ನ್ಯಾಯಾಂಗದಲ್ಲೂ ಮೀಸಲಾತಿ ಬೇಕಿದೆ

ದಲಿತರ, ಆದಿವಾಸಿಗಳ ಮತ್ತು ಮುಸ್ಲಿಮರ ಪರ ಹಲವು ದಕ್ಷ ನ್ಯಾಯಾಧೀಶರು ನ್ಯಾಯದ ತೀರ್ಪು ನೀಡಿದ್ದಾರೆ. ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಅಂತಹವರ ಬಗ್ಗೆ ನಿಜಕ್ಕೂ ಗೌರವವಿದೆ. ಆದರೆ ಅಂತಹವರ ಪ್ರಮಾಣ ತೀರ ಕಡಿಮೆ ಇದೆ. ಇದಕ್ಕೆ ಕಾರಣವೇನೆಂದರೆ ನ್ಯಾಯಾಧೀಶರೆಲ್ಲರಿಗೂ ದಲಿತ-ಅಲ್ಪಸಂಖ್ಯಾತ-ಆದಿವಾಸಿ ಸಂವೇದನೆಗಳಿರುವುದಿಲ್ಲ. ಅಷ್ಟೇ ಏಕೆ ಮಹಿಳಾ ಸಂವೇದನೆಯೂ ಸಹ ಇರುವುದಿಲ್ಲ.
992ರಲ್ಲಿ ರಾಜಸ್ಥಾನದಲ್ಲಿ ಸರಕಾರಿ ಶುಶ್ರೂಷಕಿ ದಲಿತ ಮಹಿಳೆ ಭನ್ವಾರಿ ದೇವಿಯವರು ಮೇಲ್ಜಾತಿ ಕುಟುಂಬವೊಂದು ಹಮ್ಮಿಕೊಂಡಿದ್ದ ಬಾಲ್ಯ ವಿವಾಹವನ್ನು ಕಾನೂನು ಬದ್ಧವಾಗಿ ತಡೆದಿದ್ದಕ್ಕೆ ಐವರು ಮೇಲ್ಜಾತಿ ಪುರುಷರು ಭನ್ವಾರಿ ದೇವಿಯವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣದ ಕುರಿತು ಹೈ ಕೋರ್ಟ್ ಆರೋಪಿಗಳನ್ನು ಹಲವಾರು ಕಾರಣಗಳನ್ನು ನೀಡಿ ಖುಲಾಸೆಗೊಳಿಸಿತ್ತು. ಅಂತಹ ಕಾರಣಗಳಲ್ಲಿ ಈ ಕೆಳಗಿನದ್ದೂ ಒಂದು.
‘‘ಮೇಲ್ಜಾತಿಯವರು ಕಟ್ಟು ನಿಟ್ಟಾಗಿ ಅಸ್ಪಶ್ಯತೆ ಆಚರಣೆ ಮಾಡುವ ಕಾರಣ, ಈ ಐವರಲ್ಲಿ (ಆರೋಪಿಗಳು) ಒಬ್ಬರೂ ಸಹ ಕೆಳಜಾತಿಯ ಹೆಂಗಸನ್ನು ಮುಟ್ಟಿದ್ದಾರೆ ಎನ್ನುವುದು ಗ್ರಹಿಕೆಗೆ ನಿಲುಕದ್ದಾಗಿದೆ!!’
2014ರಲ್ಲಿ ಮುಸ್ಲಿಂ ಸಮುದಾಯದ ಮೊಹ್ಸಿನ್ ಶೇಖ್‌ರನ್ನು ಹಿಂದೂ ರಾಷ್ಟ್ರ ಸೇನೆಯ ಸದಸ್ಯರು ಹಾಕಿ ಸ್ಟಿಕ್ ಮತ್ತು ಕಲ್ಲುಗಳಿಂದ ಹೊಡೆದು ಕೊಂದಿದ್ದರು. ಘಟನೆಯ ಸ್ಥಳದಿಂದಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಕಳೆದ ತಿಂಗಳು ಬಾಂಬೆ ಹೈಕೋರ್ಟ್ ಈ ಕೆಳಗಿನ ಕಾರಣ ನೀಡಿದೆ.
‘‘ಹತ್ಯೆಯಾದವರು ಇನ್ನೊಂದು ಧರ್ಮದವರಾಗಿದ್ದು, ಆರೋಪಿಗಳು ಧರ್ಮದ ಹೆಸರಿನಲ್ಲಿ ಉದ್ರೇಕಿತರಾಗಿ ಹತ್ಯೆಯನ್ನು ಮಾಡಿದ್ದಾರೆ!!’’ (ಅಷ್ಟೆ) ಈ ಮೇಲೆ ದಲಿತರ ವಿಚಾರದಲ್ಲಿ ಅನಾಗರಿಕವಾಗಿ ರಾಜಸ್ಥಾನ ಹೈ ಕೋರ್ಟ್ ವರ್ತಿಸಿದರೆ, ಮುಸ್ಲಿಂ ವಿಚಾರದಲ್ಲಿ ಬಾಂಬೆ ಹೈ ಕೋರ್ಟ್ ಅಸಾಂವಿಧಾನಿಕವಾಗಿ ವರ್ತಿಸಿದೆ. ಸಮಾಜದಲ್ಲಿನ ಮೇಲ್ಜಾತಿ ಮನಸ್ಸು ದಲಿತರನ್ನು ಹೇಗೆ ಅವಮಾನಿಸುತ್ತದೋ, ಮುಸ್ಲಿಮರನ್ನು ಯಾಜಮಾನ್ಯ ಮನಸ್ಸು ಹೇಗೆ ಅನುಮಾನಿಸಿ ಅನ್ಯಾಯವೆಸಗುತ್ತದೋ ಅದೇ ರೀತಿಯಲ್ಲಿ ನ್ಯಾಯಾಲಯವೂ ಕೂಡ ದಲಿತರು-ಮುಸ್ಲಿಮರ ವಿಚಾರದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಪೂರ್ವಾಗ್ರಹಪೀಡಿತವಾಗಿದೆ. ನ್ಯಾಯಾಧೀಶರುಗಳೂ ಸಹ ಸಮಾಜದ ಅವಿಭಾಜ್ಯ ಅಂಗವಾಗಿರುವುದರಿಂದ ಸಮಾಜದ ಪೂರ್ವಾಗ್ರಹಗಳು ಅವರೊಳಗೂ ಜನ್ಮದತ್ತವಾಗಿರುತ್ತವೆ. ಅದರಲ್ಲೂ ಮೇಲ್ಜಾತಿ ಮನಸ್ಸು ‘ಕೊಲೆ, ಅತ್ಯಾಚಾರಗಳಲ್ಲಿ ಅಸ್ಪಶ್ಯತೆಯನ್ನು ಮೀರಿ ದುರುಳರು ಕೃತ್ಯವೆಸಗುತ್ತಾರೆ’ ಎಂಬ ಸಾಮಾನ್ಯ ಅಂಶವನ್ನು ಸಹ ಮರೆಯುತ್ತದೆ. ಅದೇ ರೀತಿ ಧಾರ್ಮಿಕ ಯಾಜಮಾನ್ಯ ಮನಸ್ಸು ‘ಧರ್ಮದ ಉದ್ರೇಕತೆಯಿಂದಾದರೂ ಹತ್ಯೆ ಹತ್ಯೆಯೇ’ ಎಂಬ ತೀರ ಸಾಮಾನ್ಯ ಕಾನೂನು ಭಾಷೆಯನ್ನೇ ಮರೆತುಬಿಡುತ್ತದೆ. ಹೀಗಿರುವಾಗ ದಲಿತರ-ಮುಸ್ಲಿಮರ ಪರವಾಗಿ ನ್ಯಾಯಾಲಯಗಳು ನಿಲ್ಲುತ್ತವೆಯೇ? ಇತಿಹಾಸದ ನಿದರ್ಶನಗಳು ಇಲ್ಲವೆಂದೇ ಉತ್ತರಿಸುತ್ತಿದೆ. ಬೆಲ್ಚಿ, ಪಿಪ್ರ, ಖೈರ್ಲಾಂಜಿ, ಕಂಬಾಲಪಲ್ಲಿ, ಕರಂಚೇಡು, ನಾಗಲಾಪಲ್ಲಿ, ಜಝ್ಜಿರ್, ಕಿಲ್ವೆನ್ಮಣಿ, ಗೋದ್ರಾ ಹತ್ಯಾಕಾಂಡ, ಮುಂಬೈ-ಹೈದರಾಬಾದ್ ಹತ್ಯಾಕಾಂಡ. ಅಖ್ಲಾಕ್ ಮುಂತಾದ ಪ್ರಕರಣಗಳು ಸಾಕ್ಷಿ ಒದಗಿಸುತ್ತಲೇ ಇವೆ.
ಆದಿವಾಸಿಗಳನ್ನಂತು ನಮ್ಮ ದೇಶದ ಕಾನೂನುಗಳು ಅಪರಾಧಿ ಬುಡಕಟ್ಟುಗಳು ಎಂಬ ಹೆಸರಿನಲ್ಲಿಯೇ ಕರೆದುಬಿಟ್ಟಿವೆ. ಭಗತ್ ಸಿಂಗ್ ಅಥವಾ ಕಾರ್ಲ್ ಮಾರ್ಕ್ಸ್ ಪುಸ್ತಕಗಳಿದ್ದರೆ ಸಾಕು ನಕ್ಸಲೈಟರೆಂದು ಹಣೆಪಟ್ಟಿ ಕಟ್ಟಿ ಜೈಲಿಗೆ ತಳ್ಳಲಾಗುತ್ತದೆ. ಉದ್ಯಮಿಗಳ ನಿಸರ್ಗ ಲೂಟಿಯನ್ನು ತಡೆಯುವ ಪ್ರತಿಯೊಬ್ಬ ಭಾರತೀಯರೂ ಭಯೋತ್ಪಾದಕರಂತೆ ಕಂಡುಬಿಡುತ್ತಾರೆ. ತಕ್ಷಣವೇ ಜೈಲು ಸೇರಿಸುತ್ತಾರೆ ಇಲ್ಲವೆ ಬಂದೂಕು ಹಾರಿಸಿ ಫೋಟೊ ತೆಗೆಸಿಕೊಳ್ಳುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ನಮ್ಮ ನ್ಯಾಯಾಲಯಗಳು ನಿಷ್ಪಕ್ಷಪಾತ ತೀರ್ಪು ನೀಡುವಲ್ಲಿ ಸಫಲವಾಗಿವೆಯೇ ಎಂಬುದಕ್ಕೆ ಮೇಲಿನ ಮೂರೂ ಜನಾಂಗಗಳ ಭಡ್ತಿ ನಮ್ಮ ನ್ಯಾಯಾಲಯಗಳು ನಡೆದುಕೊಂಡಿರುವ ರೀತಿ ಅದರ ವಿಫಲತೆಯನ್ನು ಎತ್ತಿ ತೋರಿಸುತ್ತಿವೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಜೈಲಿನಲ್ಲಿ ತುಂಬಿರುವವರು ಯಾವ ಜನಾಂಗದವರಾಗಿರುತ್ತಾರೆ? ಉತ್ತರ ಸುಸ್ಪಷ್ಟ.
2015 ರಲ್ಲಿರುವಂತೆ ಭಾರತದಲ್ಲಿನ ಜೈಲಿನ ಕೈದಿಗಳ ಅಂಕಿ ಅಂಶಗಳ ಪ್ರಕಾರ ಭಾರತದ ವಿವಿಧ ಜೈಲುಗಳಲ್ಲಿ ಶೇ.22 ರಷ್ಟು ದಲಿತರು, ಶೇ.21 ರಷ್ಟು ಮುಸ್ಲಿಮರು ಮತ್ತು ಶೇ.12 ರಷ್ಟು ಆದಿವಾಸಿಗಳು ಜೈಲುವಾಸಿಗಳಾಗಿದ್ದಾರೆ. 2011 ರ ಜನಗಣತಿಯ ಪ್ರಕಾರ ದೇಶದಲ್ಲಿ ಈ ಜನಾಂಗಗಳ ಪಾಲು ಶೇ.40. ಅಂದರೆ ದಲಿತರ ಜನಸಂಖ್ಯೆ ಶೇ.17, ಮುಸ್ಲಿಮರದ್ದು ಶೇ.14 ಹಾಗೂ ಆದಿವಾಸಿಗಳದ್ದು ಶೇ.9. ಈ ಮೂರು ಜನಾಂಗಗಳೂ ದೇಶದ ಜನಸಂಖ್ಯೆಯಲ್ಲಿ ಶೇ. 40 ರಷ್ಟು ಪಾಲು ಹೊಂದಿವೆ. ಆದರೆ ಜೈಲಿನಲ್ಲಿರುವ ಸದಸ್ಯರಲ್ಲಿ ಈ ಜನಾಂಗಗಳ ಪಾಲು ಶೇ.55!!. ತಪ್ಪುಮಾಡಿದ್ದಾರೆ ಅದಕ್ಕಾಗಿ ಜೈಲು ಸೇರಿದ್ದಾರೆ ಎಂದು ಕೈತೊಳೆದುಕೊಳ್ಳುವವರೇ ಹೆಚ್ಚು. ಮೇಲಿನ ಎರಡು ತೀರ್ಪುಗಳು ನಿರೂಪಿಸಿರುವಂತೆ ನ್ಯಾಯಾಧೀಶರ ಪೂರ್ವಾಗ್ರಹವನ್ನು ಪ್ರಶ್ನಿಸುವವರಿಲ್ಲ. ತೀರ ಇತ್ತೀಚೆಗೆ ಮಾಲೆಗಾಂವ್ ಸ್ಫೋಟದ ಆರೋಪದಲ್ಲಿ ಬಂಧಿಸಲಾಗಿದ್ದ 9 ಮುಸ್ಲಿಂ ಯುವಕರನ್ನು ಸಾಕ್ಷಿಗಳಿಲ್ಲದ ಕಾರಣ ಕೋರ್ಟ್ ಖುಲಾಸೆಗೊಳಿಸಿತು. 2014 ರಲ್ಲಿ ಉತ್ತರ ಪ್ರದೇಶದಲ್ಲಿ ನಾಸಿರ್ ಹುಸೈೀನನ್ನು 7 ವರ್ಷಗಳ ಕಾಲ ಬಂಧಿಸಿ ಸಾಕ್ಷಿಗಳಿಲ್ಲದ ಕಾರಣ ಖುಲಾಸೆಗೊಳಿಸಿತ್ತು. ಅದೇ ರೀತಿ 2013 ರಲ್ಲಿ ಪಾಟ್ನಾ-ಛತ್ತೀಸ್‌ಗಡದ 14 ಮುಸಲ್ಮಾನರನ್ನು, ಜಮ್ಮು ಕಾಶ್ಮೀರದಲ್ಲಿ 3 ಮುಸಲ್ಮಾನರನ್ನು ಖುಲಾಸೆಗೊಳಿಸಲಾಯಿತು. ಈ ಅಮಾಯಕರೆಲ್ಲರನ್ನೂ ಭಯೋತ್ಪಾದಕರೆಂದು ಬಿಂಬಿಸಿ ಜೈಲಿಗಟ್ಟಲಾಗಿತ್ತು. ಕಳೆದೆರಡು ದಶಕದಲ್ಲಿ ಇಂತಹ ಪ್ರಕರಣಗಳು ನಮಗೆ ಸಾಕಷ್ಟು ಸಿಗುತ್ತವೆ. ಮತ್ತೊಂದು ಕಡೆ ದಲಿತರ ಮೇಲಿನ ನರಮೇಧಗಳಿಗೆ ಒಂದಕ್ಕೂ ನ್ಯಾಯ ಸಿಕ್ಕಿಲ್ಲ. ಕೊಂದಿರುವುದು ನಿಜ ಆದರೆ ಕೊಂದವರಾರೆಂದು ದಶಕಗಳ ನಂತರವೂ ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಪತ್ತೆ ಹಚ್ಚಲಾಗಿಲ್ಲ. ಮುಸ್ಲಿಂ ಎಂಬ ಕಾರಣಕ್ಕಾಗಿ ಅನುಮಾನಿಸಿ ವರ್ಷಾನುಗಟ್ಟಲೆ ಜೈಲಿಗಟ್ಟುವ ಕಾನೂನು ವ್ಯವಸ್ಥೆ, ಮೇಲ್ಜಾತಿಯೆಂಬ ಕಾರಣಕ್ಕಾಗಿ ದಲಿತರನ್ನು ಸುಟ್ಟು ಬೂದಿಯಾಗಿಸಿದರೂ ಸಾಕ್ಷಿಗಳಿಲ್ಲವೆಂದು ಶಿಕ್ಷಿಸುವುದಿಲ್ಲ. ಪ್ರತಿಕೂಲ ಸಾಕ್ಷಿಗಳುಂಟಾದರೂ ಮರು ತನಿಖೆಗೆ ಆದೇಶಿಸುವುದಿಲ್ಲ. ಇದಕ್ಕೆ ನ್ಯಾಯಾಲಯದಲ್ಲಿರುವ ಜಾತಿಯ-ಧಾರ್ಮಿಕ ಪೂರ್ವಾಗ್ರಹವಲ್ಲದೆ ಬೇರೇನು ಕಾರಣ?
ನ್ಯಾಯಾಂಗದಲ್ಲಿರುವ ಈ ಪೂರ್ವಾಗ್ರಹ ಮನಸ್ಥಿತಿಯನ್ನು ನ್ಯಾಯಾಂಗ ವ್ಯವಸ್ಥೆಯೊಳಗಿರುವವರೇ ಪ್ರಶ್ನಿಸಿದ್ದಾರೆ. 2014ರಲ್ಲಿ ಮದ್ರಾಸ್ ಹೈ ಕೋರ್ಟ್‌ಗೆ 12 ನೂತನ ನ್ಯಾಯಾಧೀಶರ ನೇಮಕಾತಿಗೆ ಕೊಲಿಜಿಯಮ್ ಮೂಲಕ ಚಾಲನೆ ನೀಡಲಾಗಿತ್ತು. ಆದರೆ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲು ಬಾರ್ ಕೌನ್ಸಿಲ್ ಮೂರು ಹಿರಿಯ ನ್ಯಾಯಾಧೀಶರನ್ನು ಆಯ್ಕೆ ಮಾಡಿತ್ತು. ಆದರೆ ಅವರೆಲ್ಲರೂ ಬ್ರಾಹ್ಮಣ ಸಮದಾಯಕ್ಕೆ ಸೇರಿದವರಾದ್ದರಿಂದ ಅದನ್ನು ಇತರ ನ್ಯಾಯಾದೀಶರು ಪ್ರಶ್ನಿಸಿ ಹೊಸ ಸದಸ್ಯರನ್ನು ಆಯ್ಕೆ ಮಾಡಬೇಕಾಗಿ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಕೆಳಹಂತದ ನ್ಯಾಯಾಲಯಗಳಲ್ಲಂತೂ ತಾರತಮ್ಯ ಮನೆ ಮಾಡಿಕೊಂಡಿದೆ. 2013 ರಲ್ಲಿ ಅಲಹಾಬಾದ್‌ನಲ್ಲಿ ಜಿಲ್ಲಾ ನ್ಯಾಯಾಧೀಶರೊಬ್ಬರು ತಮಗೆ ಗೊತ್ತು ಮಾಡಿದ ಕೊಠಡಿಯನ್ನು ಗಂಗಾ ಜಲದಿಂದ ಶುದ್ಧೀಕರಿಸಿದ್ದರು. ಅದಕ್ಕೆ ಕಾರಣ ಈ ಹಿಂದೆ ಆ ಕೊಠಡಿಯಲ್ಲಿದ್ದವರೊಬ್ಬರು ದಲಿತ ನ್ಯಾಯಾಧೀಶರು! ಅದೇ ವರ್ಷದಲ್ಲಿ ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶರೊಬ್ಬರು ಎಲ್ಲಾ ಶಾಲಾ ಮಕ್ಕಳಿಗೂ ಬ್ರಾಹ್ಮಣ ಜ್ಯೋತಿಷಿಗಳ ಬಳಿ ಭವಿಷ್ಯ ಕೇಳಿಸಿ ಶಾಲೆಗೆ ದಾಖಲಿಸಬೇಕು ಎಂದಿದ್ದರು. ಆಗ ಮಗುವಿನ ವಿದ್ಯಾಭ್ಯಾಸದ ಭವಿಷ್ಯ ತಿಳಿಯುತ್ತದೆ ಎಂಬುದು ಅವರ ವಾದವಾಗಿತ್ತು! ಬಾಂಬೆ ಹೈಕೋರ್ಟ್ ಜ್ಯೋತಿಷ್ಯವನ್ನು ವಿಜ್ಞಾನವೆಂದು ತೀರ್ಪಿತ್ತಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು. ಹೀಗಿರುವಾಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕೇ ಬೇಡವೇ?
2013 ರಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಗುವಾಹಟಿಯಲ್ಲಿ ನಡೆದ ಬಾರ್ ಕೌನ್ಸಿಲ್ ವಿಚಾರ ಸಂಕಿರಣದಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆ ಸುಧಾರಣೆಯಾಗಬೇಕು ಎಂದು ಮಾತನಾಡುತ್ತಾ ‘ಜನ ಸಾಮಾನ್ಯರಿಗೆ ತ್ವರಿತಗತಿ ಮತ್ತು ಗುಣಾತ್ಮಕ ತೀರ್ಪು ನೀಡಲು ತುರ್ತಾಗಿ ನ್ಯಾಯಾಂಗ ವ್ಯವಸ್ಥೆ ಸುಧಾರಿಸಬೇಕಿದೆ. ಕೇವಲ ತೀವ್ರಗತಿಯಲ್ಲಿ ತೀರ್ಪು ನೀಡುವುದಲ್ಲ, (ದೇಶದ) ಜನತೆಗೆ ಸುಲಭವಾಗಿ ಅದು ದಕ್ಕಬೇಕು ಅದರಲ್ಲೂ ಸಮಾಜದ ದುರ್ಬಲ ವರ್ಗದ ಜನರಿಗೆ ಅದು ಸುಲಭವಾಗಿ ದಕ್ಕಬೇಕು’’ ಎಂದಿದ್ದರು. ರಾಷ್ಟ್ರಪತಿಗಳ ಮೇಲಿನ ಮಾತುಗಳಲ್ಲಿಯೇ ದುರ್ಬಲ ವರ್ಗದವರಿಗೆ ಸುಲಭಕ್ಕೆ ನ್ಯಾಯ ಸಿಗುತ್ತಿಲ್ಲ ಎಂಬುದು ತಿಳಿದುಬರುತ್ತಿದೆ. ಈ ಹಿಂದೆ ರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣನ್‌ರವರೂ ಸಹ ಕೊಲಿಜಿಯಮ್ ವಿಧಾನದಲ್ಲಿ ದುರ್ಬಲ ವರ್ಗದವರಿಗೆ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಕಿವಿಮಾತು ಹೇಳಿದ್ದರು.
ದಲಿತರ, ಆದಿವಾಸಿಗಳ ಮತ್ತು ಮುಸ್ಲಿಮರ ಪರ ಹಲವು ದಕ್ಷ ನ್ಯಾಯಾಧೀಶರು ನ್ಯಾಯದ ತೀರ್ಪು ನೀಡಿದ್ದಾರೆ. ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಅಂತಹವರ ಬಗ್ಗೆ ನಿಜಕ್ಕೂ ಗೌರವವಿದೆ. ಆದರೆ ಅಂತಹವರ ಪ್ರಮಾಣ ತೀರ ಕಡಿಮೆ ಇದೆ. ಇದಕ್ಕೆ ಕಾರಣವೇನೆಂದರೆ ನ್ಯಾಯಾಧೀಶರೆಲ್ಲರಿಗೂ ದಲಿತ-ಅಲ್ಪಸಂಖ್ಯಾತ-ಆದಿವಾಸಿ ಸಂವೇದನೆಗಳಿರುವುದಿಲ್ಲ. ಅಷ್ಟೇ ಏಕೆ ಮಹಿಳಾ ಸಂವೇದನೆಯೂ ಸಹ ಇರುವುದಿಲ್ಲ. ಆದರೆ ದೇಶದ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ದುರ್ಬಲ ವರ್ಗದವರ ಪ್ರಾತಿನಿಧ್ಯ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಇದೆ. ಕಳೆದ 6 ವರ್ಷಗಳಿಂದ ಒಬ್ಬ ಪರಿಶಿಷ್ಟ ಜಾತಿಯ ನ್ಯಾಯಾಧೀಶರನ್ನೂ ಸುಪ್ರೀಂ ಕೋರ್ಟಿಗೆ ಭಡ್ತಿ ನೀಡಲಾಗಿಲ್ಲ. ಏಕೆಂದರೆ ರೋಸ್ಟರ್ ಪದ್ಧತಿ ಉನ್ನತ ನ್ಯಾಯಾಲಯಗಳ ಹುದ್ದೆಗಳಿಗಿಲ್ಲ. ಹಾಗೆಯೇ ಕಳೆದ 10 ವರ್ಷಗಳಲ್ಲಿ ಮೂವರು ಮಹಿಳೆಯರನ್ನು ಮಾತ್ರ ಸುಪ್ರೀಂ ಕೋರ್ಟಿಗೆ ಭಡ್ತ್ತಿ ನೀಡಲಾಗಿದೆ. ಅದರಲ್ಲಿ ಇಬ್ಬರು ನಿವೃತ್ತಿ ಹೊಂದಲಿದ್ದಾರೆ. ಕಳೆದ ವಾರ ಸುಪ್ರೀಂ ಕೋರ್ಟಿಗೆ ಭಡ್ತ್ತಿ ನೀಡಿದ ನ್ಯಾಯಾಧೀಶರಲ್ಲಿ ಮಹಿಳೆಯರೇ ಇಲ್ಲ.
ಆದ್ದರಿಂದ ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ದುರ್ಬಲ ವರ್ಗದವರ ಪ್ರಾತಿನಿಧ್ಯವಿರಬೇಕಿದೆ. ಈ ಪ್ರಾತಿನಿಧ್ಯದಿಂದ ನ್ಯಾಯಾಂಗದ ಮೇಲಿನ ನಂಬಿಕೆ ಹೆಚ್ಚಾಗುವುದಂತೂ ನಿಜ. ಆದರೆ ಈ ಬೆಳವಣಿಗೆಯಿಂದಲೇ ದುರ್ಬಲ ವರ್ಗದವರಿಗೆ ನೂರಕ್ಕೆ ನೂರರಷ್ಟು ನ್ಯಾಯ ಸಿಗುತ್ತದೆ ಎಂದಲ್ಲ. ನ್ಯಾಯ ಮತ್ತು ದುರ್ಬಲ ವರ್ಗದವರ ನಡುವಿನ ಅಂತರ ಕಡಿಮೆಯಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲೂ ಮೀಸಲಾತಿಗೆ ಅವಕಾಶ ಮಾಡಿಕೊಡಬೇಕಾಗಿದೆ. ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನು ಎತ್ತಿ ಹಿಡಿಯುವ ನ್ಯಾಯಾಲಯ ತಾನೂ ಸಹ ಅದನ್ನು ಪಾಲಿಸಬೇಕಿದೆ.