ಶಿಕ್ಷಣ: ಸಮಾನತೆಯಿಂದ ಬಳಕೆ ಸಿದ್ಧಾಂತದತ್ತ ಪಯಣ

ಪ್ರಾಥಮಿಕ ಶಿಕ್ಷಣ ಎಂದರೆ ಕಲಿಕೆಯ ಮೊದಲ ಎಂಟು ವರ್ಷ. ಬಹುತೇಕ ಎಲ್ಲ ಚರ್ಚೆಗಳೂ, ಈ ಹಂತದಲ್ಲಿ ಮಕ್ಕಳಲ್ಲಿ ಮೂಲ ಕೌಶಲವನ್ನು ಅಭಿವೃದ್ಧಿಪಡಿಸುವ ಅಂಶಕ್ಕಷ್ಟೇ ಸೀಮಿತವಾಗಿವೆ. ಉನ್ನತ ಹಾಗೂ ಪ್ರೌಢಶಿಕ್ಷಣದ ವಿಚಾರದಲ್ಲಿ, ಕೌಶಲ ಅಭಿವೃದ್ಧಿ, ಐಸಿಟಿ, ವಿಜ್ಞಾನ ಹಾಗೂ ಗಣಿತ ಶಿಕ್ಷಣ ಸುಧಾರಿಸುವುದು, ಪಿಪಿಪಿ ಮಾದರಿ ಬಳಕೆಯ ಮೇಲೆ ಕೇಂದ್ರಿತವಾಗಿದೆ. ಇದರಿಂದಾಗಿ ಶಿಕ್ಷಣದ ಮೂಲ ವಿಸ್ತೃತ ಉದ್ದೇಶದ ಬದಲು ಬಳಕೆ ಅಥವಾ ಪ್ರಯೋಜನ ಸಿದ್ಧಾಂತಕ್ಕೆ ಒತ್ತು ಸಿಕ್ಕಿದಂತಾಗಿದೆ. 2005ರ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗಿದ್ದ ಮಾನವೀಯ ಸಮಾಜವನ್ನು ನಿರ್ಮಿಸುವ ಗುರಿಯನ್ನು ಕಡೆಗಣಿಸಲಾಗಿದೆ. ಇದು ರಾಜಕೀಯ ಇಚ್ಛಾಶಕ್ತಿಗೆ ಅನುಗುಣವಾಗಿ ರೂಪುಗೊಂಡ ಯೋಜನೆಯಾಗಿರುವುದರಿಂದ ನಿರೀಕ್ಷಿತವೇ ಆಗಿದೆ.
ಶಿಕ್ಷಣ ಕ್ಷೇತ್ರಕ್ಕೆ ಈ ವರ್ಷದ ಬಜೆಟ್ ನೀಡಿದ ಅನುದಾನ ನಿರಾಶಾದಾಯಕ. ಕೊಠಾರಿ ಆಯೋಗ ಜಿಡಿಪಿಯ ಶೇ. 6ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡುವಂತೆ ಶಿಫಾರಸು ಮಾಡಿದ್ದರೂ, ಪ್ರತಿವರ್ಷ ಈ ಮೊತ್ತ ಶೇ. 3-4ರ ಆಸುಪಾಸಿನಲ್ಲೇ ಇರುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ಪ್ರಾಥಮಿಕ ಶಿಕ್ಷಣವು ನಿಧಿ ವಂಚಿತ ಹಾಗೂ ನಿರ್ಲಕ್ಷಿತ ವಲಯ. ಸರಕಾರದ ಆದ್ಯತೆಗಳು ಸ್ಪಷ್ಟ. ಯಾವ ಬಗೆಯ ಶಿಕ್ಷಣವನ್ನು ನೀಡಬೇಕು ಎನ್ನುವುದನ್ನು ಸರಕಾರಗಳೇ ನಿರ್ಧರಿಸಿ ಬಿಡುತ್ತವೆ.
ಶಿಕ್ಷಣ ಎಂಬ ಪದಕ್ಕೆ ವಿಭಿನ್ನ ವ್ಯಾಖ್ಯೆಗಳಿವೆ. ಶಿಕ್ಷಣ ಎಂದರೆ ಸಾಮಾನ್ಯ ಜ್ಞಾನವನ್ನು ಪಡೆಯುವ ಪ್ರಕ್ರಿಯೆ ಅಥವಾ ತಾರ್ಕಿಕತೆ ಹಾಗೂ ನಿರ್ಣಯ ಕೈಗೊಳ್ಳುವ ಶಕ್ತಿಯನ್ನು ತುಂಬುವ ವಿಧಾನ ಅಥವಾ ಪ್ರಬುದ್ಧ ಜೀವನಕ್ಕಾಗಿ ಜನರನ್ನು ಸಜ್ಜುಗೊಳಿಸುವುದು. ಇನ್ನೊಂದು ವ್ಯಾಖ್ಯೆಯ ಪ್ರಕಾರ, ಶಿಕ್ಷಣ ಎಂದರೆ ನಿರ್ದಿಷ್ಟ ಜ್ಞಾನ ಅಥವಾ ಕೌಶಲವನ್ನು ಒಂದು ವೃತ್ತಿಗಾಗಿ ಪಡೆಯುವ ಪ್ರಕ್ರಿಯೆ.
ಎರಡೂ ವ್ಯಾಖ್ಯೆಗಳು ಶಿಕ್ಷಣಕ್ಕೆ ನೀಡಿರುವ ಮಹತ್ವ ಭಿನ್ನ, ಒಂದು, ಜೀವನದ ವಿವಿಧ ಮಜಲುಗಳಾಗಿ ಅಂದರೆ ಜೀವನದಲ್ಲಿ ಗಳಿಕೆಯಂಥ ಪ್ರಯೋಜನದ ದೃಷ್ಟಿಯಿಂದ ಶಿಕ್ಷಣವನ್ನು ನೋಡಿದರೆ ಇನ್ನೊಂದು ಬೌದ್ಧಿಕವಾಗಿ ಪ್ರಬುದ್ಧ ಜೀವನ ಸಾಗಿಸಲು ಮಾರ್ಗದರ್ಶನ ಎಂದು ಪರಿಗಣಿಸುತ್ತದೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ, ದೇಶದಲ್ಲಿ ಬಹುತೇಕ ಮಂದಿ ಅನಕ್ಷರಸ್ಥರಾಗಿದ್ದರು. 1951ರ ಜನಗಣತಿ ಪ್ರಕಾರ, ಸಾಕ್ಷರತೆ ಪ್ರಮಾಣ ಕೇವಲ ಶೇ. 18.33 ಆಗಿತ್ತು. ಇದರಿಂದ ಸಾಧ್ಯವಾದಷ್ಟು ಸಾಕ್ಷರತೆಗೆ ಒತ್ತು ನೀಡಲು ಸರಕಾರ ನಿರ್ಧರಿಸಿತು. ಇದರಿಂದ ಆರಂಭಿಕ ವರ್ಷಗಳಲ್ಲಿ ಎಲ್ಲರನ್ನೂ ಸುಶಿಕ್ಷಿತರನ್ನಾಗಿ ಮಾಡುವ ಯೋಜನೆಗಳಿಗೆ ಸರಕಾರ ಒತ್ತು ನೀಡಿತು.
2011ರ ಜನಗಣತಿ ಅಂಕಿ ಅಂಶಗಳ ಪ್ರಕಾರ ದೇಶದ ಸಾಕ್ಷರತೆ ಪ್ರಮಾಣ ಶೇ. 74.04 ಇದೆ. ಆದರೆ ಭಾರತದಲ್ಲಿ ಸಾಕ್ಷರತೆಯ ಅಕ್ಷರಶಃ ಆರ್ಥ ಶಿಕ್ಷಣದ ವಿಸ್ತೃತ ಆಯಾಮವನ್ನು ಹೊಂದಿಲ್ಲ. ಕೇವಲ ಓದಲು ಹಾಗೂ ಬರೆಯಲು ಬರುವ ಎಲ್ಲರನ್ನೂ ಸಾಕ್ಷರರು ಎಂದು ನಾವು ಪರಿಗಣಿಸುತ್ತೇವೆ. ಬಡ ಹಾಗೂ ಅಭಿವೃದ್ಧಿಶೀಲ ದೇಶವಾಗಿರುವ ಭಾರತದಲ್ಲಿ ಇಂದಿಗೂ ಶೇ. 100ರ ಸಾಕ್ಷರತೆ ಸಾಧಿಸುವುದು ಸಾಧ್ಯವಾಗಿಲ್ಲ. ಆದ್ದರಿಂದ ದೇಶದ ಶಿಕ್ಷಣಕ್ಷೇತ್ರದಲ್ಲಿ ಪರಿಮಾಣಾತ್ಮಕ ಅಂಶಗಳಿಂದ ಗುಣಾತ್ಮಕ ಅಂಶಗಳ ಬಗ್ಗೆ ಗಮನ ಹರಿಸುವುದು ಸಾಧ್ಯವಾಗಿಲ್ಲ.
ಆದ್ದರಿಂದ ಕನಿಷ್ಠ ಎಲ್ಲರೂ ಓದುವ ಹಾಗೂ ಬರೆಯುವ ಕೌಶಲವನ್ನಾದರೂ ಹೊಂದಲಿ ಎಂಬ ಅಂಶದ ಬಗ್ಗೆ ಒತ್ತು ನೀಡಿದ್ದರಿಂದ ಗುಣಮಟ್ಟ ಅಥವಾ ಶಿಕ್ಷಣದ ವಿಸ್ತೃತ ಆಯಾಮಗಳು ಹಿನ್ನೆಲೆಗೆ ಸರಿದವು.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಏನನ್ನು ಬೋಧಿಸಬೇಕು ಎಂಬ ಪಠ್ಯಕ್ರಮದ ಚೌಕಟ್ಟು ಇದ್ದರೂ, ಬೋಧನೆಯ ಗುಣಮಟ್ಟವನ್ನು ಅಳೆಯುವ ಪ್ರಯತ್ನಗಳು ನಡೆದಿಲ್ಲ. ಕೆಲವೊಂದು ಇಂಥ ಮೌಲ್ಯಮಾಪನಗಳು ನಡೆದಿದ್ದರೂ, ಇದು ಕೇವಲ ಶಿಕ್ಷಣದ ಪರಿಣಾಮದ ಮೂಲಭೂತ ಅಂಶಗಳಾದ, ವಿದ್ಯಾರ್ಥಿಗಳ ಓದುವ ಹಾಗೂ ಬರೆಯುವ ಸಾಮರ್ಥ್ಯ, ಶಾಲಾ ನೋಂದಣಿ ಅನುಪಾತ, ಶಿಕ್ಷಣದಿಂದ ಹೊರಗುಳಿದಿರುವ ಮಕ್ಕಳ ಪ್ರಮಾಣವನ್ನು ಅಳೆಯುವಷ್ಟಕ್ಕೇ ಸೀಮಿತವಾಗಿವೆ. ಜನರಿಗೆ ಯಾವ ಬಗೆಯ ಶಿಕ್ಷಣ ಬೇಕು ಎಂದು ತಿಳಿದುಕೊಳ್ಳುವ ಅಥವಾ ಶಿಕ್ಷಣದ ಗುರಿ ಸಾಧನೆಯಾಗಿದೆಯೇ ಇಲ್ಲವೇ ಎಂಬ ಅಧ್ಯಯನಗಳು ನಡೆದಿಲ್ಲ.
ಸಾಮ್ರಾಜ್ಯಶಾಹಿ ಆಡಳಿತದ ಪೂರ್ವದಲ್ಲಿ ದೇಶದಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ವಿಶ್ಲೇಷಿಸಿದರೆ, ಬ್ರಾಹ್ಮಣ್ಯದ ಪ್ರಾಬಲ್ಯ ಇತ್ತು. ಇದರಲ್ಲಿ ಮುಖ್ಯವಾಗಿ ಮೌಖಿಕ ಕಲಿಕೆ, ಕಂಠಪಾಠ ಮಾಡುವುದು, ಸೀಮಿತ ಪಠ್ಯಕ್ರಮ, ಮಹಿಳಾ ಶಿಕ್ಷಣದ ಕೊರತೆ, ಕೆಳವರ್ಗದವರಿಗೆ ಅದರಲ್ಲೂ ಮುಖ್ಯವಾಗಿ ದಲಿತರನ್ನು ಶಿಕ್ಷಣ ವಂಚಿತರನ್ನಾಗಿ ಮಾಡಿರುವುದು ಕಂಡುಬರುತ್ತದೆ. ಬೋಧನಾ ತರಬೇತಿಯ ಕೊರತೆ, ಶಿಕ್ಷಕರಲ್ಲೂ ಬ್ರಾಹ್ಮಣರ ಪ್ರಾಬಲ್ಯ, ವಿದ್ಯಾರ್ಥಿಗಳಲ್ಲೂ ಬ್ರಾಹ್ಮಣರ ಪ್ರಾಬಲ್ಯ ಈ ಶಿಕ್ಷಣ ವ್ಯವಸ್ಥೆಯ ಪ್ರಮುಖ ಅಂಶಗಳು.
ಈಸ್ಟ್ ಇಂಡಿಯಾ ಕಂಪೆನಿಯ ಆಗಮನದೊಂದಿಗೆ ಭಾರತದಲ್ಲಿ ಬ್ರಿಟಿಷ್ ಅಸ್ತಿತ್ವ ಕಾಣಿಸಿಕೊಂಡಿತು. ಕೆಲ ಕಾಲ ಭಾರತದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಬ್ರಿಟಿಷರು ಭಾರತೀಯ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಬದಲು, ತಮ್ಮದೇ ಯೋಚನೆಗಳನ್ನು ಹೇರುವ ಹಾಗೂ ತಮ್ಮ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಮಾರ್ಗ ಅನುಸರಿಸಿದರು. ಗವರ್ನರ್ ಜನರಲ್ ವಿಲಿಯಂ ಬೆಂಟಿಕ್ ಅವರು 1835ರಲ್ಲಿ ‘ಮೆಕಾಲೆ ಶಿಕ್ಷಣ ಪದ್ಧತಿ’ಯನ್ನು ಆರಂಭಿಸಿದರು.
ಬ್ರಿಟಿಷ್ ಶಿಕ್ಷಣ ಪದ್ಧತಿ ಕೂಡಾ ಬ್ರಾಹ್ಮಣ್ಯ ಸಂಪ್ರದಾಯದ ಹಲವು ಅಂಶಗಳನ್ನು ಅಳವಡಿಸಿಕೊಂಡಿತ್ತು. ಸಾಮೂಹಿಕ ಶಿಕ್ಷಣಕ್ಕೆ ಇಲ್ಲೂ ಒತ್ತು ದೊರಕಲಿಲ್ಲ ಹಾಗೂ ಮಹಿಳಾ ಶಿಕ್ಷಣ ಬಹಳಷ್ಟು ಹಿಂದೆಯೇ ಉಳಿಯಿತು.
ಸ್ವಾತಂತ್ರ್ಯೋತ್ತರದ ಭಾರತೀಯ ಶಿಕ್ಷಣ ಕೂಡಾ ಮೆಕಾಲೆ ಮಾದರಿಯಲ್ಲೇ ಮುಂದುವರಿಯಿತು. ಕೇವಲ ಕಂಠಪಾಠ ಹಾಗೂ ನೆನಪಿಟ್ಟುಕೊಳ್ಳುವ ವಿಧಾನಕ್ಕೆ ಇದು ಒತ್ತು ನೀಡಿತೇ ವಿನಃ ಪರಿಕಲ್ಪನಾತ್ಮಕವಾಗಿ ಯೋಚಿಸುವ, ಸಮಗ್ರವಾಗಿ ಅರ್ಥ ಮಾಡಿಕೊಳ್ಳುವ ಹಾಗೂ ತಾರ್ಕಿಕವಾಗಿ ವಿವೇಚನಾ ಸಾಮರ್ಥ್ಯವನ್ನು ಕಡೆಗಣಿಸಿತು.
ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವುದು 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು. ಶಿಕ್ಷಣದ ವಿಸ್ತೃತ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅಗತ್ಯವಾದ ಪಠ್ಯಕ್ರಮವನ್ನು ಬೋಧಿಸುವುದು ಇದರ ಉದ್ದೇಶ. ಇದು ಶಿಕ್ಷಣದ ಗುರಿಯನ್ನು ವ್ಯಾಖ್ಯಾನಿಸುವಲ್ಲಿ ಕ್ರಾಂತಿಕಾರಿ ದಾಖಲೆ ಎನ್ನಬಹುದು. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕವಾಗಿದ್ದ ಪ್ರಾಬಲ್ಯದ ದೃಷ್ಟಿಕೋನಕ್ಕಿಂತ ಭಿನ್ನವಾಗಿದೆ. 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮುಖ್ಯವಾಗಿ ‘ಶಾಂತಿಗಾಗಿ ಶಿಕ್ಷಣ’ ಎಂಬ ತತ್ವಕ್ಕೆ ಒತ್ತು ನೀಡಿದೆ. ಈ ಅಂಶ ಮುಖ್ಯವಾಗಿ ಎರಡು ಉಪಶಾಖೆಗಳನ್ನು ಹೊಂದಿದೆ.
ಶಾಂತಿಯು ಮಾನವ ಅಸ್ತಿತ್ವದ ಎಲ್ಲ ಆಯಾಮಗಳನ್ನು ಒಳಗೊಂಡಿದೆ. ಶಾಂತಿಯಿಂದ ಇರುವವರಷ್ಟೇ ತಮ್ಮ ಸಮಾಜದಲ್ಲೂ ಶಾಂತಿಸ್ಥಾಪನೆಗೆ ಶ್ರಮಿಸಬಲ್ಲರು ಎನ್ನುವುದು ಈ ಸಿದ್ಧಾಂತ. ಸಾಮಾಜಿಕ, ಆರ್ಥಿಕ ಹಾಗೂ ಪರಿಸರದ ಶಾಂತಿ ಇಲ್ಲದೇ ಆಧ್ಯಾತ್ಮಿಕ ಅಥವಾ ಮಾನಸಿನ ಶಾಂತಿ ಅಸಾಧ್ಯ ಎನ್ನುವುದು ಈ ಪರಿಕಲ್ಪನೆ. ಎರಡನೆಯದಾಗಿ, ಶಾಂತಿ ಎನ್ನುವುದು ಕೊಡುಕೊಳ್ಳುವಿಕೆ. ಪ್ರೀತಿ, ಸ್ವಾತಂತ್ರ್ಯ ಹಾಗೂ ಶಾಂತಿಯಂಥ ಮೌಲ್ಯಗಳು ಸಾರ್ಥಕವಾಗುವುದು ಅದನ್ನು ಇನ್ನೊಬ್ಬರಿಗೂ ನೀಡಿದಾಗ. ಇತರರನ್ನು ಹೊರತುಪಡಿಸಿ ನಮಗಷ್ಟೇ ಶಾಂತಿ ಇರಬೇಕು ಎಂದು ನಿರೀಕ್ಷಿಸುವುದು ಅಪಾಯಕಾರಿ. ‘ಶಾಂತಿಗಾಗಿ ಶಿಕ್ಷಣ’ ಎನ್ನುವುದು ಎರಡು ಉದ್ದೇಶಗಳನ್ನು ಹೊಂದಿದೆ.
ಒಂದು ವ್ಯಕ್ತಿಗಳನ್ನು ಶಾಂತಿಯ ಮಾರ್ಗ ಆಯ್ಕೆ ಮಾಡಿಕೊಳ್ಳಲು ಸಶಕ್ತರನ್ನಾಗಿ ಮಾಡುವುದು ಹಾಗೂ ಇನ್ನೊಂದು ಅವರನ್ನು ಶಾಂತಿಸ್ಥಾಪಕರಾಗಿ ಅಭಿವೃದ್ಧಿಪಡಿಸುವುದು. ಅಂದರೆ ಇದು ವ್ಯಕ್ತಿಗಳ ಸಮಗ್ರ ಬೆಳವಣಿಗೆಯ ಗುರಿಗೆ ಪೂರಕವಾಗಿದೆ. ಇದನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ. ದೇಶದಲ್ಲಿ ನಾವು ಶೇ. 100ರ ಸಾಕ್ಷರತೆ ಸಾಧಿಸಿದರೂ, ವಿದ್ಯಾರ್ಥಿಗಳಿಗೆ ನಾವು ಈ ವ್ಯವಸ್ಥೆಯ ಮೂಲಕ ನೀಡುವ ಅಂಶಗಳು ಸಮರ್ಪಕವಾಗಿಲ್ಲವೆಂದಾದರೆ ಅದು ನಿರರ್ಥಕವಾಗುತ್ತದೆ.
ಆದಾಗ್ಯೂ ನಮ್ಮಲ್ಲಿ ವಿದ್ಯಾರ್ಥಿಗಳಿಗೆ ಏನನ್ನು ಬೋಧಿಸಬೇಕು ಎನ್ನುವುದು ಆಯಾ ರಾಜಕೀಯ ಪಕ್ಷಗಳ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇರುತ್ತದೆ. ಶಿಕ್ಷಣ ಎನ್ನುವುದು ರಾಜಕೀಯ ಪಕ್ಷಗಳಿಗೆ ತಮ್ಮ ಸಿದ್ಧಾಂತವನ್ನು ಪ್ರಸಾರ ಮಾಡಲು ಇರುವ ಪ್ರಮುಖ ಸಾಧನವಾಗಿದೆ. ಅವರ ಅಪೇಕ್ಷೆಯಂತೆ ಭವಿಷ್ಯದ ದೇಶವನ್ನು ನಿರ್ಮಿಸಲು ಇದು ಸಾಧನವಾಗುತ್ತದೆ. ಹೊಸ ಶಿಕ್ಷಣ ನೀತಿ ಈಗಾಗಲೇ ರೂಪುಗೊಳ್ಳುವ ಹಂತದಲ್ಲಿದೆ. ಇದು ಸಮಗ್ರವಾಗಿ ಸಲಹಾ ಪ್ರಕ್ರಿಯೆಗೆ ಅನುಸಾರ ಅಂತಿಮವಾಗುತ್ತದೆ. ಈಗಾಗಲೇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ.
ತನ್ನ ವೆಬ್‌ಸೈಟ್‌ನಲ್ಲಿ ಈಗಾಗಲೇ ಕರಡು ನೀತಿಯನ್ನು ಪ್ರಕಟಿಸಿದೆ. ಚರ್ಚೆ ಹಾಗೂ ಅಭಿಪ್ರಾಯಗಳಿಗಾಗಿ ಒಟ್ಟು 13 ಅಂಶಗಳನ್ನು ವಿವರಿಸಲಾಗಿದೆ. ಮೊದಲ ಗುರಿ ಎಂದರೆ, ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕಾ ಪರಿಣಾಮವನ್ನು ಖಾತ್ರಿಪಡಿಸುವುದು. ಭಾಷೆಯ ಮೂಲತತ್ವಗಳು ಹಾಗೂ ಅಂಕಿಸಂಖ್ಯೆಯ ಕೌಶಲ ಅಭಿವೃದ್ಧಿಪಡಿಸುವುದು, ಓದು, ಬರಹ ಸಾಮರ್ಥ್ಯ ಬೆಳೆಸುವುದು ಇದರ ಪ್ರಮುಖ ಅಂಶ.
ಪ್ರಾಥಮಿಕ ಶಿಕ್ಷಣ ಎಂದರೆ ಕಲಿಕೆಯ ಮೊದಲ ಎಂಟು ವರ್ಷ. ಬಹುತೇಕ ಎಲ್ಲ ಚರ್ಚೆಗಳೂ, ಈ ಹಂತದಲ್ಲಿ ಮಕ್ಕಳಲ್ಲಿ ಮೂಲ ಕೌಶಲವನ್ನು ಅಭಿವೃದ್ಧಿಪಡಿಸುವ ಅಂಶಕ್ಕಷ್ಟೇ ಸೀಮಿತವಾಗಿವೆ. ಉನ್ನತ ಹಾಗೂ ಪ್ರೌಢಶಿಕ್ಷಣದ ವಿಚಾರದಲ್ಲಿ, ಕೌಶಲ ಅಭಿವೃದ್ಧಿ, ಐಸಿಟಿ, ವಿಜ್ಞಾನ ಹಾಗೂ ಗಣಿತ ಶಿಕ್ಷಣ ಸುಧಾರಿಸುವುದು, ಪಿಪಿಪಿ ಮಾದರಿ ಬಳಕೆಯ ಮೇಲೆ ಕೇಂದ್ರಿತವಾಗಿದೆ. ಇದರಿಂದಾಗಿ ಶಿಕ್ಷಣದ ಮೂಲ ವಿಸ್ತೃತ ಉದ್ದೇಶದ ಬದಲು ಬಳಕೆ ಅಥವಾ ಪ್ರಯೋಜನ ಸಿದ್ಧಾಂತಕ್ಕೆ ಒತ್ತು ಸಿಕ್ಕಿದಂತಾಗಿದೆ. 2005ರ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗಿದ್ದ ಮಾನವೀಯ ಸಮಾಜವನ್ನು ನಿರ್ಮಿಸುವ ಗುರಿಯನ್ನು ಕಡೆಗಣಿಸಲಾಗಿದೆ.
ಇದು ರಾಜಕೀಯ ಇಚ್ಛಾಶಕ್ತಿಗೆ ಅನುಗುಣವಾಗಿ ರೂಪುಗೊಂಡ ಯೋಜನೆಯಾಗಿರುವುದರಿಂದ ನಿರೀಕ್ಷಿತವೇ ಆಗಿದೆ. ಅತಿಯಾದ ರಾಷ್ಟ್ರಪ್ರೇಮ, ಹಿಂದುತ್ವದ ರಾಷ್ಟ್ರೀಯತೆ, ಜಾತಿ ಶ್ರೇಷ್ಠತೆ, ಧಾರ್ಮಿಕ ಅಂಧಃಶ್ರದ್ಧೆಯನ್ನು ಪ್ರತಿಪಾದಿಸುವ ಇಂದಿನ ರಾಜಕೀಯ ಸಿದ್ಧಾಂತದ ಪ್ರಕಾರ, ಮಾನವೀಯ ಸಮಾಜದ ಪರಿಕಲ್ಪನೆ ಹಿನ್ನೆಲೆಗೆ ಸರಿದಿದೆ. ಪ್ರಸ್ತಾವಿತ ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದು, ರಾಜಕೀಯ ಸಿದ್ಧಾಂತವನ್ನು ಶಾಲಾ ಪಠ್ಯಕ್ರಮದಲ್ಲಿ ತುಂಬಿಸುವ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಕೆಲ ಹೆಜ್ಜೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.
ಉದಾಹರಣೆಗೆ ರಾಜಸ್ಥಾನ ಸರಕಾರ, ಇತಿಹಾಸವನ್ನೇ ತಿರುಚಲು ಹೊರಟಿದೆ. ಇದರಿಂದಾಗಿ ಇಂದಿನ ಮಕ್ಕಳು ಹೊಸ ಇತಿಹಾಸವನ್ನೇ ಅಧ್ಯಯನ ಮಾಡಬೇಕಾಗುತ್ತದೆ. ‘‘ಅಕ್ಬರ್ ಹೊರಗಿನ ಮುಸ್ಲಿಂ ರಾಜನಾಗಿದ್ದು, ಹಲ್ದಿಘಾಟಿ ಕದನದಲ್ಲಿ ಸೋತಿದ್ದಾನೆ. ಮುಸ್ಲಿಂ ದುರಾಕ್ರಮಣದ ವಿರುದ್ಧ ಹಿಂದೂ ರಾಜರು ವಿಜೃಂಭಿಸಿದ್ದಾರೆ’’ ಎಂಬಂಥ ಅಂಶಗಳನ್ನು ಇದು ವೈಭವೀಕರಿಸುತ್ತದೆ.
ಹೀಗೆ ಯುವಮನಸ್ಸುಗಳಿಗೆ ಲಗ್ಗೆ ಇಡುವ ಇನ್ನೊಂದು ಪ್ರಯತ್ನವೆಂದರೆ ರಹಸ್ಯ ಪಠ್ಯಕ್ರಮ. 2005ರ ಶಿಕ್ಷಣ ನೀತಿ ಬಳಿಕ ಬಂದ ಎನ್‌ಸಿಇಆರ್‌ಟಿ ಪಠ್ಯಗಳು ಕ್ರಾಂತಿಕಾರಿ ಸ್ವರೂಪದ್ದಾಗಿದ್ದವು. ಮಕ್ಕಳಿಗೆ ಅರ್ಥಪೂರ್ಣ ಕಲಿಕಾ ಅನುಭವ ನೀಡುವ ನಿಟ್ಟಿನಲ್ಲಿ ಹಲವು ಸಂಘಸಂಸ್ಥೆಗಳು ಇದನ್ನು ರೂಪಿಸಲು ಶ್ರಮಿಸಿದವು. ಆದಾಗ್ಯೂ ಬೋಧನೆ ಹಾಗೂ ಕಲಿಕೆ ಕೇವಲ ಪಠ್ಯಕ್ರಮಕ್ಕೇ ಸೀಮಿತವಲ್ಲ. ರಹಸ್ಯ ಪಠ್ಯಕ್ರಮ ಯುವ ಮನಸ್ಸುಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂಥ ರಹಸ್ಯ ಪಠ್ಯಕ್ರಮಕ್ಕೆ ಇರುವ ಅವಕಾಶವನ್ನು ಬಳಸಿಕೊಳ್ಳಲು ಈ ನೀತಿ ಒತ್ತು ನೀಡಿದೆ. ಮುಂಬೈ ಪಾಲಿಕೆಯ ಹಲವು ಶಾಲೆಗಳಿಗೆ ನಾನು ಭೇಟಿಕೊಟ್ಟು ಅಧ್ಯಯನ ನಡೆಸಿದ್ದೆ.
ರಾಷ್ಟ್ರೀಯತೆಯ ಬಗ್ಗೆ ಮಕ್ಕಳ ಕಲ್ಪನೆ ಏನು ಎಂದು ತಿಳಿದುಕೊಳ್ಳುವುದು ನನ್ನ ಅಧ್ಯಯನದ ಉದ್ದೇಶವಾಗಿತ್ತು. ಮಹಾರಾಷ್ಟ್ರದ ಪಾಲಿಕೆ ಶಾಲೆಗಳಲ್ಲಿ ಪೂರಕ ಪಠ್ಯಕ್ರಮಗಳನ್ನೂ ಬೋಧಿಸಲಾಗುತ್ತಿದೆ. ‘ಸಂಗಾತಿ’ ಎಂಬ ಈ ಮೂರು ವರ್ಷದ ಪಠ್ಯಕ್ರಮದಲ್ಲಿ ಆರು ಕಿಟ್‌ಗಳಿವೆ. ಇದು ಶಾಲೆಗಳಲ್ಲಿ ಬೋಧಿಸುವ ವಿವಿಧ ವಿಷಯಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ. ‘ಅವೇಹಿ ಅಬಾಕಸ್’ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ಇದು ಶಾಲೆಯ ಒಳಗೆ ಹಾಗೂ ಹೊರಗೆ ಮಕ್ಕಳು ಕಲಿತದ್ದನ್ನು ಅಳವಡಿಸಿಕೊಳ್ಳಲು ಪೂರಕವಾಗಿದೆ. ಜತೆಗೆ ಮಕ್ಕಳ ಆತ್ಮವಿಶ್ವಾಸ ವೃದ್ಧಿಸುವುದು ಹಾಗೂ ವೀಕ್ಷಣೆ, ವಿಶ್ಲೇಷಣೆ, ಬದಲಾವಣೆ ಹಾಗೂ ನಿರ್ಧಾರ ಕೈಗೊಳ್ಳುವಂತೆ ಮಕ್ಕಳನ್ನು ಬೆಳೆಸುವುದು ಇದರ ಉದ್ದೇಶ. ಇದರ ಜತೆಗೆ ಪರಸ್ಪರ ಸಹಕಾರ ಹಾಗೂ ಸಾಮರಸ್ಯದ ಮೌಲ್ಯಗಳನ್ನು ಬಲಗೊಳಿಸುವುದು ಇದರಲ್ಲಿ ಸೇರಿದೆ.
ಸಮಾನತೆ, ಭಾವಸೂಕ್ಷ್ಮತೆ, ವೈವಿಧ್ಯತೆ, ಪರಿಸರ ಕಾಳಜಿ ಹಾಗೂ ಕೆಲಸಕ್ಕೆ ಗೌರವ ಹಾಗೂ ಶ್ರಮಗೌರವದಂಥ ಮೂಲಮೌಲ್ಯಗಳಿಗೆ ಈ ಸಂಗಾತಿ ಸರಣಿ ಒತ್ತು ನೀಡಿದೆ. ಈ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಜಾತಿ, ಧರ್ಮ, ಪ್ರಜಾಪ್ರಭುತ್ವ, ರಾಷ್ಟ್ರೀಯತೆಯಂಥ ಅಂಶಗಳನ್ನು ತಿಳಿದುಕೊಳ್ಳುವಂತೆ ಮಾಡುವುದಾದರೂ, ವಾಸ್ತವವಾಗಿ ವಿದ್ಯಾರ್ಥಿಗಳು ಅದನ್ನು ತಿಳಿದುಕೊಂಡಿಲ್ಲ ಎಂಬ ಅಂಶ ಅಧ್ಯಯನದಿಂದ ಬೆಳಕಿಗೆ ಬಂತು. ಏಕೆಂದರೆ ಈ ಉದಾತ್ತ ಮೌಲ್ಯಗಳನ್ನು ಬೋಧಿಸುವುದು, ಪಕ್ಷಪಾತಿ ಮನೋಭಾವದ ಶಿಕ್ಷಕರಿಗೆ ಆಪ್ಯಾಯಮಾನವಲ್ಲ.
ಇದೀಗ ಹೊಸ ಶಿಕ್ಷಣ ಕರಡು ನೀತಿಯಲ್ಲಿ ರಾಜಕೀಯ ಸಿದ್ಧಾಂತ ಸ್ಪಷ್ಟವಾಗಿರುವುದರಿಂದ, ನ್ಯಾಯ, ಸಮಾನತೆಯ ಸಿದ್ಧಾಂತ ಹಾಗೂ ಮಾನವೀಯತೆಯಿಂದ ವಿಮುಖವಾದ ಇದು ಯಾವಾಗ ಜಾರಿಗೆ ಬರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದಷ್ಟೇ ಬಾಕಿ. ಆ ದಿನ ಖಂಡಿತವಾಗಿಯೂ ದೂರವಿಲ್ಲ. ಈ ಹಿನ್ನೆಲೆಯಲ್ಲಿ ಕಾಳಜಿ ಇರುವ ಎಲ್ಲರೂ ಸಾಮಾಜಿಕ ಮನೋಭಾವ ಇನ್ನಷ್ಟು ಹಾಳಾಗುವ ವಿಧಾನದ ವೇಗವನ್ನು ಕಡಿಮೆಗೊಳಿಸುವ ಮತ್ತು ಪರ್ಯಾಯ ಹಾಗೂ ಎಲ್ಲರನ್ನೂ ತೊಡಗಿಸಿಕೊಳ್ಳುವ ವಿಧಾನವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಯೋಚಿಸುವ ಹಾಗೂ ಕಾರ್ಯಪ್ರವೃತ್ತರಾಗುವುದು ಅನಿವಾರ್ಯ.







