ಬರಪೀಡಿತ ಮಹಾರಾಷ್ಟ್ರದಲ್ಲಿ 3600 ಕೋಟಿ ರೂ. ವೆಚ್ಚದ ಶಿವಾಜಿ ಪ್ರತಿಮೆ
ಮುಂಬೈ ಮಹಾನಗರದ ಕಡಲ ಪ್ರದೇಶದಲ್ಲಿ ಬೃಹತ್ ಗಾತ್ರ ಪ್ರತಿಮೆ ನಿರ್ಮಾಣಕ್ಕಾಗಿ ಹಣವನ್ನು ನೀರಿನಂತೆ ಪೋಲು ಮಾಡುವ ಬದಲು, 2 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಮುಂಬೈ ಮಹಾನಗರದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯವನ್ನು ಸುಧಾರಣೆಗೊಳಿಸುವುದಕ್ಕಾಗಿ ಹಣವನ್ನು ವ್ಯಯಿಸುವುದು ಉತ್ತಮವೆಂದು ಅನೇಕರು ಅಭಿಪ್ರಾಯಿಸಿದ್ದಾರೆ. ಅಶ್ವರೋಹಿಯಾಗಿ, ಖಡ್ಗವನ್ನು ಝಳಪಿಸುವ ಭಂಗಿಯಲ್ಲಿರುವ ಶಿವಾಜಿಯ ಕಂಚಿನ ಪ್ರತಿಮೆಯ ವಿಗ್ರಹವನ್ನು ವಿರೋಧಿಸಿ ಚೇಂಜ್.ಆರ್ಗ್‌ನಲ್ಲಿ ಸಹಿಸಂಗ್ರಹ ಚಳವಳಿ ಆರಂಭಗೊಂಡಿದ್ದು, ಈಗಾಗಲೇ 43 ಸಾವಿರ ಮಂದಿ ಸಹಿಹಾಕಿದ್ದಾರೆ.
ಮುಂಬೈಯ ಕಡಲಪ್ರದೇಶದಲ್ಲಿ ವಿಶ್ವದ ಅತೀ ದೊಡ್ಡ ಪ್ರತಿಮೆಯನ್ನು ನಿರ್ಮಿಸುವ ಮಹಾರಾಷ್ಟ್ರ ಸರಕಾರದ ನಿರ್ಧಾರವು ಸಾರ್ವಜನಿಕರ ಹಣದ ಘೋಷಣೆಯು ಭಾರೀ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಶತಮಾನಗಳಿಂದ ಮುಂಬೈ ಕರಾವಳಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ಕೋಲಿ ಸಮುದಾಯ ಶಿವಾಜಿ ಪ್ರತಿಮೆಯ ನಿರ್ಮಾಣದಿಂದ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರಲಿದೆಯೆಂಬ ಭೀತಿ ಹೊಂದಿದೆ.
17ನೆ ಶತಮಾನದ ಮರಾಠ ದೊರೆ ಛತ್ರಪತಿ ಶಿವಾಜಿಯ ಪ್ರತಿಮೆಯ ನಿರ್ಮಾಣಕ್ಕಾಗಿ ಭಾರತವು 3600 ಕೋಟಿ ರೂ. ವೆಚ್ಚ ಮಾಡಲಿದೆ. ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸಗೈದಿದ್ದರು.
190 ಮೀಟರ್ ಎತ್ತರದ ಈ ಪ್ರತಿಮೆಯು ಅಮೆರಿಕದ ಸ್ವಾತಂತ್ರ ಪ್ರತಿಮೆಗಿಂತ ಎರಡು ಪಟ್ಟು ಅಧಿಕ ಎತ್ತರವಿರುವುದು ಹಾಗೂ ಜಗತ್ತಿನ ಅತೀ ಎತ್ತರದ ಸ್ಮಾರಕವೆಂಬ ಹೆಗ್ಗಳಿಕೆ ಹೊಂದಿರುವ ಚೀನಾದ ಬುದ್ಧ ವಿಗ್ರಹಕ್ಕಿಂತ 40 ಮೀಟರ್ ಹೆಚ್ಚು ಎತ್ತರವಿರುವುದು.
ಮುಂಬೈನ ಸಮುದ್ರತೀರದ ಬೃಹತ್ ಬಂಡೆಗಲ್ಲಿನ ಮೇಲೆ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಬೃಹತ್ ಪ್ರತಿಮೆಯನ್ನು ನಿರ್ಮಿಸುವ ನಿರ್ಧಾರವು ತಮ್ಮ ಸಾಂಪ್ರದಾಯಿಕ ಜೀವನಶೈಲಿಗೆ ಮರಣಗಂಟೆಯಾಗಲಿದೆ ಎಂದು ಕೋಲಿ ಸಮುದಾಯ ಆತಂಕ ವ್ಯಕ್ತಪಡಿಸುತ್ತಿದೆ.
ಮುಂಬೈನ ಮಚ್ಚಿಮಾರ್ ನಗರ್ ಬೇ ಸಮೀಪದ ಸಮುದ್ರ ತೀರದಲ್ಲಿ ಬಲೆಯನ್ನು ಹರಡುತ್ತಿದ್ದ ಕೃಷ್ಣ ತಾಂಡೇಲ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಪ್ರತಿಮೆ ನಿರ್ಮಾಣದಿಂದಾಗಿ ಮತ್ಸಸಂಕುಲದ ಸಂತಾನೋತ್ಪತ್ತಿಯ ತಾಣವು ಸಂಪೂರ್ಣವಾಗಿ ನಾಶವಾಗಲಿದೆಯೆಂದು ಆತಂಕ ವ್ಯಕ್ತಪಡಿಸಿದರು.
ಶಿವಾಜಿ ಪ್ರತಿಮೆ ನಿರ್ಮಾಣ ಯೋಜನೆಯು ಭಾರತದ ವಾಣಿಜ್ಯ ರಾಜಧಾನಿಯ ಜನತೆಯನ್ನು ವಿಭಜಿಸಿದೆ. ಪ್ರಾದೇಶಿಕ ಅಸ್ಮಿತೆಯ ಹೆಸರಿನಲ್ಲಿ ರಾಜಕೀಯದಾಟ ನಡೆಸುತ್ತಿರುವ ಪಕ್ಷಗಳಿಗೆ ಪ್ರತಿಮೆಗಳ ಸ್ಥಾಪನೆಯ ಕುರಿತಾದ ವ್ಯಾಮೋಹದ ಬಗ್ಗೆ ಈ ವಿವಾದವು ಬೆಳಕು ಚೆಲ್ಲುತ್ತದೆ. ಮಹಾರಾಷ್ಟ್ರದ ಮಹಾನ್ ನಾಯಕನೆಂದು, ಸ್ಥಳೀಯರನೇಕರು ಪರಿಗಣಿಸಿರುವ ರಾಜನೊಬ್ಬನಿಗೆ ಸಲ್ಲಿಸುವ ಅತ್ಯಂತ ಯೋಗ್ಯ ಗೌರವ ಇದಾಗಿದೆಯೆಂದು ಬೆಂಬಲಿಗರು ಹೇಳುತ್ತಾರೆ. ಆದರೆ ಬೃಹತ್ ಪ್ರತಿಮೆ ನಿರ್ಮಾಣಕ್ಕಾಗಿ ಹಣವನ್ನು ನೀರಿನಂತೆ ಪೋಲು ಮಾಡುವ ಬದಲು, 2 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಮುಂಬೈ ಮಹಾನಗರದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯವನ್ನು ಸುಧಾರಣೆಗೊಳಿಸುವುದಕ್ಕಾಗಿ ಹಣವನ್ನು ವ್ಯಯಿಸುವುದು ಉತ್ತಮವೆಂದು ಅನೇಕರು ಅಭಿಪ್ರಾಯಿಸಿದ್ದಾರೆ. ಅಶ್ವರೋಹಿಯಾಗಿ, ಖಡ್ಗವನ್ನು ಝಳಪಿಸುವ ಭಂಗಿಯಲ್ಲಿರುವ ಶಿವಾಜಿಯ ಕಂಚಿನ ಪ್ರತಿಮೆಯ ವಿಗ್ರಹವನ್ನು ವಿರೋಧಿಸಿ ಚೇಂಜ್.ಆರ್ಗ್‌ನಲ್ಲಿ ಸಹಿ ಸಂಗ್ರಹ ಚಳವಳಿ ಆರಂಭಗೊಂಡಿದ್ದು, ಈಗಾಗಲೇ 43 ಸಾವಿರ ಮಂದಿ ಸಹಿಹಾಕಿದ್ದಾರೆ.
ವಿಗ್ರಹ ನಿರ್ಮಾಣದಿಂದ ವಿಶಿಷ್ಟವಾದ ಬಾಂಬೆ ಬಂಗುಡೆ, ಸಿಗಡಿ, ಏಡಿ ಸೇರಿದಂತೆ ವೈವಿಧ್ಯಮಯವಾದ ಮತ್ಸಸಂಕುಲಗಳು ವಿನಾಶದ ಅಂಚಿಗೆ ಸರಿಯಲಿವೆಯೆಂದು ಸ್ಥಳೀಯರು ಹಾಗೂ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಡಲಿನಲ್ಲಿ ಎದ್ದುನಿಲ್ಲಲಿರುವ ಈ ಪ್ರತಿಮೆಯ ವೀಕ್ಷಣೆಗಾಗಿ ಪ್ರವಾಸಿಗರನ್ನು ಕೊಂಡೊಯ್ಯಲು ದೋಣಿಗಳು ನಿರಂತರವಾಗಿ ಸಂಚರಿಸಲಿರುವುದರಿಂದ ಪ್ರದೇಶದಲ್ಲಿ ಮತ್ಸ ಸಂಕುಲಗಳು ಕೆಲವೇ ವರ್ಷಗಳಲ್ಲಿ ನಶಿಸಲಿವೆಯೆಂದು ಅವರು ಹೇಳುತ್ತಾರೆ.
ನಾವು ಹಲವು ತಲೆಮಾರುಗಳಿಂದೀಚೆಗೆ ಮೀನುಗಾರಿಕೆಯಲ್ಲಿ ತೊಡಗಿದ್ದೇವೆ. ಇದು ನಮ್ಮ ಉದ್ಯಮವಾಗಿದೆ. ಆದರೆ ಈಗ ನಮ್ಮ ಜೀವನೋಪಾಯ ಗಂಡಾಂತರದಲ್ಲಿದೆಯೆಂದು, ಸ್ಥಳೀಯ ಮೀನುಗಾರರಾದ ಕೃಷ್ಣ ತಾಂಡೇಲ್ ಹೇಳುತ್ತಾರೆ. ವಿಗ್ರಹವನ್ನು ಕಡಲ ನಡುವಿನಲ್ಲಿ ನಿರ್ಮಿಸುವ ಬದಲು ನೆಲದ ಮೇಲೆ ನಿರ್ಮಿಸುವಂತೆ ಅವರು ಆಗ್ರಹಿಸಿದ್ದಾರೆ.
2021ರೊಳಗೆ ಪೂರ್ಣಗೊಳ್ಳಲಿರುವ ಈ ಯೋಜನೆಯು ಮುಂಬೈನ ಅಭೂತಪೂರ್ವವಾದ ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ಅಗಾಧವಾದ ಹಾನಿಯನ್ನುಂಟು ಮಾಡಲಿದೆಯೆಂದು ಪರಿಸರವಾದಿಗಳು ಆಪಾದಿಸಿದ್ದಾರೆ.
‘‘ಇಲ್ಲಿ ವೈವಿಧ್ಯಮಯವಾದ ಮತ್ಸ, ಪ್ರಾಣಿ ಹಾಗೂ ಅಕಶೇರುಕ ಜೀವಸಂಪತ್ತಿದೆ. ಮೀನುಗಾರಿಕೆ, ಚರಂಡಿವ್ಯವಸ್ಥೆ ಹಾಗೂ ಸಮುದ್ರದಲೆಗಳ ಪ್ರವಾಹವು ಬದಲಾವಣೆಗೊಳ್ಳಲಿದೆ’’ ಎಂದು ವನ್ಯಜೀವಿ ಶಾಸ್ತ್ರಜ್ಞ ಆನಂದ್ ಪೆಂಧಾರ್‌ಕರ್ ಎಚ್ಚರಿಕೆ ನೀಡಿದ್ದಾರೆ. ‘‘ನಗರದ ಆಹಾರ ನೆಲೆಗಟ್ಟಿನ ಮೇಲೆಯೇ ಇದರ ಪರಿಣಾಮವಾಗಲಿದೆ. ಇದರಿಂದ ಅಗಾಧ ಪ್ರಮಾಣದ ಹಾನಿಯಾಗಲಿದೆ’’ ಎಂದವರು ಹೇಳಿದ್ದಾರೆ.
ಮುಂಬೈ ಮಹಾನಗರದಲ್ಲಿ ಈಗಾಗಲೇ ಹಲವಾರು ಸಣ್ಣ ಗಾತ್ರದ ಶಿವಾಜಿ ಸ್ಮಾರಕಗಳಿರುವಾಗ, ಇಷ್ಟೊಂದು ದುಬಾರಿ ವೆಚ್ಚದ ಪ್ರತಿಮೆಯನ್ನು ನಿರ್ಮಿಸುವ ಅವಶ್ಯಕತೆಯಾದರೂ ಏನಿದೆಯೆಂದು ಇನ್ನು ಕೆಲವರ ಪ್ರಶ್ನೆಯಾಗಿದೆ. ಮಹಾನಗರದ ವಿಮಾನನಿಲ್ದಾಣ, ಮುಖ್ಯ ರೈಲು ನಿಲ್ದಾಣ ಹಾಗೂ ಮ್ಯೂಸಿಯಂಗೂ ಈಗಾಗಲೇ ಈ ಮರಾಠ ಚಕ್ರವರ್ತಿಯ ಹೆಸರಿಡಲಾಗಿದೆ. ಜೊತೆಗೆ ಶಿವಾಜಿ ಪಾರ್ಕ್ ಕೂಡಾ ಇದೆ.
ಈ ಪ್ರತಿಮೆಯನ್ನು ನಿರ್ಮಿಸುವ ಖರ್ಚಿನಲ್ಲಿ ಕಿರುನೀರಾವರಿ ಯೋಜನೆಯನ್ನು ಕೈಗೊಂಡು ಬರಗಾಲ ಪೀಡಿತ ರಾಜ್ಯದ ಸಹಸ್ರಾರು ರೈತರಿಗೆ ನೀರನ್ನು ಒದಗಿಸಬಹುದಾಗಿದೆಯೆಂದು, ಪತ್ರಿಕೋದ್ಯಮದ ದತ್ತಾಂಶಗಳ ಕುರಿತ ವೆಬ್‌ಸೈಟ್ ‘ಇಂಡಿಯಾಸ್ಪೆಂಡ್’ ವರದಿ ಮಾಡಿದೆ. ಇದೇ ಮೊತ್ತದಲ್ಲಿ ಶಿಥಿಲಗೊಂಡಿರುವ ಶಿವಾಜಿ ಯುಗದ ಡಜನ್‌ಗಟ್ಟಲೆ ಕೋಟೆ,ಕೊತ್ತಲಗಳನ್ನು ಜೀರ್ಣೋದ್ಧಾರಗೊಳಿಸಬಹುದೆಂದು ವರದಿ ಹೇಳಿದೆ.
ಆದರೆ ಈ ಬೃಹತ್ ಪ್ರತಿಮೆಯ ನಿರ್ಮಾಣದಿಂದ ಪರಿಸರಕ್ಕೆ ಹಾನಿಯುಂಟಾಗಲಿದೆಯೆಂಬ ಪರಿಸರವಾದಿಗಳ ಆತಂಕವನ್ನು ಬಿಜೆಪಿ ನೇತೃತ್ವದ ಸರಕಾರ ಸಾರಾಸಗಟಾಗಿ ತಳ್ಳಿಹಾಕಿದೆ. ಈ ಬೃಹತ್ ಪ್ರತಿಮೆಯು ಮಹಾನಗರದ ಪ್ರಮುಖ ಆಕರ್ಷಣೆಯಾಗಲಿದ್ದು, ದಿನಂಪ್ರತಿ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಆಕರ್ಷಿಸಲಿದೆಯೆಂದು ಹೇಳಿಕೊಂಡಿದೆ.
ಅಮೆರಿಕದ ‘ಸ್ಟಾಚ್ಯೂ ಆಫ್ ಲಿಬರ್ಟಿ’ (ಸ್ವಾತಂತ್ರದ ಪ್ರತಿಮೆ)ಗೆ ಸರಿಸಾಟಿಯಾದಂತಹ ‘ಮಹಾನ್’ ವಿಗ್ರಹ ಇದಾಗಲಿದ್ದು ಪ್ರವಾಸೋದ್ಯಮದ ಮೂಲಕ ಬೊಕ್ಕಸಕ್ಕೆ ಆದಾಯ ತರಲಿದೆಯಂದು ಬಿಜೆಪಿ ವಕ್ತಾರೆ ಶೈನಾ ಎನ್‌ಸಿ ಹೇಳುತ್ತಾರೆ. ಶಿವಾಜಿಯು ಭಾರತದ ಚೊಚ್ಚಲ ನೌಕಾಪಡೆಯನ್ನು ನಿರ್ಮಿಸಿರುವುದರಿಂದ, ಅವರ ಪ್ರತಿಮೆಯ ಸ್ಥಾಪನೆಗೆ ಸಮುದ್ರ ಅತ್ಯುತ್ತಮ ತಾಣವಾಗಿದೆಯೆಂದು ಶಿವಸೇನೆಯ ಸಂಜಯ್ ರಾವತ್ ಹೇಳುತ್ತಾರೆ.
ನೆರೆಯ ರಾಜ್ಯವಾದ ಗುಜರಾತ್‌ನಲ್ಲಿ ಭಾರತದ ಪ್ರಮುಖ ಸ್ವಾತಂತ್ರ ಹೋರಾಟಗಾರರಲ್ಲೊಬ್ಬರಾದ ವಲ್ಲಭಭಾಯ್ ಪಟೇಲ್ ಅವರ 182 ಅಡಿ ಎತ್ತರದ ಪ್ರತಿಮೆಯನ್ನು ಅಲ್ಲಿನ ಬಿಜೆಪಿ ಸರಕಾರವು ನಿರ್ಮಿಸುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರವು ಶಿವಾಜಿ ಪ್ರತಿಮೆ ಸ್ಥಾಪನೆಯ ನಿರ್ಧಾರ ಮಾಡಿದೆ.
-ವಿಸ್ಮಯ