ಸುಪ್ರೀಂಕೋರ್ಟ್‌ನಿಂದ ಈ ದೇಶದ ದಲಿತರು ನ್ಯಾಯ ಸಮ್ಮತ ತೀರ್ಪು ನಿರೀಕ್ಷಿಸಲು ಸಾಧ್ಯವೇ ?

ದಲಿತ ವಿರೋಧಿ ತೀರ್ಪು ಪ್ರಕಟವಾಗಲು ಇನ್ನೊಂದು ಪ್ರಮುಖ ಕಾರಣವೆಂದರೆ ದಲಿತ ಹಿಂದುಳಿದ ವರ್ಗದ ಮತ್ತು ಅಲ್ಪಸಂಖ್ಯಾತ ಸಮುದಾಯದವರು ನ್ಯಾಯಾಧೀಶರ ಸ್ಥಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೇಮಕವಾಗದೇ ಇರುವುದು ಮತ್ತು ಸಂಘಪರಿವಾರದ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಪೀಠದಲ್ಲಿರುವುದರಿಂದ ದಲಿತರಿಗೆ ನ್ಯಾಯ ಸಿಗುವುದು ಕನಸಿನ ಮಾತಾಗಿದೆ
ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪಜಾ/ಪಪಂ ನೌಕರರ ಪಾಲಿನ ಮರಣ ಶಾಸನವೆಂದರೆ ತಪ್ಪಾಗುವುದಿಲ್ಲವೇನೋ?
ಯಾಕೆಂದರೆ ದೇಶದ ಪಜಾ/ಪಪಂ ಜನರ ಯಾವುದೇ ಪ್ರಕರಣಗಳಲ್ಲಿ ಇಲ್ಲಿಯ ತನಕ ನ್ಯಾಯ ಸಮ್ಮತ ತೀರ್ಪು ಪ್ರಕಟಿಸಿದ ಉದಾಹರಣೆಗಳನ್ನು ಹುಡುಕಲು ಹೊರಟರೆ ನ್ಯಾಯ ಸಿಕ್ಕಿರುವುದು ಮಾತ್ರ ತೀರ ವಿರಳವೆಂದೇ ಹೇಳಬೇಕಾಗಿದೆ.
ಅದರಲ್ಲೂ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಮೀಸಲಾತಿಯ ವಿಷಯದಲ್ಲಂತೂ ಯಾವಾಗಲೂ ವ್ಯತಿರಿಕ್ತ ತೀರ್ಪುಗಳೇ ಪ್ರಕಟವಾಗಿವೆ. ಇದಕ್ಕೆಲ್ಲ ಕಾರಣ ಹುಡುಕಿದಾಗ ಸಿಕ್ಕಿರುವ ಉತ್ತರವೆಂದರೆ, ಕೆಳ ಹಂತದ ನ್ಯಾಯಾಲಯಗಳಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದ ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ವರ್ಗದ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಸಾಮಾಜಿಕ ನ್ಯಾಯದ ವಿರೋಧಿಗಳು ಕುಳಿತಿರುವುದನ್ನು ಕಾಣಬಹುದಾಗಿದೆ. ಸಾಮಾಜಿಕ ನ್ಯಾಯದ ವಿಷಯದಲ್ಲಾಗಲಿ ಅಥವಾ ಮೀಸಲಾತಿಯ ವಿಷಯದಲ್ಲಿ ಆಗಲಿ ನ್ಯಾಯ ಸಮ್ಮತ ತೀರ್ಮಾನಗಳು ಹೊರಬೀಳಬೇಕಾದರೆ ಅದಕ್ಕಿರುವ ಒಂದೇ ಒಂದು ಮಾರ್ಗವೆಂದರೆ ನ್ಯಾಯಾಂಗ ಇಲಾಖೆಯಲ್ಲಿಯೂ ಸಹ ದಲಿತ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಹೈಕೋರ್ಟ್‌ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕದಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸುವ ಆವಶ್ಯಕತೆ ಇದೆ.
ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಸಂಘಟಿತ ಹೋರಾಟ ಮಾಡುವ ಅನಿವಾರ್ಯತೆ ಬಂದಿದೆ ಎಂದರೆ ತಪ್ಪಾಗದೇನೋ?
ಯಾಕೆಂದರೆ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ನಿನ್ನೆ ಪ್ರಕಟವಾದ ಸುಪ್ರೀಂಕೋರ್ಟ್‌ನ ತೀರ್ಪು ಗಮನಿಸಿದಾಗ, ತೀರ್ಪಿನ ಮೂಲ ಉದ್ದೇಶವಾದರೂ ಏನೆಂದು ಅತ್ಯಂತ ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ.
ಭಡ್ತಿ ಮೀಸಲಾತಿಯ ಹಿನ್ನೆಲೆಯನ್ನೊಮ್ಮೆ ನೋಡುವುದಾದರೆ, 1950ರಿಂದಲೂ ಪಜಾ/ಪಪಂ ವಿದ್ಯಾವಂತರ ಸಂಖ್ಯೆ ಕಡಿಮೆ ಇರುವ ಸಂದರ್ಭದಲ್ಲಿ ಸಾರ್ವಜನಿಕ ಸೇವೆಗಾಗಿ ನಡೆದ ನೇಮಕಾತಿಗಳಲ್ಲಿ ಮೀಸಲಾಗಿದ್ದ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿಯಾಗಿಯೇ ಉಳಿಯುತ್ತಿದ್ದವು.
ಕಾಲಾನುಕ್ರಮವಾಗಿ ಪರಿಶಿಷ್ಟರು ವಿದ್ಯಾವಂತರಾಗಿ ಆಯಕಟ್ಟಿನ ಸ್ಥಾನಗಳಲ್ಲಿ ಸ್ಥಾನ ಪಡೆದರೂ ಸಹ ಇವರಿಗಿಂತ ಮುಂಚೆ ನೇಮಕಗೊಂಡ ಸಾಮಾನ್ಯ ವರ್ಗದ ನೌಕರರು ಭಡ್ತಿಯ ಮೂಲಕ ಉನ್ನತಮಟ್ಟದ ಸ್ಥಾನಗಳಲ್ಲಿದ್ದ ಕಾರಣ ತಾರತಮ್ಯ ಉಂಟಾಗಿದ್ದಂತೂ ಸತ್ಯ.
ಅನೇಕ ವರ್ಷಗಳಿಂದ ಪ್ರತೀ ನೇಮಕದಲ್ಲಿಯೂ ಪಜಾ/ಪಪಂ ದ ಪಾಲಿನ ಖಾಲಿ ಉಳಿಸಿಕೊಂಡು ಬಂದಿರುವ ಮೀಸಲಾತಿಯ ಸ್ಥಾನಗಳ ಆಧಾರದಲ್ಲಿ ಭಡ್ತಿ ನೀಡುವ ಉದ್ದೇಶದಿಂದ ಸಂವಿಧಾನದ 117 ನೆಯ ವಿಧಿಯನ್ನು ಬಳಸಿಕೊಂಡು 27-4-1978 ರಿಂದ ಜಾರಿಗೆ ಬರುವಂತೆ ಉನ್ನತ ಹುದ್ದೆಗೆ ನೇಮಕ ಮಾಡುವ ಸಂಬಂಧ ಸಾಂದರ್ಭಿಕ ಸೇವಾ ಹಿರಿತನವನ್ನು ಪರಿಗಣಿಸುವ ಮೂಲಕ ಭಡ್ತಿ ನೀಡುವ ಉದ್ದೇಶದಿಂದ ಕರ್ನಾಟಕ ಸರಕಾರ ಪಜಾ/ಪಪಂ ನೌಕರರ ಮೀಸಲಾತಿ ಆಧಾರಿತ ಭಡ್ತಿ ನೀಡಲು 2002 ರಲ್ಲಿ ಕಾಯ್ದೆ ಅನುಷ್ಠಾನ ಮಾಡಲಾಯಿತು. ಆಗ ಕಾಯ್ದೆಯ ಅನುಸಾರ ಸಾಮಾನ್ಯ ವರ್ಗದ ನೌಕರರಿಗೆ ಅನ್ಯಾಯವಾಗುತ್ತದೆಂದು ಅದೇ 2002 ರಲ್ಲಿ ಎಂ.ನಾಗರಾಜ ಎಂಬವರು ಭಾರತ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ.
2002 ರಿಂದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ 2006 ರಲ್ಲಿ 1995 ರ ಸಂವಿಧಾನದ 77 ನೆಯ ತಿದ್ದುಪಡಿ ಕಾಯ್ದೆ; 2000 ರ ಸಂವಿಧಾನದ 81 ನೆಯ ತಿದ್ದುಪಡಿ ಕಾಯ್ದೆ; 2000 ರ ಸಂವಿಧಾನದ 82 ನೆಯ ತಿದ್ದುಪಡಿ ಕಾಯ್ದೆ; 2001 ರ 85 ನೆಯ ತಿದ್ದುಪಡಿ ಕಾಯ್ದೆ ಸಿಂಧುತ್ವವನ್ನು ಎತ್ತಿ ಹಿಡಿಯುವ ಮೂಲಕ ಐತಿಹಾಸಿಕ ಮಹತ್ವದ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ ಅದೇ ತೀರ್ಪಿನಲ್ಲಿ ಮುಂದುವರಿದು ಆಯಾ ರಾಜ್ಯದ ಹೈಕೋರ್ಟ್‌ಗಳಿಗೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವ ಸಂಬಂಧ ಸೂಚಿಸಿತ್ತು. ಆಗ ಭಡ್ತಿ ಮೀಸಲಾತಿಯ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯ ಈ ಕೆಳಗಿನಂತೆ ತೀರ್ಪು ಪ್ರಕಟಿಸಿತ್ತು.
ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಯ ತನಕ ಮಾತ್ರವೇ ಮೀಸಲಾತಿ ಆಧಾರಿತ ಭಡ್ತಿ ನೀಡುವ ಕಾರಣ ಇಲಾಖೆಯ ಉನ್ನತ ಮಟ್ಟದ ಹುದ್ದೆಗಳು ಪಜಾ/ಪಪಂ ನೌಕರರಿಗೆ ದಕ್ಕಿಬಿಡುತ್ತವೆ ಮತ್ತು ಸಾಮಾನ್ಯ ವರ್ಗದ ನೌಕರರು ಅವಕಾಶವಂಚಿತರಾಗುತ್ತಾರೆಂಬ ವಾದ ಸರಿಯಲ್ಲ ಎಂದು 2002 ರ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿಯುವಮೂಲಕ ಮತ್ತೊಂದು ಐತಿಹಾಸಿಕ ಮಹತ್ವದ ತೀರ್ಪು ಪ್ರಕಟಿಸಿತ್ತು.
ಆದರೆ ಮತ್ತೆ 2011 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿ.ಕೆ.ಪವಿತ್ರಾ ಅವರು ಸುಪ್ರೀಂಕೋರ್ಟಿನ ಮೊರೆ ಹೋಗುತ್ತಾರೆ.
ಪವಿತ್ರಾ ಅವರ ವಾದ: ಪಜಾ/ಪಪಂ ನೌಕರರಿಗೆ ಮೀಸಲಾತಿಯನ್ವಯ ಕ್ಷಿಪ್ರಗತಿಯ ಭಡ್ತಿ ನೀಡಿದರೆ 45 ನೆಯ ವಯಸ್ಸಿಗೆ ಮೂರನೆಯ ಹಂತದ ಭಡ್ತಿ ಪಡೆಯುತ್ತಾರೆ. ನಂತರ ಇನ್ನೂ 2 ರಿಂದ 3 ವರ್ಷಗಳ ಬಳಿಕ 4ನೆಯ , 5ನೆಯ ಮತ್ತು 6ನೆಯ ಹಂತದ ಭಡ್ತಿ ಪಡೆಯುತ್ತಾರೆ. ಆದರೆ ಸಾಮಾನ್ಯ ವರ್ಗದ ನೌಕರರು 56ನೆಯ ವಯಸ್ಸಿಗೆ 3 ನೆಯ ಹಂತದ ಭಡ್ತಿ ಪಡೆಯುತ್ತಾರೆ ಹಾಗೆಯೇ 4ನೆಯ ಹಂತದ ಭಡ್ತಿ ಪಡೆಯುವ ಮುಂಚೆ ನಿವೃತ್ತಿಯಾಗಿರುತ್ತಾರೆ. ಆದರೆ ಪಜಾ/ಪಪಂ ನೌಕರರು ಮೀಸಲಾತಿಯನ್ವಯ ಭಡ್ತಿಯ ಪ್ರಾತಿನಿಧ್ಯ ಶೇ.36 ರಿಂದ ಶೇ.100 ಕ್ಕೆ ಏರುತ್ತದೆಂದು ವಾದ ಮಂಡಿಸಿದ ಅವರು ಆಗಿರುವ ತಾರತಮ್ಯವನ್ನು ಸರಿಯೇ ಎಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಶ್ನೆ ಹಾಕುತ್ತಾರೆ. ಆದರೆ ಪ್ರತಿವಾದಿಯಾಗಿರುವ ಕರ್ನಾಟಕ ಸರಕಾರ ಈ ಕೆಳಗಿನಂತೆ ಸಮರ್ಥಿಸುತ್ತಾದೆ, 2002 ರ ಕಾಯ್ದೆ ಭಡ್ತಿಗೆ ಸಂಬಂಧಿಸಿದ ವಿಷಯ ಆದರೆ ಮೀಸಲಾತಿಗೆ ಸಂಬಂಧಿಸಿದ್ದಲ್ಲ. ಜೇಷ್ಠತೆ ನಾಗರಿಕ ಹಕ್ಕೇ ವಿನಃ ಮೂಲಭೂತ ಹಕ್ಕಲ್ಲ. ನಿಗದಿತ ಪ್ರಮಾಣ ಮೀರದಿರುವ ಸಂದರ್ಭದಲ್ಲಿ ಭಡ್ತಿ ನೀಡಲು ಯಾವುದೇ ಮಿತಿಗಳಿಲ್ಲ. ಸೇವಾ ಹಿರಿತನ ರದ್ದು ಮಾಡುವುದಿದ್ದರೂ, ನಿವೃತ್ತರಾಗಿರುವ ಅಥವ ಉನ್ನತ ಮಟ್ಟದ ಹುದ್ದೆಗಳನ್ನು ತಲುಪಿರುವವರ ಸೇವಾ ಹಿರಿತನವನ್ನು ತಿರುವು ಮುರುವು ಮಾಡಲು ಸಾಧ್ಯವಿಲ್ಲ ಎಂದು ಸಮರ್ಪಕ ವಾದ ಮಂಡಿಸಿದ್ದಾರೆ.
ಆದರೆ ಸ್ವತ ಸರ್ವೋಚ್ಚ ನ್ಯಾಯಾಲಯವೇ 2006ರಲ್ಲಿ ಕಾಯ್ದೆಯ ಸಿಂಧುತ್ವ ಎತ್ತಿ ಹಿಡಿದಿರುವಾಗ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಮಹತ್ವದ ತೀರ್ಪನ್ನು ರದ್ದುಗೊಳಿಸುವ ಮೂಲಕ 2002ರ ಕಾಯ್ದೆಗೆ ಮಾನ್ಯತೆ ಇಲ್ಲ ಎಂದು ಹೇಳಿದ ನ್ಯಾಯಪೀಠದ ತೀರ್ಮಾನ ಅನುಮಾನಕ್ಕೆ ಎಡೆಮಾಡಿದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಈ ಕೆಳಗಿನಂತೆ ಪ್ರಕಟಿಸಿದೆ: ಸರಕಾರಿ ನೌಕರರ ಭಡ್ತಿ ವಿಚಾರದಲ್ಲಿ ಎಸ್ಸಿ, ಎಸ್ಟಿಗಳಿಗೆ ವಿಶೇಷ ಮಾನ್ಯತೆ ನೀಡುವ ವಿಚಾರವಾಗಿ 1978ರಿಂದಲೂ ಚಾಲ್ತಿಯಲ್ಲಿದ್ದ ನಿಯಮಗಳು; ಈ ನಿಯಮಗಳ ವಿರುದ್ಧ ದನಿಯೆತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಬಿ.ಕೆ. ಪವಿತ್ರಾ ವಿಚಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕ ಸರಕಾರವು ಅನುಸರಿಸುತ್ತಿರುವ ಮೀಸಲಾತಿಯನ್ನು ಕೈಬಿಡಬೇಕೆಂದು ಸುಪ್ರೀಂ ಕೋರ್ಟ್, ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.
ಭಡ್ತಿ ವಿಚಾರವಾಗಿ ಎಸ್ಸಿ, ಎಸ್ಟಿ ನೌಕರರನ್ನು ವಿಶೇಷವಾಗಿ ಪರಿಗಣಿಸುವ (ಕಾನ್ಸಿಕ್ವೆನ್ಷಿಯಲ್ ಸೀನಿಯಾರಿಟಿ) ವಿಧಾನದಿಂದಾಗಿ, ಸಾಮಾನ್ಯ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ನೌಕರಸ್ಥರು ಅನೇಕ ವರ್ಷಗಳಿಂದ ತಮಗೆ ಸಿಗಬೇಕಾದ ಭಡ್ತಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಾ ಕುಳಿತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಕಾರಿ ನೌಕರಿಯಲ್ಲಿ ಭಡ್ತಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರಕಾರದ 2002ರ ಕಾಯ್ದೆಯನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ಹೊಸ ಜ್ಯೇಷ್ಠತಾ ಪಟ್ಟಿಯನ್ನು ಮೂರು ತಿಂಗಳೊಳಗೆ ಪರಿಷ್ಕರಿಸಿ ಸಿದ್ಧಪಡಿಸಬೇಕು ಎಂದು ಆದೇಶಿಸಿದೆ
ಭಡ್ತಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಮ ಪ್ರಮಾಣದ ಪ್ರಾತಿನಿಧ್ಯ ಇಲ್ಲ ಎಂಬ ಒಂದೇ ಕಾರಣದಿಂದ ಸೇವೆಯಲ್ಲಿ ಕಿರಿಯರಾಗಿದ್ದರೂ ಸಾಂದರ್ಭಿಕ ಹಿರಿತನ ನೀಡಿ ಆ ಮೂಲಕ ಇತರರಿಗೆ ಭಡ್ತಿಯನ್ನು ನಿರಾಕರಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಆದರ್ಶಕುಮಾರ್ ಗೋಯೆಲ್ ಹಾಗೂ ಯು.ಯು. ಲಲಿತ್ ಅವರನ್ನು ಒಳಗೊಂಡ ಪೀಠ ತೀರ್ಪು ನೀಡಿದೆ.
ಮೀಸಲಾತಿಯ ವಿರುದ್ಧ ತೀರ್ಪುಗಳು ಪ್ರಕಟಗೊಳ್ಳುತ್ತಿರುವುದೇಕೆ? ಭಾರತದಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪ್ರತಿ ಕ್ಷೇತ್ರದಲ್ಲಿಯೂ ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನ ಬದ್ಧಗೊಳಿಸಿ ಮೂಲಭೂತ ಹಕ್ಕನ್ನಾಗಿಸಿದರೂ ಸಹ ನ್ಯಾಯ ಪ್ರಕಟಿಸುವ ಸ್ಥಾನದಲ್ಲಿ ಸಂವಿಧಾನ ವಿರೂಪಗೊಳಿಸುವ ಮನಸ್ಥಿತಿಯನ್ನು ಹೊಂದಿರುವ ಜನರೇ ಕುಳಿತಿರುವಾಗ ಶೋಷಿತ ವರ್ಗದ ಜನರಿಗೆ ನ್ಯಾಯ ಸಿಗಲು ಸಾಧ್ಯವೇ ಇಲ್ಲ. ಸಂವಿಧಾನ ಜಾರಿಯಾದ ದಿನದಿಂದ ಒಂದಿಲ್ಲೊಂದು ಪ್ರಕರಣಗಳಲ್ಲಿ ಸಂವಿಧಾನದಮೂಲ ಆಶಯ ಮತ್ತು ವ್ಯಾಖ್ಯಾನವನ್ನು ತಿರುಚುತ್ತಾ, ರಾಜ್ಯಾಂಗವನ್ನು ದುರ್ಬಲಗೊಳಿಸುತ್ತಲೇ ಬರುತ್ತಿದ್ದಾರೆ.
ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತೀರ್ಪು ಪ್ರಕಟಿಸುವ ಅಧಿಕಾರ ಸರ್ವೋಚ್ಚ ನ್ಯಾಯಾಲಯಕ್ಕೆ(ಸಂವಿಧಾನ ಪೀಠ ಹೊರತು ಪಡಿಸಿ) ಇಲ್ಲದಿದ್ದರೂ ಸಹ ಆಗಾಗ ಸಂವಿಧಾನದ ಆಶಯಗಳಿಗೆ ಕೊಡಲಿ ಪೆಟ್ಟು ನೀಡುತ್ತಲೇ ಇರುತ್ತದೆ. ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವ್ಯತಿರಿಕ್ತ ತೀರ್ಪು ನೀಡುವ ಮೂಲಕ ಶಾಸಕಾಂಗದ ನಿರ್ಧಾರಗಳನ್ನು ಅಣಕಿಸುತ್ತಾ, ಸಂವಿಧಾನದ ಮೂಲ ಆಶಯ ಈಡೇರಿಸುವ ಶಾಸಕಾಂಗದ ಪ್ರಯತ್ನಕ್ಕೆ ಅಡ್ಡಿಯುಂಟು ಮಾಡುತ್ತ , ಶಾಸಕಾಂಗವನ್ನು ಮುಜುಗರಪಡುವಂತೆ ನೋಡಿಕೊಳ್ಳುವುದರ ಹಿಂದೆ ಯಾವುದೋ ಕಾಣದ ಜಾತಿವಾದಿ ಕೋಮುವಾದಿ ಶಕ್ತಿಗಳು ತೆರೆಮರೆಯಲ್ಲಿ ನಿಂತು ನ್ಯಾಯಾಂಗದ ಮೇಲೆ ಸವಾರಿ ಮಾಡುವ ಮೂಲಕ ತನ್ನ ಅಂತರಂಗದ ಅಜೆಂಡಾ ಜಾರಿಗೊಳಿಸುವ ಪ್ರಯತ್ನ ಮಾಡುತ್ತದೆ ಎಂಬ ಅನುಮಾನ ಬಾರದೇ ಇರದು.
ಯಾಕೆಂದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ಸಂಘಪರಿವಾರದ ಕೆಲವು ಮುಖಂಡರು ಮೀಸಲಾತಿ ರದ್ದತಿಯ ಬಗ್ಗೆ ಮತ್ತು ಸಂವಿಧಾನ ವಿರೂಪಗೊಳಿಸುವ ಬಗ್ಗೆ ಆಗಾಗ ಬಹಿರಂಗ ಹೇಳಿಕೆ ನೀಡುತ್ತಿರುತ್ತಾರೆ. ಶೋಷಿತರ ವಿರುದ್ಧ ಅಂತರಂಗದ ಅಜೆಂಡಾ ಹೊಂದಿರುವ ಶಕ್ತಿಗಳಿಂದ ನೇಮಕಗೊಂಡ ನ್ಯಾಯಾಧೀಶರೇ ತುಂಬಿ ತುಳುಕುತ್ತಿದ್ದಾರೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ನೇಮಕಗೊಂಡಿರುವ ನ್ಯಾಯಾಧೀಶರನ್ನು ನಂಬುವುದು ದೇಶದ ಜನತೆಗೆ ಕಷ್ಟವಾಗುತ್ತಿದೆ. ಆದ್ದರಿಂದ ಭಡ್ತಿ ಮೀಸಲಾತಿಯ ವಿಷಯಕ್ಕೆ ಸಂಬಂಧಿಸಿದಂತೆ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ತೀರ್ಪು ಪ್ರಕಟವಾಗಿರಬಹುದೆಂದು ನನ್ನ ಬಲವಾದ ನಂಬಿಕೆ. ಯಾಕೆಂದರೆ ತೀರ್ಪಿನಲ್ಲಿಯೇ ಹೇಳಿರುವಂತೆ , ಭಡ್ತಿಗೆ ಜಾತಿ ಒಂದೇ ಮಾನದಂಡವಲ್ಲ ಮತ್ತು ಅವಕಾಶ ಒದಗಿಸುವ ಉದ್ದೇಶದಿಂದ ಅರ್ಹತೆ ಇಲ್ಲದವರಿಗೂ ಭಡ್ತಿ ನೀಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿರುವುದು ನನ್ನ ಅನುಮಾನಕ್ಕೆ ಪುಷ್ಟಿ ನೀಡಿದಂತಿದೆ.
ಇಂತಹ ದಲಿತ ವಿರೋಧಿ ತೀರ್ಪು ಪ್ರಕಟವಾಗಲು ಇನ್ನೊಂದು ಪ್ರಮುಖ ಕಾರಣವೆಂದರೆ ದಲಿತ ಹಿಂದುಳಿದ ವರ್ಗದ ಮತ್ತು ಅಲ್ಪಸಂಖ್ಯಾತ ಸಮುದಾಯದವರು ನ್ಯಾಯಾಧೀಶರ ಸ್ಥಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೇಮಕವಾಗದೇ ಇರುವುದು ಮತ್ತು ಸಂಘಪರಿವಾರದ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಪೀಠದಲ್ಲಿರುವುದರಿಂದ ದಲಿತರಿಗೆ ನ್ಯಾಯ ಸಿಗುವುದು ಕನಸಿನ ಮಾತಾಗಿದೆ ಎಂದರೆ ತಪ್ಪಾಗುವುದಿಲ್ಲ. ಆದ್ದರಿಂದ ದೇಶದ ಅಹಿಂದ ಸಮುದಾಯಗಳಿಂದ ನ್ಯಾಯಾಂಗ ಇಲಾಖೆಯಲ್ಲಿಯೂ ಸಹ ಮೀಸಲಾತಿ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ಆಗಬೇಕಿದೆ. ಈ ಸಂಬಂಧ ವಿವಿಧ ಪಕ್ಷಗಳಲ್ಲಿರುವ ಅಹಿಂದ ಸಮುದಾಯದ ರಾಷ್ಟ್ರೀಯ ನಾಯಕರೆಲ್ಲ ಸಂಸತ್ತಿನಲ್ಲಿ ಒಂದಾಗಿ, ಈಗಾಗಲೇ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ಭಡ್ತಿ ಮೀಸಲಾತಿ ಬಿಲ್ ಲೋಕಸಭೆಯಲ್ಲಿ ಅಂಗೀಕಾರವಾಗುವಂತೆ ಕ್ರಮ ವಹಿಸುವುದರ ಜೊತೆಗೆ ನ್ಯಾಯಾಂಗ ಇಲಾಖೆಯಲ್ಲಿಯೂ ಸಹ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲು ಸೌಲಭ್ಯ ಜಾರಿಗೊಳಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಸಂಘಟಿತ ಹೋರಾಟ ಮಾಡುವ ಅಗತ್ಯವಿದೆ.
ಆಗ ಮಾತ್ರ ಈ ದೇಶದ ಜನ ಸಾಮಾನ್ಯನಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಿದೆ. ಇಲ್ಲದೇ ಹೋದರೆ ಮುಂದೊಂದು ದಿನ ಸಂವಿಧಾನ ವಿರೋಧಿಗಳಿಂದ ರಾಜ್ಯಾಂಗದ ಬುಡಕ್ಕೆ ಕೊಡಲಿ ಪೆಟ್ಟು ಬೀಳುವುದರಲ್ಲಿ ಅನುಮಾನವೇ ಇಲ್ಲ.
ಸಂಘಪರಿವಾರದವರ ಕುತಂತ್ರಕ್ಕೆ ಸಂವಿಧಾನವೇನಾದರು ಬಲಿಯಾದರೆ ಮತ್ತೆ ಮನುಸ್ಮತಿಯ ಅಟ್ಟಹಾಸ ವಿಜೃಂಭಿಸುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ಮುಂದಿರುವ ಒಂದೇ ಒಂದು ಸವಾಲು ಅಂದರೆ ಅದು ನಮ್ಮ ಸಂವಿಧಾನವನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕಿದೆ.
ಜಾತಿವಾದಿಗಳಿಂದ ಸಂವಿಧಾನ ಕುರೂಪವಾದರೆ ಅಥವ ಅಪಮಾನವಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸಿನ ಭಾರತ ಸತ್ತು ಸುಡುಗಾಡು ಸೇರಿದಂತೆ. ಡಾ.ಅಂಬೇಡ್ಕರ್ ಕಂಡ ಕನಸಿನ ಭಾರತಕ್ಕಾಗಿ ರಾಜ್ಯಾಂಗದ ರಕ್ಷಣೆ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಲಿ.







