ವಿಕೃತ ಮನಸ್ಸುಗಳಿಂದ ಮಹಿಳೆ ಮೇಲಿನ ಕ್ರೌರ್ಯಕ್ಕೆ ಉಗ್ರ ಶಿಕ್ಷೆಯಾಗಲಿ

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಲೇ ನಾವು ಇಂದಿಗೂ ಹೆಣ್ಣನ್ನು ಮನೆ, ಕಚೆೇರಿ, ಸಾರ್ವಜನಿಕ ಸ್ಥಳ, ದೇವಾಲಯ ಪ್ರವೇಶ, ಸರಕಾರದ ಅಂಗಸಂಸ್ಥೆಗಳಲ್ಲಿ ಉದ್ಯೋಗ ಸೇರಿದಂತೆ ಎಲ್ಲಾ ಕಡೆ ಎರಡನೆಯ ದರ್ಜೆಯ ನಾಗರಿಕಳನ್ನಾಗಿಯೇ ನೋಡುತ್ತಿದ್ದೇವೆ ವಿನಾ: ಮಹಿಳೆಗೆ ಸಮಾನತೆಯ ವಾತಾವರಣ ಕಲ್ಪಿಸಲಾಗಿಲ್ಲ. ನಗರೀಕರಣದ ಅಭಿವೃದ್ಧಿಯ ನಾಗಲೋಟದಲ್ಲಿ ಮಹಿಳೆ ತನ್ನ ಹೊಟ್ಟೆ-ಬಟ್ಟೆಗಾಗಿ ಉದ್ಯೋಗ ಆರಿಸಿ ಸ್ವಾಭಿಮಾನಿ ಜೀವನಕ್ಕೆ ಹಾತೊರೆಯುವ ಬಹುತೇಕ ಸಂದರ್ಭಗಳಲ್ಲಿ ಆಕೆಯನ್ನು ಆವರಿಸುತ್ತಿರುವುದು ಕಿರುಕುಳ, ಅತ್ಯಾಚಾರವೆಂಬ ವಿಷಜಂತುಗಳು.
ಹೊಸ ವರ್ಷದ ಆಚರಣೆ ಹಾಗೂ ಕಮ್ಮನಹಳ್ಳಿಯಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯಗಳು ಸೇರಿದಂತೆ ದೇಶಾದ್ಯಂತ ಜರಗುತ್ತಿರುವ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು ನಮ್ಮನ್ನೆಲ್ಲಾ ಬೆಚ್ಚಿ ಬೀಳುವಂತೆ ಮಾಡುತ್ತಿವೆೆ.
ಅತ್ಯಾಚಾರ ಎನ್ನುವ ರೋಗ ಇಡೀ ಸಮಾಜವನ್ನು ಬಾಧಿಸುತ್ತಿದೆ. ಇಂದು ಜಗತ್ತಿನ ಎಲ್ಲೆಡೆ ತನ್ನ ಕೆನ್ನಾಲಿಗೆಯ ವಿಷವನ್ನು ಝಳಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರವೂ ಸಹ ಹೊರತಾಗಿಲ್ಲ. ಈ ಹಿಂದೆ ಕಾಲ್‌ಸೆಂಟರ್ ಉದ್ಯೋಗಿಯಾಗಿದ್ದ ಪ್ರತಿಭಾರ ಮೇಲೆ ಅತ್ಯಾಚಾರ ಮತ್ತು ಕೊಲೆ ಹೊಸಕೆರೆಹಳ್ಳಿಯ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ತೀರಾ ಇತ್ತೀಚೆಗೆ ನ್ಯಾಷನಲ್ ಲಾ ಸ್ಕೂಲ್‌ನ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರಗಳು ಈ ಸಮಾಜಕ್ಕೆ ಅಂಟಿದ ಕಪ್ಪು ಚುಕ್ಕೆಯಾಗಿದೆ.
ಹಲವು ಶಿಕ್ಷಣ ಸಂಸ್ಥೆಗಳ ರೂಪದಲ್ಲಿರುವ ಇಂಟರ್‌ನ್ಯಾಷನಲ್ ಸ್ಕೂಲ್‌ಗಳು, ಸರಕಾರಿ ಶಾಲೆಗಳು ಸೇರಿದಂತೆ ಆನೇಕ ಶಾಲೆಗಳಲ್ಲಿ ಪುಟ್ಟ ಕಂದಮ್ಮಗಳ ಮೇಲೆ ಕ್ರೂರ ಮೃಗಗಳಂತೆ ಎರಗಿ ಅತ್ಯಾಚಾರ ಎಸಗಿದ ದುಶ್ಕೃತ್ಯಗಳು ಎಲ್ಲೆಡೆ ನಡೆದಿವೆ ಉದಾಹರಣೆಗೆ -ವಿಬ್‌ಗಯಾರ್. ವಿಶ್ವ ವಿದ್ಯಾನಿಲಯಗಳಲ್ಲಿ ಸಂಶೋಧನ ವಿದ್ಯಾರ್ಥಿನಿಯರ ಮೇಲೆ ಪ್ರಾಧ್ಯಾಪಕರೇ ಲೈಂಗಿಕ ಹಿಂಸೆ ಕೊಟ್ಟ ಉದಾಹರಣೆಗಳಿವೆ.
ಪುರುಷ ಪ್ರಧಾನ ಧೋರಣೆಗಳಿಂದ ನಮ್ಮ ಸಮಾಜ ಮುಕ್ತವಾಗಿಲ್ಲ, ಮಹಿಳೆಯನ್ನು ಆಸ್ತಿ ಎಂದು ಪರಿಗಣಿಸುವ ಹಳೆಯ ಊಳಿಗಮಾನ್ಯ ಧೋರಣೆ ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ಮೂಲ ಕಾರಣ.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಲೇ ನಾವು ಇಂದಿಗೂ ಹೆಣ್ಣನ್ನು ಮನೆ, ಕಚೆೇರಿ, ಸಾರ್ವಜನಿಕ ಸ್ಥಳ, ದೇವಾಲಯ ಪ್ರವೇಶ, ಸರಕಾರದ ಅಂಗಸಂಸ್ಥೆಗಳಲ್ಲಿ ಉದ್ಯೋಗ ಸೇರಿದಂತೆ ಎಲ್ಲಾ ಕಡೆ ಎರಡನೆಯ ದರ್ಜೆಯ ನಾಗರಿಕಳನ್ನಾಗಿಯೇ ನೋಡುತ್ತಿದ್ದೇವೆ ವಿನಾ: ಮಹಿಳೆಗೆ ಸಮಾನತೆಯ ವಾತಾವರಣ ಕಲ್ಪಿಸಲಾಗಿಲ್ಲ. ನಗರೀಕರಣದ ಅಭಿವೃದ್ಧಿಯ ನಾಗಲೋಟದಲ್ಲಿ ಮಹಿಳೆ ತನ್ನ ಹೊಟ್ಟೆ-ಬಟ್ಟೆಗಾಗಿ ಉದ್ಯೋಗ ಆರಿಸಿ ಸ್ವಾಭಿಮಾನಿ ಜೀವನಕ್ಕೆ ಹಾತೊರೆಯುವ ಬಹುತೇಕ ಸಂದರ್ಭಗಳಲ್ಲಿ ಆಕೆಯನ್ನು ಆವರಿಸುತ್ತಿರುವುದು ಕಿರುಕುಳ, ಅತ್ಯಾಚಾರವೆಂಬ ವಿಷಜಂತುಗಳು.
ಭಾರತದ ಗ್ರಾಮಾಂತರ ಭಾಗದ ಮಹಿಳೆಯರು ಶಿಕ್ಷಣ ಕೊರತೆ ಮತ್ತು ಅನೈರ್ಮಲ್ಯದ ವಾತಾವರಣದಿಂದ ಬಳಲುತ್ತಿದ್ದಾರೆ. ಗಂಡನ ಮನೆಯಲ್ಲಿ ನಡೆಯುವ ದಬ್ಬಾಳಿಕೆ, ಪತಿಯ ದುಶ್ಚಟ ಮತ್ತು ಬಡತನಗಳಿಂದ ನರಳುತ್ತಿದ್ದಾರೆ.
ಗ್ರಾಮಾಂತರ ಭಾರತದ ಮಹಿಳೆಯರ ಸ್ಥಿತಿಯಲ್ಲಿ ಇಂದಿಗೂ ಗಮನಾರ್ಹ ಸುಧಾರಣೆಗಳಾಗಿಲ್ಲ, ಶೌಚಾಲಯಕ್ಕಾಗಿ ಬಯಲುಹಾದಿ ಹಿಡಿಯುವ ಸಮಸ್ಯೆ ತಪ್ಪಿಲ್ಲ, ದುಡಿಮೆಯಲ್ಲಿ ಬಸುರಿ ಎಂಬ ವಿನಾಯಿತಿ ಇವರಿಗಿಲ್ಲ, ನವಮಾಸ ತುಂಬಿದರೂ ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆವರು ಹರಿಸಬೇಕಾಗಿದೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ, ಪೋಷಕಾಂಶದ ಕೊರತೆ, ರಕ್ತ ಹೀನತೆಯಿಂದ ನರಳುತ್ತಿದ್ದಾರೆ.
ಇಂದಿಗೂ ಬಹಿರ್ದೆಸೆಗೆ, ಕೆರೆ ನೀರು ತರಲು ಹೋದಾಗ, ಹೊಲಗದ್ದೆಗಳಲ್ಲಿ ಕೆಲಸಕ್ಕೆ ಹೋದಾಗ, ದನಕರುಗಳಿಗೆ ಮೇವು ತರಲು ಹೋದಾಗ, ಕೂಲಿಗೆ ಹೋದಾಗ ಹೀಗೆ ಹಲವು ಬಗೆಯ ರೀತಿಯಲ್ಲಿ ಅತ್ಯಾಚಾರಕ್ಕೆ ಒಳಗಾಗುತ್ತಾರೆ ಇದು ಆರ್ಥಿಕ ಬಲಾಢ್ಯರಿಂದ, ಮೇಲ್ಜಾತಿ ಜನರಿಂದ ನಡೆಯುತ್ತಿರುತ್ತವೆ. ಆದರೂ ಕೂಡ ಸಮಾಜಕ್ಕೆ ಹೆದರಿ ಧ್ವನಿ ಇಲ್ಲದೇ ಕತ್ತಲ ಬದುಕಿನಲ್ಲಿ ಜೀವನ ಸವೆಸುತ್ತಿದ್ದಾರೆ.
ಹರಿಯಾಣ, ಉತ್ತರಪ್ರದೇಶ ರಾಜಸ್ತಾನ್, ಬಿಹಾರ್, ದಿಲ್ಲಿ ಮುಂತಾದ ಕಡೆಗಳಲ್ಲಿ ಮಹಿಳೆಯರ ಮೇಲೆ ವ್ಯಾಪಕ ಅತ್ಯಾಚಾರಗಳು, ಕಿರುಕುಳಗಳು ನಡೆದರೂ ಪೊಲೀಸ್ ಠಾಣೆ ಮೆಟ್ಟಿಲು ಏರುವುದಿಲ್ಲ ಏಕೆಂದರೆ ಗ್ರಾಮಗಳಲ್ಲಿ ಬಲಿಷ್ಠರ ಕೂಟವಾದ ‘‘ಖಾಪ್ ಪಂಚಾಯತ್’’ಗಳು ಇವೆ. ಅಲ್ಲಿ ಅವರು ಹೇಳಿದ್ದು ಕಾನೂನು ಆಗುವ ವ್ಯವಸ್ಥೆ ಇದೆ. ಖಾಪ್ ಪಂಚಾಯತ್ ಮುಖ್ಯಸ್ಥರನ್ನು ಕೇಳಿದರೆ ಅವರು ಹೇಳುವುದು ಹೀಗೆ ‘‘ಖಾಪ್ ಪಂಚಾಯತ್‌ಗಳು ಹಳೆಯ ಸಾಂಪ್ರದಾಯ, ಅವು ನಮ್ಮ ಸಂವಿಧಾನಕ್ಕಿಂತ ಹಳೆಯವು. ಅವುಗಳ ತೀರ್ಪಿಗೆ ಸಮಾಜದ ಮಾನ್ಯತೆ ಇದೆ. ಯಾವ ಕಾನೂನೂ ಸಮಾಜಕ್ಕಿಂತ ಮುಖ್ಯವಲ್ಲ ಎಂದು ಸಂವಿಧಾವನ್ನೇ ತಿರಸ್ಕರಿಸುತ್ತಾರೆ. ಹೀಗಾಗಿ ಉತ್ತರ ಭಾರತದಲ್ಲಿ ಹಲವಾರು ಮರ್ಯಾದೆ ಹತ್ಯೆಗಳು ನಡೆದಾಗ ಅವು ಮಣ್ಣಿನ ಅವಶೇಷಗಳಡಿ ಹೂತು ಹೋಗಿರುವ ನಿದರ್ಶನಗಳಿವೆ.
ಕೆಳಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಸಾವಿನಲ್ಲಿ, ದುರಂತ ಅಂತ್ಯ ಕಂಡ ದಿಲ್ಲಿಯ ಪತ್ರಕರ್ತೆ ನಿರುಪಮಾ ಪಾಠಕ್‌ನ ತಂದೆ ಸಹ ಸಂವಿಧಾನಕ್ಕಿಂತ ಹಿಂದೂಧರ್ಮ ಹಳೆಯದು, ಅದನ್ನು ಮೀರುವಂತಿಲ್ಲ ಎಂದು ಮಗಳಿಗೆ ಬುದ್ಧಿ ಹೇಳಿ ಕೊನೆಗೆ ಮರ್ಯಾದಾ ಹತ್ಯೆ ಮಾಡಿದ ಉದಾಹರಣೆ ಇದೆ.
ದಲಿತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಕುಖ್ಯಾತಿ ಪಡೆದ ಉತ್ತರ ಪ್ರದೇಶದ ಬದಾಯು ಘಟನೆ ಜನಮಾನಸದಲ್ಲಿ ಪ್ರಚಾರವಾದರೂ ಸಂತಸ್ತ್ರರಿಗೆ ನ್ಯಾಯ ತ್ವರಿತವಾಗಿ ದೊರೆಯಲಿಲ್ಲ.
ಮಧ್ಯಪ್ರದೇಶದ ಬಿಲಾಯ್ ಖೇಡದಲ್ಲಿ ಬುಡಕಟ್ಟು ಮಹಿಳೆಯ ಮೇಲೆ ಪತಿ ಸೇರಿದಂತೆ ಹತ್ತು ಮಂದಿ ಅತ್ಯಾಚಾರ ನಡೆಸಿ, ನಗ್ನಗೊಳಿಸಿ, ಬಾಯಾರಿಕೆಯಾದ ಮಹಿಳೆ ಕುಡಿಯಲು ನೀರು ಕೇಳಿದಾಗ ಮೂತ್ರ ಕುಡಿಸಿದ ಆಘಾತಕಾರಿ ಘಟನೆಗಳು ನಮ್ಮ ಕಣ್ಣಮುಂದೆ ಇವೆ.
ದೇಶಾದ್ಯಂತ ದಿನಂಪ್ರತಿ ಜರಗುತ್ತಿರುವ ಅತ್ಯಾಚಾರಗಳು, ಲೈಗಿಂಕ ದೌರ್ಜನ್ಯಗಳ ಸರಣಿಯನ್ನು ಗಮನಿಸುತ್ತಿದ್ದೇವೆ. ಇದು ವಸಾಹತು ಕಾಲದಲ್ಲಿ ಚೀನಾ ದೇಶದಲ್ಲಿ ನಡೆದ ದಾಖಲೆಯ ಅತ್ಯಾಚಾರದ ಚಿತ್ರಣ ನೆನಪು ತರುತ್ತದೆ.
ಜಗತ್ತಿನ ದಾಖಲೆ ಅತ್ಯಾಚಾರ-ಐರಿಸ್‌ಚಾಂಗ್ ಚೀನಾ ಮೂಲಕ ಅಮೆರಿಕ ನಿವಾಸಿ, ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ, ನ್ಯಾನ್‌ಕಿಂಗ್ ಹತ್ಯಾಕಾಂಡದ ಬಗ್ಗೆ ತನ್ನ 29ನೆ ವಯಸ್ಸಿನಲ್ಲಿ ‘‘ರೇಪ್ ಆಫ್ ನ್ಯಾನ್‌ಕಿಂಗ್’’ ಪುಸ್ತಕ ಬರೆದು ಭಾರೀ ಹೆಸರು ಮಾಡಿದ ಯುವ ಇತಿಹಾಸ ತಜ್ಞೆ.
1937 ಡಿಸೆಂಬರ್‌ನಲ್ಲಿ ಚೀನಾ, ರಾಷ್ಟ್ರೀಯವಾದಿ ಹಾಗೂ ಕಮ್ಯೂನಿಸ್ಟ್‌ರ ನಡುವಿನ ಶೀತಲ ಸಮರದಿಂದ ನರಳುತ್ತಿತ್ತು. ಚಿಯಾಂಗ್-ಕೈ-ಶೇಕ್ ಎಂಬಾತ ನ್ಯಾನ್‌ಕಿಂಗ್‌ನ್ನು ರಾಜಧಾನಿಯಾಗಿ ಮಾಡಿಕೊಂಡು, ಸಂಪತ್ತನ್ನು ಶೇಖರಿಸಿ ಆಳ್ವಿಕೆ ಮಾಡುತ್ತಿದ್ದ.
ಜಪಾನ್ ಪುಟ್ಟ ರಾಷ್ಟ್ರವಾದರೂ ವಸಾಹತು ಶಾಹಿ ನೀತಿ ಅನುಸರಿಸುತ್ತಿತ್ತು. ಸಂಪನ್ಮೂಲಕ್ಕಾಗಿ ಗೊಂದಲದ ಗೂಡಿನಲ್ಲಿದ್ದ ಚೀನಾ ಮೇಲೆ ಯುದ್ಧಸಾರಿ ಸುಮಾರು 10ಲಕ್ಷ ಜನಸಂಖ್ಯೆ ಇದ್ದ ನ್ಯಾನ್‌ಕಿಂಗ್ ಮೇಲೆ ದಾಳಿ ಮಾಡಿತು. ಆಕ್ರಮಣದ ಉದ್ದೇಶ ಸಂಪತ್ತು ದೋಚುವುದು, ವಸಾಹತು ಆಡಳಿತ ನಡೆಸುವುದಾಗಿತ್ತು, ಆದರೆ ನಡೆದಿದ್ದೇ ಬೇರೆ, ಹಲವಾರು ಚೀನಿ ಸೈನಿಕರನ್ನು, ನಾಗರಿಕರನ್ನು ಕೊಂದ ಜಪಾನ್ ಸೈನಿಕರು, ತಮ್ಮ ಕಾಮತೃಷೆಗಾಗಿ ಬೀದಿ ಬೀದಿಗಳಲ್ಲಿ ಚೀನಾ ಮಹಿಳೆಯರನ್ನು ಅತ್ಯಾಚಾರ ಮಾಡಿದರು. ಕುಟುಂಬ ಸದಸ್ಯರ ಸಮ್ಮುಖದಲ್ಲೇ ವಿವಸ್ತ್ರಗೊಳಿಸಿ ವಿಕೃತ ಖುಷಿ ಪಡುತ್ತಿದ್ದರಂತೆ, ಜಪಾನ್ ಸೈನಿಕರ ಈ ಕಾಮ ಚೆಲ್ಲಾಟಕ್ಕೆ ಸುಮಾರು 20ಸಾವಿರ ಮಹಿಳೆಯರು ಬಲಿಯಾದರು ಎಂಬ ಇತಿಹಾಸವಿದೆ.
ಇಡೀ ಮಾನವ ಕುಲವೇ ನಾಚಿ ತಲೆ ತಗ್ಗಿಸುವಂತಹ ಹೇಯ ಕೃತ್ಯದ ವಿರುದ್ದ ಅಂತರಾಷ್ಟ್ರೀಯ ನಾಯಕರು ಜಪಾನನ್ನು ತರಾಟೆಗೆ ತೆಗೆದುಕೊಂಡಾಗ 1948ರಲ್ಲಿ ಈ ಹತ್ಯಾಕಾಂಡದ 28 ಪ್ರಮುಖ ಸೈನಿಕ ನಾಯಕರಿಗೆ ಗಲ್ಲು ಶಿಕ್ಷೆ ಸೇರಿ ಹಲವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಇತೋ ಹಿಕೋ ವಾಟಾ ಬರೆದಿರುವ ‘‘ನ್ಯಾನ್‌ಕಿಂಗ್ ಇನ್ಸಿಡೆಂಟ್’’ ಎಂಬ ಪುಸ್ತಕ ಅಧಿಕೃತ ಮೂಲವಾಗಿದೆ.(ಪತ್ರಿಕೆಗಳ ಮೂಲ) ನಮ್ಮ ದೇಶದಲ್ಲೂ ಸಹ ನಮ್ಮನ್ನು ರಕ್ಷಿಸಬೇಕಾದ ಕೆಲವು ಕಾಮುಕ ಸೈನಿಕರು ಮಣಿಪುರದ ಮಹಿಳೆಯರ ಮೇಲೆ ಅತ್ಯಾಚಾರ ವೆಸಗಿದ ಪರಿಣಾಮ, ಮಣಿಪುರಿ ಮಹಿಳೆಯರು ಬೆತ್ತಲೆಯಾಗಿ ಸೈನಿಕ ಕೇಂದ್ರದ ಕಚೇರಿ ಎದುರು ಅತ್ಯಾಚಾರ ಎಸಗುವಂತೆ ಉಗ್ರ ಪ್ರತಿಭಟನೆ ಮಾಡಿದರು. ಇಂದಿಗೂ ಭಾರತದ ಈಶಾನ್ಯ ರಾಜ್ಯಗಳು, ಕಾಶ್ಮೀರ ಸೇರಿದಂತೆ ಹಲವು ಕಡೆ ಮಹಿಳೆಯರು ರಕ್ಷಕರಿಂದಲೇ ದೌರ್ಜನ್ಯಕ್ಕೊಳಗಾದ ಪ್ರಸಂಗಗಳಿವೆ.
ವರ್ಣಾಶ್ರಮ ಆಧಾರಿತ ಹಿಂದೂ ಸಮಾಜ ಮಹಿಳೆಗೆ ಆಕೆಗೆ ಇಚ್ಛಿಸಿದ ಉದ್ಯೋಗ, ವೈವಾಹಿಕ ಸಂಬಂಧ, ಆಯ್ಕೆ ಎಲ್ಲವನ್ನೂ ನಿರಾಕರಣೆಗೆ ಒಳಪಡಿಸುತ್ತಿದೆ. ಆರೆಸ್ಸೆಸ್ ಸೇರಿದಂತೆ ಕೆಲವು ಸಂಘಪರಿವಾರದ ನಾಯಕರ ಮಹಿಳೆ ಕುಟುಂಬದ ಲಾಲನೆ-ಪಾಲನೆಯಲ್ಲಿ ತೊಡಗಬೇಕು ಎಂಬ ಹೇಳಿಕೆಗಳು ಇಲ್ಲಿ ಉಲ್ಲೇಖ.
ರಾಷ್ಟ್ರೀಯ ಅಪರಾಧ ಬ್ಯೂರೋ ರೆಕಾರ್ಡ್ ಪ್ರಕಾರ, ದೇಶಾದ್ಯಂತ 2015ರ ಅವಧಿಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳಂತವು 82,422 ಪ್ರಕರಣಗಳು ದಾಖಲಾಗಿರುವುದು ತಿಳಿದುಬರುತ್ತದೆ. ಮಹಾರಾಷ್ಟ್ರದಲ್ಲಿ 11,713 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲೇ ಮೊದಲ ಸ್ಥಾನದ ಕುಖ್ಯಾತಿ ಪಡೆದಿದೆ. 2ನೆ ಸ್ಥಾನದಲ್ಲಿ ಮಧ್ಯಪ್ರದೇಶ 8049 ಪ್ರಕರಣಗಳು, ನಮ್ಮ ಕರ್ನಾಟಕದಲ್ಲಿ 5112 ಪ್ರಕರಣಗಳು ದಾಖಲಾಗಿ 6ನೆ ಸ್ಥಾನದಲ್ಲಿದೆ.
ರಾಜ್ಯದಲ್ಲಿ ನಿತ್ಯ 15 ಯುವತಿಯರು ಕಣ್ಮರೆಯಾಗುತ್ತಿರುವ ವರದಿ ಇದೆ. ಅದರಲ್ಲಿ 12 ರಿಂದ 22ವರ್ಷದ ವಯೋಮಾನದವರು ಎಂಬುದು ಆತಂಕಕಾರಿ. ಕರ್ನಾಟಕದ ಮಹಿಳಾ ಆಯೋಗ ನೀಡಿರುವ ವರದಿ ಪ್ರಕಾರ 2009-2012ರವರೆಗೆ 14989 ಯುವತಿಯರು ನಾಪತ್ತೆಯಾಗಿದ್ದಾರಂತೆ.
2010ರಿಂದ 2014ರ ಮಾರ್ಚ್‌ವರೆಗೆ ರಾಜ್ಯದಲ್ಲಿ ಸುಮಾರು 1333 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಪ್ರತೀ 5 ಆತ್ಮಹತ್ಯೆಗಳ ಪೈಕಿ ಒಬ್ಬ ಗೃಹಿಣಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಅಂಕಿ ಅಂಶಗಳು ಇವೆ.
ಹಿಂದಿನ ಬಿಜೆಪಿ ಸರಕಾರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಹಿನ್ನೆಲೆಯಲ್ಲಿ ರೇವ್ ಪಾರ್ಟಿ ಮುಂತಾದವುಗಳು ನಡೆದು ಅದನ್ನು ತಡೆಯುವ ನೆಪದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಸಾಂಸ್ಕೃತಿಕ ರಕ್ಷಕರೆಂಬ ಧೂತರು, ಗೂಂಡಾಗಳು ಪಬ್, ಬಾರ್ ರೆಸಾರ್ಟ್ ಮುಂತಾದ ಕಡೆ ಹೆಣ್ಣುಮಕ್ಕಳ ಮೇಲೆ ದಾಳಿ ಆದಾಗಲೂ ಸರಕಾರ ದೊಡ್ಡ ಕಾನೂನು ಕ್ರಮ ಜರಗಿಸಲಿಲ್ಲ. ಸದನದಲ್ಲಿ ಕುಳಿತು ಆಶ್ಲೀಲ ವೀಡಿಯೊ ನೋಡುತ್ತಿದ್ದ ಸಚಿವರು ಇನ್ನೂ ಏನು ತಾನೇ ಮಹಿಳೆಯರಿಗೆ ರಕ್ಷಣೆ ನೀಡಬಲ್ಲರು? ಮೇಟಿಯಂಥ ಸಚಿವರು ಈ ಜನ ಮತ್ತು ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದಾರೆ.
ಯಾವುದೇ ಸರಕಾರ ಅಧಿಕಾರದಲ್ಲಿರಲಿ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇವಲ ಮೊಸಳೆ ಕಣ್ಣೀರು ಹಾಕುತ್ತೀವೆ ಅಷ್ಟೆ. ಮಹಿಳೆಯರ ಸಮಗ್ರ ರಕ್ಷಣೆ, ಅಭಿವೃದ್ಧಿಗಳನ್ನು ಬಿ.ಜೆ.ಪಿ.ಸರಕಾರವಿದ್ದಾಗ ವರಮಹಾಲಕ್ಷ್ಮೀ ಹಬ್ಬಕ್ಕೆ ಸೀಮಿತಗೊಳಿಸಿದರೆ, ಕಾಂಗ್ರೆಸ್, ದಳ ಸರಕಾರಗಳು ಸ್ವಸಹಾಯ ಗುಂಪು, ಆಶಾ ಕಾರ್ಯಕರ್ತೆಗಳಾಗಿ ಸರಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಮುಖವಾಣಿಯನ್ನಾಗಿ ಮಾಡಿ ಅದೇ ಅಭಿವೃದ್ಧಿ ಎಂದು ತೋರಿಸುವ ದುಸ್ಸಾಹಸಕ್ಕೆ ಕೈ ಹಾಕಿವೆ. ಅತ್ಯಾಚಾರ, ಕಿರುಕುಳ, ಮಾನಭಂಗ, ಹಿಂಸೆಗಳಿಗೆ ಒಳಗಾದ ಮಹಿಳೆ, ಯುವತಿಯರು ದೌರ್ಜನ್ಯದ ಬಗ್ಗೆ ದೂರು ನೀಡಲು ಬರುವವರಿಗೆ ಸಾಂತ್ವನ, ಧೈರ್ಯದ ವಾತಾವರಣ ನಿರ್ಮಾಣ, ಆತ್ಯಾಚಾರಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡುವುದು, ಅತ್ಯಾಚಾರ, ದೌರ್ಜನ್ಯ ಮಾಹಿತಿಗಳು ಲಭ್ಯವಾದಾಗ ಸಂಬಂಧಪಟ್ಟ ಪೊಲೀಸ್ ಇಲಾಖೆ ಸೇರಿದಂತೆ, ದೂರು ಪ್ರಾಧಿಕಾರಗಳು ಕುಟುಂಬದವರು ಅಥವಾ ಸಂತ್ರಸ್ತೆ ಪ್ರಕರಣ ದಾಖಲಿಸಬೇಕು ಎಂಬ ಸಬೂಬು ನೀಡದೇ ಪ್ರಕರಣ ದಾಖಲಿಸಬೇಕು. ಹೆಣ್ಣು ಮಕ್ಕಳಿಗಾಗಿ ನಡೆಯುತ್ತಿರುವ ವಸತಿ ಗೃಹಗಳು, ಪೇಯಿಂಗ್ ಹಾಸ್ಟೆಲ್‌ಗಳು, ಅನಾಥಾಶ್ರಮ, ಶಾಲೆ ಮುಂತಾದವುಗಳನ್ನು ನೋಂದಾಣಿಗೆ ಒಳಪಡಿಸಿ ಅವುಗಳ ಮೇಲೆ ಸಂಬಂಧಪಟ್ಟ ಇಲಾಖೆಗಳು ನಿಗಾವಹಿಸಿ ಅಗತ್ಯಕ್ರಮ ಕೈಗೊಳ್ಳಬೇಕು.
ಆತ್ಯಾಚಾರಿಗಳನ್ನು ಸಾಧ್ಯವಾದಷ್ಟು ವೇಗವಾಗಿ ಹಿಡಿದು ಪ್ರಕರಣಗಳಲ್ಲಿ ಯಾವುದೇ ಹಣ, ಒತ್ತಡ, ಜಾತಿ ರಾಜಕೀಯ ಪ್ರಭಾವ ನಡೆಯದಂತೆ ಗಮನಹರಿಸಿ, ಅತೀ ಕಠಿಣವಾದ ಉಗ್ರಶಿಕ್ಷೆ ನೀಡಬೇಕು ಅಥವಾ ಬದುಕಿರುವವರೆಗೂ ಯಾವುದೇ ಕ್ಷಮಾದಾನ ನೀಡದೆ ಜೈಲು ಕಂಬಿಯಲ್ಲೇ ಕೊಳೆಯುವಂತೆ ಮಾಡುವುದು ಸರಕಾರದ ಕರ್ತವ್ಯವಾಗಬೇಕು.