ನೋಟು ರದ್ದತಿ, ಕೊಳಕು ಮನಸ್ಸುಗಳು, ಸಾಮಾಜಿಕ ಮಾಧ್ಯಮಗಳು

ಸಾಮಾಜಿಕ ಮಾಧ್ಯಮಗಳ ಯುಗ. ಈ ಹೊತ್ತು ಅನೇಕ ಹೋರಾಟಗಳು ಬೀದಿಯಿಂದ ಸಾಮಾಜಿಕ ಮಾಧ್ಯಮಗಳ ಅಂಗಳಕ್ಕೆ ಸ್ಥಳಾಂತರಗೊಂಡಿವೆ. ಫೇಸ್‌ಬುಕ್, ಟ್ವಿಟರ್‌ಗಳ ವೈಶಿಷ್ಟ್ಯ ಮತ್ತು ಆಕರ್ಷಣೆ ಎಂದರೆ ಬಾಯಲ್ಲಿ ಹೇಳಲಾಗದ, ಮಾಧ್ಯಮಗಳಲ್ಲಿ ಪ್ರಕಟಿಸಲಾಗದ ಮನದಾಳದ ಅನಿಸಿಕೆಗಳನ್ನು ಇಲ್ಲಿ ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಎಷ್ಟೆಂದರೆ ಕೆಲವೊಮ್ಮೆ ಶ್ಲೀಲ, ಅಶ್ಲೀಲಗಳ ನಡುವಿನ ಗಡಿರೇಖೆ ಮಾಯವಾಗುತ್ತದೆ.
ಪ್ರಾಚೀನ ಭಾರತೀಯರಿಗೆ ರುಂಡಕ್ಕೆ ಮುಂಡ ಜೋಡಿಸುವ ಸರ್ಜರಿ ಕಲೆ ತಿಳಿದಿತ್ತೆಂದು ಪ್ರತಿಪಾದಿಸುವ ‘ಸಕಲ ವಿದ್ಯಾಪಾರಂಗತ’ ಮೋದಿ ನೋಟು ರದ್ದತಿ ಕುರಿತಂತೆ ಸಂಸತ್ತಿನಲ್ಲಿ ಉದುರಿಸಿದ ಅಣಿಮುತ್ತು ಹೀಗಿದೆ: ‘‘ಆಪರೇಷನ್ ಯಾವಾಗ ಮಾಡಬಹುದು? ಶರೀರದ ಆರೋಗ್ಯ ಚೆನ್ನಾಗಿದ್ದಾಗ. ಆರ್ಥಿಕ ವ್ಯವಸ್ಥೆ ಚೆನ್ನಾಗಿ ನಡೆಯುತ್ತಾ ಇತ್ತು.
ಆದುದರಿಂದಲೇ ನಮ್ಮ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ’’! ನೋಟು ರದ್ದತಿಯಿಂದಾಗಿ ಜನರಿಗೆ ಯಾವುದೇ ಅನನುಕೂಲತೆಯಾಗಿಲ್ಲ ಎಂದು ವಾದಿಸುತ್ತಿದೆೆ ಮೋದಿ ಸರಕಾರ. ಹಾಗಾದರೆ ನೂರಕ್ಕೂ ಮಿಕ್ಕಿ ಜನಸಾಮಾನ್ಯರು ಪ್ರಾಣ ಬಿಟ್ಟಿರುವುದು, ಸಾವಿರಾರು ಸಣ್ಣಪುಟ್ಟ ಉದ್ದಿಮೆಗಳು ಮುಚ್ಚಿರುವುದು, ಮಧ್ಯಮ ಮಟ್ಟದ ಉದ್ದಿಮೆಗಳು ಮತ್ತು ಸಂಸ್ಥೆಗಳ ಲಾಭ ಅರ್ಧಕ್ಕರ್ಧ ಕಡಿಮೆಯಾಗಿರುವುದು, ವ್ಯಾಪಾರಿಗಳ ವ್ಯವಹಾರ ಇಳಿಮುಖವಾಗಿರುವುದು, ರೈತಾಪಿ ವರ್ಗದ ಬವಣೆಗಳು ಇವರಿಗೆಲ್ಲ ಅನನುಕೂಲತೆ ಅಲ್ಲ, ಅಲ್ಲವೇ? ನಗದುರಹಿತ ವಹಿವಾಟಿನಿಂದ ಭ್ರಷ್ಟಾಚಾರ, ಕಾಳಧನವನ್ನು ತಡೆಗಟ್ಟಬಹುದೆಂದು ತಮ್ಮ ಅಧಿನಾಯಕ ಹೇಳಿದ್ದೇ ತಡ, ಭಟ್ಟಂಗಿ ಮಾಧ್ಯಮಗಳು, ಪೂಜಕರು, ಚೇಲಾ ಪಡೆಗಳು ಇತ್ಯಾದಿಗಳೆಲ್ಲ ವ್ಯಾಪಕ ಪ್ರಚಾರಕ್ಕಿಳಿದವು.
ಇವರ ಗಾಳಕ್ಕೆ ಬಲಿಯಾದ ಕೆಲವೊಂದು ಸ್ಥಳೀಯಾಡಳಿತ ಸಂಸ್ಥೆಗಳು, ಸರಕಾರಿ ಕಾಲೇಜುಗಳು, ಖಾಸಗಿ ವಿದ್ಯಾಸಂಸ್ಥೆಗಳಂಥವು ಭಾರೀ ಉತ್ಸುಕತೆಯಿಂದ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಿದ್ದೂ ಆಯಿತು. ಒಂದೆರಡು ಬೀದಿ ಬದಿ ವ್ಯಾಪಾರಿಗಳು ಕಾರ್ಡುಜ್ಜುವ ಯಂತ್ರಗಳೊಂದಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಪ್ರಹಸನವೂ ನಡೆಯಿತು. ಆದರೆ ಬದಲಾವಣೆ ಏನಾದರೂ ಆಯಿತೇ? ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಒಂದು ಉದಾಹರಣೆ ತೆಗೆದುಕೊಂಡರೆ ಅದು ಯಥಾಪ್ರಕಾರ ಮುಂದುವರಿದಿರುವುದನ್ನು ಕಾಣಬಹುದಾಗಿದೆ! ಅಲ್ಲಿ ಈಗ ಹೆಚ್ಚಿನ ವಹಿವಾಟುಗಳು ಆನ್‌ಲೈನ್ ಅಥವಾ ಚೆಕ್ ಮೂಲಕವೇ ನಡೆಯುತ್ತಿವೆಯಂತೆ! ಇದು ನಗರ ಪ್ರದೇಶಗಳ ಕತೆಯಾದರೆ ಇನ್ನು ಗ್ರಾಮೀಣ ಭಾರತದ ಮೇಲಾದ ವ್ಯಾಪಕ ದುಷ್ಪರಿಣಾಮಗಳನ್ನು, ಅಲ್ಲಿನ ಜನತೆ ಅನುಭವಿಸಿರುವ ಸಂಕಷ್ಟಗಳನ್ನು ಅರಿಯಲು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳ ಎರಡು ಉದಾಹರಣೆಗಳು ಸಾಕು.
ಉತ್ತರ ಪ್ರದೇಶ
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ವ್ಯಾಪಾರಿಗಳು ನೋಟು ರದ್ದತಿ ಬಗ್ಗೆ ಬಹಿರಂಗವಾಗಿ ತುಟಿಬಿಚ್ಚದಿದ್ದರೂ ಸ್ವಲ್ಪಕೆದಕಿದಾಗ ಮಿದುಸ್ವರದಲ್ಲಿ ನಿಜಾಂಶಗಳನ್ನು ಬಾಯ್ಬಿಡುತ್ತಾರೆ. ಅವರು ಹೇಳುವಂತೆ ಮೂರು ತಿಂಗಳಾದರೂ ಮಾರುಕಟ್ಟೆ ಇನ್ನೂ ಚೇತರಿಸಿಕೊಂಡಿಲ್ಲ; ವ್ಯಾಪಾರಿಗಳ ಸ್ಟಾಕು ಹಾಗೇ ಬಿದ್ದಿದೆ. ಆದರೆ ಹಳ್ಳಿಗರ ಆಕ್ರೋಶವಂತೂ ಕೊತಕೊತನೆ ಕುದಿಯುತ್ತಿದೆ.
ಕಳೆದ ವರ್ಷ ಹರ್ಯಾಣದಲ್ಲಿ ಮೀಸಲಾತಿ ವಿಷಯದಲ್ಲಿ ದಂಗೆಗಳಾದಾಗ ಜಾಟರನ್ನು ನಡೆಸಿಕೊಂಡ ರೀತಿಯಿಂದ ಕೆರಳಿಕೆಂಡವಾಗಿರುವ ಇಲ್ಲಿನ ಜಾಟ್ ಸಮುದಾಯ ಅದನ್ನಿನ್ನೂ ಮರೆತಿಲ್ಲ. ಜನಸಂಖ್ಯೆಯ ಶೇ.18ರಷ್ಟಿರುವ ಇವರು ನೋಟು ರದ್ದತಿಯನ್ನು ನೇರಾನೇರವಾಗಿ ಟೀಕಿಸುತ್ತಾರೆ. ನವೆಂಬರ್‌ನಲ್ಲಿ ಇವರು ಕಬ್ಬು ಕಟಾವ್ ಮಾಡಿ ಗೋಧಿ ಬಿತ್ತನೆಗೆ ರೆಡಿಯಾಗಿದ್ದರು. ಬೀಜಗಳು ಮತ್ತಿತರ ಅಗತ್ಯವಸ್ತುಗಳ ಖರೀದಿಗಾಗಿ, ಕಾರ್ಮಿಕರ ಕೂಲಿ ಬಟವಾಡೆಗಾಗಿ ನಗದು ಬೇಕಿದ್ದ ಸಮಯದಲ್ಲೇ ನೋಟುರದ್ದತಿ ಬರಸಿಡಿಲಿನಂತೆ ಬಂದೆರಗಿದೆ.
ಪರಿಣಾಮವಾಗಿ ಗದ್ದೆಗಳಲ್ಲಿ ಅತ್ಯಧಿಕ ಕೆಲಸವಿದ್ದ ಕಾಲದಲ್ಲಿ ರೈತರೆಲ್ಲ ಬ್ಯಾಂಕುಗಳಿಗೆ ಓಡಿ ಗಂಟೆಗಟ್ಟಲೆ, ದಿನಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾಯಿತು. ದುಡ್ಡಿಗೆ ಪರದಾಡಿದ ಅನೇಕರು ಅಂತಿಮವಾಗಿ 12- 13ಶೇ ಬಡ್ಡಿ ತೆತ್ತು ಮಧ್ಯವರ್ತಿಗಳಿಂದ ಸಾಲ ಪಡೆಯಬೇಕಾಯಿತು. ಹಾಲಿ ಅಸೆಂಬ್ಲಿ ಚುನಾವಣೆಗಳ ವೇಳೆ ಬಿಜೆಪಿ ನಾಯಕರು ನೋಟು ರದ್ದತಿ ಬಗ್ಗೆ ಹೆಚ್ಚು ಮಾತಾಡದಿರುವುದಕ್ಕೆ ಇದೇ ಕಾರಣ.
ಮಹಾರಾಷ್ಟ್ರ
ಮಹಾರಾಷ್ಟ್ರದ ಪಾಲ್‌ಘರ್ ಜಿಲ್ಲೆಯ ಆದಿವಾಸಿಗಳಿಗೆ ಮಳೆಗಾಲದಲ್ಲಿ ಮಾತ್ರ ಬೇಸಾಯ ಸಾಧ್ಯ. ವರ್ಷದ ಮಿಕ್ಕ ಋತುಗಳಲ್ಲಿ ಹೆಚ್ಚಿನವರು ಅಲ್ಲಿಂದ ಕೆಲವೇ ಕಿಲೊಮೀಟರ್ ದೂರದ ಉಂಬರ್‌ಗಾಂವ್‌ನಲ್ಲಿರುವ ಕಾರ್ಖಾನೆಯೊಂದರಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಾರೆ. ಉಂಬರ್‌ಗಾಂವ್ ಗುಜರಾತ್ ರಾಜ್ಯದಲ್ಲಿದೆ. ನೋಟು ರದ್ದತಿ ನಂತರ ಇವರೆಲ್ಲರ ಪಗಾರವನ್ನು ಚೆಕ್ ರೂಪದಲ್ಲಿ ನೀಡಲಾಗುತ್ತಿದೆ ಅಥವಾ ನೇರವಾಗಿ ಖಾತೆಗೆ ರವಾನಿಸಲಾಗುತ್ತಿದೆ.
ದುಡ್ಡೇನೊ ಬ್ಯಾಂಕುಗಳಿಗೆ ಬಂದಿರಬಹುದು. ಆದರೆ ಬ್ಯಾಂಕುಗಳಲ್ಲಿ ನಗದಿನ ಅಭಾವದಿಂದಾಗಿ ಇವರಿಗೆ ಖಾತೆಯಿಂದ ದುಡ್ಡು ತೆಗೆಯುವುದೇ ದೊಡ್ಡ ಸಮಸ್ಯೆಯಾಗಿದೆ. ಪ್ರತೀ ಬಾರಿ ಬ್ಯಾಂಕಿಗೆ ಎಡತಾಕುವಾಗ ಒಂದು ದಿನದ ಕೂಲಿ ಹೋಯಿತೆಂದೆ ಲೆಕ್ಕ. ಇವರ ಪರಿಸ್ಥಿತಿ ಹೀಗಿದ್ದರೆ ಬ್ಯಾಂಕ್ ಖಾತೆ ಇಲ್ಲದವರ ಪರಿಸ್ಥಿತಿ ಇನ್ನೂ ಶೋಚನೀಯ. ಅವರಿಗೆ ಸಂಬಳವನ್ನೇ ನೀಡಲಾಗಿಲ್ಲ. ಕೆಲವರು ನೌಕರಿ ಕಳೆದುಕೊಂಡು ಕೆಲಸ ಹುಡುಕುತ್ತಾ ಸಿಕ್ಕಿದಷ್ಟು ಸಂಬಳಕ್ಕೆ ದುಡಿಯುತ್ತಿದ್ದಾರೆ.
ಬೇಸಾಯ ಮಾಡಿದವರು ಗದ್ದೆಯಲ್ಲಿ ಬೆಳೆದುದನ್ನು ಮಾರಲು ಹೋದರೆ ವ್ಯಾಪಾರಿಗಳು ಚೀಟಿಗಳನ್ನು ಕೊಟ್ಟು ನಗದು ಬಂದಾಗ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ದೇಶದಾದ್ಯಂತ ಹೆಚ್ಚುಕಡಿಮೆ ಇದೇ ಪರಿಸ್ಥಿತಿ ಇರುವುದಾಗಿ ತಿಳಿದುಬರುತ್ತದೆ.
ಶೂನ್ಯ ಪಾರದರ್ಶಕತೆ ಮೊನ್ನೆ ಹಣಕಾಸು ಉಪಸಚಿವ ಕೊಟ್ಟಿರುವ ಮಾಹಿತಿಯನ್ವಯ ನೋಟುರದ್ದತಿ ಬಳಿಕ ಸಂಗ್ರಹವಾದ ಖೋಟಾ ನೋಟುಗಳ ಒಟ್ಟು ಮೌಲ್ಯ ರೂ.19.5 ಕೋಟಿ ಅಷ್ಟೆ. ಅಂದರೆ ಬೆಟ್ಟ ಅಗೆದು ಇಲಿ ಹೊರತೆಗೆದಂತಾಯಿತು. ಇನ್ನು ನೋಟು ರದ್ದತಿಗೆ ಮುನ್ನ ಚಲಾವಣೆಯಲ್ಲಿ ಇದ್ದುದಕ್ಕಿಂತ ಕಡಿಮೆ ಅಥವಾ ಚಲಾವಣೆಯಲ್ಲಿ ಇದ್ದಷ್ಟೆ ಹಳೆ ನೋಟುಗಳು ಮರಳಿ ಬಂದಿವೆಯೇ ಅಥವಾ ಚಲಾವಣೆಯಲ್ಲಿ ಇದ್ದುದಕ್ಕಿಂತ ಜಾಸ್ತಿ ನೋಟುಗಳು ಬಂದಿವೆಯೇ, ಎಷ್ಟು ಕಪ್ಪುಹಣ ಸಂಗ್ರಹವಾಗಿದೆ ಎಂಬ ಪ್ರಶ್ನೆಗಳಿಗೆ ಯಾರೊಬರೂ ನೇರವಾಗಿ ಉತ್ತರಿಸುತ್ತಿಲ್ಲ. ಕಳೆದ ಡಿಸೆಂಬರ್ 31ರಂದು ನೋಟು ರದ್ದತಿಯ ಅವಧಿ ಮುಗಿಯುತ್ತಿದ್ದಂತೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ, ಆರ್ಥಿಕ ತಜ್ಞರು ಮತ್ತು ಸಮಾಜ ವಿಜ್ಞಾನಿಗಳು ನೋಟು ಅಮಾನ್ಯದ ವಿಷಯವನ್ನು ಅಧ್ಯಯನಕ್ಕೊಳಪಡಿಸಲಿ ಎಂದು ಹಾರೈಸಿದ್ದರು. ಮೋದಿಯವರೇನೊ ಸಭೆ ಸಮಾರಂಭಗಳಲ್ಲಿ, ಅಪರೂಪಕ್ಕೆಂಬಂತೆ ಸಂಸತ್ತಿನಲ್ಲಿ ಹೀಗೆ ಭಾಷಣ ಬಿಗಿಯುತ್ತಾರೆ.
ಆದರೆ ನೆಲದ ವಾಸ್ತವ ಏನೆಂದರೆ ಸರಕಾರ ಮಾಹಿತಿಗಳನ್ನು ನಿರಾಕರಿಸುತ್ತಿದೆ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್. ನವೆಂಬರ್ 8ರಿಂದ ಡಿಸೆಂಬರ್ 31ರ ತನಕ ಮಂತ್ರಿಗಳು ಮತ್ತು ಬಿಜೆಪಿ ಸಂಸದರ ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ನೀಡಿರುವ ಆದೇಶ, ಸಂಬಂಧಪಟ್ಟವರು ಸಲ್ಲಿಸಿರುವ ದಾಖಲೆ ಇತ್ಯಾದಿಗಳ ಪ್ರತಿಗಳು ಮತ್ತಿತರ ಮಾಹಿತಿಗಳನ್ನು ನೀಡುವಂತೆ ಪ್ರಧಾನಿ ಕಚೇರಿಗೆ ಅರ್ಜಿ ಹಾಕಿದಾಗ ಅಲ್ಲಿಂದ ‘ನಮ್ಮಲ್ಲಿ ಯಾವ ಮಾಹಿತಿಗಳೂ ಇಲ್ಲ’ ಎಂಬ ಉತ್ತರ ಬಂದಿದೆಯಂತೆ.
ತೆರಿಗೆ ಅಧಿಕಾರಿಗಳು ಇವರೆಲ್ಲರ ವಹಿವಾಟುಗಳನ್ನು ಪರಿಶೀಲಿಸಿದ್ದಾರೆಯೇ ಅಥವಾ ಸದ್ಯೋಭವಿಷ್ಯದಲ್ಲಿ ಪರಿಶೀಲಿಸಲಿದ್ದಾರೆಯೇ ಎಂಬ ಪ್ರಶ್ನೆಗೂ ಮೌನವೇ ಉತ್ತರ. ಅಂದರೆ ಈ ವಿಷಯದಲ್ಲಿ ಮೋದಿಯ ‘‘ಗುಜರಾತ್ ಮಾದರಿ’’ ಭರ್ಜರಿಯಾಗಿ ಜಾರಿಯಲ್ಲಿದೆ ಎಂದು ಊಹಿಸಬಹುದು. ನಮಗೆಲ್ಲರಿಗೂ ಗೊತ್ತಿರುವಂತೆ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಮೋದಿಯ ಆದೇಶಗಳು ಕೇವಲ ಮೌಖಿಕ ಆಗಿರುತ್ತಿದ್ದವು; ಲಿಖಿತ ರೂಪದಲ್ಲಿ ಇರುತ್ತಿರಲಿಲ್ಲ! ವೆಂಕಟೇಶ್ ನಾಯಕ್ ಪ್ರಕಾರ ರಿಸರ್ವ್ ಬ್ಯಾಂಕ್ ಕೂಡಾ ಮಾಹಿತಿ ನೀಡಲು ನಿರಾಕರಿಸಿದೆ.
ನೋಟು ರದ್ದತಿ ಕಾಲದಲ್ಲಿ ‘‘ಬ್ಯಾಂಕ್ ಮಿತ್ರರು’’ (ಜನಧನ್ ಖಾತೆ ಕಾರ್ಯಕ್ರಮ ಆರಂಭಿಸಿದಾಗ ಬಡವರು ಮತ್ತು ಹಕ್ಕುವಂಚಿತ ಜನರಿಗಾಗಿ ಬ್ಯಾಂಕ್ ಮಿತ್ರ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು) ಹಕ್ಕುವಂಚಿತ ಜನರಿಗೆ ಯಾವ ವಿಧದ ನೆರವು ನೀಡಿದರು ಎಂಬ ಪ್ರಶ್ನೆಗೆ ಆರ್‌ಬಿಐ ತನ್ನಲ್ಲಿ ಮಾಹಿತಿ ಇಲ್ಲವೆಂದು ಉತ್ತರಿಸಿದೆೆ! ನಗದು ತಿಜೋರಿಗಳ ಕುರಿತ ಪೂರ್ಣ ದತ್ತಾಂಶ ನೀಡುವಂತೆ ಕೇಳಿದರೆ ಅದನ್ನೂ ಒದಗಿಸುತ್ತಿಲ್ಲ. ಬ್ಯಾಂಕ್‌ಗಳ ಮೇಲಾದ ದಾಳಿಗಳ ವಿವರಗಳನ್ನು ನೀಡುವ ಬಗ್ಗೆಯೂ ಮೌನ ವಹಿಸಿದೆ.
ಕೊಳಕು ಮನಸ್ಸುಗಳೂ ಸಾಮಾಜಿಕ ಮಾಧ್ಯಮಗಳೂ
ಮೊನ್ನೆ ಸಂಸತ್ತಿನಲ್ಲಿ ನೋಟು ರದ್ದತಿ ಕುರಿತು ಅಂಕಿಅಂಶಗಳನ್ನು ಒದಗಿಸಿ ಗಂಭೀರವಾಗಿ ಮಾತಾಡಬೇಕಿದ್ದ ಮೋದಿ, ಅದರ ಬದಲು ಎಂದಿನ ಸಭಾಶೈಲಿಯಲ್ಲಿ ನಾಲಿಗೆ ಹರಿಬಿಡುವ ಮೂಲಕ ತನ್ನ ಕೊಳಕು ಮನಸ್ಸನ್ನು ಲೋಕಕ್ಕೆಲ್ಲ ಪ್ರದರ್ಶಿಸಿದ್ದಾರೆ. ಸಂಘ ಪರಿವಾರದ ತಥಾಕಥಿತ ಸಂಸ್ಕೃತಿಯೇ ಇಷ್ಟು ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆೆ.
‘‘ರೈನ್‌ಕೋಟ್’’ ಧರಿಸಿರುವುದಾಗಿ ಮಾಜಿ ಪ್ರಧಾನಿಯನ್ನು ಹೀಯಾಳಿಸುವುದು, ಕೊಂಚವೂ ಸಂವೇದನೆ ಇಲ್ಲದೆ ಭೂಕಂಪದಂತಹ ದುರಂತವನ್ನು ಇನ್ನೊಬ್ಬ ರಾಜಕಾರಣಿಯ ಮೂದಲಿಕೆಗೆ ಬಳಸುವುದು ಮುಂತಾದ ವಿಶಿಷ್ಟ ಚಾಳಿಗಳು ವರ್ಷಾನುಗಟ್ಟಲೆಯ ಆರೆಸ್ಸೆಸ್ ತರಬೇತಿಯಿಂದ ಬಂದಿರುವುದಾಗಿದೆ. ವಾಸ್ತವವಾಗಿ ರೈನ್‌ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆಯಲ್ಲಿ ಮೋದಿಯಷ್ಟು ನಿಷ್ಣಾತರು ಯಾರೂ ಇರಲಾರರು.
ಗುಜರಾತ್ ಹತ್ಯಾಕಾಂಡ 2002ರಲ್ಲಿ ನಡೆದರೂ, ಗುಜರಾತ್ ಸಚಿವಸಂಪುಟದ ಇಬ್ಬರು ಪರಮಾಪ್ತ ಮಂತ್ರಿಗಳು ಜೈಲುಪಾಲಾದರೂ, ಲೋಕಾಯುಕ್ತರ ನೇಮಕಾತಿಯನ್ನು ವಿರೋಧಿಸಿದರೂ, ಸಿಎಜಿ ವರದಿ ರೂ. 25,000 ಕೋಟಿ ಆರ್ಥಿಕ ಹಗರಣ ನಡೆದಿದೆಯೆಂದು ತಿಳಿಸಿದರೂ, ಸಹಾರಾ-ಬಿರ್ಲಾ ಪೇಪರ್ಸ್ ಕೋಟಿ ಕೋಟಿ ಸಂದಾಯವಾಗಿರುವುದನ್ನು ಬಯಲುಪಡಿಸಿದ ಹೊರತಾಗಿಯೂ ಏನೂ ಆಗಿಲ್ಲವೆಂದರೆ ಆ ರೈನ್‌ಕೋಟ್‌ನ ದಪ್ಪ ಎಷ್ಟಿರಬಹುದೆಂದು ನೀವೇ ಊಹಿಸಿ! ಇದು ಸಾಮಾಜಿಕ ಮಾಧ್ಯಮಗಳ ಯುಗ. ಈ ಹೊತ್ತು ಅನೇಕ ಹೋರಾಟಗಳು ಬೀದಿಯಿಂದ ಸಾಮಾಜಿಕ ಮಾಧ್ಯಮಗಳ ಅಂಗಳಕ್ಕೆ ಸ್ಥಳಾಂತರಗೊಂಡಿವೆ.
ಫೇಸ್‌ಬುಕ್, ಟ್ವಿಟರ್‌ಗಳ ವೈಶಿಷ್ಟ್ಯ ಮತ್ತು ಆಕರ್ಷಣೆ ಎಂದರೆ ಬಾಯಲ್ಲಿ ಹೇಳಲಾಗದ, ಮಾಧ್ಯಮಗಳಲ್ಲಿ ಪ್ರಕಟಿಸಲಾಗದ ಮನದಾಳದ ಅನಿಸಿಕೆಗಳನ್ನು ಇಲ್ಲಿ ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಎಷ್ಟೆಂದರೆ ಕೆಲವೊಮ್ಮೆ ಶ್ಲೀಲ, ಅಶ್ಲೀಲಗಳ ನಡುವಿನ ಗಡಿರೇಖೆ ಮಾಯವಾಗುತ್ತದೆ. 2009ರಷ್ಟು ಹಿಂದೆಯೆ ಟ್ವಿಟರ್ ಖಾತೆ ಪ್ರಾರಂಭಿಸಿರುವ ಮೋದಿ ಅದರ ಮೂಲಕ ತನ್ನ ಬೆಂಬಲಿಗರ ಒಂದು ದೊಡ್ಡ ಸೇನೆಯನ್ನೆ ನಿರ್ಮಾಣ ಮಾಡಿದ್ದಾರೆೆ. 2014ರ ಚುನಾವಣೆಗಳ ಸಮಯದಲ್ಲಿ ಅದನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಮೋದಿ ಫಾಲೊ ಮಾಡುತ್ತಿರುವ ಅನೇಕ ಅಕೌಂಟ್‌ಗಳು ಯಾವುವೆಂದು ನೋಡಿದಾಗ ಅವರ ನೈಜ ವ್ಯಕ್ತಿತ್ವ ಬಯಲಾಗುತ್ತದೆ.
ಉದಾಹರಣೆಗೆ ಬಿಜೆಪಿ ಕಾರ್ಯಕರ್ತ ಪವನ್ ಎಂಬಾತ 2.5.2015ರಂದು ತನ್ನ ಖಾತೆಗೆ ಬಂದಿದ್ದ ಒಂದು ಕಾಮಕೇಳಿಯ ಚಿತ್ರವನ್ನು ಮೋದಿ ಖಾತೆಯ ಫೀಡ್‌ಗೆ ಮರುಟ್ವೀಟ್ ಮಾಡಿದ್ದಾನೆ.
#GodhraAgain ಅದೇ ದಿನ ಇನ್ನೊಬ್ಬ ಬಿಜೆಪಿಗೆ ಒಂದು ರೈಲು ತಡೆ ಪ್ರತಿಭಟನೆಯನ್ನು ಮುಸ್ಲಿಮರ ಗುಂಪಿನಿಂದ ದಾಳಿ ಎಂಬುದಾಗಿ ಚಿತ್ರಿಸಿ ಮರುದಿನ ಕನಿಷ್ಠ 3000 ಮುಸ್ಲಿಮರನ್ನು ಕೊಂದುಹಾಕಲು ಕರೆ ನೀಡುವ ಸಂದೇಶವೊಂದನ್ನು (ಮತ್ತೆ ಗೋಧ್ರಾ) ಹೆಸರಿನಲ್ಲಿ ಕಳುಹಿಸಿದ್ದಾನೆ.
ಅದೇ ವರ್ಷ ಮತ್ತೊಬ್ಬ ವ್ಯಕ್ತಿ ಇದೇ ರೀತಿಯಾಗಿ ಕೋಮು ಗಲಭೆ ಪ್ರಚೋದಿಸುವಂತಹ ಇನ್ನೊಂದು ಸುಳ್ಳು ಸುದ್ದಿ ಹರಡಿದ್ದಾನೆ.
ಮೊನ್ನೆಯಷ್ಟೆ ಜನವರಿ 2017ರಲ್ಲಿ ಖ್ಯಾತ ನಟ ಓಂ ಪುರಿ ತೀರಿಕೊಂಡಾಗ ಇಂತಹುದೇ ಗವಿಮಾನವ ಒಬ್ಬ ‘‘ಪಾಕಿಸ್ತಾನಕ್ಕೆ ನನ್ನ ಸಂತಾಪಗಳು. ಓರ್ವ ಯೋಧನನ್ನು ಕಳೆದುಕೊಂಡಿರುವಿರಿ’’ ಎಂದು ಟ್ವೀಟ್ ಮಾಡಿದ್ದಾನೆ.
ಜನವರಿ 28ರಂದು ದಿಲ್ಲಿಯಲ್ಲಿ ಪುರಾತನ ಫಿರಂಗಿಯೊಂದರ ಹುಸಿ ತೋಟಾ ಪತ್ತೆಯಾದಾಗ ಇವರಲ್ಲೊಬ್ಬ ಇದನ್ನು ಮೋದಿ ಮೇಲೆ ದಾಳಿ ನಡೆಸುವ ಯೋಜನೆ ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದ. ಈ ಸಂದೇಶವನ್ನು ನೂರಾರು ಬಾರಿ ಮರು ಟ್ವೀಟ್ ಮಾಡಲಾಯಿತು. ಈ ರೀತಿ ಎಲ್ಲವನ್ನೂ ದಾಳಿಯ ಯೋಜನೆ ಎಂದು ಬಿಂಬಿಸುವುದು ಮೋದಿಯ ‘‘ಗುಜರಾತ್ ಮಾದರಿ’’ಗೆ ಅನುಗುಣವಾಗಿಯೆ ಇದೆ.
ಮೋದಿ ಯಾರನ್ನು ಫಾಲೊ ಮಾಡುತ್ತಾರೊ ಅವರಲ್ಲಿ ಹಲವಾರು ಅಸಲಿಗೆ ಅಶ್ಲೀಲ ಸಿನೆಮಾಗಳಲ್ಲಿ ಪಾತ್ರ ಮಾಡುವ ನಟಿಯರ ಖಾತೆಗಳನ್ನು ಫಾಲೊ ಮಾಡುತ್ತಿರುತ್ತಾರೆ. ಇನ್ನು ಕೆಲವರು ರೇಪ್, ಕೊಲೆ ಕರೆ, ದ್ವೇಷದ ಭಾಷಣ, ಸುಳ್ಳು ಮಾಹಿತಿಗಳನ್ನು ಹರಡುವವರಾಗಿದ್ದಾರೆ. ಬೆಳಗ್ಗೆ ಎದ್ದಾಕ್ಷಣ ಐಪ್ಯಾಡ್‌ಗೆ ಕೈಚಾಚುವ ಮೋದಿ ಇವನ್ನೆಲ್ಲ ನೋಡದೆ ಇರಲು ಸಾಧ್ಯವೇ ಇಲ್ಲ. ಅಂದಹಾಗೆ ಪವನ್ ಮುಂತಾದವರ ಖಾತೆಗಳನ್ನು ಮೋದಿ ಇಂದಿಗೂ ಫಾಲೊ ಮಾಡುತ್ತಿದ್ದಾರಂತೆೆ. ಹುಸಿ ತೋಟಾದ ಸಂದೇಶವನ್ನು ಅನುಮೋದಿಸಿದ್ದಾರೆೆ ಕೂಡಾ. ಅವರ ಇಂತಹ 26 ಟ್ವಿಟರ್ ಖಾತೆಗಳನ್ನು ಫಾಲೊ ಮಾಡುತ್ತಾರೆ ಎನ್ನಲಾಗಿದೆ. ನಿಮಗೆ ಗೊತ್ತೆ, 2015ರಲ್ಲಿ ಇಂತಹ 150 ಟ್ವಿಟರ್ ಖಾತೆದಾರರಿಗಾಗಿ ಮೋದಿ ಮನೆಯಲ್ಲಿ ಸಂತೋಷಕೂಟವೊಂದನ್ನು ಏರ್ಪಡಿಸಲಾಗಿತ್ತು! ಇಂಥವರನ್ನು ಫಾಲೊ ಮಾಡುವುದೆಂದರೆ ಇವರ ಟ್ವೀಟ್‌ಗಳನ್ನು ಸಮರ್ಥಿಸಿದಂತೆ. ದೇಶದ ಪ್ರಧಾನಮಂತ್ರಿಯ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ನಡವಳಿಕೆಗಳು ಹುದ್ದೆಯ ಘನತೆಯನ್ನು ಮಣ್ಣುಪಾಲು ಮಾಡುತ್ತಿರುವುದಷ್ಟೆ ಅಲ್ಲ, ಸಾಮಾಜಿಕವಾಗಿ ಅತ್ಯಂತ ಅಪಾಯಕಾರಿಯಾಗಿವೆ.
(ಆಧಾರ: ವಿವಿಧ ಮೂಲಗಳಿಂದ)







