ಸಂಶಯಾಸ್ಪದ ಉಲ್ಲೇಖಗಳ ಆರ್ಥಿಕ ಸಮೀಕ್ಷೆ

ಭಾರತ ಸರಕಾರದ ಆರ್ಥಿಕ ಸಲಹೆಗಾರರು ಸಿದ್ಧಪಡಿಸುವ ಈ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಇಂಥ ಗೊಂದಲಮಯ ಸಮೀಕ್ಷೆಯ ಹೆಸರಿನಲ್ಲಿ ಜನಬೆಂಬಲವನ್ನು ಸಮರ್ಥಿಸುವ ಪ್ರಯತ್ನ ನಿಜಕ್ಕೂ ನಾಚಿಕೆಗೇಡು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ವಾಸ್ತವವಾಗಿ ನೋಟು ರದ್ದತಿಯಿಂದ ಜನಸಾಮಾನ್ಯರಿಗೆ ಉಂಟಾಗಿರುವ ಬವಣೆಯ ಚಿತ್ರಣವನ್ನು ನೀಡುವಲ್ಲಿ ಇದು ವಿಫಲವಾಗಿದೆ ಎನ್ನುವುದು ತಜ್ಞರ ಅಭಿಮತ. ಇಂಥ ಉಲ್ಲೇಖಗಳನ್ನು ಪದವಿ ಹಂತದ ಆರ್ಥಿಕ ದಾಖಲೆಗಳಲ್ಲೂ ಬಳಸುವುದಿಲ್ಲ; ಹಾಗಿದ್ದ ಮೇಲೆ ಇಂಥ ಪ್ರಮುಖ ದಾಖಲೆಗಳಲ್ಲಿ ಇದನ್ನು ಉಲ್ಲೇಖಿಸಿರುವುದು ಸಂಶಯಾಸ್ಪದವಾಗಿದೆ.
ಕೇಂದ್ರ ಸರಕಾರದ ಬಜೆಟ್ ಮಂಡನೆಯ ಮುನ್ನಾ ದಿನ ವಿತ್ತ ಸಚಿವರು ಲೋಕಸಭೆಯಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷಾ ವರದಿಯು ಹಣಕಾಸು ಸಚಿವಾಲಯದ ಪ್ರಮುಖ ದಾಖಲೆ. ಈ ಪ್ರತಿಷ್ಠಿತ ಆರ್ಥಿಕ ದಾಖಲೆ, ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರ ಹೊಣೆಗಾರಿಕೆಯೂ ಹೌದು. ಜತೆಗೆ ಇದನ್ನು ಆರ್ಥಿಕ ತಜ್ಞರು ಹಾಗೂ ಆರ್ಥಿಕ ಶಿಕ್ಷಣ ವಲಯದವರು, ಭಾರತದ ಆರ್ಥಿಕತೆ ಬಗ್ಗೆ ಆಸಕ್ತಿ ಇರುವವರು ಗಂಭೀರವಾಗಿ ಪರಿಗಣಿಸುವ ಅಧಿಕೃತ ದಾಖಲೆ ಇದು. ಇದು ಭಾರತದ ಆರ್ಥಿಕತೆಯ ವಿಶ್ವಾಸಾರ್ಹ ವಾರ್ಷಿಕ ಮೌಲ್ಯಮಾಪನ ಎನಿಸಿಕೊಳ್ಳುತ್ತದೆ. ಆರ್ಥಿಕತೆಯ ಮೂಲ ಹಾಗೂ ಉಲ್ಲೇಖಗಳು ಇಲ್ಲಿ ಶೈಕ್ಷಣಿಕ ಮೇಲ್ವಿಚಾರಣೆಗೆ ಒಳಪಡುತ್ತವೆ.
17ನೆ ಸಾಲಿನ ಆರ್ಥಿಕ ಸಮೀಕ್ಷೆಯು ಮಾಹಿತಿಗಳ ಕಣಜ ಹಾಗೂ ಆಸಕ್ತಿದಾಯಕ ಸಂಶೋಧನೆ ಹಾಗೂ ಅನುಶೋಧನೆಗಳ ದೊಡ್ಡ ಪ್ರಮಾಣದ ಅಂಕಿ ಅಂಶಗಳಿಂದ ಕೂಡಿದೆ. ಇದೇ ವೇಳೆ, ಇದರಲ್ಲಿರುವ ಕೆಲ ಅಸಾಮಾನ್ಯ ಉಲ್ಲೇಖಗಳು ಹಾಗೂ ಪರಾಮರ್ಶೆಗಳು ಈ ದಾಖಲೆಗಳ ಘನತೆಗೆ ನಿಜವಾಗಿಯೂ ಪೂರಕವಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ನೋಟು ರದ್ದತಿ ನಿರ್ಧಾರವು ದೇಶದ ಆರ್ಥಿಕತೆಯ ಮೇಲೆ ಅದರಲ್ಲೂ ಮುಖ್ಯವಾಗಿ ಅನೌಪಚಾರಿಕ ವಲಯದ ಮೇಲೆ ಮತ್ತು ನಗದು ಅಧಿಕವಾದ ವಲಯದ ಮೇಲೆ ಅಲ್ಪಾವಧಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬ ವಾಸ್ತವವನ್ನು 2016-17ರ ಆರ್ಥಿಕ ಸಮೀಕ್ಷಾ ವರದಿ ಒಪ್ಪಿಕೊಂಡಿದೆ. ಆದರೆ ಇದೇ ವಲಯ ನೋಟು ರದ್ದತಿಗೆ ಬೆಂಬಲವಾದ ಅಂಶ ಎನ್ನುವುದನ್ನೂ ವರದಿ ಉಲ್ಲೇಖಿಸಿದೆ. ಆದರೆ ಇದಕ್ಕೆ ಜನಬೆಂಬಲ ಅಧಿಕವಾಗಿದ್ದು, ಶೇ. 75ರಷ್ಟು ಮಂದಿ ನೋಟು ರದ್ದತಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಐದು ರಾಜ್ಯಗಳಲ್ಲಿ ನಡೆಸಿದ ದೂರವಾಣಿ ಸಮೀಕ್ಷೆಯಿಂದ ತಿಳಿದುಬಂದಿದೆ ಎಂಬ ಉಲ್ಲೇಖ ಇದೆ.
ಈ ವಿಸ್ಮಯದ ದೂರವಾಣಿ ಸಮೀಕ್ಷೆ ಬಗ್ಗೆ ಇತರ ಯಾವ ವಿವರಗಳೂ ಇಲ್ಲ. ಅಂದರೆ ಯಾವ ಸಂಸ್ಥೆ ಈ ಸಮೀಕ್ಷೆಯನ್ನು ಕೈಗೊಂಡಿದೆ; ಯಾವ ದಿನಾಂಕದಂದು ಈ ಸಮೀಕ್ಷೆ ನಡೆದಿದೆ; ಯಾವ ರಾಜ್ಯಗಳ ಯಾವ ಸ್ಥಳವನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ, ಯಾವ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂಬಿತ್ಯಾದಿ ಸಂದೇಹಗಳಿಗೆ ಇಲ್ಲಿ ಉತ್ತರವಿಲ್ಲ. ಇಂಥ ನಿರ್ದಿಷ್ಟತೆಗಳ ಉಲ್ಲೇಖವಿಲ್ಲದ ದೂರವಾಣಿ ಸಮೀಕ್ಷೆ ಖಂಡಿತವಾಗಿಯೂ ವಿಶ್ವಾಸಾರ್ಹ ಅಲ್ಲ. ಭಾರತ ಸರಕಾರದ ಆರ್ಥಿಕ ಸಲಹೆಗಾರರು ಸಿದ್ಧಪಡಿಸುವ ಈ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಇಂಥ ಗೊಂದಲಮಯ ಸಮೀಕ್ಷೆಯ ಹೆಸರಿನಲ್ಲಿ ಜನಬೆಂಬಲವನ್ನು ಸಮರ್ಥಿಸುವ ಪ್ರಯತ್ನ ನಿಜಕ್ಕೂ ನಾಚಿಕೆಗೇಡು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ವಾಸ್ತವವಾಗಿ ನೋಟು ರದ್ದತಿಯಿಂದ ಜನಸಾಮಾನ್ಯರಿಗೆ ಉಂಟಾಗಿರುವ ಬವಣೆಯ ಚಿತ್ರಣವನ್ನು ನೀಡುವಲ್ಲಿ ಇದು ವಿಫಲವಾಗಿದೆ ಎನ್ನುವುದು ತಜ್ಞರ ಅಭಿಮತ. ಇಂಥ ಉಲ್ಲೇಖಗಳನ್ನು ಪದವಿ ಹಂತದ ಆರ್ಥಿಕ ದಾಖಲೆಗಳಲ್ಲೂ ಬಳಸುವುದಿಲ್ಲ; ಹಾಗಿದ್ದ ಮೇಲೆ ಇಂಥ ಪ್ರಮುಖ ದಾಖಲೆಗಳಲ್ಲಿ ಇದನ್ನು ಉಲ್ಲೇಖಿಸಿರುವುದು ಸಂಶಯಾಸ್ಪದವಾಗಿದೆ.
ನೋಟು ರದ್ದತಿ ನಿರ್ಧಾರದ ಬಳಿಕ ಜನಧನ್ ಖಾತೆಗಳಲ್ಲಿ ದಿಢೀರನೇ ಠೇವಣಿ ಹೆಚ್ಚಿರುವ ಅಂಶವನ್ನು ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ. ನವೆಂಬರ್ 8ರಿಂದ ಡಿಸೆಂಬರ್ 30ರ ಅವಧಿಯಲ್ಲಿ ಅಂದರೆ, ಜನರ ಬಳಿ ಇದ್ದ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಇದ್ದ ಅವಧಿಯಲ್ಲಿ ಸಣ್ಣ ಮೊತ್ತವಾಗಿದ್ದರೂ 42 ಸಾವಿರ ಕೋಟಿ ರೂಪಾಯಿ ಜಮೆ ಆಗಿದೆ ಇಲ್ಲಿ ಕುತೂಹಲಕಾರಿ ಅಂಶವೆಂದರೆ ಈ ಮಾಹಿತಿಯ ಮೂಲ ‘ಹಿಂದೂಸ್ಥಾನ್’ ಟೈಮ್ಸ್ ಪತ್ರಿಕೆಯ ಒಂದು ಲೇಖನ.
ಪಿಟಿಐ ನೀಡಿದ್ದ ಈ ಸುದ್ದಿ ವರದಿಯನ್ನು ಇತರ ಪತ್ರಿಕೆಗಳೂ ಪ್ರಕಟಿಸಿದ್ದವು. ಜನಧನ್ ಖಾತೆಯಲ್ಲಿ ಜಮೆ ಆದ ಹಣದ ವಿವರಗಳ ಮೂಲ ಸರಕಾರದ ಉನ್ನತ ಮೂಲಗಳು. ಇಲ್ಲಿ ಎದುರಾಗುವ ಪ್ರಶ್ನೆ ಎಂದರೆ, ಅನಾಮಧೇಯ ಹಿರಿಯ ಅಧಿಕಾರಿ ನೀಡಿದ ಮಾಹಿತಿಯನ್ನು ಒಳಗೊಂಡ ಪತ್ರಿಕಾ ವರದಿಗಳನ್ನು ಆರ್ಥಿಕ ಸಮೀಕ್ಷಾ ವರದಿಯಂಥ ದಾಖಲೆಗಳು ಉಲ್ಲೇಖಿಸಬಹುದೇ? ಇದರ ಬದಲು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅಧಿಕೃತ ಅಂಕಿ ಅಂಶಗಳನ್ನು ಪಡೆಯಬಹುದಿತ್ತಲ್ಲವೇ? ನೋಟು ರದ್ದತಿಯಂಥ ಪ್ರಮುಖ ವಿಷಯಗಳ ಬಗ್ಗೆ ಆರ್‌ಬಿಐಯ ಕಾರ್ಯನಿರ್ವಹಣೆ ಬಗ್ಗೆ, ಜನರಿಗೆ ಸೂಕ್ತವಾದ ಮಾಹಿತಿಯನ್ನು ನೀಡದಿರುವ ಬಗ್ಗೆ ಮತ್ತು ಭಾರತ ಸರಕಾರ ಅಧಿಕೃತವಾಗಿ ಅಂಥ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲು ಅಸಮರ್ಥವಾಗಿರುವ ಸ್ಥಿತಿಯನ್ನು ಈ ಪತ್ರಿಕಾ ವರದಿಯ ಉಲ್ಲೇಖ ಬಹಿರಂಗಪಡಿಸಿದೆ.
ಅವಳಿ ಬ್ಯಾಲೆನ್ಸ್‌ಶೀಟ್ ಸಮಸ್ಯೆಯಿಂದಾಗಿ ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಸೃಷ್ಟಿಯಾಗಿರುವ ಆಸ್ತಿಯ ಗುಣಮಟ್ಟ ವಿಚಾರದ ಬಗೆಗಿನ ಅಧ್ಯಾಯದಲ್ಲಿ ಆರ್ಥಿಕ ಸಮೀಕ್ಷೆಯು, ಮಾರುಕಟ್ಟೆ ವಿಶ್ಲೇಷಣೆ ಅಂದಾಜಿನಂತೆ ಒಟ್ಟು ಸಾಲದ ಶೇ. 4ರಷ್ಟು ಸಾಲಗಳು ಗುರುತಿಸಲಾಗದ ಸಾಲವಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಈ ಪ್ರಮಾಣ ಶೇ. 5ರಷ್ಟಿದೆ. ಹೀಗೆ ಒತ್ತಡದಲ್ಲಿರುವ ಸಾಲ ಪ್ರಮಾಣ ಶೇ. 16.6ರಷ್ಟಿದ್ದು, ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಈ ಪ್ರಮಾಣ ಶೇ. 20ರಷ್ಟಿದೆ ಎಂದು ವಿವರಿಸಿದೆ ಇಂಥ ಅಗೋಚರ ಸಾಲಗಳ ಮಾಹಿತಿಯ ಮೂಲಕ Credit Suisse ಎಂಬ ಜಾಗತಿಕ ಹೂಡಿಕೆ ಬ್ಯಾಂಕ್. ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ಸರಕಾರಿ ಸಂಸ್ಥೆಯೊಂದು, ವಿದೇಶಿ ಹೂಡಿಕೆ ಬ್ಯಾಂಕಿನ ಅಂದಾಜನ್ನು ಉಲ್ಲೇಖಿಸಿರುವ ಕ್ರಮ ಕೂಡಾ ವಿಚಿತ್ರ ಸನ್ನಿವೇಶವನ್ನು ಸೃಷ್ಟಿಸಿದೆ.
ವಾಸ್ತವವಾಗಿ ಇಂಥ ಪ್ರಮುಖ ಮಾಹಿತಿಯ ಬಗ್ಗೆ ಆರ್‌ಬಿಐ ಹಾಗೂ ಸರಕಾರ ಮಾಹಿತಿಗಳನ್ನು ಹೊಂದಿರಬೇಕು. Credit Suisse ಅಂದಾಜನ್ನು ಉಲ್ಲೇಖಿಸುವ ಮೂಲಕ, ಸರಕಾರ ಹಾಗೂ ಆರ್‌ಬಿಐ ಬಳಿ ಇಂಥ ಸಾಲದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನುವುದನ್ನು ದೃಢಪಡಿಸಿದಂತಾಗಿದೆ. ಇದರ ಜತೆಗೆ ಕ್ರೆಡಿಟ್ ಸೂಸೆ ಅಂದಾಜು, ಆರ್‌ಬಿಐ ಅಂದಾಜಿಗಿಂತ ಹೆಚ್ಚು ವಿಶ್ವಾಸಾರ್ಹ ಎನ್ನುವುದನ್ನು ಸರಕಾರ ಒಪ್ಪಿಕೊಂಡಂತಾಗಿದೆ. ಸರಕಾರೇತರ ಸಂಸ್ಥೆಗಳಿಗೆ ಹಾಗೂ ಖಾಸಗಿ ವ್ಯಕ್ತಿಗಳು ಕ್ರೆಡಿಟ್ ಸೂಸೆ ಅಂದಾಜನ್ನು ಬಳಸಿಕೊಳ್ಳುವುದು ಬೇರೆ ವಿಚಾರ; ಆದರೆ ಸರಕಾರದ ಅಧಿಕೃತ ದಾಖಲೆಯಾದ ಆರ್ಥಿಕ ಸಮೀಕ್ಷಾ ವರದಿಯಂಥ ದಾಖಲೆಗಳು ಇದನ್ನು ಬಳಸಿಕೊಳ್ಳುವುದು ನಿಜಕ್ಕೂ ಭಿನ್ನ ವಿಚಾರವಾಗಿದೆ.
ಅರವಿಂದ್ ಸುಬ್ರಹ್ಮಣ್ಯನ್ ಹಾಗೂ ಅವರ ತಂಡ, 2013ರ ಸೆಪ್ಟಂಬರ್‌ನಿಂದ 2016ರ ಸೆಪ್ಟಂಬರ್ ವರೆಗೆ ಬಿಡುಗಡೆಯಾದ ಕಾರ್ಪೊರೇಟ್ ಸಾಲದ ಪ್ರಗತಿ, ವಾಣಿಜ್ಯಪತ್ರ ಹಾಗೂ ಬಾಂಡ್‌ಗಳನ್ನು ಕುರಿತ ಕೋಷ್ಟಕವನ್ನು ನೀಡುವಲ್ಲೂ ಕ್ರೆಡಿಟ್ ಸೂಸೆ ಅಂದಾಜಿನ ಬಗ್ಗೆ ಅಪಾರ ಒಲವನ್ನು ವ್ಯಕ್ತಪಡಿಸಿದೆ. ಈ ಮಾಹಿತಿಯನ್ನು ಆರ್‌ಬಿಐ ನಿಯತವಾಗಿ ಬಿಡುಗಡೆ ಮಾಡುವ ಹಿನ್ನೆಲೆಯಲ್ಲಿ ಕೋಷ್ಟಕದಲ್ಲಿ ಇರುವ ಅಂಕಿ ಅಂಶಗಳು ವಾಸ್ತವವಾಗಿ ಆರ್‌ಬಿಐ ಬಿಡುಗಡೆ ಮಾಡಿದ ಅಂಶವನ್ನು ಒಳಗೊಂಡಿರಬೇಕಿತ್ತು. ಬಹುಶಃ ಕ್ರೆಡಿಟ್ ಸೂಸೆ ಕೂಡಾ ಈ ಅಂಕಿ ಅಂಶಗಳನ್ನು ಆಧರಿಸಿಯೇ ವರದಿ ಸಿದ್ಧಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಒಂದೆಡೆ ‘ಮೇಕ್ ಇನ್ ಇಂಡಿಯಾ’ ಬಗ್ಗೆ ಭಾಷಣ ಮಾಡುತ್ತಿದ್ದರೆ, ಸರಕಾರವೇ, ಅಧಿಕೃತ ಅಂಕಿ ಅಂಶಗಳ ಬದಲು ಕ್ರೆಡಿಟ್ ಸೂಸೆ ನೀಡಿದ ಅಂಕಿ ಅಂಶಗಳನ್ನು ಆರ್ಥಿಕ ಸಮೀಕ್ಷಾ ವರದಿಯಂಥ ಮಹತ್ವದ ದಾಖಲೆಗಳಲ್ಲಿ ಬಳಸಿಕೊಂಡಿರುವುದು ಸರಿಯಾದ ಕ್ರಮವಲ್ಲ ಎಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ.ಕೆಲವು ಲೋಪಗಳಿಗೆ ಆರ್ಥಿಕ ಸಮೀಕ್ಷೆ ವರದಿಯ ಹೊಣೆ ಹೊತ್ತವರು ವಿವರಣೆ ನೀಡಿದ್ದಾರೆ. ಸುಬ್ರಹ್ಮಣ್ಯನ್ ಅವರ ಸ್ವಂತ ಅಭಿಪ್ರಾಯದಂತೆ, ನೋಟು ರದ್ದತಿಯ ಪರಿಣಾಮಗಳು ಮಿಶ್ರವಾಗಿವೆ. ನೋಟು ರದ್ದತಿ ಕುರಿತ ಸಾರ್ವಜನಿಕ ಚರ್ಚೆಗಳು, ಈ ಯೋಜನೆಯ ಅನುಷ್ಠಾನದ ವೇಳೆ ಸೂಕ್ತ ವಿನ್ಯಾಸ ಹಾಗೂ ವಿಸ್ತೃತ ನಿರ್ವಹಣೆ ಅಗತ್ಯ ಎಂಬ ಅಂಶಗಳ ಮೇಲೆ ಕೇಂದ್ರಿತವಾಗಿವೆ ಎಂದು ನಾಜೂಕಾಗಿ ಉಲ್ಲೇಖಿಸಲಾಗಿದೆ.
ಆದರೆ ಇದರ ಚರ್ಚೆಗೆ ಸಮೀಕ್ಷೆಯು ಸೂಕ್ತ ವೇದಿಕೆಯಲ್ಲ ಎಂಬ ನಿರ್ಧಾರಕ್ಕೆ ಬಂದಿದೆ. ವಾಸ್ತವವಾಗಿ ಸಮೀಕ್ಷಾ ವರದಿಯಲ್ಲಿನ ಅಂಕಿ ಅಂಶಗಳು ಇಂಥ ಕ್ರಮವನ್ನು ಕೀಳಂದಾಜು ಮಾಡಿವೆ. ಅಸಾಮಾನ್ಯ ಉಲ್ಲೇಖಗಳು, ಹಣಕಾಸು ಸಚಿವರ ವಿಚಾರದಲ್ಲಿ ಹಾಗೂ ಪ್ರಧಾನಿ ಕಚೇರಿ ಎದುರು ಪ್ರಧಾನಿಯ ಮುಖ್ಯ ಆರ್ಥಿಕ ಸಲಹೆಗಾರರ ಪೇಚಿನ ಸ್ಥಿತಿಯನ್ನು ತೆರೆದಿಟ್ಟಿದೆ.
ದೂರವಾಣಿ ಸಮೀಕ್ಷೆಯ ಉಲ್ಲೇಖಗಳನ್ನು ಉದ್ದೇಶಪೂರ್ವಕವಾಗಿಯೇ ವರದಿಯಲ್ಲಿ ತುರುಕಲಾಗಿದೆ. ಪ್ರಸ್ತುತ ಸರಕಾರವು ನೋಟು ರದ್ದತಿ ಕ್ರಮದ ಬಗೆಗಿನ ಮಾಹಿತಿಗಳನ್ನು ಬಹಿರಂಗಗೊಳಿಸಲು ನಿರಾಕರಿಸಿರುವ ಅಂಶವನ್ನು ಕೂಡಾ ‘ಹಿಂದೂಸ್ಥಾನ್ ಟೈಮ್ಸ್’ ವರದಿಯ ಉಲ್ಲೇಖ, ಎತ್ತಿಹಿಡಿದಿದೆ.
ಕೃಪೆ: thewire.in







