‘ಮಾತೃತ್ವ ಯೋಜನೆ’ ಫಲಿಸುತ್ತಿದೆಯೇ?
ಮೋದಿಯವರ ಮರುನಾಮಾಂಕಿತ ‘ಮಾತೃತ್ವ ಯೋಜನೆ’ಯು ವಾಸ್ತವದಲ್ಲಿ ತನ್ನ ವಿಸ್ತರಣೆಯನ್ನು ಕಡಿಮೆ ಮಾಡಲಿದೆ
.jpg)
ಭಾರತೀಯ ಜನತಾ ಪಕ್ಷದ ಸರಕಾರ, ಮಗುವನ್ನು ಹೆರಲು ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರಿಗೆ ರೂ. 6,000 ನಗದು ವರ್ಗಾವಣೆ ಮಾಡುವುದಾಗಿ ಹೊಸದಾಗಿ ಭರವಸೆ ನೀಡಿದ್ದರೂ ವಾಸ್ತವದಲ್ಲಿ ಅದು ಈ ಯೋಜನೆಯ ವಿಸ್ತಾರವನ್ನು ಕಡಿಮೆಗೊಳಿಸಿದೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ವರದಿ ಮಾಡಿರುವಂತೆ ಹಿಂದಿನ ಯೋಜನೆಯಲ್ಲಿ ಎರಡನೆ ಮಗುವನ್ನು ಹೆರುವ ಮಹಿಳೆಯರಿಗೂ ನಗದು ವರ್ಗಾವಣೆಯನ್ನು ಘೋಷಿಸಿದ್ದರೆ ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಇದನ್ನು ಕೇವಲ ಒಂದು ಮಗುವಿಗೆ ಸೀಮಿತಗೊಳಿಸಲಿದೆ. ಕಡಿತದ ಮೊದಲೂ ಕೂಡಾ ‘ಮಾತೃತ್ವಲಾಭ ಯೋಜನೆ’ ಹಲವು ಅಡೆತಡೆ ಮತ್ತು ತೊಂದರೆಗಳಿಂದಲೇ ಸುತ್ತುವರಿದಿತ್ತು.
ಡಿಸೆಂಬರ್ 31ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಜನವರಿ 1ರಿಂದ ಮಾತೃತ್ವ ಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವುದಾಗಿ ಘೋಷಿಸಿದ್ದರು. ಅವರು ಹೇಳಿದ ಆ ಯೋಜನೆ 2010ರಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಪ್ರಾಯೋಗಿಕವಾಗಿ ಆರಂಭಿಸಿತ್ತು. ಅದನ್ನು ಈಗಾಗಲೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನ್ವಯ ದೇಶಾದ್ಯಂತ ವಿಸ್ತರಿಸಲಾಗಿದೆ. ಆದರೆ ಸರಕಾರ ಅದನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ನಿಧಿಯನ್ನು ಬಿಡುಗಡೆಗೊಳಿಸಲಿಲ್ಲ.
ಈಗ ಭಾರತೀಯ ಜನತಾ ಪಕ್ಷದ ಸರಕಾರ, ಮಗುವನ್ನು ಹೆರಲು ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರಿಗೆ ರೂ. 6,000 ನಗದು ವರ್ಗಾವಣೆ ಮಾಡುವುದಾಗಿ ಹೊಸದಾಗಿ ಭರವಸೆ ನೀಡಿದ್ದರೂ ವಾಸ್ತವದಲ್ಲಿ ಅದು ಈ ಯೋಜನೆಯ ವಿಸ್ತಾರವನ್ನು ಕಡಿಮೆಗೊಳಿಸಿದೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ವರದಿ ಮಾಡಿರುವಂತೆ ಹಿಂದಿನ ಯೋಜನೆಯಲ್ಲಿ ಎರಡನೆ ಮಗುವನ್ನು ಹೆರುವ ಮಹಿಳೆಯರಿಗೂ ನಗದು ವರ್ಗಾವಣೆಯನ್ನು ಘೋಷಿಸಿದ್ದರೆ ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಇದನ್ನು ಕೇವಲ ಒಂದು ಮಗುವಿಗೆ ಸೀಮಿತಗೊಳಿಸಲಿದೆ. ಕಡಿತದ ಮೊದಲು ಕೂಡಾ ‘ಮಾತೃತ್ವ ಯೋಜನೆ’ ಹಲವು ಅಡೆತಡೆ ಮತ್ತು ತೊಂದರೆಗಳಿಂದಲೇ ಸುತ್ತುವರಿದಿತ್ತು.
ಛತ್ತೀಸ್‌ಗಡದ ರಾಜಧಾನಿ ರಾಯ್‌ಪುರದಿಂದ ಮೂರೂವರೆ ಗಂಟೆಗಳ ಕಾಲ ಬಸ್ ಪ್ರಯಾಣ ಮಾಡಿದರೆ ಸಿಗುವ ದಮ್ತರಿ ಜಿಲ್ಲೆಯಲ್ಲಿರುವ ಫರ್ಸಿಯಾ ಎಂಬ ಪಂಚಾಯತ್‌ನಲ್ಲಿ ಇದು ಸ್ಪಷ್ಟವಾಗುತ್ತದೆ. ಇಲ್ಲಿ ವಾಸಿಸುವ ಎಲ್ಲಾ 700 ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಬರುತ್ತವೆ. ಸೂಕ್ಷ್ಮ ಬುಡಕಟ್ಟು ಜನಾಂಗ ಕಮರ್ ಆದಿವಾಸಿಗಳು ಇಲ್ಲಿ ನೆಲೆಸಿರುವ ಅತ್ಯಂತ ಬಡ ಜನರು. ಇಲ್ಲಿನ ಬಹುತೇಕ ಜನರಿಗೆ ಸ್ವಂತ ಭೂಮಿಯಿಲ್ಲ ಮತ್ತು ಇವರು ಇತರರ ಗದ್ದೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಾರೆ ಅಥವಾ ಹಳ್ಳಿಯ ಮಾರುಕಟ್ಟೆಯಲ್ಲಿ ಕಟ್ಟಿಗೆಗಳನ್ನು ಮಾರಿ ದಿನಕ್ಕೆ ರೂ. 30 ದುಡಿಯುತ್ತಾರೆ.
ಆದಿವಾಸಿ ಕಮರ್ ಮಹಿಳೆ 20ರ ಹರೆಯದ ಸುಕ್ಬತಿ ಕಮರ್ ಐದು ತಿಂಗಳ ಹಿಂದೆ ತನ್ನ ಮೊದಲ ಮಗುವಿಗೆ ಜನ್ಮ ನೀಡಿದಳು. ಕಾಂಗ್ರೆಸ್ ಸರಕಾರ ಆರಂಭಿಸಿದ ‘ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ’ಯಡಿಯಲ್ಲಿ ಆಕೆ ರೂ. 6000 ನಗದು ಪಡೆಯಲು ಅರ್ಹಳಾಗಿರುತ್ತಾಳೆ. ತನ್ನ ಗುಡಿಸಿನಲ್ಲಿ ಕುಳಿತು ಆಕೆ ತನ್ನ ಮಗುವಿಗೆ ಎದೆಹಾಲು ಉಣಿಸುತ್ತಾಳೆ. ‘‘ಮಗುವಿಗೆ ಜನ್ಮ ನೀಡಿ ಮೂರು ತಿಂಗಳು ಕಳೆದ ನಂತರ ನನ್ನ ಬ್ಯಾಂಕ್ ಖಾತೆಗೆ ರೂ. 1400 ವರ್ಗಾವಣೆಯಾಗಿತ್ತು. ಆದರೆ ಹೆರಿಗೆಗಿಂತ ಮೊದಲು ಯಾವುದೇ ಹಣವನ್ನು ಪಡೆದಿರಲಿಲ್ಲ’’ ಎಂದಾಕೆ ಹೇಳುತ್ತಾಳೆ. ಆ ಹಣವನ್ನು ಆಕೆ ಅಕ್ಕಿ ಮತ್ತು ತರಕಾರಿಗಳನ್ನು ಹಾಗೂ ಸೀರೆ ಖರೀದಿಸಲು ಬಳಸಿರುವುದಾಗಿ ತಿಳಿಸುತ್ತಾಳೆ.
ಗದ್ದೆ ಕೆಲಸಗಾರನಾಗಿ ದುಡಿಯುವ ಸಕ್ಬತಿಯ ಪತಿ ಹಲಲ್ ಕಮರ್ ದಿನಕ್ಕೆ ರೂ. 100 ಕೂಲಿ ಪಡೆಯುತ್ತಾನೆ. ‘‘ಆರೋಗ್ಯ ಕಾರ್ಯಕರ್ತೆ ಏನನ್ನು ಹೇಳಿದ್ದಾರೋ ಎಲ್ಲವನ್ನೂ ನಾವು ಮಾಡುತ್ತೇವೆ’’ ಎನ್ನುತ್ತಾನೆ ಆತ. ‘‘ನನ್ನ ಪತ್ನಿ ಅಂಗನವಾಡಿಯಲ್ಲಿ ತನ್ನ ಹೆಸರು ನೋಂದಾಯಿಸಿದ್ದಳು ಅಲ್ಲಿ ಮಮತಾ ವಾರ್ಡ್ ಸಿಕ್ಕಿತ್ತು ಮತ್ತು ಹೆರಿಗೆಗಾಗಿ ಆಸ್ಪತ್ರೆಗೆ ತೆರಳಿದ್ದಳು, ಆದರೆ ನಮಗೆ ಯಾಕೆ ಬಹುತೇಕ ಹಣ ಸಂದಾಯವಾಗಿಲ್ಲ ಎಂಬುದು ತಿಳಿದಿಲ್ಲ’’ ಎನ್ನುತ್ತಾನೆ ಆತ.
ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆಯನ್ನು 2010ರಲ್ಲಿ 53 ಜಿಲ್ಲೆಗಳಲ್ಲಿ ಪ್ರಾಯೋಗಿಕ ಷರತ್ತಿನ ನಗದು ವರ್ಗಾವಣಾ ಯೋಜನೆಯಾಗಿ ಆರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಎರಡು ಹೆರಿಗೆಯವರೆಗೆ ಮೂರು ಕಂತುಗಳಲ್ಲಿ ರೂ. 4000 ನಗದು ವರ್ಗಾವಣೆ ಮಾಡಲಾಗುತ್ತದೆ.
ಇದು ಅಸಂಘಟಿತ ಕ್ಷೇತ್ರಗಳಾದ ಗದ್ದೆ, ಇಟ್ಟಿಗೆ ಕುಲುಮೆ ಮತ್ತು ಕಟ್ಟಡ ಕಾಮಗಾರಿಗಳಲ್ಲಿ ವಲಸೆ ಕೆಲಸಗಾರರಾಗಿ ದುಡಿಯುವ ಮಹಿಳೆಯರಿಗೆ ಪೂರಕ ವೇತನವಾಗಿ ಸಹಕಾರಿಯಾಗುತ್ತದೆ. ಈ ಹಣದಿಂದ ಮಹಿಳೆಯರು ಮಕ್ಕಳಿಗೆ ಕನಿಷ್ಠ ಆರು ತಿಂಗಳು ಸರಿಯಾಗಿ ಎದೆಹಾಲುಣಿಸಲು ಸಹಾಯವಾಗಲಿ ಮತ್ತು ಗರ್ಭಾ ವಸ್ಥೆಯ ಸಮಯದಲ್ಲಿ ಸರಿಯಾಗಿ ಪೌಷ್ಟಿಕಾಂಶಗಳನ್ನು ಪಡೆಯಲಿ ಎಂಬುವುದು ಇದರ ಉದ್ದೇಶವಾಗಿದೆ. ತಾಯಿಯ ಉತ್ತಮ ಆರೋಗ್ಯ ಹುಟ್ಟುವ ಮಗುವಿನ ತೂಕದ ಮೇಲೆ ಬಹಳಷ್ಟು ಪರಿಣಾಮ ಬೀಳುತ್ತದೆ.
ಸುದೀರ್ಘ ವಿಳಂಬಿತ ವಿಸ್ತರಣೆ
2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರುವಾಗ ಮಾತೃತ್ವ ಸಹಯೋಗ ಯೋಜನೆಯ ಲಾಭವನ್ನು ಎಲ್ಲಾ ಜಿಲ್ಲೆಗಳ ಮಹಿಳೆಯರಿಗೆ ವಿಸ್ತರಿಸಲಾಯಿತು. ಇದರಡಿಯಲ್ಲಿ ಮೊತ್ತವನ್ನು ರೂ. 6,000ಕ್ಕೆ ಏರಿಸಲಾಯಿತು. ಈ ಮೊತ್ತವನ್ನು ಎರಡು ಹೆರಿಗೆಗಳಿಗೆ ಎರಡು ಕಂತುಗಳಲ್ಲಿ ರೂ. 3,000 ಗರ್ಭಾವಸ್ಥೆಯ ಏಳು ಮತ್ತು ಒಂಬತ್ತನೆ ತಿಂಗಳ ಮಧ್ಯೆ ಮೊದಲ ಕಂತು ಮತ್ತು ಹೆರಿಗೆಯಾಗಿ ಆರು ತಿಂಗಳ ನಂತರ ಎರಡನೆ ಕಂತು ನೀಡಲು ಉದ್ದೇಶಿಸಲಾಗಿತ್ತು. ಆದರೆ ರಾಷ್ಟ್ರೀಯ ಆಹಾರ ಭದ್ರತಾ ಕಾನೂನು ಜಾರಿಯಾದ ಮೂರು ವರ್ಷಗಳ ನಂತರವೂ ಈ ವಿಸ್ತರಣೆಯನ್ನು ಇನ್ನೂ ಕೂಡಾ ಜಾರಿ ಮಾಡಲಾಗಿಲ್ಲ. 2015ರ ಅಕ್ಟೋಬರ್ 30ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅಫಿದಾವಿತ್‌ನಲ್ಲಿ ವಿತ್ತ ಸಚಿವಾಲಯ ಇನ್ನು ಕೂಡಾ ಈ ಯೋಜನೆಯ ಖರ್ಚುಗಳ ಬಗ್ಗೆ ಪರೀಶೀಲನೆ ನಡೆಸುತ್ತಿರುವುದಾಗಿ ತಿಳಿಸಿತ್ತು.
ಡಿಸೆಂಬರ್ 31ರಂದು ಮೋದಿ ಮಾತೃತ್ವ ಸಹಯೋಗ ಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವುದಾಗಿ ಮತ್ತೊಮ್ಮೆ ಘೋಷಿಸಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೊಸದಾಗಿ ಮಾರ್ಗಸೂಚಿಗಳನ್ನು ಘೋಷಿಸಿತು. ಈ ಹಿಂದೆ ಮೊದಲ ಕಂತನ್ನು ಗರ್ಭಧಾರಣೆಯ ತ್ರೈಮಾಸಿಕದಲ್ಲಿ ನೀಡಲಾಗುತ್ತಿದ್ದರೆ ಹೊಸ ನಿಯಮಗಳ ಪ್ರಕಾರ ಮೊದಲ ಕಂತನ್ನು ಗರ್ಭಧಾರಣೆಯ ಮೊದಲ ಮೂರು ತಿಂಗಳಲ್ಲಿ ನೀಡಲಾದರೆ ಎರಡನೆ ಕಂತು ರೂ. 1,500 ಸಾಂಸ್ಥಿಕ ಹೆರಿಗೆಯ ನಂತರ ಮತ್ತು ಮೂರನೆ ಕಂತನ್ನು ಹೆರಿಗೆಯ ಮೂರು ತಿಂಗಳ ನಂತರ ಮತ್ತು ಲಸಿಕೆಯ ಸಮಯದಲ್ಲಿ ನೀಡಲಾಗುವುದು.
ತಜ್ಞರ ಪ್ರಕಾರ ಗರ್ಭಾವಸ್ಥೆಯ ಆರಂಭದಲ್ಲಿ ನಗದು ವರ್ಗಾವಣೆ ಮಾಡುವುದರಿಂದ ಮಹಿಳೆಯರು ಗರ್ಭಾವಸ್ಥೆಯ ಸಮಯದಲ್ಲಿ ಉತ್ತಮ ಆಹಾರ ಸೇವನೆ ಮಾಡಲು ಶಕ್ತರಾಗುವುದರಿಂದ ಬಹಳ ಗುಣಾತ್ಮಕ ಫಲಿತಾಂಶ ನೀಡಲಿದೆ. ಸದ್ಯ ದಮ್ತರಿಯಂತಹ ಪ್ರಾಯೋಗಿಕ ಜಿಲ್ಲೆಗಳಲ್ಲಿ ವಿಳಂಬಿತ ಪಾವತಿ ಮತ್ತು ಹಂಚಿಕೆಯಲ್ಲಿ ಅಂತರಗಳಿದ್ದವು. ಮಾತೃತ್ವ ಆರೋಗ್ಯ ಕಾರ್ಯಕರ್ತರು ಈ ವಿಸ್ತರಣೆಯನ್ನು ಸ್ವಾಗತಿಸಿದರೂ ಇದರಲ್ಲಿನ ಆರ್ಥಿಕ ಕೊರತೆಯ ಬಗ್ಗೆ ಪ್ರಶ್ನೆಗಳೆದ್ದವು. ಇನ್ನು ಸದ್ಯವಿರುವ ಯೋಜನೆಯ ಹಂಚಿಕೆಯಲ್ಲಿ ನೂತನ ನಿಯಮಗಳ ಅನುಷ್ಠಾನದ ಬಗ್ಗೆಯೂ ಕೂಡಾ ಅವರು ಆತಂಕ ವ್ಯಕ್ತಪಡಿಸಿದ್ದರು.
ವಿಳಂಬ ಮತ್ತು ಪ್ರತ್ಯೇಕತೆ
ದಮ್ತರಿ ಜಿಲ್ಲೆಯಲ್ಲಿ ಏಳು ಕಮರ್ ಗರ್ಭಿಣಿಯರ ಪೈಕಿ ಇಬ್ಬರು ರೂ. 1,400 ಮತ್ತು ರೂ. 3,000ದ ಆಂಶಿಕ ನಗದು ಲಾಭವನ್ನು ಹೆರಿಗೆಯ ನಂತರ ಪಡೆದುಕೊಂಡಿದ್ದಾರೆ. ಈ ಹಣವನ್ನು ಹೆರಿಗೆಯ ನಂತರ ಆಹಾರ ಪದಾರ್ಥಗಳನ್ನು ಖರೀದಿಸಲು ಖರ್ಚು ಮಾಡಿರುವುದಾಗಿ ಈ ಇಬ್ಬರೂ ಮಹಿಳೆಯರು ತಿಳಿಸುತ್ತಾರೆ.
ದಮ್ತರಿಯ ಸಂಕರ ಪಂಚಾಯತ್‌ನ ಗೊಂಡ ಆದಿವಾಸಿ ಗ್ರಾಮವಾದ ಕುದ್ಮುದ್‌ಪರದಲ್ಲಿ 2014ರಿಂದ 85 ಮಹಿಳೆಯರು ಮಾತೃತ್ವ ಲಾಭ ಯೋಜನೆಯಡಿ ನಗದು ವರ್ಗಾವಣೆಯನ್ನು ಪಡೆದುಕೊಂಡಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತರು ತಿಳಿಸುತ್ತಾರೆ. ಆದರೆ ಈಗ ಈ ಯೋಜನೆಗೆ ಅರ್ಹವಾಗುವ ಏಳು ಮಹಿಳೆಯರ ಪೈಕಿ ಒಬ್ಬರು ಕೂಡಾ ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಯೋಜನೆಯಡಿಯಲ್ಲಿ ಮೊದಲ ಕಂತನ್ನು ಪಡೆದುಕೊಂಡಿಲ್ಲ. ತನ್ನ ಮಗುವಿಗೆ ಎಂಟು ತಿಂಗಳಾದರೂ ಯೋಜನೆಯ ಸಂಪೂರ್ಣ ಲಾಭ ತನಗೆ ಸಿಕ್ಕಿಲ್ಲ ಎಂದು ಹೇಳುತ್ತಾಳೆ ಪ್ಯಾರಿ ಗೊಂಡ. ‘‘ಸರಕಾರ ರೂ, 6,000 ನೀಡುತ್ತದೆಯಾದರೆ ಅದು ಜನರಿಗೆ ತಲುಪಲು ಆರು ವರ್ಷಗಳೇ ಕಳೆಯುತ್ತವೆ’’ ಎಂದು ಸಮರಿ ಗೊಂಡ ಎಂಬ ವೃದ್ಧ ಮಹಿಳೆ ಗ್ರಾಮದಲ್ಲಿ ನಡೆದ ಮಹಿಳಾ ಸಂಘದ ಸಭೆಯಲ್ಲಿ ತಿಳಿಸುತ್ತಾರೆ.
ಸಭೆಯಲ್ಲಿ ಮಾತನಾಡಿದ ಮತ್ತೋರ್ವ ಮಹಿಳೆ ನುನಿಯಾ ಗೊಂಡ ‘‘ಬ್ಯಾಂಕ್‌ನಲ್ಲಿ ಹಣವನ್ನು ಪಡೆಯಲು ಬಹಳ ಕಷ್ಟಪಡಬೆಕಾಗುತ್ತದೆ’’ ಎಂದು ಹೇಳುತ್ತಾರೆ. ‘‘ಜಿಲ್ಲೆಯ ಅಧಿಕಾರಿಗಳನ್ನು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸಾಧ್ಯವಾಗದಿರುವುದು ನಮ್ಮ ದೌರ್ಬಲ್ಯ’’ ಎಂದು ಹೇಳುತ್ತಾರೆ ಕುದ್ಮುದ್‌ಪರ ಗ್ರಾಮದ ಆರೋಗ್ಯ ಕಾರ್ಯಕರ್ತೆ ಬುದಿಯಾರಿನ್.
ಇನ್ನು ಇತರ ಹಲವು ಅಡೆತಡೆಗಳೂ ಇವೆ. ಜನವರಿ 3ರಂದು ಸಚಿವಾಲಯ ನೀಡಿದ ಹೇಳಿಕೆಯಲ್ಲಿ ನಗದು ವರ್ಗಾವಣೆ ‘ಆಧಾರ್’ ಆಧಾರಿತವಾಗಿದ್ದು ವೈಯಕ್ತಿಕ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗಳಿಗೆ ನೇರ ವರ್ಗಾವಣೆಯಾಗುತ್ತದೆ ಎಂದು ಹೇಳಲಾಗಿತ್ತು. ಕೆಲವರು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯಾಗುವುದಕ್ಕಿಂತ ಚೆಕ್ ನೀಡಿದರೆ ಉತ್ತಮ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ‘‘ಮೊದಲು ನಾವು ಆಸ್ಪತ್ರೆಗಳಲ್ಲಿ ಚೆಕ್ ರೂಪದಲ್ಲಿ ಹಣ ಪಡೆಯುತ್ತಿದ್ದೆವು. ಅದನ್ನು ನಾವು ಯಾವಾಗ ಬೇಕಾದರೂ ನಗದೀ ಕರಿಸಿಕೊಳ್ಳಬಹುದಿತ್ತು. ಆದರೆ ಈಗ ಸರಕಾರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ’’ ಎಂದು ಹೇಳುತ್ತಾರೆ ಯೋಜನೆ ಫಲಾನುಭವಿಯೊಬ್ಬರು. ‘‘ಯಾವಾಗ ಹಣ ವರ್ಗಾವಣೆಯಾಗುತ್ತದೆ ಎಂಬುದನ್ನು ತಿಳಿಯುವುದು ಸುಲಭವಲ್ಲ. ನಾವೇ ಬ್ಯಾಂಕ್‌ಗಳಿಗೆ ತೆರಳಿ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕಾಗುತ್ತದೆ’’ ಎಂದವರು ಹೇಳುತ್ತಾರೆ. ಸಭೆಯಲ್ಲಿ ಸೇರಿದ್ದ ಎಲ್ಲಾ ಮಹಿಳೆಯರ ಬಳಿ ಮೊಬೈಲ್ ಫೋನ್ ಇರಲಿಲ್ಲ ಅಥವಾ ಎಲ್ಲರಿಗೂ ಹಣ ಪಡೆದ ಮತ್ತು ತೆಗೆದ ಬಗ್ಗೆ ಸಂದೇಶವನ್ನು ಪಡೆಯಲು ಎಸ್ಸೆಮ್ಮೆಸ್ ಸೇವೆಯನ್ನು ಸಕ್ರಿಯಗೊಳಿಸಲು ತಿಳಿದಿರಲಿಲ್ಲ. ನಿರ್ಮಲ ಗೊಂಡ ಹೇಳುವ ಪ್ರಕಾರ ಆಕೆ ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಯಾವುದೇ ನಗದು ಪಡೆದುಕೊಂಡಿರಲಿಲ್ಲ. ಆದರೆ ಹೆರಿಗೆಯ ನಂತರ ಒಂದೇ ಕಂತಿನಲ್ಲಿ ರೂ. 6,000 ಪಡೆದಿದ್ದರು. ‘‘ನನ್ನ ಸಂಬಂಧಿಯೊಬ್ಬರು ಆರೋಗ್ಯ ಸೇವೆ ಕಾರ್ಯ ಕರ್ತೆಯಾಗಿದ್ದು ಆಕೆ ನಾನು ಪಡೆದ ಹಣವನ್ನು ಪೌಷ್ಠಿಕ ಆಹಾರ ಸೇವಿಸಲು ಬಳಸಬೇಕೆಂದೂ ಯಾವುದೇ ಆಭರಣ ಖರೀದಿಸಲು ಬಳಸಬಾರದೆಂದೂ ತಿಳಿಸಿದ್ದಳು’’ ಎಂದು ಹೇಳುತ್ತಾಳೆ ಆಕೆ.
ಆದರೆ ಈಗ ಎರಡನೆ ಬಾರಿ ಗರ್ಭಿಣಿಯಾಗಿರುವ ಆಕೆ ಆಧಾರ್ ಸಂಖ್ಯೆ ಹೊಂದದಿರುವ ಕಾರಣ ಈ ಯೋಜನೆಯ ಲಾಭವನ್ನು ಪಡೆಯುವ ಬಗ್ಗೆ ಅನುಮಾನ ಹೊಂದಿದ್ದಾಳೆ. ‘‘2014ರಲ್ಲಿ ನನ್ನ ಹಳೆಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಆದರೆ ಈಗ ಖಾತೆಯನ್ನು ‘ಆಧಾರ್’ಗೆ ಸಂಪರ್ಕಿಸಬೇಕು ಎಂದು ಬ್ಯಾಂಕ್ ಹೇಳುತ್ತಿದೆ. ನಾನು ಎರಡು ವರ್ಷಗಳ ಹಿಂದೆ ಆಧಾರ್‌ಗೆ ನೋಂದಣಿ ಮಾಡಿಕೊಂಡಿದ್ದೆ ಆದರೆ ಇಲ್ಲಿಯವರೆಗೂ ಅಂಚೆ ಮೂಲಕ ಆಧಾರ್ ಸಂಖ್ಯೆ ಪಡೆದಿಲ್ಲ’’ ಎನ್ನುತ್ತಾಳೆ ಆಕೆ.
ನಿರ್ಮಲ ಗೊಂಡ ಆಧಾರ್ ನೋಂದಣಿಯ ಗುರುತು ಚೀಟಿಯನ್ನು ಕಳೆದುಕೊಂಡಿದ್ದು ಅದನ್ನು ಮರುಪಡೆಯಲು ಆಕೆಗೆ ಸಾಧ್ಯವಾಗಿಲ್ಲ. ಗರ್ಭಿಣಿಯಾಗಿದ್ದ ಸಮಯದಲ್ಲಿ ತನ್ನ ಗ್ರಾಮದಿಂದ 12 ಕಿ.ಮೀ. ದೂರವಿರುವ ನಗ್ರಿಗೆ ಎರಡೆರಡು ಬಾರಿ ಪ್ರಯಾಣಿಸಿ ಆಧಾರ್‌ನಲ್ಲಿ ಹೆಸರು ನೋಂದಾಯಿಸಲು ಎಷ್ಟು ಪರದಾಡಿದ್ದೆ ಎಂಬ ಬಗ್ಗೆ ಆಕೆ ವಿವರಿಸುತ್ತಾಳೆ. ಆಧಾರ್ ಸರಿಯಾಗಿ ನೋಂದಾಯಿಸಿಕೊಳ್ಳದಿರುವ ಕಾರಣ ಈ ಬಾರಿಯ ಗರ್ಭಾವಸ್ಥೆಯ ಸಮಯದಲ್ಲಿ ಮಾತೃತ್ವ ಲಾಭವನ್ನು ಪಡೆಯಲು ಸಾಧ್ಯವಾಗಬಹುದೇ ಎಂಬ ಬಗ್ಗೆ ನಿರ್ಮಲ ಗೊಂಡಳಿಗೆ ಅನುಮಾನವಿದೆ. ಮಧ್ಯಪ್ರದೇಶದ ಚಿಂಡ್ವಾರಾದಲ್ಲಿ ಈ ಯೋಜನೆಯ ಫಲಾನುಭಾವಿಗಳ ಸಂದರ್ಶನ ನಡೆಸಿದ ಸಹಾನುಭೂತಿಯ ಆರ್ಥಶಾಸ್ತ್ರ ಸಂಶೋಧನಾ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಡಯಾನಾ ಕೊಫಿ ಹೇಳುವಂತೆ ವಿಳಂಬ ಮತ್ತು ಅನಿರ್ದಿಷ್ಟ ಪಾವತಿ ಇತರ ಜಿಲ್ಲೆಗಳಲ್ಲೂ ಇರುವ ಬಹುದೊಡ್ಡ ಸಮಸ್ಯೆಯಾಗಿದೆ. ‘‘ಮೊದಲ ಅಥವಾ ಎರಡನೆ ಮಗು ಹೊಂದಿರುವ ಮಕ್ಕಳು ರೂ. 6,000 ಪಡೆಯುತ್ತಾರೆ ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಅಲ್ಲ. ನಿಜವಾಗಿ ಈ ಸಮಯದಲ್ಲಿ ಹಣ ಪಾವತಿ ಮಾಡುವುದರಿಂದ ಉತ್ತಮ ಆಹಾರವನ್ನು ಖರೀದಿಸಿ ಸೇವಿಸುವ ಮೂಲಕ ಮಗುವಿನ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಮಹಿಳೆಯರಿಗೆ ನೆರವಾಗುತ್ತದೆ’’ ಎಂದು ಹೇಳುತ್ತಾರೆ ಕೊಫಿ. ಮಹಿಳೆಯರ ಖಾತೆಗೆ ರೂ. 3,000 ಮೊದಲ ವರ್ಷ ವರ್ಗಾವಣೆಯಾದರೆ ಉಳಿದ ರೂ. 3,000 ಎರಡನೆ ವರ್ಷದಲ್ಲಿ ವರ್ಗಾವಣೆಯಾಗುತ್ತಿತ್ತು, ಆದರೆ ಕೆಲವರಿಗೆ ರೂ. 6,000 ಏಕಕಾಲಕ್ಕೇ ಬಿಡುಗಡೆಯಾಗುತ್ತಿತ್ತು.
ಕೊಫಿ ಪ್ರಕಾರ ‘‘ಆರಂಭದಲ್ಲೇ ನಗದು ವರ್ಗಾವಣೆ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ’’ ಯಾಕೆಂದರೆ ಮಗುವಿಗೆ ಎರಡನೆ ವರ್ಷವಾಗುವ ವೇಳೆ ಪೌಷ್ಟಿಕತೆಯ ವಿಷಯದಲ್ಲಿ ಸಾಕಷ್ಟು ನಷ್ಟ ಅನುಭವಿಸಿಯಾಗಿರುತ್ತದೆ. ‘‘ಗರ್ಭಾವಸ್ಥೆಯ ಆರಂಭದಲ್ಲೇ ನಗದು ವರ್ಗಾವಣೆ ಮಾಡುವುದರಿಂದ ಗರ್ಭಿಣಿಯರು ಆ ಸಮಯದಲ್ಲಿ ಹೆಚ್ಚು ಪೌಷ್ಟಿಕ ಆಹಾರ ಸೇವಿಸಲು ಸಾಧ್ಯವಾಗುತ್ತದೆ’’ ಎಂದಾಕೆ ಹೇಳುತ್ತಾರೆ. ‘‘ಈ ನಿಯಮದ ಬದಲಾವಣೆ ಉತ್ತಮ ಪರಿಣಾಮ ಬೀರಲು ಸರಕಾರವು ಮಹಿಳೆಯರಿಗೆ ನೋಂದಣಿಯ ನಂತರ ಮೊದಲ ಹಣ ವರ್ಗಾವಣೆಯನ್ನು ಆದಷ್ಟು ಬೇಗ ಒದಗಿಸಬೇಕು ಮತ್ತು ಈ ಹಣ ವರ್ಗಾವಣೆಯ ಉದ್ದೇಶ ಗರ್ಭಾವಸ್ಥೆಯ ಸಮಯದಲ್ಲಿ ದೇಹತೂಕವನ್ನು ಹೆಚ್ಚಿಸಿಕೊಳ್ಳುವುದಾಗಿದೆ ಎಂಬ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸುವಂತೆ ಆರೋಗ್ಯ ಕಾರ್ಯ ಕರ್ತೆಯರಿಗೆ ತರಬೇತಿ ನೀಡಬೇಕು’’ ಎಂದು ಕೊಫಿ ಹೇಳುತ್ತಾರೆ.
ಹಣ ಎಲ್ಲಿದೆ?
ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಾತೃತ್ವ ಲಾಭ ಯೋಜನೆಗೆ ರೂ. 2,7000 ಕೋಟಿ ಘೋಷಿಸಿದರು. ನಾಗರಿಕ ಸೇವಾ ಕಾರ್ಯಕರ್ತರ ಪ್ರಕಾರ ಈ ಮೊತ್ತ ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರಿಗೆ ನೀಡುವ ನಗದು ವರ್ಗಾವಣೆಯ ಕೇವಲ ಸಣ್ಣ ಭಾಗವಾಗಿದೆ ಮತ್ತು ಈ ಮೊತ್ತ ಸಂಪೂರ್ಣ ಫಲಾನುಭವಿಗಳಲ್ಲಿ ಹಂಚಲು ಸಾಲುವುದಿಲ್ಲ.
ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್ ಲೆಕ್ಕಹಾಕುವಂತೆ ಪ್ರತೀವರ್ಷ 2.6 ಕೋಟಿ ಮಕ್ಕಳು ಜನಿಸುತ್ತಾರೆ. ಶೇ. 10 ಮಕ್ಕಳಿಗೆ ಆರ್ಥಿಕತೆಯ ಸಾಮಾನ್ಯ ಕ್ಷೇತ್ರದ ತಾಯಂದಿರು ಜನನ ನೀಡಿರುವುದರಿಂದ ಈಗಾಗಲೇ ಲಾಭಗಳನ್ನು ಪಡೆದುಕೊಂಡಿದ್ದಾರೆ ಎಂದು ಅಂದಾಜಿಸಿದರೂ ರೂ. 6.000ದಂತೆ 2.3 ಕೋಟಿ ಜನನಗಳಿಗೆ ವಾರ್ಷಿಕವಾಗಿ ಹಂಚಲು ರೂ. 14,000 ಕೋಟಿಯ ಅಗತ್ಯ ಬೀಳುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಈ ಯೋಜನೆಯನ್ನು ಮೊದಲ ಮಗುವಿಗಷ್ಟೇ ಸೀಮಿತಗೊಳಿಸಬಹುದು. ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಡಾ. ದೀಪಾ ಸಿನ್ಹಾ ಹೇಳುವಂತೆ ‘‘ಈ ಬಂಡವಾಳದ ಕೊರತೆ ಅತ್ಯಂತ ಅಗತ್ಯವಿರುವವರನ್ನು ಹೆಚ್ಚಾಗಿ ಬಾಧಿಸುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ತಮ್ಮ ಮೊದಲ ಮಗುವಿಗೆ ಎದೆಹಾಲುಣಿಸುವ ಸಮಯದಲ್ಲೇ ಎರಡನೆ ಬಾರಿ ಗರ್ಭಿಣಿಯಾಗಿರುತ್ತಾರೆ’’ ಎಂದಾಕೆ ಹೇಳುತ್ತಾರೆ. ‘‘ಈ ರೀತಿಯ ಎರಡನೇ ಬಾರಿಯ ಗರ್ಭಧಾರಣೆಯೇ ಅತ್ಯಂತ ಅಪಾಯಕಾರಿಯಾಗಿರುತ್ತದೆ ಮತ್ತು ತಾಯಿಯು ರಕ್ತಹೀನತೆಯಿಂದ ಬಳಲುವ ಕಾರಣ ಮಗು ಕೂಡಾ ಅಪೌಷ್ಟಿಕತೆ ಮತ್ತು ಅನಾರೋಗ್ಯಪೀಡಿತವಾಗುವ ಅಪಾಯಕ್ಕೆ ಹೆಚ್ಚು ಒಳಗಾಗುತ್ತದೆ. ಸರಕಾರ ಕೇವಲ ಮೊದಲ ಮಗುವಿಗೆ ಈ ಯೋಜನೆಯನ್ನು ಸೀಮಿತಗೊಳಿಸಿದರೆ ಅವರು ಅತ್ಯಂತ ಸೂಕ್ಷ್ಮ ದುರ್ಬಲ ಮಹಿಳೆಯನ್ನು ಹೊರಗಿಟ್ಟಂತಾಗುತ್ತದೆ’’ ಎಂದಾಕೆ ವಿವರಿಸುತ್ತಾರೆ.
ಕೃಪೆ: scroll.in