ಬಡವರಿಗೆ ಕೈಗೆಟಕದ ಆಹಾರ: ಅನಿಶ್ಚಿತ ಉದ್ಯೋಗ ಮತ್ತು ಸಾಮಾಜಿಕ ಅಸಮಾನತೆಯ ಫಲ

‘‘ಹಾಟ್ ಡಿನ್ನರ್ ಡೇಟಾ ವಿಶ್ಲೇಷಣೆಯು ಜಗತ್ತಿಗೆ ಹೊಸ ಕನ್ನಡಿಯನ್ನು ಹಿಡಿಯುವ ಉದ್ದೇಶವನ್ನು ಹೊಂದಿದೆ. ಇದರಲ್ಲಿ ಶ್ರೀಮಂತರು ಮತ್ತು ಬಡವರು ತಮ್ಮ ಮೂಲ ಆಹಾರ ಅಗತ್ಯತೆಯನ್ನು ಪೂರೈಸುವಲ್ಲಿ ಅವರ ಮಧ್ಯೆ ಖರೀದಿಯ ಸಾಮರ್ಥ್ಯದಲ್ಲಿರುವ ಕೆಟ್ಟ ಅಂತರವನ್ನು ವಿವರಿಸುತ್ತದೆ’’ ಎಂದು ವಿಶ್ವ ಆಹಾರ ಕಾರ್ಯಕ್ರಮದ ಮುಖ್ಯ ಆರ್ಥಶಾಸ್ತ್ರಜ್ಞ ಆರಿಫ್ ಹುಸೈನ್ ಹೇಳುತ್ತಾರೆ.
ಜಗತ್ತಿನ ಅರ್ಧ ಜನಸಂಖ್ಯೆಯ ಸಂಪತ್ತನ್ನು ಕೇವಲ ಎಂಟು ಜನರು ಅನುಭವಿಸುತ್ತಿರುವಂತೆಯೇ ಹೊರಬಿದ್ದಿರುವ ಹೊಸ ಅಂಕಿಅಂಶಗಳು ಏರುತ್ತಿರುವ ನಿರುದ್ಯೋಗ, ಹೆಚ್ಚುತ್ತಿರುವ ಅನಿಶ್ಚಿತ ಉದ್ಯೋಗ ಮತ್ತು ಸಾಮಾಜಿಕ ಅಸಮಾನತೆಯ ಕರಿಛಾಯೆಯನ್ನು ಹೊರಗೆಡಹುತ್ತದೆ. 1.4 ಬಿಲಿಯನ್‌ಗಿಂತಲೂ ಅಧಿಕ ಜನರು ಅನಿಶ್ಚಿತ, ಸೂಕ್ಷ್ಮ ಪರಿಸ್ಥಿತಿಗಳಲ್ಲಿ ದುಡಿಯುತ್ತಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಖ್ಯವಾಗಿ ಲ್ಯಾಟಿನ್ ಅಮೆರಿಕ ಮತ್ತು ಕೆರೆಬಿಯನ್ ದೇಶಗಳಲ್ಲಿ ಕೆಡುತ್ತಿರುವ ಕಾರ್ಮಿಕ ಮಾರುಕಟ್ಟೆ ಪರಿಸ್ಥಿತಿಯ ಪರಿಣಾಮವಾಗಿ 2017ರ ಪರ್ಯಂತ ಜಾಗತಿಕ ನಿರುದ್ಯೋಗವು 3.4 ಬಿಲಿಯನ್‌ನಷ್ಟು ಏರಿಕೆ ಕಾಣಲಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ತನ್ನ ವರದಿಯಲ್ಲಿ ಎಚ್ಚರಿಸಿದೆ.
ಇದೇ ವೇಳೆ, ಅಭಿವೃದ್ಧಿ ಹೊಂದಿದ ದೇಶಗಳು ಮುಖ್ಯವಾಗಿ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಯೂರೋಪ್, ಯುಎಸ್ ಮತ್ತು ಕೆನಡಾ ದೇಶಗಳಲ್ಲಿ ನಿರುದ್ಯೋಗ ಪ್ರಮಾಣವು ಇಳಿಕೆಯಾಗಲಿದೆ ಎಂದು ಐಎಲ್‌ಒ ತನ್ನ ‘ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮೇಲ್ನೋಟ: ಟ್ರೆಂಡ್ಸ್ 2017’ನಲ್ಲಿ ತಿಳಿಸುತ್ತದೆ. ಇಬ್ಬರಲ್ಲಿ ಒಬ್ಬರು ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಉದ್ಯೋಗ ಹೊಂದಿರುತ್ತಾರೆ.
ಇದರ ಜೊತೆಗೆ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ದುಡಿಯುವ 1.4 ಬಿಲಿಯನ್ ಜನಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗುವ ನಿರೀಕ್ಷೆಯಿಲ್ಲ. ಈ ಸಂಖ್ಯೆ 2017ರ ಉದ್ಯೋಗದ ಶೇ. 42ನ್ನು ಪ್ರತಿನಿಧಿಸುತ್ತದೆ ಎಂದು ಜನವರಿ 12, 2017ರಂದು ಬಿಡುಗಡೆಯಾದ ವರದಿಯು ಎಚ್ಚರಿಸುತ್ತದೆ. ‘‘ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಪ್ರತೀ ಇಬ್ಬರಲ್ಲಿ ಒಬ್ಬ ಉದ್ಯೋಗಿಯು ಸೂಕ್ಷ್ಮ ಪರಿಸ್ಥಿತಿಯ ಕೆಲಸಗಳನ್ನು ಮಾಡುತ್ತಿದ್ದರೆ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಈ ಪ್ರಮಾಣ ಐದರಲ್ಲಿ ನಾಲ್ಕಕ್ಕಿಂತಲೂ ಹೆಚ್ಚಾಗಿರುತ್ತದೆ’’ ಎಂದು ಹೇಳುತ್ತಾರೆ ಐಎಲ್‌ಒನ ಹಿರಿಯ ಆರ್ಥಿಕತಜ್ಞ ಮತ್ತು ವರದಿಯ ಮುಖ್ಯ ಬರಹಗಾರ ಸ್ಟೀವನ್.
‘‘ಜಾಗತಿಕ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟಿನಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸುವ ಮತ್ತು ಪ್ರತಿವರ್ಷ ಕಾರ್ಮಿಕ ಮಾರುಕಟ್ಟೆಗೆ ಸೇರುತ್ತಿರುವ ಮಿಲಿಯನ್‌ಗಟ್ಟಲೆ ಜನರಿಗೆ ಗುಣಮಟ್ಟದ ಉದ್ಯೋಗ ಸೃಷ್ಟಿಸುವ ಜಂಟಿ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ಐಎಲ್‌ಒನ ಪ್ರಧಾನ ನಿರ್ದೇಶಕ ಗಯ್ ರೈಡರ್ ಹೇಳುತ್ತಾರೆ. ವರದಿಯ ಪ್ರಕಾರ ಕಳೆದ ವರ್ಷ ಜಾಗತಿಕ ಒಟ್ಟು ದೇಶೀಯ ಉತ್ಪನ್ನವು ಆರು ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ತಲುಪಿತ್ತು, ಇದು 2015ರಲ್ಲಿ ಅಂದಾಜಿಸಲಾಗಿದ್ದ ಪ್ರಮಾಣಕ್ಕಿಂತಲೂ ಕಡಿಮೆ. ‘ಮುನ್ಸೂಚಕರು 2017ರ ಭವಿಷ್ಯವನ್ನು ನಿಯಮಿತವಾಗಿ ಬದಲಾಯಿಸುತ್ತಲೇ ಇದ್ದು ಅದು ಕೆಳಹಂತಕ್ಕೆ ಜಾರುತ್ತಲೇ ಇದೆ ಮತ್ತು ಸದ್ಯ ಇರುವ ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯೂ ಹೆಚ್ಚಾಗುತ್ತಿದ್ದು ಆರ್ಥಿಕತೆಯು ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗ ಒದಗಿಸುವಲ್ಲಿ ಅಸಮರ್ಥವಾಗಲಿದೆ ಮತ್ತು ಬೆಳವಣಿಗೆಯು ಜೊತೆಯಾಗಿ ಮತ್ತು ಲಾಭವನ್ನು ಹಂಚುವ ಮಾದರಿಯಲ್ಲಿ ಇರಲಾರದು ಎಂಬ ಬಗ್ಗೆ ತಜ್ಞರು ಚಿಂತಿತರಾಗಿದ್ದಾರೆ.
ಇತರ ದೇಶಗಳಿಗೆ ವಲಸೆ ಹೋಗಲು ಬಯಸುವ ಉದ್ಯೋಗ-ವಯಸ್ಸಿನ ಜನಸಂಖ್ಯೆಯು 2009ರಿಂದೀಚೆಗೆ ಜಗತ್ತಿನ ಪ್ರತೀ ಪ್ರದೇಶದಲ್ಲಿ ಏರಿಕೆಯಾಗಿದೆ. ಈ ಪ್ರವೃತ್ತಿಯು ಲ್ಯಾಟಿನ್ ಅಮೆರಿಕ, ಕೆರೆಬಿಯನ್ ದೇಶಗಳು ಮತ್ತು ಅರಬ್ ದೇಶಗಳಲ್ಲಿ ಹೆಚ್ಚಾಗಿದೆ ಎಂದು ವರದಿ ತಿಳಿಸುತ್ತದೆ. ಬೆಳವಣಿಗೆ ಮತ್ತು ಸಮೃದ್ಧಿಗೆ ತಡೆಯನ್ನುಂಟುಮಾಡುವ ಸಾಕಷ್ಟು ಸಾಮಾಜಿಕ ಅಸಮಾನತೆಗಳ ಮೇಲೆಯೂ ವರದಿಯು ಬೊಟ್ಟು ಮಾಡುತ್ತದೆ. ಲಿಂಗ ಅನುಪಾತದ ಮಧ್ಯೆ ಇರುವ ಅಂತರವು ಕಾರ್ಮಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸುವ ಐಎಲ್‌ಒ ಅದಕ್ಕೆ ನಿಖರ ಉದಾಹರಣೆಗಳನ್ನು ನೀಡುತ್ತದೆ: ಉತ್ತರ ಆಫ್ರಿಕಾದಲ್ಲಿ ನಿರುದ್ಯೋಗಿ ಪುರುಷರ ದುಪ್ಪಟ್ಟು ಮಹಿಳೆಯರು ಕಾರ್ಮಿಕ ಕ್ಷೇತ್ರದಲ್ಲಿದ್ದಾರೆ. ಈ ಅಂತರವು ಅರಬ್ ರಾಜ್ಯಗಳ ಮಹಿಳೆಯರಿಗೆ ಮತ್ತಷ್ಟು ಹೆಚ್ಚಾಗಿದೆ.
ಅಸಮಾಧಾನ, ಅಶಾಂತಿ
ಜನಸಂಖ್ಯೆಯಲ್ಲಿ ಹರಡಿರುವ ಈ ರೀತಿಯ ಸಾಮಾಜಿಕ ಅಸಮಾನತೆಗಳ ಫಲಿತಾಂಶವಾಗಿ ಸಾಮಾಜಿಕ ಅಶಾಂತಿ ಮತ್ತು ಅಸಮಾಧಾನವು ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಸೃಷ್ಟಿಯಾಗುವ ಅಪಾಯವಿದೆ ಎಂದು ಐಎಲ್‌ಒ ಅಂದಾಜಿಸುತ್ತದೆ. ‘‘ಆರ್ಥಿಕ ಬೆಳವಣಿಗೆಯು ಪ್ರಮಾಣ ಮತ್ತು ಒಳಗೂಡಿಸುವಿಕೆ ಈ ಎರಡು ಅಂಶಗಳಲ್ಲೂ ನಿರಾಶೆಗೊಳಿಸುವುದನ್ನು ಮತ್ತು ಕಳಪೆ ನಿರ್ವಹಣೆಯನ್ನು ಮುಂದುವರಿಸಲಿದೆ. ಇದು ಜಾಗತಿಕ ಆರ್ಥಿಕತೆ ಮತ್ತು ಸಾಕಷ್ಟು ಉದ್ಯೋಗವನ್ನು ಸೃಷ್ಟಿಸುವ ಅದರ ಸಾಮರ್ಥ್ಯದ ಬಗ್ಗೆ ಚಿಂತಿಸುವಂಥ ಚಿತ್ರಣವನ್ನು ನೀಡುತ್ತದೆ. ‘‘ಒಟ್ಟಾರೆ ಪರಿಸ್ಥಿತಿ ಉತ್ತಮಗೊಳ್ಳುತ್ತಿರುವ ದೇಶಗಳಲ್ಲೂ ಉದ್ಯೋಗದ ಗುಣಮಟ್ಟದಲ್ಲಿ ಅಭಿವೃದ್ಧಿಯ ಕೊರತೆಯೊಂದಿಗೆ ನಿರಂತರ ಏರಿಕೆ ಗತಿಯಲ್ಲಿರುವ ಸೂಕ್ಷ್ಮರೂಪದ ಉದ್ಯೋಗಗಳು ಗಾಬರಿಗೊಳಿಸುತ್ತವೆ.’’
ಅಂತಾರಾಷ್ಟ್ರೀಯ ಸಹಕಾರ ಮತ್ತು ಆರ್ಥಿಕ ಪ್ರಚೋದನೆ ನೀಡಲು ಸಂಘಟಿತ ಪ್ರಯತ್ನ ಮತ್ತು ಜಾಗತಿಕ ಆರ್ಥಿಕತೆಗೆ ಉತ್ತೇಜನ ನೀಡಲು ಸಾರ್ವಜನಿಕ ಹೂಡಿಕೆ ಮತ್ತು ನಿರೀಕ್ಷಿಸಲಾಗಿರುವ ಎರಡು ಮಿಲಿಯನ್‌ನಷ್ಟು ನಿರುದ್ಯೋಗ ಏರಿಕೆಯನ್ನು ತಡೆಯಲು ಐಎಲ್‌ಒ ಕರೆ ನೀಡಿದೆ. ಜನವರಿ 16ರಂದು ಆಕ್ಸ್‌ಫಾಮ್ ಇಂಟರ್‌ನ್ಯಾಶನಲ್ ಜಗತ್ತಿನಾದ್ಯಂತ ಬೆಳೆಯುತ್ತಿರುವ ಅಸಮಾನತೆಯ ಬಗ್ಗೆ ‘ಆ್ಯನ್ ಇಕಾನಮಿ ಫೋರ್ 99 ಪರ್ಸೆಂಟ್’ ಎಂಬ ವರದಿಯನ್ನು ಬಿಡುಗಡೆ ಮಾಡಿತ್ತು.
ಉದ್ಯೋಗದ ವಿಷಯದ ಬಗ್ಗೆ ಅದು ಹೀಗೆ ಹೇಳುತ್ತದೆ: ‘‘ಜಗತ್ತಿನಾದ್ಯಂತ ಜನರನ್ನು ಹಿಂದೆ ಬಿಡಲಾಗಿದೆ. ಅವರ ವೇತನಗಳು ನಿಂತ ನೀರಾಗಿವೆ ಆದರೆ ಅವರ ಮಾಲಕರು ಬಿಲಿಯನ್‌ಗಟ್ಟಲೆ ಹಣವನ್ನು ಮನೆಗೆ ಕೊಂಡೊಯ್ಯುತ್ತಾರೆ, ಕಾರ್ಮಿಕರ ಆರೋಗ್ಯ ಮತ್ತು ಶಿಕ್ಷಣ ಸೇವೆಗೆ ಕತ್ತರಿ ಹಾಕಲಾಗಿದ್ದರೆ ಶ್ರೀಮಂತರು ತಮ್ಮ ಕರ ತಪ್ಪಿಸಲು ದಾರಿ ಹುಡುಕುತ್ತಿರುತ್ತಾರೆ. ಸರಕಾರ ಕೂಡಾ ದೊಡ್ಡ ಉದ್ಯೋಗಪತಿಗಳು ಮತ್ತು ಶ್ರೀಮಂತರ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ಕಾರ್ಮಿಕರ ಧ್ವನಿಯನ್ನು ನಿರ್ಲಕ್ಷಿಸುತ್ತಿವೆ. ಹೆಚ್ಚುತ್ತಿರುವ ಅಂತರದ ಹಿಂದೆ ಇರುವುದಾದರೂ ಏನು?’’
‘‘ಈ ರೀತಿ ಹೆಚ್ಚಾಗುತ್ತಿರುವ ಅಸಮಾನತೆಯ ಹಿಂದೆ ಯಾವ ಅಂಶ ಕೆಲಸ ಮಾಡುತ್ತಿದೆ’’ ಎಂದು ಒಕ್ಸ್‌ಫಾಮ್ ಇಂಟರ್‌ನ್ಯಾಷನಲ್‌ನ ಮಾಧ್ಯಮ ಅಧಿಕಾರಿ ಅನ್ನಾ ರಾಟ್‌ಕ್ಲಿಫ್ ಅವರಲ್ಲಿ ಕೇಳಿದರೆ, ‘‘ಆರ್ಥಿಕ ಬೆಳವಣಿಗೆಯ ಲಾಭ ಸಮಾಜದಲ್ಲಿ ಸಮಾನವಾಗಿ ಹಂಚಿಕೆಯಾಗದಿರುವುದೇ ಇದಕ್ಕೆ ಕಾರಣ’’ ಎನ್ನುತ್ತಾರೆ.
‘‘ಕಳೆದ ಮೂವತ್ತು ವರ್ಷಗಳಲ್ಲಿ ಸೃಷ್ಟಿಯಾದ ಆದಾಯದ ಬೃಹತ್ ಪ್ರಮಾಣವು ಬಹುತೇಕವಾಗಿ ಬಂಡವಾಳ ಹೂಡಿಕೆದಾರರ ಮತ್ತು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರ ಪಾಲಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ಕಾರ್ಮಿಕರ ವೇತನವು ನಿಂತ ನೀರಾಗಿಯೇ ಇದ್ದರೆ ಇತರ ಹಲವು ದೇಶಗಳಲ್ಲಿ ಅವರ ಸಂಬಳವು ಮಾಲಕರ ಬಂಡವಾಳಕ್ಕೆ ಸಿಕ್ಕಿರುವ ಪ್ರತಿಫಲದ ಸಮೀಪಕ್ಕೂ ತಲುಪಿಲ್ಲ.
ತಮ್ಮ ಶೇರುದಾರರ ಆದಾಯವನ್ನು ಹೆಚ್ಚಿಸುವ ಸಲುವಾಗಿ ದೊಡ್ಡದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ತೆರಿಗೆಯಲ್ಲಿ ಮೋಸ ಮಾಡುತ್ತವೆ, ತಮ್ಮ ಕಾರ್ಮಿಕರಿಗೆ ಕಡಿಮೆ ಸಂಬಳ ಪಾವತಿಸುತ್ತವೆ ಮತ್ತು ಉತ್ಪಾದಕರಿಗೆ ಕಡಿಮೆ ಪಾವತಿ ಮಾಡುತ್ತದೆ, ತಮ್ಮ ವ್ಯವಹಾರದಲ್ಲಿ ಕಡಿಮೆ ಹೂಡಿಕೆ ಮಾಡಿ ತಮ್ಮ ಪರವಾಗಿ ನೀತಿಗಳನ್ನು ರೂಪಿಸುವಂತೆ ಸರಕಾರಗಳ ಜೊತೆ ಲಾಬಿ ಮಾಡಲು ಹೆಚ್ಚು ಹಣವನ್ನು ಖರ್ಚು ಮಾಡುತ್ತದೆ’’ ಎಂದು ರಾಟ್‌ಕ್ಲಿಫ್ ತಿಳಿಸುತ್ತಾರೆ.
ಇದರ ಫಲವಾಗಿ ಜಗತ್ತಿನಾದ್ಯಂತ ಪಿಂಚಣಿ, ಕಾರ್ಮಿಕ ಹಕ್ಕುಗಳು ಮತ್ತು ನಿಶ್ಚಿತ ಕೆಲಸಗಳು ಕಡಿಮೆಯಾಗುತ್ತಾ ಸಾಗಿದೆ ಮತ್ತು ಕಡಿಮೆ ವೇತನದ ಜೊತೆಗೆ ಅನಿಶ್ಚಿತ ಉದ್ಯೋಗದಲ್ಲಿರುವ ಮಹಿಳೆಯರು ಮತ್ತು ಯುವ ಪೀಳಿಗೆಗೆ ಇದು ಅತ್ಯಂತ ಕೆಟ್ಟ ರೀತಿಯಲ್ಲಿ ಹೊಡೆತ ನೀಡಿದೆ.
‘‘ಅಸಮಾನತೆಯ ಸಮಸ್ಯೆಯನ್ನು ನಾವು ಹೋಗಲಾಡಿಸದಿದ್ದರೆ ಜಗತ್ತಿನಾದ್ಯಂತವಿರುವ ಕಾರ್ಮಿಕರು ಹೆಚ್ಚುತ್ತಿರುವ ಅಭದ್ರತೆ ಮತ್ತು ಕಡಿಮೆ ವೇತನದ ರೂಪದಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ’’ ಎಂದಾಕೆ ಹೇಳುತ್ತಾರೆ.
ಬಡವರು ಆಹಾರಕ್ಕಾಗಿ ಶ್ರೀಮಂತರಿಗಿಂತ ಹೆಚ್ಚು ಖರ್ಚು ಮಾಡುತ್ತಾರೆ.
ಇವೆಲ್ಲವೂ ಸಾಕಾಗದಿದ್ದರೆ ಸಂಯುಕ್ತ ರಾಷ್ಟ್ರದ ಅಂಕಿಅಂಶಗಳು ತೋರಿಸುವ ಪ್ರಕಾರ ಒಬ್ಬನ ದಿನ ಆದಾಯವನ್ನು ಲೆಕ್ಕ ಹಾಕಿ ನೋಡಿದಾಗ ಒಂದು ತಟ್ಟೆ ಆಹಾರವು ಸ್ವಿಟ್ಜರ್‌ಲ್ಯಾಂಡ್‌ನ ದವೊಸ್‌ಗಿಂತ ಮಲವಿಯಲ್ಲಿ ಹೆಚ್ಚು ದುಬಾರಿಯಾಗಿದೆ. ಇದನ್ನು ಸಂಯುಕ್ತ ರಾಷ್ಟ್ರಗಳ ವಿಶ್ವ ಆಹಾರ ಕಾರ್ಯಕ್ರಮ ಸಂಶೋಧನೆ ಹೊರಗೆಡಹಿದೆ. ಈ ವಿಶ್ಲೇಷಣೆಯು ವಿಶ್ವ ಆಹಾರ ಕಾರ್ಯಕ್ರಮದ ‘ಹಾಟ್ ಡಿನ್ನರ್ ಡೇಟಾ’ ಎಂಬ ಅಭಿಯಾನದ ಭಾಗವಾಗಿದ್ದು ಅಂದರೆ ಜನವರಿ 17ರಂದು ದವೊಸ್‌ನಲ್ಲಿ ನಡೆದ ರಾಜಕೀಯ ಮತ್ತು ಆರ್ಥಿಕ ಮುಖಂಡರ ಸಭೆ, ‘ವಿಶ್ವ ಆರ್ಥಿಕ ವೇದಿಕೆ’ಗೂ ಮೊದಲು (ಜನವರಿ 13ರಂದು) ಸಾರ್ವಜನಿಕಗೊಳಿಸಲಾಯಿತು.
‘‘ಹಾಟ್ ಡಿನ್ನರ್ ಡೇಟಾ ವಿಶ್ಲೇಷಣೆಯು ಜಗತ್ತಿಗೆ ಹೊಸ ಕನ್ನಡಿಯನ್ನು ಹಿಡಿಯುವ ಉದ್ದೇಶವನ್ನು ಹೊಂದಿದೆ. ಇದರಲ್ಲಿ ಶ್ರೀಮಂತರು ಮತ್ತು ಬಡವರು ತಮ್ಮ ಮೂಲ ಆಹಾರ ಅಗತ್ಯವನ್ನು ಪೂರೈಸುವಲ್ಲಿ ಅವರ ಮಧ್ಯೆ ಖರೀದಿಯ ಸಾಮರ್ಥ್ಯದಲ್ಲಿರುವ ಕೆಟ್ಟ ಅಂತರವನ್ನು ವಿವರಿಸುತ್ತದೆ’’ ಎಂದು ವಿಶ್ವ ಆಹಾರ ಕಾರ್ಯಕ್ರಮದ ಮುಖ್ಯ ಆರ್ಥಶಾಸ್ತ್ರಜ್ಞ ಆರಿಫ್ ಹುಸೈನ್ ಹೇಳುತ್ತಾರೆ. ಹಾಟ್ ಡಿನ್ನರ್ ಡೇಟಾ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜನರು ತಮ್ಮ ಪ್ರಮುಖ ಆಹಾರಕ್ಕಾಗಿ ಶ್ರೀಮಂತ ದೇಶಗಳ ಜನರಿಗಿಂತ ನೂರುಪಟ್ಟು ಹೆಚ್ಚು ಹಣ ಪಾವತಿ ಮಾಡುತ್ತಾರೆ. ಇನ್ನು ಸಂಘರ್ಷ ಪೀಡಿತ ಪ್ರದೇಶ ಮುಂತಾದ ವಿಪರೀತ ಸಂದರ್ಭಗಳಲ್ಲಿ ಈ ಬೆಲೆಯು ಮುನ್ನೂರು ಪಟ್ಟು ಹೆಚ್ಚಾಗಲೂ ಬಹುದು.
ಉದಾಹರಣೆಗೆ, ಎಲ್ಲಾ ಪ್ರದೇಶಗಳಲ್ಲೂ ಪೌಷ್ಟಿಕ ಆಹಾರ ಎಂದು ಮಾನ್ಯ ಮಾಡಲ್ಪಡುವ ಧಾನ್ಯದ ಆಹಾರ ದರ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಒರ್ವ ವ್ಯಕ್ತಿಗೆ 0.88 ಸ್ವಿಸ್ ಫ್ರಾಂಕ್ಸ್ ಅಥವಾ ಆತನ ದಿನ ಆದಾಯದ ಶೇ. 0.41ಆಗಿದೆ. ಇಷ್ಟೇ ಆಹಾರಕ್ಕೆ ಮಲವಿಯಲ್ಲಿ ಓರ್ವ ವ್ಯಕ್ತಿ ನೂರುಪಟ್ಟು ಹೆಚ್ಚು ಅಂದರೆ ಆತನ ದಿನ ಆದಾಯದ ಶೇ. 41 ಪಾವತಿ ಮಾಡಬೇಕಾಗುತ್ತದೆ. ಭಾರತ ಮತ್ತು ನಿಕರಗುವಾದಲ್ಲಿ ಇದು ಸ್ವಿಟ್ಜರ್‌ಲ್ಯಾಂಡ್‌ಗಿಂತ 10-15 ಪಟ್ಟು ದುಬಾರಿಯಾಗಿರುತ್ತದೆ.
ಕೃಪೆ: thewire.in