ಕಪ್ಪತಗಿರಿಯೆಂಬ ಚಿನ್ನದ ಬೆರಗೂ ಮೈನಿಂಗ್ ಲಾಬಿಯೂ..

ಭಾಗ-2
ಬಲ್ಡೋಟಾ ಕಂಪೆನಿಯಂತಹ ಹಲವು ಕಂಪೆನಿಗಳು ಇಂದು ಚಿನ್ನದ ಗಣಿಗಾರಿಕೆಗಾಗಿ ಮಾಡುತ್ತಿರುವ ಲಾಬಿಗಳು ಕಪ್ಪತಗಿರಿಯ ಶ್ರೇಣಿಯ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಗಣಿಗಾರಿಕೆಗೆ ಒಪ್ಪಿಗೆ ಪಡೆಯಲು ಅಷ್ಟೇ ಕುತರ್ಕದ ವ್ಯಾವಹಾರಿಕ ಪ್ರಯತ್ನವನ್ನು ಮಾಡುತ್ತಿವೆ. ಇಂತಹ ಪ್ರಯತ್ನದ ಫಲವಾಗಿ ಅದು ಅಷ್ಟೇ ಯಶಸ್ವಿ ಹೆಜ್ಜೆಗಳನ್ನು ಇಡುತ್ತಿವೆ.
ಇನ್ನು ಈ ಕಪ್ಪತಗಿರಿಯ ವಿಷಯಕ್ಕೆ ಬರುವುದಾದರೆ ಈ ಶ್ರೇಣಿ ಇಡೀ ಉತ್ತರ ಕರ್ನಾಟಕಕ್ಕೆ ಕಿರೀಟ ಪ್ರಾಯದಂತಿದೆ. ಇದು ಗದುಗಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರ ಪ್ರದೇಶದವರೆಗೆ ಹಬ್ಬಿದ್ದು, ಸುಮಾರು 17,872 ಹೆಕ್ಟೇರ್ ಪ್ರದೇಶ ಗದಗ, ಮುಂಡರಗಿ, ಶಿರಹಟ್ಟಿ ತಾಲೂಕುಗಳಲ್ಲಿ ಬಿಡಿ ಬಿಡಿಯಾಗಿ ಹಬ್ಬಿಕೊಂಡಿದೆ. ಅಪಾರ ಪ್ರಮಾಣದ ಖನಿಜ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಇದು, ಈ ಭಾಗದ ಪರಿಸರ ಸುಸ್ಥಿರತೆಗೂ ಗಣನೀಯವಾದ ಕೊಡುಗೆಯನ್ನು ನೀಡಿದೆ. ಅಪರೂಪದ ಸಸ್ಯ ತಳಿಗಳ ಬೆಳವಣಿಗೆಗೆ ಈ ಪ್ರದೇಶ ವ್ಯಾಪಕವಾದ ಕೊಡುಗೆಯನ್ನು ನೀಡಿದೆ. ಕಪ್ಪತಗುಡ್ಡದ ತಪ್ಪಲಿನಲ್ಲಿರುವ ಗಂಗಿಬಾಯಿಮಠದಲ್ಲಿ ಪಾರಂಪರಿಕ ವೈದ್ಯರಾಗಿರುವ ಗುರುಶಾಂತಯ್ಯ ಸ್ವಾಮಿ ಇಲ್ಲಿನ ಔಷಧಿ ಸಸ್ಯಗಳು ಪಶ್ಚಿಮಘಟ್ಟ ಪ್ರದೇಶದ ಸಸ್ಯತಳಿಗಿಂತಲೂ ಪರಿಣಾಮಕಾರಿಯಾಗಿರುವ ಮಹತ್ವವನ್ನು ತಿಳಿಸುತ್ತಾರೆ. ಇನ್ನು ಇಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಪವನ ವಿದ್ಯುಚ್ಛಕ್ತಿ ಕೇಂದ್ರಗಳು, ಮೀಸಲು ಅರಣ್ಯಪ್ರದೇಶದ ಸ್ಥಾನಮಾನ ಹಾಗೂ ಈ ಗಿರಿಯ ತಪ್ಪಲಿನಲ್ಲಿರುವ ಜನರ ಜೀವನ ಮಟ್ಟದ ವಿಚಾರಗಳಿಗೆ ಸಂಬಂಧಿಸಿದಂತೆ ಗಂಗೀಬಾಯಿ ಮಠದ ಗುರುಶಾಂತಯ್ಯಸ್ವಾಮಿ ಹಾಗೂ ಕಪ್ಪತಗುಡ್ದದ ಕಪ್ಪತ ಮಲ್ಲಯ್ಯ ದೇವಸ್ಥಾನದ ಮಲ್ಲಿಕಾರ್ಜುನಯ್ಯ ಸ್ವಾಮಿ ಅವರನ್ನು ಮಾತಿಗಿಳಿಸಿ ದಾಗ, ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಈ ಪ್ರದೇಶವನ್ನು ಬಿಟ್ಟುಕೊಡಬಾರದು ಎನ್ನುವುದು ಇವರ ಒಮ್ಮತದ ಅಭಿಪ್ರಾಯವಾಗಿತ್ತು.
ಅಲ್ಲದೆ ಈಗಾಗಲೇ ಹಲವು ದಶಕಗಳಿಂದ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆದ ನಿದರ್ಶನ ಗಳನ್ನು ಸಹಿತ ಈ ಸ್ವಾಮಿಗಳು ಬಿಡಿಬಿಡಿಯಾಗಿ ತೆರೆದಿಟ್ಟರು. ಅವರು ಪ್ರಸ್ತಾಪಿಸಿದ ಎಲ್ಲ ಕಂಪೆನಿಗಳನ್ನು ಸರಕಾರದ ದಾಖಲೆಗಳ ಮೂಲಕ ನಾನು ಸ್ಪಷ್ಟಪಡಿಸಿಕೊಂಡಾಗ ಅರ್ಥವಾದ ಸಂಗತಿಯಿಷ್ಟೇ, ಕಪ್ಪತಗಿರಿಯಲ್ಲಿನ ವಿಫುಲ ಖನಿಜ ಸಂಪನ್ಮೂಲವು ಬ್ರಿಟಿಷರ ವಸಾಹತು ಕಾಲದಿಂದಲೂ ಎಲ್ಲರ ಕಣ್ಣು ಕೋರೈಸುತ್ತಿದೆ. ಕಾರಣ ಇಲ್ಲಿರುವ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣದಂತಹ ಲೋಹಗಳು, ಸ್ಫಟಿಕ ಶಿಲೆಯಂತಹ ಅಪರೂಪದ ಹರಳುಗಳು. ಇವುಗಳ ವಾಣಿಜ್ಯ ಹಿತಾಸಕ್ತಿಯಿಂದಾಗಿ ಲಾಬಿಯು ಈ ಪ್ರದೇಶದ ಮೇಲೆ ನಿರಂತರವಾಗಿ ನಡೆಯುತ್ತಿದೆ. ಹಿಂದೆ ಅದು ಈ ಭಾಗಕ್ಕೆ ಪೊಸ್ಕೊ ರೂಪದಲ್ಲಿ ಬಂದಿದ್ದರೆ, ಇಂದು ಬಲ್ಡೋಟಾ ಕಂಪೆನಿಯ ಮೂಲಕ ಬಂದಿದೆ. ಇದನ್ನು ಗಮನಿಸಿದರೆ ಈ ಪ್ರದೇಶದ ಮೇಲಿರುವ ವ್ಯಾವಹಾರಿಕ ಕೊಂಡುಕೊಳ್ಳುವಿಕೆ ಅರ್ಥವನ್ನು ಬೇರೆ ರೀತಿಯಲ್ಲಿ ವಿಸ್ತರಿಸುತ್ತದೆ.
ಈ ಎಲ್ಲ ಅರ್ಥೈಸುವಿಕೆಗಳನ್ನು ನಾವು ಇಂದು ಐತಿಹಾಸಿಕ ಹಿನ್ನೆಲೆಯಿಂದ ಬಂದಂತಹ ಬಳವಳಿಗಳ ಮೂಲಕ ಕೆದಕುತ್ತಾ ಹೊರಟಾಗ ಅದರಲ್ಲೂ ಬ್ರಿಟಿಷರೇ ಬಿಟ್ಟು ಹೋದಂತಹ ಗ್ಯಾಜೆಟಿಯರ್‌ನಂತಹ ಮಹತ್ವದ ದಾಖಲೆಗಳನ್ನು ನೋಡಿದಾಗ ಕಪ್ಪತಗಿರಿಯ ಶಿಲಾಪದರುಗಳಲ್ಲಿ ಮೊದಲಬಾರಿಗೆ ಚಿನ್ನದ ಅಂಶವಿರುವುದು ಕಂಡುಬರುತ್ತದೆ. ಕ್ರಿ.ಶ. 1839ರಲ್ಲಿ ಧಾರವಾಡದ ಜಿಲ್ಲಾಧಿಕಾರಿ ತಾಮ್ರ, ಬೆಳ್ಳಿ ಹಾಗೂ ಚಿನ್ನ ಮಿಶ್ರಿತವಿರುವ ಮರಳುಶಿಲೆಯನ್ನು ಹೆಚ್ಚಿನ ಸಂಶೋಧನೆಗಾಗಿ ಸರಕಾರಕ್ಕೆ ಕಳುಹಿಸುತ್ತಾರೆ. ನಂತರ 1856ರಲ್ಲಿ ಬೆಳಗಾವಿಯ ಅಸಿಸ್ಟೆಂಟ್ ಕಲೆಕ್ಟರ್ ಜಿ.ಡಬ್ಲ್ಯೂ.ಎಲಿಯಟ್ ಎಂಬವರನ್ನು ಚಿನ್ನದ ಉತ್ಕನನಕ್ಕೆ ವಿಶೇಷ ಅಧಿಕಾರಿಯಾಗಿ ನೇಮಿಸುತ್ತಾರೆ. ಮುಂದೆ 1861ರಲ್ಲಿ ಸಿ. ಲೇಸೋನೆಪ್ ಎಂಬ ಆಸ್ಟ್ರೇಲಿಯಾದ ಚಿನ್ನದ ಗಣಿತಜ್ಞ ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಇಂದಿನ ಶಿರಹಟ್ಟಿ ತಾಲೂಕಿನಲ್ಲಿರುವ ಸೊರಟೂರ ಭಾಗದಲ್ಲಿ ಚಿನ್ನವಿರುವ ಅಂಶವನ್ನು ಪತ್ತೆಹಚ್ಚಿ, ಅದನ್ನು ಸರಕಾರದ ಭಾಗವಾಗಿ ಗಣಿಗಾರಿಕೆ ನಡೆಸುವುದಕ್ಕಿಂತ ಬದಲು ಖಾಸಗಿ ಕಂಪೆನಿಗಳ ಜೊತೆ ಜಂಟಿಯಾಗಿ ನಡೆಸಬೇಕೆಂದು ಸರಕಾರಕ್ಕೆ ಸಲಹೆ ನೀಡುತ್ತಾರೆ.
ನಂತರ ಬಂದ ಆರ್.ಬಿ ಫೂಟೇ.(ಎಫ್.ಜಿ.ಎಸ್) ಅತ್ತಿಕಟ್ಟಿ, ಸೊರಟೂರ, ಧೋಣಿ, ಡಂಬಳ, ವೆಂಕಟಾಪುರ, ಜಲ್ಲಿಗೇರಿ, ಹರ್ತಿ, ಕಣವಿಯಂತಹ ಪ್ರದೇಶಗಳಲ್ಲಿ ಜಲಗಾರರ ಸಹಾಯದಿಂದ ಚಿನ್ನವನ್ನು ಬೇರ್ಪಡಿಸುವ ಕಾರ್ಯಕ್ಕೆ ಚಾಲನೆ ನೀಡುತ್ತಾನೆ. ಇಂತಹ ಸಂಶೋಧನೆಯ ಪ್ರತಿಫಲವಾಗಿ ಹಲವು ಬ್ರಿಟಿಷ್ ಕಂಪೆನಿಗಳು ಅದರಲ್ಲೂ ಪ್ರಮುಖವಾಗಿ ಧಾರವಾಡ ಗೋಲ್ಡ್ ಮೈನ್ಸ್ (1906-1910), ಚಾಂಪಿಯನ್ ರೀಫ್ ಗೋಲ್ಡ್ ಮೈನಿಂಗ್ ಕಂಪೆನಿ (1906-1909), ರೋಡ್ ಬ್ಲಾಕ್ ಗೋಲ್ಡ್ ಮೈನ್ಸ್ ಆಫ್ ಇಂಡಿಯಾ(1905-1907), ಧಾರವಾಡ್ ರೀಫ್ ಗೋಲ್ಡ್ ಮೈನಿಂಗ್ ಕಂಪೆನಿ (1904-1909), ಗೋಲ್ಡ್ ಫೀಲ್ಡ್ಸ್ ಆಫ್ ಮೈಸೂರ್ ಆ್ಯಂಡ್ ಜನರಲ್ ಎಕ್ಸ್‌ಪ್ಲೊರೇಶನ್(1906-1908), ಸಾಂಗ್ಲಿ ಗೋಲ್ಡ್ ಮೈನ್ಸ್(1903-1909) ಈ ಕಪ್ಪತಗಿರಿಯ ಭೂ ಪ್ರದೇಶದಲ್ಲಿ ಹೇರಳವಾದ ಗಣಿಗಾರಿಕೆ ನಡೆಸಿರುವುದನ್ನು ನಾವು ಗಮನಿಸಬಹುದು.
ಇದರಿಂದಾಗಿ ಇಂದಿಗೂ ಕೂಡಾ ಈ ಪ್ರದೇಶದಲ್ಲಿ ಮಳೆ ಜೋರಾಗಿ ಸುರಿದಾಗ ಚಿನ್ನವನ್ನು ಹುಡುಕುವ ಪರಿಪಾಠವಿದೆ. ಬ್ರಿಟಿಷರ ಕಾಲದ ಗಣಿಗಾರಿಕೆ ಕುರುಹುಗಳನ್ನು ಇಂದಿಗೂ ಜಲ್ಲಿಗೇರಿ, ಮಹಾಲಿಂಗಪುರ ಅಥವಾ ಮಹಾಲಿಂಗೇಶ್ವರಗುಡ್ಡದ ಭಾಗಗಳಲ್ಲಿ ನಾವು ಕಾಣಬಹುದಾಗಿದೆ. ಆದ್ದರಿಂದಲೇ, ಈ ಭಾಗದಲ್ಲಿ ಒಂದು ಜನಪ್ರಿಯ ಆಡು ಮಾತಿದೆ ‘‘ತಮ್ಮಾ... ಬಾಳ್ ಹಾರಾಡಿದ್ರ... ಬಂಗಾರದ ಗುಂಡಿನ ನಿನಗ್..’’ ಎಂದು. ಇದು ಇಲ್ಲಿರುವ ಆಳದ ಗಣಿಗಾರಿಕೆಗೆ ಕನ್ನಡಿ ಹಿಡಿದಂತಿದೆ.
ಇಂತಹ ದೀರ್ಘವಾದ ಹಿನ್ನೆಲೆಗಳೊಂದಿಗೆ ಗಣಿಕಾರಿಕೆಯು ಇಂದಿಗೂ ನಿರಂತರವಾಗಿ ಮುಂದುವರಿಸಿವೆ. ಇದನ್ನು ನಾವು ಇಂದಿನ ಸರಕಾರಿ ಅಂಕಿ ಅಂಶಗಳಲ್ಲಿ ಕಾಣಬಹುದು. ಕಪ್ಪತಗುಡ್ಡದಲ್ಲಿ ಇತ್ತೀಚೆಗಿನ ಕಳೆದೆರಡು ದಶಕಗಳಲ್ಲಿ ಹಲವಾರು ಖಾಸಗಿ ಹಾಗೂ ಸರಕಾರಿ ಕಂಪೆನಿಗಳು ಗಣಿಗಾರಿಕೆಯನ್ನು ನಡೆಸಿರುವುದು ದಾಖಲೆಗಳಲ್ಲಿ ಕಾಣಬಹುದು. ಇದರಲ್ಲಿ ಪ್ರಮುಖವಾಗಿ ಕಬ್ಬಿಣ, ಚಿನ್ನ, ಸ್ಫಟಿಕ ಗಣಿಗಾರಿಕೆಗೆ ಒಳಪಟ್ಟಿವೆ. ಇದರ ಪರಿಣಾಮದಿಂದಾಗಿ ಗದಗ, ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿರುವ ಹಳ್ಳಿಗಳ ಅಂತರ್ಜಲದಲ್ಲಿ ಫ್ಲೋರೈಡ್ ಅಂಶ ಇಂದು ಕಂಡುಬಂದಿದೆ. ಈ ಭಾಗದ ಜನರು ಹಲ್ಲು ಮತ್ತು ಮೂಳೆ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವುದೇ ಇದಕ್ಕೆ ಸಾಕ್ಷಿ.
ಇಂತಹ ವಿನಾಶಕಾರಕ ಪರಿಣಾಮಗಳ ಅನುಭವವಿದ್ದರೂ ಇವೆಲ್ಲವುಗಳ ಮಧ್ಯದಲ್ಲಿಯೇ 2010ರ ಆಗಸ್ಟ್‌ನಲ್ಲಿ ಭಾರತ ಸರಕಾರದ ಭೂ ಮತ್ತು ಗಣಿ ಮಂತ್ರಾಲಯ ಖಾಸಗಿ ಕಂಪೆನಿಯಾದ ‘ಬಲ್ಡೋಟಾ’ ಕಂಪೆನಿಗೆ ಗದುಗಿನ ಕಪ್ಪತಗುಡ್ಡ ಪ್ರದೇಶದ ಹೊಸೂರು -ಯಲಿಶಿರೂರ-ವೆಂಕಟಾಪುರ ಭಾಗದಲ್ಲಿನ ಸುಮಾರು 5.06 ಚದರ ಕಿ.ಮೀ. ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಅನುಮತಿ ನೀಡಿದೆ. ಈ ಒಪ್ಪಿಗೆಯ ಹಿನ್ನೆಲೆಯಲ್ಲಿ ಈ ಭಾಗದ ಅತ್ತಿಕಟ್ಟಿ ಲಂಬಾಣಿ ತಾಂಡಾದ ಕೆಲವು ರೈತರು ಹೆಚ್ಚಿನ ಹಣದ ಆಸೆಗಾಗಿ ತಮ್ಮ ಜಮೀನನ್ನು ಕಂಪೆನಿಗೆ ಮಾರಿದ್ದುಂಟು. ಅಲ್ಲದೆ, ಈಗಾಗಲೇ ಬಲ್ಡೋಟಾ ಕಂಪೆನಿಯು ಈ ವ್ಯಾಪ್ತಿ ಪ್ರದೇಶದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಕಟ್ಟಡಗಳನ್ನು ಕಟ್ಟುವ ಕೆಲಸವನ್ನು 2012ರಿಂದ ಮಾಡುತ್ತಿದೆ. ಇನ್ನು ಗಣಿಗಾರಿಕೆಯ ಪ್ರಕ್ರಿಯೆಗೆ ಚಾಲನೆ ನೀಡಲು ರಾಜ್ಯ ಸರಕಾರದ ಒಪ್ಪಿಗೆಯೊಂದೇ ಬಾಕಿ ಇದೆ.
ಆದ್ದರಿಂದ, ಈ ಬಲ್ಡೋಟಾ ಕಂಪೆನಿಯಂತಹ ಹಲವು ಕಂಪೆನಿಗಳು ಇಂದು ಚಿನ್ನದ ಗಣಿಗಾರಿಕೆಗಾಗಿ ಮಾಡುತ್ತಿರುವ ಲಾಬಿಗಳು ಕಪ್ಪತಗಿರಿಯ ಶ್ರೇಣಿಯ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಗಣಿಗಾರಿಕೆಗೆ ಒಪ್ಪಿಗೆ ಪಡೆಯಲು ಅಷ್ಟೇ ಕುತರ್ಕದ ವ್ಯಾವಹಾರಿಕ ಪ್ರಯತ್ನವನ್ನು ಮಾಡುತ್ತಿವೆ. ಇಂತಹ ಪ್ರಯತ್ನದ ಫಲವಾಗಿ ಅದು ಅಷ್ಟೇ ಯಶಸ್ವಿ ಹೆಜ್ಜೆಗಳನ್ನು ಇಡುತ್ತಿವೆ. ಅಲ್ಲದೇ ಈಗಾಗಲೇ ಬಳ್ಳಾರಿಯ ಒಡಲನ್ನು ಬರಿದು ಮಾಡಿ ಅಲ್ಲಿನ ಜೀವವೈವಿಧ್ಯವನ್ನು ಹಾಳು ಮಾಡಿರುವ ಇಂತಹ ಕಂಪೆನಿಗಳು ಇಂದು ನೆರೆಯ ಜಿಲ್ಲೆಗಳಿಗೂ ತಮ್ಮ ಜಾಡನ್ನು ವಿಸ್ತರಿಸುತ್ತಿವೆ. ಇದರ ಪ್ರತಿಫಲವಾಗಿ ಇಂದು ಬಲ್ಡೋಟಾ ಕಂಪೆನಿಯು ಚಿನ್ನದ ಗಣಿಗಾರಿಕೆಉಂದ ಹಿಡಿದು ಕಬ್ಬಿಣ ಗಣಿಗಾರಿಕೆಯಲ್ಲೂ ತೊಡಗಿದೆ. ಅಲ್ಲದೆ ಈ ಗಣಿಗಾರಿಕೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಹಡಗು, ವಿಮಾನಯಾನ, ಪವನಶಕ್ತಿ ಉದ್ಯಮಗಳನ್ನು ಪ್ರಾರಂಭಿಸಿದೆ. ಆದ್ದರಿಂದ ಇಂದು ಕರ್ನಾಟಕದ ಗದಗ, ಚಿತ್ರದುರ್ಗ, ತುಮಕೂರು ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಪವನಶಕ್ತಿ ಕೇಂದ್ರಗಳನ್ನು ಆರಂಭಿಸುವ ಮೂಲಕ ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ಈ ಪವನ ವಿದ್ಯುತ್ ಕೇಂದ್ರಗಳು ಚಿನ್ನ, ಕಬ್ಬಿಣ ಮೊದಲಾದ ಖನಿಜ ಸಂಪನ್ಮೂಲಗಳು ಹೇರಳ ವಾಗಿರುವ ಕಡೆಗಳಲ್ಲಿಯೇ ಇವೆ ಎಂಬುದನ್ನು ಗಮನಿಸಬೇಕಾದ ಅಂಶ.
ಈ ಸಂಗತಿಗಳನ್ನು ಗಮನಿಸಿದಾಗ ಕಪ್ಪತಗಿರಿಯ ಭಾಗದ ಬಹುತೇಕ ಹಳ್ಳಿಗಳ ಜನರು ಆತಂಕದಲ್ಲಿರುವುದು ಸುಸ್ಪಷ್ಟ. ಕಾರಣ ಅವರು ಭೂಮಿಯ ಮೇಲಿರುವ ಉಳುಮೆಯ ಹಕ್ಕನ್ನು ಕಳೆದುಕೊಳ್ಳುವ ಭೀತಿ ಒಂದಡೆಯಾದರೆ ಇನ್ನೊಂದೆಡೆೆ ಗಣಿಗಾರಿಕೆಯಿಂದಾಗಿ ತಮ್ಮ ಮೇಲಾಗುವ ದುಷ್ಪರಿಣಾಮ. ಇವೆಲ್ಲವುಗಳ ನಡುವೆ ಸರಕಾರ ಇಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ಈ ಮೀಸಲು ಅರಣ್ಯಪ್ರದೇಶ ಘೋಷಿಸುವ ಮೊದಲು ಇಲ್ಲಿನ ನಾಗರಿಕ ಸಮುದಾಯದ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಇನ್ನು ಕಪ್ಪತಗಿರಿಯ ಈ ಗಣಿಗಾರಿಕೆಯ ಕುರಿತು ಸಮಗ್ರವಾಗಿ ಅಧ್ಯಯನ ಮಾಡ ಹೊರಟಾಗ ಅದು ಕ್ಷೇತ್ರ ಕಾರ್ಯ ಅಧ್ಯಯನವಿರಬಹುದು ಅಥವಾ ಅಕಾಡಮಿಕ್ ಸ್ಟಡಿಯಾಗಿರ ಬಹುದು ಈ ಪ್ರದೇಶ ತನ್ನ ಒಡಲಡಿಯಲ್ಲಿ ಗಣಿಗಾರಿಕೆಯ ಭಯಾನಕ ಕಥನಗಳ ಅನುಭವಗಳನ್ನು ಇಟ್ಟುಕೊಂಡಿದ್ದು ತಿಳಿಯುತ್ತದೆ. ಇಂತಹ ಅನುಭವಗಳ ಸಂಖ್ಯೆ ಇಮ್ಮಡಿಯಾಗುವ ಮೊದಲು ಈ ಸರಕಾರಗಳು ಮೈನಿಂಗ್ ಲಾಬಿಯ ಒತ್ತಡಕ್ಕೆ ಮಣಿಯದೆ ಜವಾಬ್ದಾರಿಯುತವಾದ ಮುನ್ನೆಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ. ನಮ್ಮ ನೆಲ-ಜಲದ ಸಂಬಂಧಗಳ ದಿಕ್ಕು ಬದಲಿಸುವ ಹಲವು ಖಾಸಗಿ ವ್ಯಾಮೋಹಗಳಿಗೆ ಪಾಠ ಕಲಿಸುವಂತಹ ಇಚ್ಛಾಶಕ್ತಿ ನಿಜಕ್ಕೂ ಈ ಸರಕಾರಗಳಲ್ಲಿವೆಯೇ? ಇದ್ದಿದ್ದರೆ ಖಂಡಿತ ಈ ಪರಿಸ್ಥಿತಿ ಇಂದು ಕಪ್ಪತಗಿರಿಗೆ ಬರುತ್ತಿರಲಿಲ್ಲವೇನೋ.?