ತೆರಿಗೆ ಪಾವತಿಸುವಷ್ಟು ಆದಾಯವೂ ಇಲ್ಲದ ಜನಪ್ರತಿನಿಧಿಗಳು!

ದೇಶಾದ್ಯಂತ ಶೇ. 75ರಷ್ಟು ಸಂಸದರು ಹಾಗೂ ಶಾಸಕರು 10 ಲಕ್ಷಕ್ಕಿಂತ ಕಡಿಮೆ ಆದಾಯ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಶೇ. 35ರಷ್ಟು ಜನಪ್ರತಿನಿಧಿಗಳು ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಎಂದು ಹೇಳಿಕೊಂಡಿದ್ದರೆ, ಶೇ. 40ರಷ್ಟು ಮಂದಿ 2.5 ಲಕ್ಷದಿಂದ 10 ಲಕ್ಷವರೆಗೆ ಆದಾಯ ಇದೆ ಎಂದು ಹೇಳಿದ್ದಾರೆ.
ಶೇ. 24ರಷ್ಟು ಅಂದರೆ 1,141 ಮಂದಿ ಸಂಸದರು ಹಾಗೂ ಶಾಸಕರು ತೆರಿಗೆ ಆದಾಯ ವಿನಾಯಿತಿ ಕೋರಿದ್ದಾರೆ ಅಥವಾ ತೆರಿಗೆ ಪಾವತಿಸುವಷ್ಟು ಆದಾಯ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ದೇಶದ ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ನ ಶೇ. 72ರಷ್ಟು ಮಂದಿ ಜನಪ್ರತಿನಿಧಿಗಳು (ಸಂಸದರು, ಶಾಸಕರು) 10 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದಾರೆ ಎಂಬ ಅಂಶ ಇವರು ಸಲ್ಲಿಸಿದ 4,848 (4,910ರಲ್ಲಿ) ಪ್ರಮಾಣಪತ್ರದ ವಿಶ್ಲೇಷಣೆಯಿಂದ ಬಹಿರಂಗವಾಗಿದೆ.
ದೇಶಾದ್ಯಂತ ಶೇ. 75ರಷ್ಟು ಸಂಸದರು ಹಾಗೂ ಶಾಸಕರು 10 ಲಕ್ಷಕ್ಕಿಂತ ಕಡಿಮೆ ಆದಾಯ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಶೇ. 35ರಷ್ಟು ಜನಪ್ರತಿನಿಧಿಗಳು ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಎಂದು ಹೇಳಿಕೊಂಡಿದ್ದರೆ, ಶೇ. 40ರಷ್ಟು ಮಂದಿ 2.5 ಲಕ್ಷದಿಂದ 10 ಲಕ್ಷವರೆಗೆ ಆದಾಯ ಇದೆ ಎಂದು ಹೇಳಿದ್ದಾರೆ.
ಶೇ. 24ರಷ್ಟು ಅಂದರೆ 1,141 ಮಂದಿ ಸಂಸದರು ಹಾಗೂ ಶಾಸಕರು ತೆರಿಗೆ ಆದಾಯ ವಿನಾಯಿತಿ ಕೋರಿದ್ದಾರೆ ಅಥವಾ ತೆರಿಗೆ ಪಾವತಿಸುವಷ್ಟು ಆದಾಯ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಫೆಬ್ರವರಿ 1ರಂದು ಮಾಡಿದ ಬಜೆಟ್ ಭಾಷಣದ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿಯವರು, ‘‘ನಮ್ಮದು ಬಹುತೇಕ ತೆರಿಗೆಗೆ ಬದ್ಧವಾಗಿರದ ಸಮಾಜ ಎಂಬ ಅಭಿಪ್ರಾಯಕ್ಕೆ ಬರಬಹುದಾಗಿದೆ’’ ಎಂದು ಹೇಳಿದ್ದರು.
ಆದಾಯ ತೆರಿಗೆ ಅಂಕಿ ಅಂಶಗಳನ್ನು ಹಂಚಿಕೊಂಡಿರುವ ಜೇಟ್ಲಿ, ‘‘130 ಕೋಟಿ ಜನಸಂಖ್ಯೆಯ ಪೈಕಿ ಕೇವಲ 3.7 ಕೋಟಿ ಮಂದಿ 2015-16ರಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. 99 ಲಕ್ಷ ಮಂದಿ (ಶೇ. 27) ತೆರಿಗೆ ವಿನಾಯಿತಿ ಇರುವ ಮಟ್ಟವಾದ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಘೋಷಿಸಿಕೊಂಡಿದ್ದಾರೆ. 19.5 ದಶಲಕ್ಷ ಮಂದಿ ಅಂದರೆ ಶೇ. 53 ಎಷ್ಟು ಮಂದಿ 2.5 ಲಕ್ಷದಿಂದ 5 ಲಕ್ಷವರೆಗಿನ ಆದಾಯ ಬಹಿರಂಗಪಡಿಸಿದ್ದಾರೆ. ತೆರಿಗೆ ರಿಟರ್ನ್ಸ್ ಸಲ್ಲಿಸಿದ ಕೇವಲ ಶೇ. 20ರಷ್ಟು ಮಂದಿ ಅಂದರೆ 76 ಲಕ್ಷ ಮಂದಿ ಮಾತ್ರ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಅಧಿಕ ಇರುವುದನ್ನು ಒಪ್ಪಿಕೊಂಡಿದ್ದಾರೆ.’’
ಸಂಸದರು ಹಾಗೂ ಶಾಸಕರ ಕುಟುಂಬದ ವಾರ್ಷಿಕ ಆದಾಯ (ಪತಿ/ಪತ್ನಿ ಹಾಗೂ ಅವಲಂಬಿತರು ತೆರಿಗೆ ರಿಟರ್ನ್ಸ್‌ನಲ್ಲಿ ಘೋಷಿಸಿಕೊಂಡಂತೆ)ವನ್ನು ಸೇರಿಸಿದರೆ, ಶೇ. 62ರಷ್ಟು ಮಂದಿ ಜನಪ್ರತಿನಿಧಿಗಳ ಕುಟುಂಬದ ಆದಾಯ 10 ಲಕ್ಷಕ್ಕಿಂತ ಕಡಿಮೆ ಇದೆ.
ತಮ್ಮ ಕುಟುಂಬದ ಆಸ್ತಿಗಳನ್ನು ಘೋಷಿಸಿಕೊಂಡ ಜನಪ್ರತಿನಿಧಿಗಳ ಪೈಕಿ ಅರ್ಧದಷ್ಟು ಮಂದಿಯ ಒಟ್ಟು ಆಸ್ತಿ (ಚುನಾಯಿತ ಪ್ರತಿನಿಧಿಗಳ ಪತಿ/ಪತ್ನಿ ಹಾಗೂ ಅವಲಂಬಿತರ ಸ್ಥಿರ ಹಾಗೂ ಚರ ಆಸ್ತಿ) ರೂ. 2 ಕೋಟಿಯನ್ನು ಮೀರುತ್ತದೆ. 2,410 ಮಂದಿಯ ಪೈಕಿ ಶೇ. 38ರಷ್ಟು ಜನಪ್ರತಿನಿಧಿಗಳ ಕುಟುಂಬದ ಆದಾಯ ವಾರ್ಷಿಕ ರೂ. 10 ಲಕ್ಷಕ್ಕಿಂತ ಕಡಿಮೆ ಎಂದು ಘೋಷಿಸಿಕೊಂಡಿದ್ದಾರೆ.
ಕುಟುಂಬದ ಆದಾಯ ರೂ. 10 ಲಕ್ಷಕ್ಕಿಂತ ಅಧಿಕ ಇರುವ 1,843 ಸಂಸದರು ಹಾಗೂ ಶಾಸಕರ ಪೈಕಿ 106 ಮಂದಿ ತಮ್ಮ ಕುಟುಂಬದ ಆಸ್ತಿ ರೂ. 1 ಕೋಟಿಗಿಂತ ಕಡಿಮೆ ಎಂದು ಹೇಳಿಕೊಂಡಿದ್ದಾರೆ.
ಜನಪ್ರತಿನಿಧಿಗಳ ಪೈಕಿ 1,236 ಮಂದಿ (ಶೇ. 25) ಮಾತ್ರ ತಮ್ಮ ವಾರ್ಷಿಕ ಆದಾಯ 10 ಲಕ್ಷಕ್ಕಿಂತ ಅಧಿಕ ಎಂದು ಘೋಷಿಸಿದ್ದಾರೆ. 1,676 ಮಂದಿ ಅಂದರೆ ಶೇ. 35ರಷ್ಟು ಜನಪ್ರತಿನಿಧಿಗಳು 2.5 ಲಕ್ಷಕ್ಕಿಂತ ಕಡಿಮೆ ಆದಾಯ ಘೋಷಿಸಿಕೊಂಡಿದ್ದಾರೆ.
ಲೋಕಸಭಾ ಸದಸ್ಯರ ಪೈಕಿ ಶೇ. 63ರಷ್ಟು ಮಂದಿ 10 ಲಕ್ಷಕ್ಕಿಂತ ಅಧಿಕ ಆದಾಯ ಘೋಷಿಸಿಕೊಂಡಿದ್ದರೆ, ಕೇವಲ 13 ಶೇ. ರಾಜ್ಯಸಭಾ ಸದಸ್ಯರು ಮಾತ್ರ 10 ಲಕ್ಷಕ್ಕಿಂತ ಅಧಿಕ ವಾರ್ಷಿಕ ಆದಾಯವನ್ನು ಪ್ರಕಟಿಸಿದ್ದಾರೆ. ರಾಜ್ಯಗಳ ಪೈಕಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಶೇ. 90ರಷ್ಟು ಜನಪ್ರತಿನಿಧಿಗಳು 10 ಲಕ್ಷಕ್ಕಿಂತ ಕಡಿಮೆ ಆದಾಯ ಘೋಷಣೆ ಮಾಡಿದ್ದಾರೆ.
2.5 ಲಕ್ಷಕ್ಕಿಂತ ಕಡಿಮೆ ಆದಾಯ ಘೋಷಿಸಿಕೊಂಡಿರುವ ಜನಪ್ರತಿನಿಧಿಗಳ ಪೈಕಿ ಶೇ. 24ರಷ್ಟು ಮಂದಿ ಅಂದರೆ 1,141 ಮಂದಿ, ರೈತರು, ಅರುಣಾಚಲ ಪ್ರದೇಶ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಹಾಗೂ ತ್ರಿಪುರಾ ಹೀಗೆ ಸಂವಿಧಾನದ 6ನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಿರುವ ಪ್ರದೇಶ ಎಂಬಂಥ ವಿವಿಧ ಅಂಶಗಳ ಆಧಾರದಲ್ಲಿ ತಮಗೆ ತೆರಿಗೆ ವಿನಾಯಿತಿ ಇದೆ ಎಂದು ಚುನಾವಣಾ ಆಯೋಗಕ್ಕೆ ಹೇಳಿಕೆ ಸಲ್ಲಿಸಿದ್ದಾರೆ. ಈ ಮೂಲಕ ತೆರಿಗೆ ವಿನಾಯಿತಿ ಇದೆ ಅಥವಾ ತೆರಿಗೆ ಪಾವತಿಸುವಷ್ಟು ಆದಾಯ ಹೊಂದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಶೇ. 38ರಷ್ಟು ಜನಪ್ರತಿನಿಧಿಗಳು (1,843 ಮಂದಿ) ತಮ್ಮ ಕುಟುಂಬದ ಆದಾಯ 10 ಲಕ್ಷಕ್ಕಿಂತ ಅಧಿಕ ಎಂದು ಹೇಳಿಕೊಂಡಿದ್ದಾರೆ. ಶೇ. 28ರಷ್ಟು ಮಂದಿ ಅಂದರೆ 1,343 ಮಂದಿ ತಮ್ಮ ಕುಟುಂಬದ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಎಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಭಾರತದ ಜನಪ್ರತಿನಿಧಿಗಳ ಪೈಕಿ ಅರ್ಧದಷ್ಟು ಮಂದಿ ತಮ್ಮ ಕುಟುಂಬದ ಆಸ್ತಿ 2 ಕೋಟಿಗಿಂತ ಅಧಿಕ ಎಂದು ಘೋಷಿಸಿಕೊಂಡಿದ್ದಾರೆ. ಶೇ. 28ರಷ್ಟು ಮಂದಿ 5 ಕೋಟಿಗಿಂತ ಅಧಿಕ ಮೌಲ್ಯದ ಆಸ್ತಿ ಇದೆ ಎಂದು ಹೇಳಿಕೊಂಡಿದ್ದರೆ, ಶೇ. 70ರಷ್ಟು ಸಂಸದರು ಹಾಗೂ ಶಾಸಕರು ತಮ್ಮ ಆಸ್ತಿ ಮೌಲ್ಯ 1 ಕೋಟಿಗಿಂತ ಅಧಿಕ ಎಂದು ಹೇಳಿದ್ದಾರೆ.
‘‘ಜನಪ್ರತಿನಿಧಿಗಳು ತಮ್ಮ ಆಸ್ತಿಯನ್ನು ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಘೋಷಿಸಿಕೊಳ್ಳಬೇಕಿದ್ದರೂ, ಸ್ಥಿರ ಆಸ್ತಿಗಳ ಬೆಲೆಯನ್ನು ತೀರಾ ಕಡಿಮೆ ಪ್ರಮಾಣದಲ್ಲಿ ನಮೂದಿಸಲಾಗಿದೆ. ಜನಪ್ರತಿನಿಧಿಗಳ ಆಸ್ತಿ ಮೌಲ್ಯಗಳನ್ನು ಅಳೆಯಲು ಕಾನೂನನ್ನು ಕಟ್ಟುನಿಟ್ಟಾಗಿ ಬಳಕೆ ಮಾಡುತ್ತಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತರೊಬ್ಬರು ಹೇಳುತ್ತಾರೆ. ಅಂತೆಯೇ ಇಂಥ ಆಸ್ತಿಗಳ ಕಾನೂನುಬದ್ಧ ಮೌಲ್ಯಮಾಪನಕ್ಕೆ ಒತ್ತಡ ತರಲು ನ್ಯಾಯಾಲಯದ ಮೆಟ್ಟಿಲು ಏರುವಂತೆಯೂ ಅವರು ಜನರನ್ನು ಆಗ್ರಹಿಸಿದ್ದಾರೆ ಎಂದು 2013ರ ಡಿಸೆಂಬರ್‌ನಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.
‘‘ಮುಖಕ್ಕೆ ರಾಚುವಂಥ ವಾಸ್ತವಾಂಶಗಳನ್ನು ನಾವು ಎಷ್ಟರವರೆಗೆ ಕಡೆಗಣಿಸಲು ಸಾಧ್ಯ?’’ ಎಂದು ಪ್ರಧಾನಿ ನರೇಂದ್ರ ಮೋದಿ 2016ರ ಡಿಸೆಂಬರ್ 31ರಂದು ಹೇಳಿದ್ದರು. ‘‘ನಿಮಗೆ ನಗೆ ತರಿಸುವ ಅಥವಾ ನಿಮ್ಮಲ್ಲಿ ಸಿಟ್ಟು ಮೂಡಿಸುವಂಥ ಮಾಹಿತಿಯನ್ನು ನಿಮ್ಮೆಂದಿಗೆ ಹಂಚಿಕೊಳ್ಳುತ್ತೇನೆ. ಸರಕಾರದ ಬಳಿ ಲಭ್ಯವಿರುವ ಮಾಹಿತಿಗಳ ಪ್ರಕಾರ, ಕೇವಲ 24 ಲಕ್ಷ ಮಂದಿ ಮಾತ್ರ ದೇಶದಲ್ಲಿ ತಮ್ಮ ಆದಾಯ 10 ಲಕ್ಷಕ್ಕಿಂತ ಅಧಿಕ ಇದೆ ಎಂದು ಒಪ್ಪಿಕೊಂಡಿದ್ದಾರೆ’’
‘‘ಯಾವುದೇ ದೊಡ್ಡ ನಗರಗಳ ಮೇಲೆ ನೀವು ದೃಷ್ಟಿ ಹಾಯಿಸಿದರೆ, 10 ಲಕ್ಷಕ್ಕಿಂತ ಅಧಿಕ ಆದಾಯ ಇರುವ ಲಕ್ಷಾಂತರ ಮಂದಿಯನ್ನು ನೀವು ನೋಡಬಹುದು. ಈ ದೇಶದ ಒಳಿತಿಗಾಗಿ ಪ್ರಾಮಾಣಿಕತೆಯ ಚಳವಳಿಯನ್ನು ಇನ್ನಷ್ಟು ಬಲಗೊಳಿಸಬೇಕು ಎನಿಸುವುದಿಲ್ಲವೇ?’’
ಒಂದರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ, ತೆರಿಗೆ ಇಲಾಖೆಗೆ ಘೋಷಿಸಿಕೊಂಡ ಆಸ್ತಿ ಹಾಗೂ ಆದಾಯವನ್ನು ಸಮನ್ವಯದಿಂದ ಕಂಡಿದ್ದಾರೆ. ಆದರೆ ಸಂಸದರು ಹಾಗೂ ಶಾಸಕರ ಆಸ್ತಿ ಹಾಗೂ ಆದಾಯದ ನಡುವಿನ ಸಮನ್ವಯತೆ ದುರ್ಬಲವಾಗಿರುವುದನ್ನು ನಾವು ಕಾಣಬಹುದು.
►ಶೇ. 38ರಷ್ಟು ಅಂದರೆ 912 ಜನಪ್ರತಿನಿಧಿಗಳು 2 ಕೋಟಿಗಿಂತ ಅಧಿಕ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದು, ಇವರ ಕುಟುಂಬದ ಆದಾಯ 10 ಲಕ್ಷಕ್ಕಿಂತ ಕಡಿಮೆ.
► ರೂ. 2 ಕೋಟಿಗಿಂತ 5 ಕೋಟಿವರೆಗಿನ ಮೌಲ್ಯದ ಆಸ್ತಿ ಹೊಂದಿರುವ 1,079 ಜನಪ್ರತಿನಿಧಿಗಳ ಪೈಕಿ ಕೇವಲ 44 ಶೇ. ಅಂದರೆ 474 ಮಂದಿ 10 ಲಕ್ಷಕ್ಕಿಂತ ಅಧಿಕ ಆದಾಯ ಘೋಷಿಸಿಕೊಂಡಿದ್ದಾರೆ.
►ರೂ. 2 ಕೋಟಿಯಿಂದ 10 ಕೋಟಿವರೆಗಿನ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡ 1,615 ಜನಪ್ರತಿನಿಧಿಗಳ ಪೈಕಿ 255 ಮಂದಿ ಅಂದರೆ ಶೇ. 22ರಷ್ಟು ಮಂದಿ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಘೋಷಿಸಿಕೊಂಡಿದ್ದಾರೆ.
►ರೂ. 2 ಕೋಟಿಯಿಂದ 30 ಕೋಟಿ ವರೆಗಿನ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡ 1,155 ಜನಪ್ರತಿನಿಧಿಗಳ ಪೈಕಿ 891 ಮಂದಿ ಅಂದರೆ ಶೇ. 41ರಷ್ಟು ಮಂದಿ ರೂ. 10 ಲಕ್ಷಕ್ಕಿಂತ ಕಡಿಮೆ ಆದಾಯ ಘೋಷಿಸಿಕೊಂಡಿದ್ದಾರೆ.
►156 ಜನಪ್ರತಿನಿಧಿಗಳ ಕುಟುಂಬದ ಆಸ್ತಿ ರೂ. 50 ಕೋಟಿಗಿಂತ ಅಧಿಕ ಇದ್ದು, ಈ ಪೈಕಿ 10 ಮಂದಿ 10 ಲಕ್ಷಕ್ಕಿಂತ ಕಡಿಮೆ ಆದಾಯ ಘೋಷಿಸಿದ್ದಾರೆ.
►ರೂ. 100 ಕೋಟಿಗಿಂತ ಅಧಿಕ ಮೌಲ್ಯದ ಕುಟುಂಬ ಆಸ್ತಿ ಹೊಂದಿರುವ ಜನಪ್ರತಿನಿಧಿಗಳ ಪೈಕಿ ನಾಲ್ಕು ಮಂದಿ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಇದೆ ಎಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ.
►ರೂ. ಒಂದು ಕೋಟಿಗಿಂತ ಅಧಿಕ ಮೌಲ್ಯದ ಆಸ್ತಿ ಹೊಂದಿರುವ 1,470 ಜನಪ್ರತಿನಿಧಿಗಳ ಪೈಕಿ 106 ಮಂದಿ ತಮ್ಮ ವಾರ್ಷಿಕ ಆದಾಯ 10 ಲಕ್ಷಕ್ಕಿಂತ ಅಧಿಕ ಇದೆ ಎಂದು ಹೇಳಿಕೆ ನೀಡಿದ್ದಾರೆ.
ಕೃಪೆ: ಟಿಸಿಎನ್