ಜನಸಂಖ್ಯಾ ಪ್ರಗತಿಯ ಕೋಮುವಾದೀಕರಣ

ಆಸಕ್ತಿದಾಯಕ ವಿಚಾರವೆಂದರೆ 2001ರಿಂದ 2011ರ ಅವಧಿಯಲ್ಲಿ ಹಿಂದೂ ಜನಸಂಖ್ಯೆ 13.3 ಕೋಟಿಯಷ್ಟು ಹೆಚ್ಚಿದೆ. ಈ ಪ್ರಮಾಣ 2001ರಲ್ಲಿ ಇದ್ದ ಮುಸ್ಲಿಂ ಜನಸಂಖ್ಯೆಗೆ ಸಮಾನ. ಮುಸ್ಲಿಂ ಜನಸಂಖ್ಯೆ, ಹಿಂದೂಗಳ ಜನಸಂಖ್ಯೆಯನ್ನು ಮೀರಿಸುತ್ತದೆ ಎಂಬ ಭೀತಿಯನ್ನು ಮೌಖಿಕವಾಗಿ, ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟಿರುವುದು ಅರ್ಥಹೀನ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಸಮಾಜವನ್ನು ವಿಭಜಿಸುವ ಸಲುವಾಗಿ ಕೋಮುವಾದಿ ಶಕ್ತಿಗಳು ಜನಸಂಖ್ಯಾ ಪ್ರಗತಿ ಹಾಗೂ ಮತಾಂತರ ವಿಚಾರದಲ್ಲಿ ತಪ್ಪುತಿಳುವಳಿಕೆ ಹಾಗೂ ಪೂರ್ವಾಗ್ರಹವನ್ನು ಬಿತ್ತುತ್ತಿದ್ದಾರೆ. ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ‘‘ಹಿಂದೂಗಳು ಇತರರನ್ನು ಮತಾಂತರ ಮಾಡದ ಕಾರಣದಿಂದ ಹಿಂದೂ ಜನಸಂಖ್ಯೆ ದೇಶದಲ್ಲಿ ಇಳಿಕೆಯಾಗುತ್ತಿದೆ ಹಾಗೂ ನೆರೆದೇಶಗಳಿಗಿಂತ ಭಿನ್ನವಾಗಿ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ’’ ಎಂದು ಟ್ವೀಟ್ ಮಾಡುವ ಮೂಲಕ ಇದು ದೃಢಪಟ್ಟಿದೆ.
ಹಿಂದೂ ಜನಸಂಖ್ಯೆ ಇಳಿಕೆಯ ಹಾಗೂ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಳದ ಬಗೆಗಿನ ಅಪಾಯವನ್ನು ಆಗಾಗ ಎಚ್ಚರಿಸಲಾಗುತ್ತಿದೆ. 2011ರ ಜನಗಣತಿ ಅಂಕಿ ಅಂಶಗಳ ಪ್ರಕಾರ, ಹಿಂದೂ ಜನಸಂಖ್ಯೆ ಶೇ.29.8ರಷ್ಟಿದ್ದರೆ, ಮುಸ್ಲಿಂ ಜನಸಂಖ್ಯೆ ಶೇ.14.23ರಷ್ಟಿದೆ. ಧಾರ್ಮಿಕ ಸಮುದಾಯಗಳ ಆಧಾರದಲ್ಲಿ 2011ರ ಜನಗಣತಿ ಅಂಕಿ ಅಂಶವನ್ನು ಪರಿಗಣಿಸಿದರೆ, 2001ರಿಂದ 2011ರ ಅವಧಿಯಲ್ಲಿ ಹಿಂದೂ ಜನಸಂಖ್ಯೆ ಶೇ.16.76ರಷ್ಟು ಏರಿಕೆಯಾಗಿದೆ ಹಾಗೂ ಮುಸ್ಲಿಂ ಜನಸಂಖ್ಯೆ ಶೇ.24.6ರಷ್ಟು ಹೆಚ್ಚಿದೆ. ಅದಕ್ಕೂ ಹಿಂದಿನ ದಶಕದಲ್ಲಿ ಎರಡೂ ಸಮುದಾಯಗಳ ಜನಸಂಖ್ಯೆ ಕ್ರಮವಾಗಿ ಶೇ.19.92 ಹಾಗೂ ಶೇ.29.52ರ ವೇಗದಲ್ಲಿ ಪ್ರಗತಿ ಕಂಡಿತ್ತು. ದೀರ್ಘಾವಧಿ ಪ್ರವೃತ್ತಿಯನ್ನು ನೋಡಿದರೆ, ಸಮುದಾಯಗಳ ಜನಸಂಖ್ಯಾ ಬೆಳವಣಿಗೆ ದರ ಸಂಧಿಸುವ ಸಾಧ್ಯತೆ ಇದೆ. ಅಂದರೆ ದಶಕದಲ್ಲಿ ಎರಡೂ ಸಮುದಾಯಗಳ ಜನಸಂಖ್ಯೆ ಪ್ರಗತಿ ದರ ಇಳಿಕೆ ಕಂಡಿದ್ದು, ಪರಸ್ಪರ ಸಂಧಿಸುವ ಹಂತಕ್ಕೆ ಬಂದಿದೆ.
ಜನಸಂಖ್ಯೆ ಪ್ರಗತಿಯ ಭವಿಷ್ಯದ ಅಂದಾಜನ್ನು ಪರಿಗಣಿಸುವುದಾದರೆ, ಮುಸ್ಲಿಂ ಜನಸಂಖ್ಯೆಯ ಪ್ರಗತಿದರ ಕುಸಿಯುವ ಸಾಧ್ಯತೆ ಇದ್ದು, ಹಿಂದೂಗಳ ಪ್ರಗತಿದರ ಈಗಿನ ಮಟ್ಟದಲ್ಲೇ ಸ್ಥಿರವಾಗುವ ಅಂದಾಜು ಇದೆ. ಭವಿಷ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವಾಗಿಯೇ ಉಳಿಯಲಿದೆ. ಆಸಕ್ತಿದಾಯಕ ವಿಚಾರವೆಂದರೆ 2001ರಿಂದ 2011ರ ಅವಧಿಯಲ್ಲಿ ಹಿಂದೂ ಜನಸಂಖ್ಯೆ 13.3 ಕೋಟಿಯಷ್ಟು ಹೆಚ್ಚಿದೆ. ಈ ಪ್ರಮಾಣ 2001ರಲ್ಲಿ ಇದ್ದ ಮುಸ್ಲಿಂ ಜನಸಂಖ್ಯೆಗೆ ಸಮಾನ. ಮುಸ್ಲಿಂ ಜನಸಂಖ್ಯೆ, ಹಿಂದೂಗಳ ಜನಸಂಖ್ಯೆಯನ್ನು ಮೀರಿಸುತ್ತದೆ ಎಂಬ ಭೀತಿಯನ್ನು ಮೌಖಿಕವಾಗಿ, ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟಿರುವುದು ಅರ್ಥಹೀನ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ದಶಕದ ಪ್ರಗತಿದರವನ್ನು ಗಮನಿಸಿದರೆ, ಮುಸ್ಲಿಂ ಜನಸಂಖ್ಯಾ ಪ್ರಗತಿ ದರ ಇಳಿಕೆಯಾಗಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ.
ಮುಸ್ಲಿಂ ಸಮುದಾಯದ ಫಲವತ್ತತೆ ಪ್ರಮಾಣ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಾಗೂ ಕೇರಳದಲ್ಲಿ ಹಿಂದೂಗಳು ಹೊಂದಿರುವ ಫಲವತ್ತತೆ ಪ್ರಮಾಣಕ್ಕಿಂತ ಕಡಿಮೆ. ಕೇರಳದ ಮುಸ್ಲಿಂ ಕುಟುಂಬಗಳ ಆರ್ಥಿಕ ಚಿತ್ರಣ ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರಕ್ಕಿಂತ ಭಿನ್ನ. ಇದನ್ನು ವಿಸ್ತೃತ ದೃಷ್ಟಿಕೋನದಿಂದ ನೋಡಿದರೆ, ಪರಿಶಿಷ್ಟ ಜಾತಿ ಹಾಗೂ ಆದಿವಾ ಸಿಗಳಲ್ಲಿ ಈ ಜನಸಂಖ್ಯೆ ಬೆಳವಣಿಗೆ ಪ್ರಮಾಣ ಮತ್ತೂ ಅಧಿಕವಾಗಿರುವುದನ್ನು ಕಾಣಬಹುದು. 1951ರ ಜನಗಣತಿಯ ಪ್ರಕಾರ ಶೇ.6.23ರಷ್ಟಿದ್ದ ಪರಿಶಿಷ್ಟ ಪಂಗಡದವರ ಪ್ರಮಾಣ 2011ರ ಜನಗಣತಿಯಲ್ಲಿ ಶೇ.8.6ಕ್ಕೆ ಹೆಚ್ಚಿದೆ. ಹಾಗೂ ಪರಿಶಿಷ್ಟ ಜಾತಿಯವರ ಪ್ರಮಾಣ ಇದೇ ಅವಧಿಯಲ್ಲಿ ಶೇ.15ರಿಂದ 16.6ಕ್ಕೆ ಹೆಚ್ಚಿದೆ. ಇಂಥ ವಾಸ್ತವಾಂಶ ಕೋಮುಶಕ್ತಿಗಳ ಅಪಪ್ರಚಾರಕ್ಕೂ, ಸಮಾಜದಲ್ಲಿ ಇರುವ ವಾಸ್ತವ ಚಿತ್ರಣಕ್ಕೂ ತಾಳೆ ಇಲ್ಲ ಎನ್ನುವುದನ್ನು ಸ್ಪಷ್ಟ್ಟಪಡಿಸುತ್ತದೆ. ಈ ಹಿನ್ನೆಲೆಯಲ್ಲೇ ಪ್ರವೀಣ್‌ತೊಗಾಡಿಯಾ ಎರಡು ಮಕ್ಕಳ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಆಶಿಸಿದ್ದರೆ, ಸಾಕ್ಷಿ ಮಹಾರಾಜ್, ಸಾಧ್ವಿ ಪ್ರಾಚಿ ಮತ್ತಿತರರು, ಹಿಂದೂಗಳು ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ‘‘ಈಶಾನ್ಯದತ್ತ ನೋಡಿ’’ ಎಂದು ಹೇಳಿರುವುದು, ಆ ಭಾಗದಲ್ಲಿರುವ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರ ಕಳವಳಕ್ಕೆ ಕಾರಣ ವಾಗಿದೆ. ಮೂಲಭೂತವಾಗಿ ಬುಡಕಟ್ಟು ಪ್ರದೇಶವಾದ ಇಲ್ಲಿ 1931-1951ರ ದಶಕದಲ್ಲೇ ಕ್ರಿಶ್ಚಿಯನ್ ಜನಸಂಖ್ಯೆಯ ಗಣನೀಯ ಏರಿಕೆ ಕಂಡಿತ್ತು. ಸ್ವಾತಂತ್ರ್ಯದ ಜತೆಜತೆಗೆ ನಾಗರಿಕ ಸರಕಾರ ಆಡಳಿತಕ್ಕೆ ಬಂದದ್ದು ಹಾಗೂ ಈ ಭಾಗದಲ್ಲಿ ಶಿಕ್ಷಣ ಹೆಚ್ಚಳವಾದದ್ದು ಇದಕ್ಕೆ ಮುಖ್ಯ ಕಾರಣ. ಕಳೆದ ಕೆಲ ದಶಕಗಳಿಂದ ದೇಶದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆ ಬೆಳವಣಿಗೆ ದರ ಸ್ಥಗಿತವಾಗಿರುವುದು ಕಂಡುಬರುತ್ತದೆ. ಕೆಲವೊಮ್ಮೆ ಇದು ಇಳಿಕೆಯಾಗಿರುವುದೂ ಇದೆ. 1971ರ ಜನಗಣತಿ ಪ್ರಕಾರ, ಕ್ರಿಶ್ಚಿಯನ್ ಜನಸಂಖ್ಯೆ ಶೇ.2.6ರಷ್ಟಿತ್ತು. 1981ರಲ್ಲಿ ಶೇ.2.44, 1991ರಲ್ಲಿ ಶೇ.2.34, 2001ರಲ್ಲಿ ಶೇ. 2.3 ಹಾಗೂ 2011ರಲ್ಲಿ ಕೂಡಾ ಶೇ.2.3ರಷ್ಟಿದೆ. ಆದಾಗ್ಯೂ, ಮಿಶನರಿ ಚಟುವಟಿಕೆಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ಕ್ರೈಸ್ತರ ಸಂಖ್ಯೆ ಹೆಚ್ಚುತ್ತಿದೆ ಎಂಬ ಚಿತ್ರಣ ನೀಡಲಾಗಿದೆ. 1999ರಲ್ಲಿ ಗ್ರಹಾಂ ಸ್ಟೀವರ್ಟ್ ಸ್ಟೇನ್ ಅವರನ್ನು ಹತ್ಯೆ ಮಾಡುವ ಮೂಲಕ ಕ್ರಿಶ್ಚಿಯನ್ನರ ವಿರುದ್ಧದ ಆಕ್ರೋಶ ಬಹಿರಂಗವಾಯಿತು. ‘‘ಕ್ರಿಶ್ಚಿಯನ್ ಧರ್ಮಗುರುಗಳು, ಹಿಂದೂಗಳ ವಿರುದ್ಧ ಜನಸಾಮಾನ್ಯರನ್ನು ಮತಾಂತರ ಮಾಡುತ್ತಿದ್ದಾರೆ’’ ಎಂದು ಬಜರಂಗದಳದ ಧಾರಾ ಸಿಂಗ್ ಸ್ಥಳೀಯರನ್ನು ಎತ್ತಿಕಟ್ಟಿದ್ದರು.
ಧರ್ಮಗುರು ಗ್ರಹಾಂ ಸ್ಟೇನ್ ಅವರ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ ವಾಧ್ವಾ ಆಯೋಗ, ಕಿಯೋಂಜರ್, ಮನೋಹರಪುರ ಹಾಗೂ ಸ್ಟೇನ್ ಅವರು ಕಾರ್ಯನಿರ್ವಹಿಸಿದ ಇನ್ನಿತರ ಪ್ರದೇಶಗಳಲ್ಲಿ ಕ್ರಿಶ್ಚಿಯನ್ ಜನಸಂಖ್ಯೆ ಹೆಚ್ಚಿಲ್ಲ ಎಂದು ಅಭಿಪ್ರಾಯಪಟ್ಟಿತು. ಅಂತೆಯೇ ಸ್ವಾಮಿ ಲಕ್ಷ್ಮಣಾನಂದ ಅವರ ಹತ್ಯೆಯ ಹಿನ್ನೆಲೆಯಲ್ಲೇ ಕಂದಮಾಲ್‌ನ ಕ್ರೈಸ್ತವಿರೋಧಿ ಹಿಂಸಾಚಾರ ಬೆಳಕಿಗೆ ಬಂತು. ಗುಜರಾತ್‌ನಲ್ಲೂ ಮಿಶನರಿಗಳು ಮತಾಂತರದಲ್ಲಿ ತೊಡಗಿದ್ದಾರೆ ಎಂಬ ಅಪಪ್ರಚಾರ ಮಾಡಿದ ಫಲ ಕ್ರೈಸ್ತ ವಿರೋಧಿ ಚಳವಳಿಗಳು ನಡೆದವು. ಇದೇ ವೇಳೆ, ಕ್ರಿಶ್ಚಿಯನ್ ರಾಷ್ಟ್ರೀಯ ಜನಸಂಖ್ಯೆ ಸ್ಥಿರವಾಗಿಯೇ ಇರುವುದನ್ನು ನಾವು ಕಾಣಬಹುದು. ಮತ್ತೆ ಕೆಲವರು ಮತಾಂತರ ಮುಂದುವರಿದಿದ್ದು, ಮತಾಂತರಕ್ಕೆ ಒಳಗಾದವರು ತಮ್ಮ ಜಾತಿಯನ್ನು ಮುಚ್ಚಿಡುತ್ತಾರೆ ಎಂಬ ವಾದ ಮಂಡಿಸುತ್ತಾರೆ. ಇದು ಕೂಡಾ ಗೊಂದಲಕಾರಿಯಾಗಿದ್ದು, ಈ ಬಗ್ಗೆಯೂ ಯಾವುದೇ ನಿರ್ದಿಷ್ಟ ನಿರ್ಧಾರಕ್ಕೆ ಬರುವಂತಿಲ್ಲ. ಹೇಗಿದ್ದರೂ ಇಂಥ ಪ್ರಮಾಣ ಅಧಿಕ ಇರಲು ಸಾಧ್ಯವಿಲ್ಲ.
ಮತಾಂತರ ಎನ್ನುವುದು ಕಾಲಕಾಲಕ್ಕೆ ಹಿಂದೂ ರಾಷ್ಟ್ರೀಯವಾದಿಗಳ ಕಾರ್ಯಸೂಚಿ. ಸ್ವಾತಂತ್ರ್ಯ ಚಳವಳಿಯ ಅವಧಿಯಲ್ಲೇ ಎರಡು ಪರ್ಯಾಯ ಮತಾಂತರ ಪ್ರಕ್ರಿಯೆ ನಡೆಯುತ್ತಿತ್ತು. ಒಂದು ‘ತಂಜೀಮ್’ ಅಂದರೆ, ಇಸ್ಲಾಂಗೆ ಜನರನ್ನು ಮತಾಂತರ ಮಾಡುವುದು ಹಾಗೂ ಇನ್ನೊಂದು ‘ಶುದ್ಧಿ’; ಅಂದರೆ ತಮ್ಮ ಧರ್ಮವನ್ನು ತೊರೆದವರನ್ನು ಮತ್ತೆ ಸ್ವಧರ್ಮಕ್ಕೆ ಕರೆತರುವುದು. ಇತರ ಧರ್ಮಕ್ಕೆ ಹೋಗುವ ಮೂಲಕ ಅವರು ಅಪವಿತ್ರರಾಗಿದ್ದು, ಶುದ್ಧೀಕರಣ ಪ್ರಕ್ರಿಯೆ ಬಳಿಕ ಅವರನ್ನು ಸ್ವಧರ್ಮಕ್ಕೆ ಕರೆಸಿಕೊಳ್ಳಬೇಕು ಎನ್ನುವುದು. ಕಳೆದ ಹಲವು ದಶಕಗಳಿಂದ ಆರೆಸ್ಸೆಸ್-ವಿಶ್ವಹಿಂದೂ ಪರಿಷತ್‌ನ ವನವಾಸಿ ಕಲ್ಯಾಣ ಆಶ್ರಮವು, ಘರ್‌ವಾಪಸಿ ಚಳವಳಿಯಲ್ಲಿ ಸಕ್ರಿಯವಾಗಿದೆ. ಇದರ ಅನ್ವಯ ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತ್ತು ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದಿದ ದಲಿತರು ಹಾಗೂ ಆದಿವಾಸಿಗಳನ್ನು ಮರಳಿ ಸ್ವಧರ್ಮಕ್ಕೆ ಕರೆ ತರಲಾಗುತ್ತದೆ. ‘ಘರ್‌ವಾಪಸಿ’ ಅಭಿಯಾನದಲ್ಲಿ ಹೊಸದಾಗಿ ರೂಪುಗೊಂಡ ಬಿಸಿನೀರಿನಲ್ಲಿ ಸ್ನಾನ ಮಾಡಿಸುವುದು, ಬೆಂಕಿಯ ಸುತ್ತ ಇರುವ ಆಚರಣೆಗಳು ಸೇರಿವೆ. ಇದು ಆದಿವಾಸಿ ಪ್ರದೇಶಗಳು ಹಾಗೂ ಕೊಳೆಗೇರಿ ಗ್ರಾಮಗಳಲ್ಲಿ ವ್ಯಾಪಕ ಆಚರಣೆಯಲ್ಲಿದೆ.
ಆದಿವಾಸಿಗಳು ವಾಸ್ತವವಾಗಿ ಎನಿಮಿಸಂ ಸಿದ್ಧಾಂತಕ್ಕೆ ಸೇರಿದವರು. ಆದರೆ ಆರೆಸ್ಸೆಸ್ ಅವರನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಿದೆ. ಅವರನ್ನು ಹಿಂದೂಧರ್ಮಕ್ಕೆ ಪರಿವರ್ತಿಸಲು ವನವಾಸಿ ಕಲ್ಯಾಣ ಆಶ್ರಮ, ದೊಡ್ಡ ಪ್ರಮಾಣದಲ್ಲಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳ ಜಾಲವನ್ನು ಈಶಾನ್ಯ ಭಾರತದಲ್ಲಿ ರೂಪಿಸಿದೆ. ಹೀಗೆ ಸೇರಿಸಿಕೊಳ್ಳುವ ಮತ್ತು ಸ್ವಧರ್ಮಕ್ಕೆ ಕರೆತರುವ ಚಟುವಟಿಕೆಗಳ ಹಿಂದೆ ರಾಜಕೀಯ ಲಾಭದ ಗುರಿ ಇದೆಯೇ ಹೊರತು ಸಮಾಜ ಕಲ್ಯಾಣ ಇದರ ಉದ್ದೇಶವಲ್ಲ. ಆರೆಸ್ಸೆಸ್, ಧರ್ಮ ಹಾಗೂ ರಾಷ್ಟ್ರೀಯತೆಯ ನಡುವೆ ಸಂಬಂಧ ಕಲ್ಪಿಸುವ ಪ್ರಯತ್ನ ಮಾಡುತ್ತಿದೆ.