ್ಲಿ ದೇಶದ ನಾಯಕತ್ವ ವಹಿಸಿಕೊಂಡವರು. ಆರ್ಥಿಕ ಸಂಕಷ್ಟ ಹಾಗೂ ಆಡಳಿತದ ಕೊರತೆಯ ವಿರುದ್ಧದ ಜನಾಕ್ರೋಶವನ್ನು ಆಯಾ ದೇಶಗಳಲ್ಲಿ ವಿರೋಧಿಗಳ ವಿರುದ್ಧದ ಅಸ್ತ್ರವಾಗಿ ಟ್ರಂಪ್ ಹಾಗೂ ಮೋದಿ ಬಳಸಿಕೊಂಡರು. ದೇಶದ ಸ್ಥಿತಿಯನ್ನು ಉತ್ತಮಪಡಿಸುವ ಭರವಸೆಯ ಮೂಲಕ ಮತ್ತು ಹಿಂದೆ ಆಡಳಿತ ನಡೆಸಿದವರು ಸ್ವಹಿತಾಸಕ್ತಿಗಾಗಿ ದೇಶವನ್ನು ಬಲಿಕೊಟ್ಟಿದ್ದಾರೆ ಎಂದು ಬಿಂಬಿಸಿ ಅಧಿಕಾರಕ್ಕೆ ಬಂದವರು.
ವಿಶ್ವದ ಅತ್ಯಂತ ಹಳೆಯ ಹಾಗೂ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ 2014 ಹಾಗೂ 2016 ಚರಿತ್ರಾರ್ಹ. ಎರಡೂ ದೇಶಗಳು ಈ ವರ್ಷಗಳಲ್ಲಿ ಚುನಾವಣೆ ಎದುರಿಸಿದವು. ಭಾರತದಲ್ಲಿ 81 ಕೋಟಿ ಹಾಗೂ ಅಮೆರಿಕದಲ್ಲಿ 241 ಕೋಟಿ ಅರ್ಹ ಮತದಾರರು ತಮ್ಮ ಅಧಿಕಾರದ ಬಂಡವಾಳವನ್ನು ನೆಚ್ಚಿನ ನಾಯಕರಲ್ಲಿ ಹೂಡಿದರು. ಭಾರತೀಯ ರಾಜಕಾರಣಿಗಳು 100 ಕೋಟಿ ಡಾಲರ್ ಹಣವನ್ನು ಪ್ರಚಾರಕ್ಕೆ ಹೂಡುವ ಮೂಲಕ, ಅಮೆರಿಕದ ಅಧ್ಯಕ್ಷೀಯ ಚುನಾವಣೆ ಬಳಿಕದ ಅತ್ಯಂತ ದುಬಾರಿ ಚುನಾವಣೆಯಾಗಿಸಿದರು. ಇಂಥ ಅಗಾಧ ಪ್ರಮಾಣದ ಪ್ರಜಾಪ್ರಭುತ್ವ ಅನುಭವ ಆಸ್ವಾದಿಸಬೇಕಾದರೆ, ಚಲಾಯಿಸುವವರ ಆರ್ಥದಲ್ಲಿ ಮತ ಎಂದರೇನು ಹಾಗೂ ರಾಜಕೀಯ ಸಂಸ್ಕೃತಿ ಸಂಘಟಿಸುವ ಸಮಾಜದಲ್ಲಿ ಅದರ ಅರ್ಥವೇನು ಎನ್ನುವುದನ್ನು ತಿಳಿದುಕೊಳ್ಳುವುದೂ ಮುಖ್ಯವಾಗುತ್ತದೆ.
ಭಿನ್ನತೆ ನಡುವೆಯೂ ಸಾಮ್ಯತೆಲೆಕ್ಸ್ ಡೆ ತೊಕ್ವಿಲ್ಲೆ ಅವರ ಪ್ರಕಾರ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಎಂದರೆ, ಪ್ರಜಾಪ್ರಭುತ್ವ ವೈಯಕ್ತಿಕತೆಯನ್ನು ಹೆಚ್ಚಿಸುತ್ತದೆ. ಅದು ತಮ್ಮ ಪೂರ್ವಿಕರಿಂದ, ಸಹವರ್ತಿಗಳಿಂದ ಹಾಗೂ ಮಕ್ಕಳಿಂದ ಬೇರ್ಪಡಿಸಿ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ತಮ್ಮದೇ ಸ್ವಂತ ಮಾರ್ಗ ಕಂಡುಕೊಳ್ಳುವಂತೆ ಮಾಡುತ್ತದೆ. ಯಾರಿಗೂ ಅವರ ಋಣ ಇರುವುದಿಲ್ಲ. ಅವರು ಬೇರೆಯವರಿಂದ ಏನು ನಿರೀಕ್ಷಿಸುವುದೂ ಇಲ್ಲ. ತಾವೇ ಸ್ವಂತಕಾಲಲ್ಲಿ ನಿಂತಿದ್ದೇವೆ ಎಂಬ ಭಾವನೆಯನ್ನು ಬೆಳೆಸುತ್ತದೆ ಆದರೆ ಭಾರತದಲ್ಲಿ ಪ್ರಜಾಪ್ರಭುತ್ವ ಪ್ರಾಚೀನ ಭಾರತದ ರಾಜಕೀಯ ಸಿದ್ಧಾಂತ ಹಾಗೂ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬೆಳೆದಿರುವುದರಿಂದ ಇಲ್ಲಿ ವೈಯಕ್ತಿಕತೆ ಇಲ್ಲಿ ಪ್ರಧಾನ ಅಂಶವಾಗಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಎರಡು ದೈತ್ಯ ಪ್ರಜಾಪ್ರಭುತ್ವ ಶಕ್ತಿಗಳಲ್ಲಿ ರಾಜಕೀಯದ ಚಾರ್ಮ್ ಹಲವು ಸಾಮ್ಯತೆಗಳನ್ನು ಪ್ರದರ್ಶಿಸುತ್ತಿದೆ.
ಭಾರತ ಹಾಗೂ ಅಮೆರಿಕದಲ್ಲಿ ವಿಜೇತರಿಗೆ ಪೂರ್ಣ ಬಹುಮತವನ್ನು ಮತದಾರರು ನೀಡಿದ್ದಾರೆ. ವಿಚಿತ್ರವೆಂದರೆ ವಿಭಜನಶೀಲ ಚುನಾವಣಾ ತಂತ್ರಗಾರಿಕೆಯಿಂದಾಗಿ ದೇಶ ಒಗ್ಗೂಡುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕರ್ಷಕ ವ್ಯಕ್ತಿತ್ವದ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಟಿವಿ ತಾರೆಯಾಗಿ ಮಿಂಚಿದವರು. ನಮ್ಮ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದು, ಅಚ್ಚರಿಯ ರೀತಿಯಲ್ಲಿ ದೇಶದ ನಾಯಕತ್ವ ವಹಿಸಿಕೊಂಡವರು. ಆರ್ಥಿಕ ಸಂಕಷ್ಟ ಹಾಗೂ ಆಡಳಿತದ ಕೊರತೆಯ ವಿರುದ್ಧದ ಜನಾಕ್ರೋಶವನ್ನು ಆಯಾ ದೇಶಗಳಲ್ಲಿ ವಿರೋಧಿಗಳ ವಿರುದ್ಧದ ಅಸ್ತ್ರವಾಗಿ ಟ್ರಂಪ್ ಹಾಗೂ ಮೋದಿ ಬಳಸಿಕೊಂಡರು. ದೇಶದ ಸ್ಥಿತಿಯನ್ನು ಉತ್ತಮಪಡಿಸುವ ಭರವಸೆಯ ಮೂಲಕ ಮತ್ತು ಹಿಂದೆ ಆಡಳಿತ ನಡೆಸಿದವರು ಸ್ವಹಿತಾಸಕ್ತಿಗಾಗಿ ದೇಶವನ್ನು ಬಲಿಕೊಟ್ಟಿದ್ದಾರೆ ಎಂದು ಬಿಂಬಿಸಿ ಅಧಿಕಾರಕ್ಕೆ ಬಂದವರು.
ಪ್ರಚಾರ ಮುಖ್ಯವಾಗಿ ವಿರೋಧಿಗಳ ಮೇಲೆ ದಾಳಿ ಮಾಡಲು ಸೀಮಿತವಾಗಿದ್ದವೇ ವಿನಃ ನೀತಿಗಳ ಪ್ರಸ್ತಾವ ಘೋಷಿಸುವ, ಸಮಸ್ಯೆ ಬಗೆಹರಿಸುವ ಅಥವಾ ನಿರೀಕ್ಷೆ ಹುಟ್ಟುಹಾಕುವ ಪ್ರಯತ್ನ ಮಾಡಲಿಲ್ಲ. ಬದಲಾಗಿ ಭೀತಿ ಹಾಗೂ ಆತಂಕ ಹುಟ್ಟುಹಾಕಿದರು. ಸಾಮಾಜಿಕ ಹಾಗೂ ರಾಜಕೀಯ ಬಿರುಕನ್ನು ಮತ್ತಷ್ಟು ವಿಸ್ತೃತಗೊಳಿಸಿ, ಧರ್ಮ, ಜಾತಿ, ಪಂಥದ ಹೆಸರಿನಲ್ಲಿ ಜನ ಪರಸ್ಪರ ವಿಮುಖವಾಗುವಂತೆ ಮಾಡಿದರು. ಇಬ್ಬರ ಪ್ರಚಾರದಲ್ಲಿ ಕಂಡುಬಂದ ಘೋಷಣೆಗಳಲ್ಲೂ ಸಾಮ್ಯತೆ ಇದೆ. ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ ಎಂದು ಒಬ್ಬರು ಪ್ರಚಾರ ಮಾಡಿದರೆ ಮತ್ತೊಬ್ಬರು ‘ಅಚ್ಛೇದಿನ್’ ಕನಸು ಬಿತ್ತಿದರು. ಜನ ಹಾಗೂ ಒಳ್ಳೆ ದಿನ ಎಂಬ ಕಲ್ಪನೆಯನ್ನು ಬಲಗೊಳ್ಳುವಂತೆ ಮಾಡಿದರು.
ದೇಶದ ವ್ಯಾಪಾರಿ ನೀತಿ, ಒಪ್ಪಂದಗಳಲ್ಲಿ ಜನರ ಹಿತಾಸಕ್ತಿಯೇ ಮುಖ್ಯ ಎಂದು ಘೋಷಿಸುವ ಮೂಲಕ ಆರ್ಥಿಕ ರಾಷ್ಟ್ರೀಯತೆಯನ್ನು ಬಿಂಬಿಸಿದರು. ಆದರೆ ವ್ಯಾಪಾರ ಎನ್ನುವುದು ಕೇವಲ ಅರ್ಥಶಾಸ್ತ್ರ ಮಾತ್ರವಲ್ಲ; ಅದು ಭೌಗೋಳಿಕ ರಾಜಕೀಯವನ್ನೂ ಒಳಗೊಳ್ಳುತ್ತದೆ ಎನ್ನುವುದು ಅವರಿಗೆ ಮನವರಿಕೆಯಾದಂತಿಲ್ಲ. ಉಗ್ರರ ವಿರುದ್ಧ ಹಾಗೂ ರಾಷ್ಟ್ರವಿರೋಧಿಗಳ ವಿರುದ್ಧದ ಹೋರಾಟದ ಹೆಸರಿನಲ್ಲಿ, ಭಿನ್ನತೆಯ ಧ್ವನಿ ಹತ್ತಿಕ್ಕಲು ಮುಂದಾದರು. ಸಾರ್ವಜನಿಕ ಜೀವನದಲ್ಲಿ ಅತಿಯಾಗಿ ಟ್ವೀಟ್ ಹಾಗೂ ಸಾಮಾಜಿಕ ಮಾಧ್ಯಮವನ್ನು ಅವಲಂಬಿಸಿದರು. ವ್ಯಾಪಾರ ಜಗತ್ತಿನ ಜತೆ ನಿಕಟ ಸಂಪರ್ಕ ಸಾಧಿಸಿ, ಸಂಪ್ರದಾಯವಾದಿ ಕ್ಷೇತ್ರಗಳಿಗೆ ಗಮನ ಹರಿಸಿದರು. ಪಕ್ಷದ ಸಂಪ್ರದಾಯಕ್ಕೆ ತಿಲಾಂಜಲಿ ಕೊಟ್ಟು ಗೆಲ್ಲಲಾರರು ಎಂಬ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದರು. ಅವರ ಪ್ರಚಾರ ಮೂಲವಾಗಿ ಅವಲಂಬಿಸಿದ್ದು ಬದಲಾವಣೆ ಮತ್ತು ಅಡ್ಡಿಪಡಿಸುವಿಕೆಯನ್ನು. ಬಹುತೇಕ ಮಂದಿ ಕ್ರಾಂತಿಕಾರಿ ಬದಲಾವಣೆ ಬಯಸಿದ್ದರು. ಇದರಿಂದಾಗಿ ಬದಲಾವಣೆಯ ಏಜೆಂಟ್ ಯಾರು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತಗೊಳ್ಳುವ ಮುನ್ನ ಮೋದಿ ಗುಜರಾತ್ ಸಿಎಂ ಆಗಿದ್ದವರು. ಮುಸ್ಲಿಮರ ವಿರುದ್ಧ ವ್ಯಾಪಕ ಹಿಂಸೆ ನಡೆದದ್ದು ಇವರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಅವಧಿಯಲ್ಲೇ. ಅಂತೆಯೇ ಟ್ರಂಪ್ ಕೂಡಾ ಇದೇ ಸಮುದಾಯದ ವಿರುದ್ಧ ಪ್ರಚಾರದ ವೇಳೆ ಚಾಟಿ ಬೀಸಿದ್ದರು. ಜಾಗತೀಕರಣದಿಂದ ದುಡಿಯುವ ವರ್ಗದ ಮೇಲಾಗುವ ಪರಿಣಾಮ, ವಲಸೆ ಸಮಸ್ಯೆ, ರಾಷ್ಟ್ರೀಯತೆ ದುರ್ಬಲವಾಗುತ್ತಿರುವುದು ಅಥವಾ ಭಯೋತ್ಪಾದನೆಯ ಗುಮ್ಮ ಹೀಗೆ ಭೀತಿ ಹುಟ್ಟಿಸುವ ರಾಜಕೀಯ ರೂಪುಗೊಳ್ಳುವಿಕೆಯೊಂದಿಗೆ ಖಂಡಿತವಾಗಿಯೂ ಭವಿಷ್ಯ ಮಬ್ಬಾಗಿ ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಟ್ರಂಪ್ ಹಾಗೂ ಮೋದಿ ಇಬ್ಬರೂ ಕಟು ಮಾತಿನ ಸುಧಾರಕರು; ರಾಜಕೀಯ ವ್ಯವಸ್ಥೆ ಬದಲಾಯಿಸಲು ಬದ್ಧರಾಗಿರುವವರು ಎಂದು ಬೆಂಬಲಿಗರಲ್ಲಿ ಬಿಂಬಿಸಿಕೊಂಡವರು. ಇದೀಗ ಚುನಾವಣಾ ಪರೀಕ್ಷೆಯಲ್ಲಿ ಇಬ್ಬರೂ ಗೆದ್ದಿದ್ದಾರೆ. ಈಗ ಅವರ ಬಾಳಿಕೆ ಹಾಗೂ ಪರಿಣಾಮ ಕಾದುನೋಡಬೇಕು.
ಪ್ರಜಾಪ್ರಭುತ್ವಕ್ಕೆ ಅಪಾಯವೇ?
ಈ ಸವಾಲಿನ ಸಂದರ್ಭದಲ್ಲಿ, ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಎಂದರೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ ಎನ್ನುವುದು. ಭಾರತದಲ್ಲಿ ತುರ್ತು ಪರಿಸ್ಥಿತಿ ಹಾಗೂ ಅಮೆರಿಕದಲ್ಲಿ ಜನಾಂಗೀಯ ಕಲಹದಂಥ ಅಪವಾದ ಹೊರತುಪಡಿಸಿದರೆ ಪ್ರಜಾಪ್ರಭುತ್ವಕ್ಕೆ ಎಂದೂ ಅಪಾಯ ಎದುರಾಗಿಲ್ಲ. ಆದರೆ ಎರಡೂ ದೇಶಗಳ ಸಂವಿಧಾನದಲ್ಲೇ ಪ್ರಬಲ ಪ್ರಜಾಸತ್ತಾತ್ಮಕ ಮೌಲ್ಯಗಳು ಅಡಕವಾಗಿದೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ, ಶಾಸನಸಭೆ ಹಾಗೂ ಸಂವಿಧಾನಾತ್ಮಕ ಸರಕಾರಗಳಿಂದಾದ ವ್ಯವಸ್ಥೆ ಎಂಬ ಕಲ್ಪನೆಯಲ್ಲಿದ್ದ ಮುಖಂಡರಿಗೆ ಇದೀಗ ಆಡಳಿತದ ಸಂಕಷ್ಟಗಳ ವಾಸ್ತವ ಅರಿವಾಗುತ್ತಿದೆ. ವಾಸ್ತವವಾಗಿ ಪ್ರಜಾಪ್ರಭುತ್ವ ಎಂದರೆ, ಸಮಾನವಾಗಿ ರಾಜಕೀಯವಾಗಿ ತೊಡಗಿಸಿಕೊಂಡಿರುವ ಸಮಾನ ನಾಗರಿಕರು, ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವವರು, ವಿಭಿನ್ನ ಜೀವನ ವಿಧಾನ ಹೊಂದಿರುವವರು ಹಾಗೂ ತಮ್ಮ ನಾಯಕರನ್ನು ಆಯ್ಕೆ ಮಾಡುವಲ್ಲಿ ಸಮಾನ ಧ್ವನಿ ಹೊಂದಿರುವವರು ಎನ್ನುವುದು ಎರಡೂ ದೇಶಗಳಲ್ಲಿ ಮುಖಂಡರಿಗೆ ತಿಳಿಯಬೇಕಾಗಿದೆ.
ಕೊಲಿನ್ ಕ್ರೋಚ್ ಅವರಂಥ ರಾಜಕೀಯ ವಿಜ್ಞಾನಿಗಳು, ನಾವು ಪ್ರಜಾಪ್ರಭುತ್ವೋತ್ತರ ಯುಗದತ್ತ ಹೆಜ್ಜೆ ಇಡುತ್ತಿದ್ದೇವೆಯೇ ಎಂಬ ಚಿಂತನೆಯನ್ನೂ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದ ಎಲ್ಲ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಲೇ, ಅದನ್ನು ಔಪಚಾರಿಕ ಕವಚಕ್ಕೆ ಸೀಮಿತಗೊಳಿಸಲಾಗುತ್ತಿದೆ. ಅಂದರೆ ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲವಾಗುವ ವ್ಯವಸ್ಥೆಯತ್ತ ನಾವು ಅಡಿ ಇಟ್ಟಿದ್ದೇವೆಯೇ?
1930ರ ದಶಕದಲ್ಲಿ ಯೂರೋಪ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದು ಬೀಳಲು ಕಾರಣವಾದ ಅಂಶಗಳ ಬಗ್ಗೆ ಸಂಶೋಧನೆ ನಡೆಸಿದ ಸ್ಪೇನ್‌ನ ರಾಜಕೀಯ ವಿಜ್ಞಾನಿ ಜುವಾನ್ ಲಿಂಝ್, ಪ್ರಜಾಪ್ರಭುತ್ವಕ್ಕೆ ಅಪಾಯ ಒಡ್ಡುವ ರಾಜಕಾರಣಿಗಳ ಚಟುವಟಿಕೆಗಳ ಬಗ್ಗೆ ಒಂದು ಲಿಟ್ಮಸ್ ಟೆಸ್ಟ್ ಮುಂದಿಟ್ಟಿದ್ದಾರೆ. ಇದರಲ್ಲಿ, ಹಿಂಸೆ ತ್ಯಜಿಸಲು ನಿರಾಕರಿಸುವುದು, ಪ್ರತಿಸ್ಪರ್ಧಿಗಳ ನಾಗರಿಕ ಸ್ವಾತಂತ್ರ್ಯ ಮೊಟಕುಗೊಳಿಸುವುದು, ಚುನಾಯಿತ ಸರಕಾರದ ಕಾನೂನುಬದ್ಧತೆಯನ್ನು ನಿರಾಕರಿಸುವುದು ಇದರಲ್ಲಿ ಸೇರಿದೆ. ಈ ನಿರ್ಧಾರಕ ಅಂಶಗಳು ಎರಡೂ ಪ್ರಜಾಪ್ರಭುತ್ವ ದೇಶಗಳಲ್ಲಿ ಮೇಲ್ನೊಟಕ್ಕೆ ಕಾಣುತ್ತಿದ್ದು, ಆತಂಕ ಸೃಷ್ಟಿಗೆ ಕಾರಣವಾಗಿವೆ. ಇಂಥ ಜನನಾಯಕರು ಜನಪ್ರಿಯತೆಯ ಮೂಲಕವೇ ಜನರಿಗೆ ಅಪಾಯ ತಂದೊಡ್ಡಿದ್ದಾರೆ. ಮೂಲಭೂತವಾಗಿ ಜನರಿಂದ ಎಂಬ ಅಂಶವನ್ನು ಕಡೆಗಣಿಸಿ, ಜನರನ್ನೇ ಪರಸ್ಪರ ಎತ್ತಿಕಟ್ಟುತ್ತಿದ್ದಾರೆ. ಇವರು ಕೇವಲ ಫಲಿತಾಂಶ ಹಾಗೂ ರಾಜಕೀಯ ಪಕ್ಷಕ್ಕೆ ಮಾತ್ರವಲ್ಲದೇ, ಪ್ರಜಾಪ್ರಭುತ್ವಕ್ಕೇ ಅಪಾಯ ಎದುರಾಗಿರುವುದನ್ನು ಪ್ರತಿನಿಧಿಸುತ್ತಾರೆ.
ಹಿಲರಿ ಕ್ಲಿಂಟನ್ ಪರ ಕ್ಲೇವ್‌ಲ್ಯಾಂಡ್‌ನಲ್ಲಿ ಮಾಡಿದ ಭಾಷಣದಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ತಮ್ಮ ಸರಕಾರದ ಪ್ರಗತಿಕಾರ್ಯಗಳು ಮತವಾಗಿ ಪರಿವರ್ತನೆಯಾಗುತ್ತವೆ ಎಂಬ ನಂಬಿಕೆಯಿಂದ ದೊಡ್ಡ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕೋರಿದ್ದರು. ನಾಗರಿಕತ್ವ ಮತದಲ್ಲಿದೆ. ಸಹಿಷ್ಣುತೆ ಮತದಲ್ಲಿದೆ. ಶಿಷ್ಟಾಚಾರ ಮತದಲ್ಲಿದೆ. ಪ್ರಾಮಾಣಿಕತೆ ಮತದಲ್ಲಿದೆ. ಎಲ್ಲವೂ ಮತದಲ್ಲಿ ಸಮಾನವಾಗಿವೆ. ದಯಾಗುಣ, ಎಲ್ಲಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವವೇ ಮತದ ಮೇಲೆ ನಿಂತಿದೆ.
ಪ್ರಜಾಪ್ರಭುತ್ವ ಎನ್ನುವುದು ಮೈತ್ರಿ ಹಾಗೂ ಒಮ್ಮತವನ್ನು ರೂಪಿಸಲು ವಾದ ಹಾಗೂ ಚರ್ಚೆಯಲ್ಲಿ ಭಾಗವಹಿಸುವಂತೆ ನೀಡುವ ಆಹ್ವಾನವಾಗಿದ್ದರೆ, ಭಾರತ ಹಾಗೂ ಅಮೆರಿಕ ಈ ಮೂಲತತ್ವದಿಂದ ದೂರ ಸರಿಯುತ್ತಿವೆ ಎಂದೇ ವಿಶ್ಲೇಷಿಸಬೇಕಾಗುತ್ತದೆ.
ಕೃಪೆ: thewire.in







