ಸೈಯದ್ ಶಹಾಬುದ್ದೀನ್ ದೇಶದ ಹಿರಿಯ ರಾಜಕೀಯ ಮುತ್ಸದ್ದಿಯ ನಿರ್ಗಮನ

ಭಾರತೀಯ ಮುಸ್ಲಿಂ ಸಮುದಾಯದ ಬಗ್ಗೆ ಅಸಾಮಾನ್ಯ ಕೆಲಸ ಮಾಡುವ ಮೂಲಕ ಶಹಾಬುದ್ದೀನ್ ಗಮನ ಸೆಳೆದಿದ್ದರು. ಭಾರತೀಯ ಮುಸ್ಲಿಂ ಸಮುದಾಯ, ಸಕ್ರಿಯ ನಾಯಕತ್ವದ ಕೊರತೆಯಿಂದ ಕಂಗೆಟ್ಟಿದ್ದಾಗ, ಇತರ ಕೆಲವರ ಜತೆಗೆ ಸೇರಿ ಸೈಯದ್ ಶಹಾಬುದ್ದೀನ್, ಮುಸ್ಲಿಂ ಸಮಸ್ಯೆಗಳ ಬಗ್ಗೆ ಯಾವುದೇ ಪಕ್ಷಪಾತ ಅಥವಾ ಭೀತಿ ಇಲ್ಲದೆ ಮಾತನಾಡಿ ಗಮನ ಸೆಳೆದಿದ್ದರು.
ಖ್ಯಾತ ಮುಸ್ಲಿಂ ಮುಖಂಡ, ಚಿಂತಕ, ಆಡಳಿತಗಾರ ಹಾಗೂ ಮಾಜಿ ಸಂಸದ ಸೈಯದ್ ಶಹಾಬುದ್ದೀನ್ (82) ಈಗ ಇತಿಹಾಸ ಸೇರಿದ್ದಾರೆ. ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್)ಯ ನಿವೃತ್ತ ಅಧಿಕಾರಿಯಾದ ಇವರು, ಸೌದಿ ಅರೇಬಿಯಾ, ಅಮೆರಿಕ ಸೇರಿದಂತೆ ವಿವಿಧೆಡೆ ಭಾರತದ ರಾಯಭಾರ ಕಚೇರಿಗಳಲ್ಲಿ ವಿವಿಧ ಹೊಣೆಗಾರಿಕೆ ನಿಭಾಯಿಸಿದ್ದರು. ನೋಯ್ಡಾ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಇವರು ಕೊನೆಯುಸಿರೆಳೆಯುವುದರೊಂದಿಗೆ ನಿಜ ಅರ್ಥದ ರಾಷ್ಟ್ರೀಯ ಮುಸ್ಲಿಂ ಮುಖಂಡರೊಬ್ಬರನ್ನು ದೇಶ ಕಳೆದುಕೊಂಡಂತಾಗಿದೆ. ಹಲವು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಹಲವು ಬಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಎರಡು ಬಾರಿ ಸಂಸದರಾಗಿದ್ದ ಇವರು ಅನಾರೋಗ್ಯದ ನಡುವೆಯೂ ಆರು ದಶಕಗಳ ಕಾಲದಿಂದ ನಿರಂತರವಾಗಿ ನಡೆಸಿಕೊಂಡು ಬಂದ ಸಮಾಜಸೇವೆಯಲ್ಲಿ ಸಕ್ರಿಯರಾಗಿಯೇ ಉಳಿದಿದ್ದರು. ಸದಾ ಶ್ರಮಜೀವಿಯಾಗಿದ್ದ ಇವರು ಸಾಯುವ ಕೆಲ ವಾರಗಳ ಮೊದಲು ಕೂಡಾ ಹೊಸದಿಲ್ಲಿಯ ಜಾಮಿಯಾನಗರದ ಅಬುಲ್ ಫಝಲ್‌ನಲ್ಲಿರುವ ಆಲ್ ಇಂಡಿಯಾ ಮಜ್ಲಿಸ್ ಮುಶಾವರತ್ ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಭಾರತೀಯ ಮುಸ್ಲಿಂ ಸಮುದಾಯದ ಬಗ್ಗೆ ಅಸಾಮಾನ್ಯ ಕೆಲಸ ಮಾಡುವ ಮೂಲಕ ಶಹಾಬುದ್ದೀನ್ ಗಮನ ಸೆಳೆದಿದ್ದರು. ಭಾರತೀಯ ಮುಸ್ಲಿಂ ಸಮುದಾಯ, ಸಕ್ರಿಯ ನಾಯಕತ್ವದ ಕೊರತೆಯಿಂದ ಕಂಗೆಟ್ಟಿದ್ದಾಗ, ಇತರ ಕೆಲವರ ಜತೆಗೆ ಸೇರಿ ಸೈಯದ್ ಶಹಾಬುದ್ದೀನ್, ಮುಸ್ಲಿಂ ಸಮಸ್ಯೆಗಳ ಬಗ್ಗೆ ಯಾವುದೇ ಪಕ್ಷಪಾತ ಅಥವಾ ಭೀತಿ ಇಲ್ಲದೆ ಮಾತನಾಡಿ ಗಮನ ಸೆಳೆದಿದ್ದರು. ಪ್ರತಿಯೊಂದು ವಿಷಯದ ಬಗ್ಗೆ ಕೂಡಾ ತಮ್ಮದೇ ದೃಷ್ಟಿಕೋನ ಹೊಂದಿದ್ದ ಅವರು ಪ್ರಭಾವಶಾಲಿಯಾಗಿ ಅಭಿವ್ಯಕ್ತಪಡಿಸುತ್ತಿದ್ದರು.
‘ಮುಸ್ಲಿಂ ಇಂಡಿಯಾ’ ಎಂಬ ನಿಯತಕಾಲಿಕದ ಸಂಪಾದಕ- ಪ್ರಕಾಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು. 1983ರಲ್ಲಿ ಇದು ಕಾರ್ಯಾರಂಭ ಮಾಡಿದ್ದು, ಎರಡೂವರೆ ದಶಕಗಳ ಕಾಲ ನಡೆಸಿಕೊಂಡು ಬಂದಿದ್ದರು. ಆದರೆ ಸಂಪನ್ಮೂಲದ ಕೊರತೆ ಹಾಗೂ ಶಹಾಬುದ್ದೀನ್ ಅವರ ಅನಾರೋಗ್ಯದ ಕಾರಣದಿಂದ ಕ್ರಮೇಣ ಇದು ನಿಂತುಹೋಯಿತು. ಮುಸ್ಲಿಂ ವಿಷಯಗಳ ಬಗೆಗೆ ಸಮಗ್ರ ಮಾಹಿತಿ ನೀಡುವ ಮೂಲಕ ಗಮನ ಸೆಳೆದಿದ್ದ ಈ ನಿಯತಕಾಲಿಕ, ದೇಶ-ವಿದೇಶಗಳಲ್ಲಿ ಅಪಾರ ಸಂಖ್ಯೆಯ ಓದುಗವರ್ಗವನ್ನು ಸೃಷ್ಟಿಸಿತ್ತು.
ರಾಜಕೀಯ ಕ್ಷೇತ್ರದಲ್ಲೂ ಕಟ್ಟುನಿಟ್ಟಿಗೆ ಹೆಸರಾದ ಇವರು ವಿಶಿಷ್ಟ ಛಾಪು ಮೂಡಿಸಿದ್ದರು. ಇವರು ರಾಜಕೀಯದಲ್ಲಿ ಅತ್ಯುನ್ನತ ಹುದ್ದೆಗೆ ಏರುತ್ತಾರೆ ಎಂದು ಹಲವರು ಎಣಿಸಿದ್ದರು. ಆದರೆ ಭ್ರಷ್ಟಾಚಾರ ಹಾಗೂ ಲಂಚವನ್ನು ಎಲ್ಲಕ್ಕಿಂತ ಹೆಚ್ಚಾಗಿ ಅಸಹ್ಯಪಡುತ್ತಿದ್ದ ಕಾರಣದಿಂದ ರಾಜಕೀಯದಲ್ಲಿ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಲಿಲ್ಲ. ರಾಜಕೀಯದಲ್ಲಿ ಇವರ ವೈಫಲ್ಯಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಅವರು ಜನರ ಜತೆ ಸಂಬಂಧಗಳನ್ನು ನಿರ್ವಹಿಸಿಕೊಳ್ಳಲು ಸಾಧ್ಯವಾಗದಿದ್ದುದು. ಇಂದಿನ ರಾಜಕೀಯದಲ್ಲಿ ಮತದಾರರ ಜತೆ ನಿಕಟ ಸಂಪರ್ಕ ಹೊಂದುವುದು ಅನಿವಾರ್ಯವಾಗಿದ್ದು, ಆಡಳಿತಶಾಹಿ ಹಿನ್ನೆಲೆಯಿಂದ ಬಂದ ಇವರಿಗೆ ಇತರ ರಾಜಕಾರಣಿಗಳಂತೆ ಜನರ ಜತೆ ಬೆರೆಯಲು ಸಾಧ್ಯವಾಗಲಿಲ್ಲ.
ಬಾಬರಿ ಮಸೀದಿ ವಿಚಾರದಲ್ಲೂ ಇವರ ನಿಲುವು ಸ್ಪಷ್ಟವಾಗಿತ್ತು. ಅಯೋಧ್ಯೆಯಲ್ಲಿದ್ದ ಮಸೀದಿಯನ್ನು ಹಿಂದೂ ಮೂಲಭೂತವಾದಿಗಳು 1992ರ ಡಿಸೆಂಬರ್ 6ರಂದು ಧ್ವಂಸಗೊಳಿಸಿದ ಘಟನೆ, ಇಡೀ ದೇಶದ ಮುಸ್ಲಿಂ ಸಮುದಾಯದ ಜತೆ ಅವರು ನಿಕಟ ಬಾಂಧವ್ಯ ಬೆಳೆಸಲು ಕಾರಣವಾಯಿತು. ಈ ವಿವಾದವನ್ನು ಬೀದಿಗೆ ತರುವ ಮೂಲಕ ಬಾಬರಿ ಮಸೀದಿ ವಿಚಾರವನ್ನು ರಾಜಕೀಯಗೊಳಿಸಿದ್ದಾರೆ ಎಂದು ಹಲವರು ಟೀಕಿಸಿದರೂ, ಸಮಸ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸದಿದ್ದರೆ, ಇತರ ಪಕ್ಷಗಳು ದುರ್ಲಾಭ ಪಡೆಯುತ್ತಾರೆ ಎನ್ನುವುದು ಅವರ ಸ್ಪಷ್ಟ ನಿಲುವಾಗಿತ್ತು.
ಸೈಯದ್ ಶಹಾಬುದ್ದೀನ್, ‘ಆಲ್ ಇಂಡಿಯಾ ಮುಸ್ಲಿಂ ಮಜ್ಲಿಸ್ ಮುಶಾವರತ್’ ಅಧ್ಯಕ್ಷರಾಗಿ ಆಯ್ಕೆಯಾದರು. 2001ರ ಸುಮಾರಿಗೆ ಅವರು ಸಂಘಟನೆಯ ಅಧ್ಯಕ್ಷರಾಗಿ ನೇಮಕಗೊಂಡರು.
ಇತ್ತೀಚೆಗೆ ಸೈಯದ್ ಶಹಾಬುದ್ದೀನ್ ಅವರ ನಿರಂತರ ಮನವೊಲಿಕೆ ಪ್ರಯತ್ನದ ಬಳಿಕ ಈ ಎರಡೂ ಬಣಗಳು ಒಗ್ಗೂಡಿದ್ದವು. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಅವರ ಕನಸೂ ಆಗಿತ್ತು. ದಿಲ್ಲಿಯ ಮುಸ್ಲಿಂ ಬಾಹುಳ್ಯದ ಪ್ರದೇಶ ದಲ್ಲೇ ಮುಶಾವರತ್ ಕಚೇರಿಯನ್ನೂ ಆರಂಭಿಸುವ ಮೂಲಕ ಸಂಘಟನೆಗೆ ಔಪಚಾರಿಕ ಆಕಾರವನ್ನೂ ನೀಡಿದ್ದರು. ಅವರು ಇದರ ಅಧ್ಯಕ್ಷರಾಗಿಲ್ಲದಿದ್ದರೂ, ‘ಸಂಘಟನೆಯ ಜನಕ’ ಎಂಬ ಸ್ಥಾನದಲ್ಲಿ ನಿಂತಿದ್ದರು. ಇದಲ್ಲದೇ ಅವರು ಹಲವು ಧರ್ಮಕಾರ್ಯಗಳಲ್ಲಿ ಕೂಡಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
(ಲೇಖಕರು ViewsHeadlines.comನ ಸಂಪಾದಕರು)